varthabharthi


ಸಂಪಾದಕೀಯ

ಸ್ವಯಂಕೃತಾಪರಾಧಗಳಿಗೆ ಮೈತ್ರಿ ಸರಕಾರ ಬಲಿಯಾಗದಿರಲಿ

ವಾರ್ತಾ ಭಾರತಿ : 17 Sep, 2018

ಭೂಮಿ ಹದವಾಗುವ ಮುನ್ನವೇ ಬೀಜ ಬಿತ್ತಿ ಬೆಳೆ ತೆಗೆಯಲು ಹೊರಟಾಗ ಏನೆಲ್ಲ ಸಂಭವಿಸಬಹುದೋ, ಅದೇ ಸದ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದೊಳಗೆ ನಡೆಯುತ್ತಿದೆ. ಎಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೋ ಎಂಬ ಭಯದಲ್ಲಿ ಆತುರಾತುರವಾಗಿ, ನಿಶ್ಶರ್ಥವಾಗಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮಾಡಿದ ಮೈತ್ರಿ ತನ್ನ ದುಷ್ಪರಿಣಾಮಗಳನ್ನು ಸರಕಾರದ ಮೇಲೆ ಬೀರತೊಡಗಿದೆ. ಈ ಆತುರದ ಮೈತ್ರಿಗೆ ಎರಡು ಮುಖ್ಯ ಕಾರಣಗಳಿದ್ದವು. ಒಂದು ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸುವುದು. ಎರಡನೆಯದು, ಸಿದ್ದರಾಮಯ್ಯರನ್ನು ಕಾಂಗ್ರೆಸ್‌ನಿಂದ ದೂರವಿರಿಸುವುದು. ಎರಡನೆಯ ಕಾರಣ ಕಾಂಗ್ರೆಸ್‌ನ ಕೆಲವು ಮುಖಂಡರಿಗೆ ಅತ್ಯಗತ್ಯವಾಗಿತ್ತು.

ರಾಜ್ಯದಲ್ಲಿ ಸಿದ್ದರಾಮಯ್ಯರಿಲ್ಲದೇ ಕಾಂಗ್ರೆಸ್ ಇಲ್ಲ ಎಂಬ ಮನಸ್ಥಿತಿಯನ್ನು ದೂರೀಕರಿಸಲು ವಿಧಾನಸಭಾ ಚುನಾವಣೆಯ ಹೊತ್ತಿನಲ್ಲೇ ತಯಾರಿ ನಡೆದಿತ್ತು. ಚುನಾವಣೆಯಲ್ಲಿ ಸಿದ್ದರಾಮಯ್ಯ ಅನುಭವಿಸಿದ ವೈಫಲ್ಯದ ಹಿಂದೆ ಬಿಜೆಪಿಗಿಂತಲೂ, ಕಾಂಗ್ರೆಸ್‌ನೊಳಗಿರುವ ನಾಯಕರ ‘ಸಾಧನೆ’ಯೇ ದೊಡ್ಡದಿತ್ತು. ಇದಾದ ಮೇಲೆ, ಸಿದ್ದರಾಮಯ್ಯರ ಸಾಂಪ್ರದಾಯಿಕ ವೈರಿ ಕುಮಾರಸ್ವಾಮಿಯನ್ನು ಯಾವುದೇ ಶರತ್ತುಗಳಿಲ್ಲದೆ ಆತುರಾತುರದಲ್ಲಿ ಮುಖ್ಯಮಂತ್ರಿಯಾಗಿಸಿದ್ದೂ ಇದೇ ಕಾರಣಕ್ಕೆ. ಬರೇ 38 ಸ್ಥಾನಗಳನ್ನು ಪಡೆದ ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ನಾಯಕರು ಐದು ವರ್ಷಗಳ ಮುಖ್ಯಮಂತ್ರಿಯಾಗಿ ಸಹಿಸುತ್ತಾರೆ ಎನ್ನುವುದು ತಪ್ಪು ರಾಜಕೀಯ ಲೆಕ್ಕಾಚಾರವಾಗಿದೆ. ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯೇ ಎನ್ನುವುದು ಇನ್ನೂ ಕಾಂಗ್ರೆಸ್‌ನೊಳಗೆ ಇತ್ಯರ್ಥವಾಗಿಲ್ಲ. ಇದರ ನಡುವೆಯೇ, ಮತ್ತೆ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಚಟುವಟಿಕೆಗಳು ಗರಿಗೆದರಿವೆ. ಜಾರಕಿಹೊಳಿ ಸಹೋದರರ ಅಸಮಾಧಾನ ಕಾಂಗ್ರೆಸ್‌ನೊಳಗೆ ತಳಮಳ ಸೃಷ್ಟಿಸಿದೆ. ಈ ಸಂದರ್ಭವನ್ನು ಬಳಸಿಕೊಂಡು, ಮತ್ತೆ ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ಕತ್ತರಿ ಹುಡುಕುತ್ತಿದ್ದಾರೆ.

ಸರಕಾರ ರಚನೆ ಮಾಡುವಲ್ಲಿ ಬಿಜೆಪಿ ತನಗಾದ ಮುಖಭಂಗದಿಂದ ಇನ್ನೂ ಚೇತರಿಸಿಲ್ಲ. ಅದು ಸೇಡು ತೀರಿಸುವ ಹವಣಿಕೆಯಲ್ಲಿದೆ. ಆದುದರಿಂದಲೇ ಮೈತ್ರಿ ಸರಕಾರದೊಳಗಿರುವ ಬೆಳವಣಿಗೆಗಳನ್ನು ಗಮನಿಸುತ್ತಾ ಬರುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯೊಳಗೆ ಮೈತ್ರಿ ಸರಕಾರದಲ್ಲಿ ಬಿರುಕು ಕಂಡು ಬಂದರೆ, ಬಿಜೆಪಿ-ಜೆಡಿಎಸ್ ಮೈತ್ರಿಯ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಕೇಂದ್ರದಲ್ಲಿ ಮೋದಿಯನ್ನು ಅಧಿಕಾರಕ್ಕೇರಿಸಲು ಬಿಜೆಪಿಗೆ ಅನಿವಾರ್ಯವಾಗಿದೆ. ಆದುದರಿಂದ, ಅದೆಷ್ಟೇ ಬೆಲೆಕೊಟ್ಟು ಶಾಸಕರನ್ನು ಕೊಂಡು ಕೊಳ್ಳುವುದಕ್ಕೂ ಅದು ಸಿದ್ಧವಿದೆ. ಮೈತ್ರಿ ಸರಕಾರದೊಳಗೆ ಅಂತಹದೊಂದು ದುರ್ಬಲ ಸಂದರ್ಭಕ್ಕಾಗಿ ಅದು ಕಾಯುತ್ತಿದೆ. ಈ ನಿಟ್ಟಿನಲ್ಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಕ್ತ ಮನಸ್ಸಿನಿಂದ ಕೊಡುಕೊಳ್ಳುವಿಕೆಯನ್ನು ಮಾಡಿದರೆ ಮಾತ್ರ ಸರಕಾರದ ಬಾಳಿಕೆ ಸಾಧ್ಯ. ‘ನೀವಿಲ್ಲದೇ ಇದ್ದರೆ ನನಗೆ ಬಿಜೆಪಿಯಿದೆ’ ಎನ್ನುವ ಬ್ಲಾಕ್ ಮೇಲ್ ತಂತ್ರವನ್ನು ದೀರ್ಘ ಸಮಯ ಬಳಕೆ ಮಾಡುವುದಕ್ಕಾಗುವುದಿಲ್ಲ ಎನ್ನುವುದನ್ನು ಕುಮಾರಸ್ವಾಮಿ ಮನಗಾನಬೇಕು. ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು ಎನ್ನುವ ಸಮಯ ಸಾಧಕ ರಾಜಕಾರಣಕ್ಕಾಗಿ ಈಗಾಗಲೇ ಜೆಡಿಎಸ್ ಬಹಳಷ್ಟು ಬೆಲೆ ತೆತ್ತಿದೆ. ಅಂತಹ ರಾಜಕಾರಣ ಮಾಡಿರುವುದಕ್ಕಾಗಿ ದೇವೇಗೌಡರು ಮತ್ತು ಅವರ ಮಕ್ಕಳು ಸಾರ್ವಜನಿಕವಾಗಿ ಪದೇ ಪದೇ ಕ್ಷಮೆಯಾಚನೆ ಮಾಡಿದ್ದಾರೆ ಮತ್ತು ಕಣ್ಣೀರು ಸುರಿಸಿದ್ದಾರೆ.

ಬಿಜೆಪಿ ಏಕಾಏಕಿ ಆಪರೇಷನ್ ಕಮಲದ ಕುರಿತಂತೆ ಮಾತನಾಡುವುದಕ್ಕೆ ಕಾರಣ ಕಾಂಗ್ರೆಸ್‌ನೊಳಗೆ ಇತ್ತೀಚೆಗೆ ನಡೆಯುತ್ತಿರುವ ಗೊಂದಲಗಳಾಗಿವೆ. ಬೆಳಗಾವಿ ರಾಜಕೀಯ ಸರಕಾರದ ಮೇಲೆ ನೇರ ಪರಿಣಾಮ ಬೀರಿದೆ. ಮೈತ್ರಿ ಸರಕಾರದ ನೇತಾರರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಮೇಲ್ನೋಟಕ್ಕೆ ಸಿದ್ಧಾಂತದ ಕಾರಣಕ್ಕಾಗಿ ಅಂದರೆ, ಕೋಮುವಾದಿ ಪಕ್ಷಗಳನ್ನು ದೂರವಿಡುವುದಕ್ಕಾಗಿ ನಡೆದ ಮೈತ್ರಿ ಎಂದು ಕಂಡರೂ, ಸರಕಾರ ತೋಳ್ಬಲ ಮತ್ತು ಹಣಬಲದ ತಳಹದಿಯಲ್ಲಿ ನಿಂತಿದೆ. ಹೆಸರಿಗಷ್ಟೇ ಸಿದ್ದರಾಮಯ್ಯರನ್ನು ಮುಂದಿಡಲಾಗಿದೆ. ಡಿಕೆಶಿ ಅವರು ಮೈತ್ರಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಹಾಗೆಯೇ ಶಾಸಕರನ್ನು ಹಣದ ಬಲದಿಂದಲೇ ಹಿಡಿದಿಟ್ಟು ಕೊಳ್ಳಲಾಯಿತು. ಇಲ್ಲವಾಗಿದ್ದರೆ, ಬಿಜೆಪಿಯ ಆಮಿಷಕ್ಕೆ ಹಲವರು ಪಕ್ಷ ಬದಲಾಯಿಸುವ ಸಾಧ್ಯತೆಗಳಿದ್ದವು. ಇದೀಗ, ಕಾಂಗ್ರೆಸ್‌ನೊಳಗಿರುವ ಗೊಂದಲಕ್ಕೂ ಹಣವಂತ ರಾಜಕಾರಣಿಗಳೇ ಕಾರಣವಾಗಿದ್ದಾರೆ. ಜಾರಕಿಹೊಳಿ ಸಹೋದರರಿಗೆ ಆರಂಭದಿಂದಲೇ ಸರಕಾರದ ಜೊತೆಗೆ ಅಸಮಾಧಾನವಿತ್ತು. ಇದನ್ನು ಪರಿಹರಿಸಿಕೊಳ್ಳುವುದು, ಅವರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮೈತ್ರಿ ಸರಕಾರದ ಹೊಣೆಗಾರಿಕೆಯಾಗಿತ್ತು.

ಸತೀಶ್ ಜಾರಕಿಹೊಳಿ ಹಣಬಲದ ಕಾರಣಕ್ಕಾಗಿ ಮಾತ್ರವಲ್ಲ, ಸಾಮಾಜಿಕ ನೆಲೆಯಲ್ಲೂ ತನ್ನ ಹಣವನ್ನು ಬಳಸಿಕೊಂಡು ಕೆಲಸ ಮಾಡುತ್ತಿರುವವರು. ಜೊತೆಗೆ ಶೋಷಿತ ಸಮುದಾಯದಿಂದ ಬಂದವರು. ಅವರನ್ನು ಯಾವ ಕಾರಣದಿಂದಲೂ ಕಾಂಗ್ರೆಸ್ ನಿರ್ಲಕ್ಷಿಸುವಂತಿಲ್ಲ. ಸತೀಶ್ ಜಾರಕಿಹೊಳಿ ಬಿಜೆಪಿ ಸೇರಲಾರರು ಎನ್ನುವ ಧೈರ್ಯದಿಂದ ಅವರ ಅಸಮಾಧಾನವನ್ನು ನಿರ್ಲಕ್ಷಿಸಿದ್ದು ಇದೀಗ ಕಾಂಗ್ರೆಸ್‌ಗೆ ದುಬಾರಿಯಾಗಿದೆ. ಮೈತ್ರಿ ಸರಕಾರದಲ್ಲಿ ಸಾಧಾರಣವಾಗಿ ಎಲ್ಲರೂ ಸಣ್ಣ ಪುಟ್ಟ ಅಸಮಾಧಾನಗಳನ್ನು ಒಳಗಿಟ್ಟುಕೊಂಡೇ ಓಡಾಡುತ್ತಾರೆ. ಆದರೆ ತಕ್ಕ ಸಮಯ ಬಂದಾಗ ಅದನ್ನು ಪ್ರದರ್ಶಿಸಲು ಧೈರ್ಯ ತೋರಿಸುತ್ತಾರೆ. ತನ್ನದೇ ಒಂದು ಗುಂಪು ಕಟ್ಟಿಕೊಂಡು ಭಿನ್ನಮತವನ್ನು ಸೃಷ್ಟಿಸುವಷ್ಟು ಹಣಬಲ, ತೋಳ್ಬಲ ಜೊತೆಗೆ ಶಾಸಕಬಲ ಖಂಡಿತವಾಗಿಯೂ ಸಿದ್ದರಾಮಯ್ಯರಲ್ಲಿ ಇಲ್ಲ. ಆದರೆ ಅವರೂ ಈ ಸಂದರ್ಭವನ್ನು ತನಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂದರೆ ಅಸಮಾಧಾನವನ್ನು ಶಮನಗೊಳಿಸುವ ಹೊಣೆಗಾರಿಕೆ ನನ್ನದಲ್ಲ ಎಂಬ ನಿಲುವನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರು ಸಿದ್ದರಾಮಯ್ಯರನ್ನು ಸದ್ಯದ ಪರಿಸ್ಥಿತಿಯ ಅಗತ್ಯಕ್ಕೆ ಮುಂದಿಟ್ಟು ತಮ್ಮ ನಾಯಕರಾಗಿಸಿಕೊಂಡಿದ್ದಾರೆ. ಆದರೆ ತಮ್ಮ ಬಯಕೆ ಈಡೇರಿಸಿದ ಮರುಕ್ಷಣವೇ ಅವರು ಸಿದ್ದರಾಮಯ್ಯರ ಪಕ್ಕದಿಂದ ಡಿಕೆಶಿ ಪಕ್ಕಕ್ಕೆ ಜರಗಲಿದ್ದಾರೆ.

ಆದುದರಿಂದ, ಸದ್ಯಕ್ಕೆ ಕಾಂಗ್ರೆಸ್‌ನೊಳಗೆ ಎದ್ದಿರುವ ಭಿನ್ನಮತಕ್ಕೆ ಸಿದ್ದರಾಮಯ್ಯರನ್ನು ನೇರ ಹೊಣೆ ಮಾಡುವಂತಿಲ್ಲ. ಹಣಬಲದ ಮೇಲೆ ನಿಂತ ಸರಕಾರ, ಹಣಬಲದಿಂದಲೇ ಉರುಳಬಹುದು ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡು ಡಿಕೆಶಿ ಬಳಗ ಮುತ್ಸದ್ದಿತನದಿಂದ ರಾಜಕೀಯ ಹೆಜ್ಜೆಗಳನ್ನು ಇಡಬೇಕಾಗಿದೆ. ವೈಯಕ್ತಿಕವಾಗಿ ಡಿಕೆಶಿಗೂ ಸರಕಾರ ಉಳಿಯುವುದು ಅತ್ಯಗತ್ಯ.ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಯನ್ನು ಬಿಟ್ಟು ಕಾಂಗ್ರೆಸ್‌ನೊಳಗಿನ ಪ್ರತಿಸ್ಪರ್ಧಿ ಬಲಾಢ್ಯ ನಾಯಕರ ಜೊತೆಗೆ ಮುಕ್ತ ಮಾತುಕತೆಗೆ ಡಿಕೆಶಿ ಬಳಗ ಸಿದ್ಧರಾಗಬೇಕು. ಹಾಗೆಯೇ ಸರಕಾರ ಉಳಿಸುವುದು ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆ ಮಾತ್ರವಲ್ಲ, ಅದರಲ್ಲಿ ತನ್ನ ಹೊಣೆಗಾರಿಕೆಯೂ ಇದೆ ಎನ್ನುವುದನ್ನು ಜೆಡಿಎಸ್ ನಾಯಕರೂ ಅರಿತು ಕೊಂಡು ಮುನ್ನಡೆದರೆ ಕನಿಷ್ಠ ಎರಡು ವರ್ಷವಾದರೂ ಮೈತ್ರಿ ಬಾಳಿಕೆ ಬಂದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)