varthabharthi


ಪ್ರಚಲಿತ

ನೊಂದ ಜೀವಿಗಳ ಭರವಸೆಯ ಬೆಳಕು

ವಾರ್ತಾ ಭಾರತಿ : 17 Sep, 2018
ಸನತ್ ಕುಮಾರ್ ಬೆಳಗಲಿ

ಮೊದಲ ಬಾರಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದವರು ಯಾರೂ ಸಹ ಇದು ಸರಕಾರದಿಂದ ನಡೆಸಲ್ಪಡುತ್ತದೆ ಎಂದರೆ ನಂಬುವುದಿಲ್ಲ. ಸೌಕರ್ಯಗಳ ಕೊರತೆ ಮತ್ತು ಸಮಸ್ಯೆಗಳ ಗೂಡಿನಂತೆ ಕಾಣಸಿಗುವ ಸರಕಾರಿ ಆಸ್ಪತ್ರೆಗಳಿಗೆ ಅಪವಾದ ಎಂಬಂತಿರುವ ಜಯದೇವ ಆಸ್ಪತ್ರೆ ಆವರಣದಲ್ಲಿ ಎಲ್ಲಿ ಹೋದರೂ ಅಲ್ಲಿ ಶುಚಿತ್ವ ಕಾಣಸಿಗುತ್ತದೆ. ಅಲ್ಲದೇ ಅಲ್ಲಿನ ವೈದ್ಯಕೀಯ ಸಿಬ್ಬಂದಿಯಿಂದ ಉತ್ತಮ ಸ್ಪಂದನೆ ದೊರೆಯುತ್ತದೆ.


ಜನರಿಗೆ ಅತ್ಯುನ್ನತ ಸೇವೆ ನೀಡಿ ಮಾದರಿಯಾಗಬೇಕಿದ್ದ ಆರೋಗ್ಯ ಕ್ಷೇತ್ರವು ಸದ್ದಿಲ್ಲದೇ ಉದ್ಯಮವಾಗಿ ಮಾರ್ಪಟ್ಟಿದೆ. ಒಂದೊಂದು ಅನಾರೋಗ್ಯ ಸಮಸ್ಯೆಗೂ ಒಂದೊಂದು ಆಸ್ಪತ್ರೆಯಲ್ಲಿ ದರ ಪಟ್ಟಿ ನಿಗದಿಯಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಅಥವಾ ವೈದ್ಯರು ಸೂಚಿಸಿದಂತೆ ಇಂತಿಷ್ಟು ಅವಧಿಯೊಳಗೆ ಹಣ ಪಾವತಿಸಬೇಕು. ಇದನ್ನು ಪಾಲಿಸಲು ವಿಫಲವಾದರೆ, ಅನಾರೋಗ್ಯಪೀಡಿತ ವ್ಯಕ್ತಿ ಗುಣಮುಖನಾಗುವ ನಿರೀಕ್ಷೆ ಕೈ ಬಿಡಬೇಕು. ವ್ಯಕ್ತಿಯನ್ನು ಆ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಬೇರೆಡೆ ಒಯ್ಯಬೇಕು ಇಲ್ಲದಿದ್ದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಕೊನೆಯುಸಿರೆಳೆದರು ಎಂದು ವೈದ್ಯರು ಘೋಷಿಸುವರೆಗೂ ಕಾಯಬೇಕು. ಆರೋಗ್ಯ ಕ್ಷೇತ್ರವು ಉದ್ಯಮವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಇದು ಅಲಿಖಿತವಾಗಿ ಜಾರಿಯಾದ ಷರತ್ತು!

ಒಂದಾನೊಂದು ಕಾಲದಲ್ಲಿ ನಗರ ಅಥವಾ ಮಹಾನಗರಗಳಲ್ಲಿ ಬೃಹತ್ ಆಸ್ಪತ್ರೆಯೊಂದು ಆರಂಭಗೊಂಡರೆ, ಅನಾರೋಗ್ಯ ಸಮಸ್ಯೆ ಬಗ್ಗೆ ಇನ್ನು ಚಿಂತೆ ಮಾಡುವಂತಿಲ್ಲ. ಆಸ್ಪತ್ರೆಯಲ್ಲಿನ ತಜ್ಞ ವೈದ್ಯರಿಂದ ಉತ್ತಮ ಚಿಕಿತ್ಸೆ ದೊರೆಯುವುದೆಂದು ಆಶಾಭಾವ ವ್ಯಕ್ತವಾಗುತ್ತಿತ್ತು. ಈಗ ಒಂದೇ ವಿಶಾಲ ಪ್ರದೇಶದಲ್ಲಿ ಮೂರು-ನಾಲ್ಕು ಆಸ್ಪತ್ರೆಗಳು ಏಕಕಾಲಕ್ಕೆ ಸ್ಥಾಪನೆಗೊಂಡು ಹೆಲ್ತ್ ಸಿಟಿ ಎಂದು ಘೋಷಿಸಿಕೊಂಡರೂ ಉತ್ತಮ ಚಿಕಿತ್ಸೆ ಸಿಗುವುದರ ಬಗ್ಗೆ ವಿಶ್ವಾಸವಿಲ್ಲ. ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಬಲ್ಲ ಪರಿಣಿತರು ಇದ್ದಾರೆಂದು ಹೇಳಿಕೊಂಡರೂ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ವಾಪಸ್ ಆಗುವ ನಂಬಿಕೆ ಇರುವುದಿಲ್ಲ. ಕಾರಣ: ಅತ್ಯಾಧುನಿಕ ಚಿಕಿತ್ಸೆಗೆ ತಕ್ಕಂತೆ ನೀರಿನಂತೆ ಸುರಿಯಲು ಹಣ ಇರುವುದಿಲ್ಲ. ಬಿಪಿಎಲ್ ಕಾರ್ಡು ಅಥವಾ ಸರಕಾರಿ ಯೋಜನೆಯಡಿ ಸೌಲಭ್ಯವಿದ್ದರೂ ಸಮರ್ಪಕವಾಗಿ ಚಿಕಿತ್ಸೆ ಸಿಗುವ ಬಗ್ಗೆ ನಂಬಿಕೆ ಇರುವುದಿಲ್ಲ. ಇದು ಇಂದಿನ ಆರೋಗ್ಯ ಕ್ಷೇತ್ರದ ನೈಜ ಪರಿಸ್ಥಿತಿ!

ದಶಕಗಳ ಹಿಂದೆ ಬೃಹತ್ ಆಸ್ಪತ್ರೆಗಳು ಇರಲಿಲ್ಲ. ನಗರಪ್ರದೇಶದಲ್ಲಿ ಸಣ್ಣಪುಟ್ಟ ಕ್ಲಿನಿಕ್ ಅಥವಾ ಆಸ್ಪತ್ರೆಗಳಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆ ನೀಡಲು ವೈದ್ಯರೂ ಸಹ ಇರುತ್ತಿರಲಿಲ್ಲ. ವೈದ್ಯಕೀಯ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಿರದ ಕಾರಣ ರೋಗಿಯು ಗುಣಮುಖನಾಗುವ ಸಾಧ್ಯತೆ ತುಂಬಾ ಕಡಿಮೆ ಇರುತಿತ್ತು. ರೋಗಕ್ಕೆ ಸರಿಯಾದ ಔಷಧಿ ಸಕಾಲಕ್ಕೆ ಲಭ್ಯವಾಗದ ಕಾರಣ ಸಾವುನೋವೇ ಹೆಚ್ಚಾಗುತಿತ್ತು. ಗ್ರಾಮೀಣ ಪ್ರದೇಶದವರಂತೂ ಚಕ್ಕಡಿ, ತಳ್ಳುವ ಗಾಡಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಆಸ್ಪತ್ರೆಗೆ ಬರುವುದೇ ದುಸ್ತರವಾಗುತ್ತಿತ್ತು.

ಈಗ ಹೆಲ್ತ್ ಟೂರಿಸಂ ಅಭಿವೃದ್ಧಿಯಾಗಿದೆ. ಜಗತ್ತಿನ ಯಾವುದಾದರೂ ಮೂಲೆಯಲ್ಲಿ ಯಾರಾದರೂ ರೋಗದಿಂದ ಬಳಲುತ್ತಿದ್ದರೆ, ಅವರು ನೇರವಾಗಿ ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ಬಯಸಿದ ಆಸ್ಪತ್ರೆಗೆ ಬಂದಿಳಿಯಬಹುದು. ಬೆಂಗಳೂರಿನಲ್ಲಿ ಚಿಕಿತ್ಸೆ ಸಮರ್ಪಕವಾಗಿ ಸಿಗದಿದ್ದರೆ, ಮುಂಬೈ ಅಥವಾ ಹೈದರಾಬಾದ್‌ಗೆ ತೆರಳಬಹುದು. ಅಲ್ಲಿಯೂ ಸಿಗದಿದ್ದರೆ ಹೊಸದಿಲ್ಲಿಗೆ ಹೋಗಬಹುದು. ದೇಶದ ಆಸ್ಪತ್ರೆಗಳಿಗಿಂತ ವಿದೇಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸುವವರು ವಿದೇಶಕ್ಕೂ ಹಾರಬಹುದು. ಆದರೆ ಈ ಎಲ್ಲಾ ಸೌಕರ್ಯಗಳು ಉಳ್ಳವರಿಗೆ ಮಾತ್ರವೇ ಹೊರತು ಎಲ್ಲರಿಗೂ ಲಭ್ಯವಿಲ್ಲ. ಆರೋಗ್ಯ ಕ್ಷೇತ್ರವು ಸಕಲ ರೀತಿಯಲ್ಲಿ ಅಭಿವೃದ್ಧಿಗೊಂಡು ಸಕಲ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದ್ದರೂ ಇಲ್ಲದವರು ಈಗಲೂ ಸಹ ಚಿಕಿತ್ಸೆಗಾಗಿ ಪರದಾಡಬೇಕು.

ಹಾಗಂತ, ಎಲ್ಲಾ ಆಸ್ಪತ್ರೆಗಳು ದುಬಾರಿಯಾಗಿವೆ ಮತ್ತು ಚಿಕಿತ್ಸೆಗಳು ಸಮರ್ಪಕವಾಗಿ ಸಿಗುವುದಿಲ್ಲ ಹೇಳಲಾಗುವುದಿಲ್ಲ. ಕೆಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ. ವೈದ್ಯಕೀಯ ಶಿಕ್ಷಣ ಪೂರೈಸಿ, ವೈದ್ಯರಾಗಿ ಪ್ರಮಾಣ ಸ್ವೀಕರಿಸುವ ವೇಳೆ ಬಹುತೇಕ ಮಂದಿ ಶ್ರದ್ಧೆ ಮತ್ತು ಬದ್ಧತೆಯಿಂದ ನಡೆದುಕೊಳ್ಳುವುದಾಗಿ ಹೇಳುತ್ತಾರೆ. ಹಣದ ಆಮಿಷಕ್ಕೆ ಒಳಗಾಗದೆ ಅಥವಾ ಯಾವುದೇ ಅಪಚಾರಕ್ಕೆ ಆಸ್ಪದ ನೀಡದೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡುವುದಾಗಿ ದೃಢವಾಗಿ ಹೇಳುತ್ತಾರೆ. ಅಂತಹ ಬಹುತೇಕರಲ್ಲಿ ಕೆಲವರಾದರೂ ಶ್ರದ್ಧೆ ಮತ್ತು ಬದ್ಧತೆಯೊಂದಿಗೆ ಉಳಿಯುತ್ತಾರೆ. ಅವರು ಕರ್ತವ್ಯ ನಿರ್ವಹಿಸುವ ಅಥವಾ ನಡೆಸುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಹಣ, ಅನಾರೋಗ್ಯ ಸೇರಿದಂತೆ ಬೇರೆ ಯಾವುದೇ ವಿಷಯಗಳ ಬಗ್ಗೆ ಹೆಚ್ಚು ಆತಂಕ ಅಥವಾ ಭಯ ಕಾಡುವುದಿಲ್ಲ. ಅಂತಹ ಕೆಲವೇ ಆಸ್ಪತ್ರೆಗಳಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯು ಒಂದು. ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್.ಮಂಜುನಾಥ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಆಸ್ಪತ್ರೆಗೆ ಬಂದವರು ಯಾರೂ ನಿರಾಸೆಗೆ ಒಳಗಾಗುವುದಿಲ್ಲ. ಚಿಕಿತ್ಸೆ ಎಷ್ಟೇ ದುಬಾರಿಯಿಂದ ಕೂಡಿದ್ದರೂ ಅಥವಾ ಕಷ್ಟಕರದಿಂದ ಕೂಡಿದ್ದರೂ ಡಾ. ಸಿ.ಎನ್.ಮಂಜುನಾಥ ಅವರೇ ಸ್ವತಃ ಆಸಕ್ತಿ ವಹಿಸಿ, ರೋಗಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡುತ್ತಾರೆ. ರೋಗಿಗಳ ಮೊಗದಲ್ಲಿನ ಆತಂಕ ನಿವಾರಿಸುತ್ತಾರೆ.

ಮೊದಲ ಬಾರಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದವರು ಯಾರೂ ಸಹ ಇದು ಸರಕಾರದಿಂದ ನಡೆಸಲ್ಪಡುತ್ತದೆ ಎಂದರೆ ನಂಬುವುದಿಲ್ಲ. ಸೌಕರ್ಯಗಳ ಕೊರತೆ ಮತ್ತು ಸಮಸ್ಯೆಗಳ ಗೂಡಿನಂತೆ ಕಾಣಸಿಗುವ ಸರಕಾರಿ ಆಸ್ಪತ್ರೆಗಳಿಗೆ ಅಪವಾದ ಎಂಬಂತಿರುವ ಜಯದೇವ ಆಸ್ಪತ್ರೆ ಆವರಣದಲ್ಲಿ ಎಲ್ಲಿ ಹೋದರೂ ಅಲ್ಲಿ ಶುಚಿತ್ವ ಕಾಣಸಿಗುತ್ತದೆ. ಅಲ್ಲದೇ ಅಲ್ಲಿನ ವೈದ್ಯಕೀಯ ಸಿಬ್ಬಂದಿಯಿಂದ ಉತ್ತಮ ಸ್ಪಂದನೆ ದೊರೆಯುತ್ತದೆ. ಇವರು ಶ್ರಿಮಂತರು-ಬಡವರು, ಕನಿಷ್ಠ-ಗರಿಷ್ಠ ಎಂಬ ತಾರತಮ್ಯ ಇಲ್ಲಿ ಇಲ್ಲ. ಹೃದಯಾಘಾತಕ್ಕೆ ಒಳಗಾದವರು ಅಥವಾ ಚಿಂತಾಜನಕ ಸ್ಥಿತಿಯಲ್ಲಿರುವವರು ಆಸ್ಪತ್ರೆಗೆ ಬಂದರೆ ಸಾಕು, ಅವರ ಚಿಕಿತ್ಸೆಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ. ರೋಗಿಯ ಹೆಸರು, ವಿಳಾಸ, ಶುಲ್ಕ ಪಾವತಿಗಿಂತಲೂ ಜೀವ ಉಳಿಸುವುದು ಮುಖ್ಯ. ಅದಕ್ಕೆ, ಚಿಕಿತ್ಸೆ ಕೊಡಲು ಮೊದಲು ಆದ್ಯತೆ ನೀಡಲಾಗುತ್ತದೆ. ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ಆರೋಗ್ಯ ಸಚಿವರು ದಿಢೀರ್ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದರು. ಯಾರೋ ಒಬ್ಬರನ್ನು ಭೇಟಿಯಾಗಲು ಅಥವಾ ಕಾರ್ಯಕ್ರಮವೊಂದನ್ನು ಉದ್ಘಾಟಿಸಲು ಬಂದಿದ್ದ ಅವರು ಆಸ್ಪತ್ರೆ ಆವರಣ ಕಂಡು ದಂಗಾಗಿಬಿಟ್ಟರು. ಇದನ್ನು ಸರಕಾರಿ ಆಸ್ಪತ್ರೆ ಎಂದು ನಂಬಲು ಆಗುತ್ತಿಲ್ಲ. ಸರಕಾರಿ ಆಸ್ಪತ್ರೆಯನ್ನು ಈ ರೀತಿಯಲ್ಲೂ ನಿರ್ವಹಿಸಬಹುದೇ ಎಂದು ಆಶ್ಚರ್ಯದಿಂದ ಪ್ರಶ್ನಿಸಿದ್ದರು.

ಓಪಿಡಿ ವಿಭಾಗ, ತಜ್ಞ ವೈದ್ಯರ ಕೊಠಡಿ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಗಳ ಬಳಿ ಒಂದಿಷ್ಟು ಜನರಿದ್ದರೆ, ಮತ್ತೊಂದು ಇಷ್ಟು ಜನರು ಡಾ. ಸಿ.ಎನ್.ಮಂಜುನಾಥ ಅವರ ಕೊಠಡಿ ಬಳಿ ಕಾದು ಕೂತಿರುತ್ತಾರೆ. ಮಂಜುನಾಥ ಅವರ ಕೊಠಡಿ ಪ್ರವೇಶಿಸುತ್ತಿದ್ದಂತೆ ಒಬ್ಬೊಬ್ಬರಾಗಿ ಹೋಗುವ ಜನರು ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಯ ಆರೋಗ್ಯಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಾರೆ. ಕುಟುಂಬ ಸದಸ್ಯರ ಹಿರಿಯರೊಬ್ಬರ ಎದುರು ಮನಬಿಚ್ಚಿ ಮಾತನಾಡುವಂತೆ ತಮ್ಮ ಕಷ್ಟಕೋಟಲೆಗಳನ್ನು ಹೇಳಿಕೊಳ್ಳುತ್ತಾರೆ. ಅವರ ದಯನೀಯ ಸ್ಥಿತಿ ಕಂಡು ಮರುಗುವ ಡಾ. ಸಿ.ಎನ್.ಮಂಜುನಾಥ ಅವರು ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಮಾಡಿಸುತ್ತಾರೆ. ಚಿಂತೆಯ ಕಾರ್ಮೋಡವನ್ನು ಅವರು ಸರಿಸುತ್ತಾರೆ. ಎಷ್ಟೇ ಕಾರ್ಯ ಒತ್ತಡವಿದ್ದರೂ ಮತ್ತು ಬೇರೆ ಸಮಸ್ಯೆಗಳಿದ್ದರೂ ರೋಗಿಗಳು ಮತ್ತು ಸಂಬಂಧಿಕರನ್ನು ನಗುಮುಖದಲ್ಲೇ ಮಾತನಾಡುತ್ತಾರೆ.

ಉತ್ತಮ ಬೆಳವಣಿಗೆಯೆಂದರೆ, ಜಯದೇವ ಆಸ್ಪತ್ರೆಯ ಶಾಖೆಗಳು ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲೂ ಕಾರ್ಯ ಆರಂಭಿಸಿವೆ. ಬೆಂಗಳೂರಿನ ಆಸ್ಪತ್ರೆ ಮಾದರಿಯಲ್ಲೇ ಚಿಕಿತ್ಸೆ ನೀಡಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬದ್ಧರಾಗಿದ್ದಾರೆ. ಹೃದ್ರೋಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆ ದುಬಾರಿಯಾಗಿದ್ದು, ಬಡವರು ಮತ್ತು ಜನಸಾಮಾನ್ಯರಿಗೆ ಅವು ಸುಲಭವಾಗಿ ಎಟಕುವುದಿಲ್ಲ. ಆಸ್ಪತ್ರೆಯ ಶಾಖೆಗಳನ್ನು ರಾಜ್ಯದ ಪ್ರಮುಖ ನಗರಗಳಲ್ಲಿ ತೆರೆದಿರುವ ಮತ್ತು ತೆರೆಯುತ್ತಿರುವ ಕಾರಣ ಜನರಿಗೆ ಅನುಕೂಲವಾಗಿದೆ. ಪ್ರತಿ ಬಾರಿಯೂ ದೂರದ ಬೆಂಗಳೂರಿನ ಆಸ್ಪತ್ರೆಗೆ ಹೋಗುವಂತಹ ಪ್ರಮೇಯ ಜನರಿಗೆ ಇರುವುದಿಲ್ಲ.ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಶಾಖೆಯನ್ನೂ ಕಲಬುರಗಿಯಲ್ಲಿ ತೆರೆದಿರುವುದು ಒಳ್ಳೆಯದು. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಈ ರೀತಿಯ ಆಸ್ಪತ್ರೆಗಳ ಶಾಖೆಗಳನ್ನು ತೆರೆಯುವುದಿಂದ ಆಯಾ ಪ್ರದೇಶದ ಜನರು ಚಿಕಿತ್ಸೆ ಪಡೆಯಲು ಹೆಚ್ಚು ಉಪಯುಕ್ತವಾಗುತ್ತದೆ.

ಸರಕಾರಿ ಆಸ್ಪತ್ರೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಕೆಲ ಬಂಡವಾಳಶಾಹಿಗಳಿಗೆ ಸಹಿಸಲು ಆಗುವುದಿಲ್ಲ. ಆರೋಗ್ಯ ಕ್ಷೇತ್ರವು ವ್ಯಾಪಾರೀಕರಣದತ್ತ ದಾಪುಗಾಲಿಡುತ್ತಿರುವಾಗ, ಬಡವರಿಗೆ ಮತ್ತು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವುದಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ? ಎಲ್ಲವೂ ದುಬಾರಿ ಆಗಿರುವಾಗ, ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಿ ಆಸ್ಪತ್ರೆ ನಿರ್ವಹಿಸುವುದಾದರೂ ಹೇಗೆ ಎಂದು ಆಡಳಿತ ವರ್ಗದವರು ಕೇಳುತ್ತಾರೆ? ಸರಕಾರಿ ಆಸ್ಪತ್ರೆಯ ಉತ್ತಮ ಕಾರ್ಯನಿರ್ವಹಣೆಯಿಂದ ತಮಗೆ ನಷ್ಟವೆಂದು ನೇರವಾಗಿ ಆರೋಪಿಸುತ್ತಾರೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸರಕಾರಿ ಆಸ್ಪತ್ರೆಗಳಿಗೆ ಆರೋಗ್ಯಕಾರಿ ಪೈಪೋಟಿ ಒಡ್ಡುವ ಬದಲು ಬೇರೆಯೇ ತೆರನಾದ ಯೋಚನೆ ಮಾಡುತ್ತಾರೆ. ಸರಕಾರಿ ಆಸ್ಪತ್ರೆಯನ್ನು ದುರ್ಬಲಗೊಳಿಸುವ, ಅಲ್ಲಿನ ಯಂತ್ರಗಳನ್ನು ಕೆಡಿಸುವ ಅಥವಾ ವ್ಯವಸ್ಥೆಯನ್ನು ಹದಗೆಡಿಸುವ ಸಂಚು ರೂಪಿಸಲಾಗುತ್ತದೆ. ಇದೆಲ್ಲವನ್ನೂ ಸಮರ್ಥವಾಗಿ ಎದುರಿಸಿ, ಸರಕಾರಿ ಆಸ್ಪತ್ರೆಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದನ್ನು ಮುಂದುವರಿಸಬೇಕು.

ಉದ್ಯಮದ ಸ್ವರೂಪ ತಳೆದಿರುವ ಆರೋಗ್ಯ ಕ್ಷೇತ್ರದಲ್ಲಿ ಶೋಷಣೆ, ಮೋಸ, ಅನ್ಯಾಯ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ವಿಶೇಷ ಗಮನ ಹರಿಸಬೇಕು. ಯಾವ್ಯಾವ ಆಸ್ಪತ್ರೆಯಲ್ಲಿ ರೋಗಿಗಳು ಉತ್ತಮ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು. ಶೋಷಣೆ, ಸುಲಿಗೆ ಅತಿಯಾಗಿ ಇರುವ ಕಡೆ, ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು. ಖಾಸಗಿ ಆಸ್ಪತ್ರೆಗಳು ನಿಜವಾಗಿಯೂ ರೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿವೆಯೇ ಅಥವಾ ಹಣ ಮಾಡುವ ದಂಧೆ ಮಾಡಿಕೊಂಡಿವೆಯೇ ಎಂಬುದನ್ನು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂಜರಿಯಬಾರದು. ಯಾರೂ ಎಷ್ಟೇ ಪ್ರಭಾವಿಯಾಗಿದ್ದರೂ ಅಥವಾ ಶಿಫಾರಸು ತಂದರೂ ಮುಂದಿಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಬಾರದು.

ಇವೆಲ್ಲದರ ಜೊತೆಜೊತೆಗೆ ಸರಕಾರಿ ಆಸ್ಪತ್ರೆಗಳನ್ನು ಬಲಗೊಳಿಸುವ ಕಾರ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಅತಿ ಹೆಚ್ಚು ರೋಗಿಗಳು ಅದರಲ್ಲೂ ಬಡವರು, ನಿರ್ಗತಿಕರು ಮತ್ತು ಜನಸಾಮಾನ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಾರೆ ಎಂಬುದನ್ನು ಮುಖ್ಯಮಂತ್ರಿ ಮತ್ತು ಸಚಿವರು ಗಮನಿಸಬೇಕು. ಔಷಧಿಗಳ ಕೊರತೆ ಉಂಟಾಗದಂತೆ ಮತ್ತು ಸೌಕರ್ಯಗಳ ಅಭಾವ ತಲೆದೋರದಂತೆ ನಿಗಾ ವಹಿಸಬೇಕು. ನಗರಪ್ರದೇಶದಷ್ಟೇ ಗ್ರಾಮೀಣ ಪ್ರದೇಶಕ್ಕೂ ಆದ್ಯತೆ ನೀಡಿ, ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಬೇಕು. ಇದಲ್ಲದೇ ಸರಕಾರಿ ಆಸ್ಪತ್ರೆಗಳ ಹಿತದೃಷ್ಟಿಯಿಂದ ಪೂರಕ ಕಾರ್ಯ ಕೈಗೊಳ್ಳಬೇಕು. ಉತ್ತಮ ಚಿಕಿತ್ಸೆ ದೊರೆಯುವ ಆಶಾಭಾವ ಹೊತ್ತು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಂಬಂಧಿಕರು ಮನೆಗೆ ನಗುಮುಖದಲ್ಲಿ ಮರಳಬೇಕೆ ಹೊರತು ನಿರಾಸೆಯ ಛಾಯೆ ಇರಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)