varthabharthi

ಅನುಗಾಲ

ವಿದ್ಯಾರ್ಥಿಗಳು ಮತ್ತು ರಾಜಕೀಯ

ವಾರ್ತಾ ಭಾರತಿ : 20 Sep, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಮ್ಮ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿತನವನ್ನು ಎಂದೋ ಕಳೆದುಕೊಂಡಿವೆ. ಅವೀಗ ರಾಜಕೀಯ ಪಕ್ಷಗಳ ಯುವವಿಭಾಗದಂತೆಯೋ ಹಿಂಸಾಶಾಖೆಗಳಾಗಿಯೋ ಕೆಲಸಮಾಡುತ್ತಿವೆ. ಭಾಷಣಕ್ಕೂ ಬಂದ್‌ಗಳಿಗೂ ವಿದ್ಯಾರ್ಥಿಗಳನ್ನು ಬಳಸುವುದು ಎಲ್ಲ ಕಡೆ ನಡೆಯುತ್ತಿದೆ. ರಾಜಕೀಯ ನಾಯಕರು ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದರಲ್ಲಿ ಪರಿಣತರು. ಆದರೆ ಈಚೀಚೆಗೆ ತಮ್ಮ ಮಕ್ಕಳನ್ನೇ ಬಾವಿಗೆ ತಳ್ಳಿ ಆಳ ನೋಡುವುದನ್ನು ಸಮಾಜವು ಕಂಡು ಧನ್ಯವಾಗಿದೆ.


ಮೊನ್ನೆ ಮೊನ್ನೆ ನಡೆದ ದಿಲ್ಲಿಯ ಪ್ರತಿಷ್ಠಿತ (ಈ ಪದ ಇತ್ತೀಚೆಗೆ ಎಲ್ಲ ದೊಡ್ಡ ಸಣ್ಣ ಪ್ರಶಸ್ತಿಗಳಿಗೆ ಬಳಕೆಯಾಗುತ್ತಿದೆಯೆಂಬುದನ್ನು ಗಮನಿಸಬಹುದು!) ಜೆಎನ್‌ಯುನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು. ಎಡ ಪಂಥದ ಒಲವಿನ ನಾಲ್ಕು ಸಂಘಟನೆಗಳ ರಂಗವು ಮುಖ್ಯವಾದ ಎಲ್ಲ ನಾಲ್ಕು ಸ್ಥಾನಗಳನ್ನು ಗೆದ್ದಿತು. ಉಳಿದಂತೆ ಇತರ ಸಂಘಟನೆಗಳು ಸೋಲನ್ನಪ್ಪಿದವು.

ಇದಕ್ಕೆ ಕೆಲವೇ ದಿನಗಳ ಮೊದಲು ನಡೆದ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪ್ರಮುಖ ನಾಲ್ಕು ಸ್ಥಾನಗಳಲ್ಲಿ ಮೂರನ್ನು ಅಭಾವಿಪ ಗೆದ್ದರೆ ಇನ್ನೊಂದು ಸ್ಥಾನವನ್ನು ಎನ್‌ಎಸ್‌ಯುಐ ಗೆದ್ದಿತು. ದಿಲ್ಲಿ ವಿಶ್ವವಿದ್ಯಾನಿಲಯದ ಚುನಾವಣೆ ನಡೆದ ತಕ್ಷಣ ಅಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ ‘ವ್ಯಕ್ತಿಯು’ (ಈತ ವಿದ್ಯಾರ್ಥಿ ಹೌದೋ ಅಲ್ಲವೋ ಎಂಬುದೇ ಈಗ ಜಿಜ್ಞಾಸೆಯಲ್ಲಿರುವುದರಿಂದ!) ಫೇಕ್ ಪ್ರಮಾಣಪತ್ರದ ಮೂಲಕ ಪ್ರವೇಶ ಗಿಟ್ಟಿಸಿದ್ದಾನೆಂಬ ಗುರುತರ ಆರೋಪ ಈಗ ದಾಖಲಾಗಿದೆ ಮತ್ತು ಇಂತಹ ಚುನಾವಣೆಗಳನ್ನು ಮತ್ತು ಅವುಗಳ ಮಾಧ್ಯಮ ವರದಿಗಳನ್ನು ಗಮನಿಸಿದರೆ ಇವು ದೇಶದ ರಾಜಕೀಯದ ಮಿನಿ ಕುರುಕ್ಷೇತ್ರದಂತೆ ಕಾಣಿಸುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಮಾರಾಮಾರಿ ನಡೆಯದೆ ಪರಸ್ಪರ ಟೀಕಾಪ್ರಹಾರವಿಲ್ಲದೆ ಯಾವ ಚುನಾವಣೆಗಳೂ ನಡೆಯುತ್ತಿಲ್ಲ.

ಗೆದ್ದ, ಸೋತ ಎಲ್ಲ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳು ಅನ್ನಿಸದೆ ರಾಜಕೀಯ ಪಕ್ಷಗಳ ಪರವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿನಿಧಿಸುವ ರಾಜಕಾರಣಿಗಳ ವಲಯವೆಂದೇ ಅನ್ನಿಸುತ್ತದೆ. ನಾಯಕತ್ವದ ಗುಣ ಹೊಂದಿದ, ನಿಜಕ್ಕೂ ನಿರ್ಲಿಪ್ತನಾದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಇಂತಹ ಚುನಾವಣೆಗಳಲ್ಲಿ ಗೆಲ್ಲುವುದು ಬಿಡಿ, ಸ್ಪರ್ಧಿಸಲೂ ಸಾಧ್ಯವಿಲ್ಲದ ವಾತಾವರಣವೊಂದನ್ನು ನಮ್ಮ ರಾಜಕೀಯ ಪಕ್ಷಗಳು ಹುಟ್ಟುಹಾಕಿವೆ. ವಿದ್ಯಾರ್ಥಿ ಸಮುದಾಯದ ಬಹುದೊಡ್ಡ ಗುಂಪೊಂದು ಈಗ ಶಿಕ್ಷಣವನ್ನೇ ಮರೆತವರಂತೆ ಅಥವಾ ರಾಜನೀತಿಯ ಪ್ರಾಯೋಗಿಕ ಪರೀಕ್ಷೆಗಾಗಿಯೇ ಪ್ರವೇಶ ಪಡೆದಂತೆ ವರ್ತಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ದಿನನಿತ್ಯವೂ ದೇಶದ ಆಗುಹೋಗುಗಳಿಗೆ ಸಂಬಂಧಿಸಿದಂತೆ, ಆಳುವ ಅಥವಾ ವಿರೋಧ ಪಕ್ಷದ ರಾಜಕಾರಣಿಗಳಂತೆ, ಹೇಳಿಕೆ ನೀಡುವುದು, ಹೋರಾಟ ನಡೆಸುವುದು, ಇವೇ ಅಕಡೆಮಿಕ್ ಕ್ಯಾಲೆಂಡರ್ ಆಗಿದೆ.

ದುರದೃಷ್ಟವೋ, ದುರಂತವೋ, ಈ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸಮಾಡುವ (ಕೆಲಸಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಅಂತೂ ಉದ್ಯೋಗದಲ್ಲಿರುವ) ಶಿಕ್ಷಕ ತಂಡವೂ ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಈ ಸಂಘಟನೆಗಳನ್ನು ಪೋಷಿಸುತ್ತಿವೆ. ವಿದ್ಯಾರ್ಥಿಗಳನ್ನು ರಾಜಕೀಯ ನಿಲುವಿನಡಿ ಅಡ್ಡಾನೀಟಾ ಸೀಳಿ ಪರಸ್ಪರ ದ್ವೇಷಕಾರುವಂತೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹಿಂಸೆಯ ಮತ್ತು ಗೊಂದಲದ ಗೂಡಾಗಿ ಪರಿವರ್ತಿಸುವಲ್ಲಿ ನಮ್ಮ ಶಿಕ್ಷಕರ ಕೊಡುಗೆ ಅಪಾರ. ಈಚೆಗೆ ರಾಜಕೀಯ ಸ್ಥಾನಮಾನವಾಗಿರುವ ಸಾಂವಿಧಾನಿಕ ಹುದ್ದೆಗಳನ್ನೇ ಗಮನಿಸಬಹುದು: ದಿವಂಗತ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿಯೂ ರಾಜಕಾರಣಿಯಾಗಲಿಲ್ಲ. ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಬಹುಕಾಲ ಶಿಕ್ಷಕರಾಗಿದ್ದು ತಾತ್ವಿಕ (ವಿ)ಜ್ಞಾನಿಯಾಗಿ ಹೆಸರು ಪಡೆದು ನಿವೃತ್ತಿಯ ಆನಂತರ ರಾಜಕೀಯವನ್ನು ನೇರವಾಗಿ ಪ್ರವೇಶಿಸದೆ ಉಪರಾಷ್ಟ್ರಪತಿ ಹುದ್ದೆಗೇರಿದರು. ಆದರೂ ರಾಜ್ಯಪಾಲರಂತಹ ಅನೇಕ ಹುದ್ದೆಗಳು ನಿವೃತ್ತ ರಾಜಕಾರಣಿಗಳ ಪುನರ್ವಸತಿ ಕೇಂದ್ರಗಳಾಗಿವೆಯೆಂಬುದನ್ನು ಸ್ವತಂತ್ರ ಭಾರತ ಕಂಡಿದೆ. ಯಾವ ರಾಜ್ಯಪಾಲರು ಯಾವ ಪಕ್ಷದವರು ಎಂಬುವುದು ಸೂರ್ಯನಷ್ಟೇ ಸ್ಪಷ್ಟ.

ನಮ್ಮಲ್ಲಿ ಕೆಲವು ಶಿಕ್ಷಕರಾದರೂ ಇಂತಹ ಹುದ್ದೆಗಳನ್ನು ರಾಜಕೀಯ ಸಾಧನೆಯೆಂಬಂತೆ ಬಿಂಬಿಸಿಕೊಂಡು ಇದನ್ನೇರುವುದಕ್ಕೇ ಶಿಕ್ಷಕ ವೃತ್ತಿಯನ್ನು ಅವಲಂಬಿಸಿದಂತೆ ಕಾಣುತ್ತದೆ. ಶಿಕ್ಷಕರಿಗೆ ಇದೊಂದು ರೀತಿಯ ಬದಲಾವಣೆ, ವಿಶ್ರಾಂತಿ. ಪಾಠ ಮಾಡುವ ಕಾಯಕಕ್ಕಿಂತ ಇದು ಹಗುರ. ಅನೇಕ ಶಿಕ್ಷಕರು ಶಿಕ್ಷಣದ ಕುರಿತು ಯೋಚಿಸುವುದಕ್ಕಿಂತ, ಚಿಂತಿಸುವುದಕ್ಕಿಂತ ಹೆಚ್ಚಾಗಿ ತಮ್ಮ ರಾಜಕೀಯ ನಿಲುವಿಗೆ ಹೊಂದಬಲ್ಲ ವಿದ್ಯಾರ್ಥಿಗಳನ್ನು ಹುಡುಕುವುದೇ ಮತ್ತು ಅವರ ಮೂಲಕ ತಮ್ಮ ಶಿಕ್ಷಣೇತರ ಆಕಾಂಕ್ಷೆಗಳನ್ನು ಈಡೇರಿಸುವುದೇ ಮುಖ್ಯವೆಂದುಕೊಳ್ಳುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ವಿಶ್ವವಿದ್ಯಾನಿಲಯಗಳ ಸೆಮಿನಾರುಗಳಲ್ಲಿ, ತಮಗೆ ವಹಿಸಿದ ವಿಚಾರವೊಂದನ್ನು ಬಿಟ್ಟು ದೇಶದ, ವಿಶ್ವದ ಎಡಬಲಗಳನ್ನು ಪೋಷಿಸುವುದೋ, ಟೀಕಿಸುವುದೋ ಪ್ರಧಾನ ವಸ್ತುವಾಗಿರುತ್ತದೆ. ತೆಂಗಿನ ಮರ ಮತ್ತು ದನದ ಕಥೆಗಳನ್ನು ಹೋಲುವ ಅನೇಕ ಭಾಷಣಗಳನ್ನು ಚಿಂತಕ (ಚಿಂತಾಜನಕ) ಶಿಕ್ಷಕರ ಮುಖಾರವಿಂದದಿಂದ ನಾನೇ ಕೇಳಿದ್ದೇನೆ. ಹಣದ ಹೊರತಾಗಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಸಂಕಲನಕ್ಕಿಂತ ವ್ಯವಕಲನ ಸುಲಭವಿರಬಹುದೇನೋ? ಒಟ್ಟು ಮಾಡುವುದಕ್ಕಿಂತ ಬೇರ್ಪಡಿಸುವುದು ಸುಲಭ; ಅದನ್ನೇ ಪೂರ್ವಿಕರು ‘ಕುಂಬಾರಗೆ ವರುಷ, ದೊಣ್ಣೆಗೆ ನಿಮಿಷ’ ಎಂದರಲ್ಲವೇ! (ಇಂತಹ ಜಾತಿ ಸೂಚಕ ಉಕ್ತಿಗಳನ್ನು ಬಳಸಲೂ ಭಯಪಡುವ ಪರಿಸರವನ್ನು ನಿರ್ಮಿಸಿದ ಚಿಂತಕ ಚಾಣಕ್ಯರಿಗೆ ಶರಣು!)

ಶಿಕ್ಷಕರ ಕುರಿತು ಇಂತಹ ಟೀಕೆಗಳು ಕೆಲವರಿಗೆ ಖಾರವಾಗಿ ಕೇಳಬಹುದು; ಕಾಣಬಹುದು. ಆದರೆ ಮನೆಯ ಮಗು ಶಾಲೆಯಲ್ಲಿ ಶಿಕ್ಷಕರು ತಪ್ಪುಉಚ್ಚಾರ ಹೇಳಿಕೊಟ್ಟು ನಾವು-ಪೋಷಕರು-ಅದನ್ನು ತಿದ್ದಹೊರಟರೆ, ‘‘ನಮ್ಮ ಮಿಸ್ ಹೀಗೆಯೇ ಹೇಳಿದ್ದಾರೆ, ನಿಮಗೆ ಗೊತ್ತಿಲ್ಲ’’ ಎನ್ನುವಷ್ಟರ ಮಟ್ಟಿಗೆ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರಭಾವಿಸಬಲ್ಲರಾದರೆ ಅವರು ಸರಿಯಾದ ಶಿಕ್ಷಣಕ್ಕಷ್ಟೇ ತಮ್ಮನ್ನು ತಾವು ಒಪ್ಪಿಸಿಕೊಳ್ಳಬೇಕೆಂದು ಸಮಾಜ ಬಯಸಿದರೆ ತಪ್ಪಿಲ್ಲ. ಗಿಡವಾಗಿದ್ದಾಗಲೇ ಬಾಗಬೇಕು ಎಂಬುದರ ಆಧಾರದಲ್ಲಿ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸದಲ್ಲಿ ಭಾಗಿಯಾಗಿ ಕಾಡಬೆಳದಿಂಗಳಿನಂತೆ ದುಡಿಯುವ ಶಿಕ್ಷಕರನ್ನು ಅವರೆಷ್ಟೇ ಅನಾಮಧೇಯರಾಗಿ ಉಳಿದರೂ ಸಾರ್ವಜನಿಕ ಹಗಲಿಗೆ ತಂದು ಸನ್ಮಾನಿಸಬೇಕು. ಅವರು ಉಳಿದ ಕ್ಷೇತ್ರಗಳಲ್ಲಿ ಏನು ಮಾಡಿದರು ಎಂಬುದು ಗೌಣವಾಗಿರಬೇಕು. ಮೊಬೈಲ್‌ಫೋನ್‌ಗಳ ಜಾಹೀರಾತು, ಅವುಗಳ ಪರಿಚಯದ ಉಲ್ಲೇಖ, ಲೇಖನಗಳನ್ನು ಗಮನಿಸಿದರೆ ಅವುಗಳು ತಮ್ಮ ಉದ್ದೇಶಿತ ಗುರಿಯಾದ ಮಾತನ್ನು ಹೇಗೆ ತಲುಪಿಸಬಹುದೆಂಬುದನ್ನು ಹೊರತುಪಡಿಸಿ ಇನ್ನುಳಿದ ಎಲ್ಲ- ಅಂದರೆ, ಮುಖ್ಯವಾಗಿ ಕ್ಯಾಮೆರಾ, ಡೌನ್‌ಲೋಡ್ ಸಮಯ, ಇಂತಹ ಇತರ ಭೂಮಿಕೆಗಳನ್ನು ಚರ್ಚಿಸುತ್ತವೆಯೆಂಬುದು ಗೊತ್ತಾಗುತ್ತದೆ.

ಹಳ್ಳಿಯ ಗಮಾರನೊಬ್ಬ (ನಮ್ಮಲ್ಲಿ ಹಳ್ಳಿಯವರೆಲ್ಲರೂ ಗಮಾರರೆಂದೂ ನಗರದಲ್ಲಿರುವವರೆಲ್ಲರೂ ಬೃಹಸ್ಪತಿಗಳೆಂದೂ ಅದು ಹೇಗೋ ಅರ್ಥ, ವ್ಯಾಖ್ಯಾನ ಸ್ಥಿರಗೊಂಡಿದೆ!) ಈ ಮೊಬೈಲ್‌ನಲ್ಲಿ ಮಾತನಾಡಲಾಗುತ್ತದೆಯೇ? ಎಂದು ಕೇಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಾಗೆಯೇ ಶಿಕ್ಷಕರೊಬ್ಬರನ್ನು ಅವರ ಶೈಕ್ಷಣಿಕ ವೃತ್ತಿಯ ಸಾಧನೆಗನುಗುಣವಾಗಿ ಗೌರವಿಸಬೇಕೇ ವಿನಾ ಅನ್ಯಕ್ಷೇತ್ರಗಳ ಸಾಧನೆಗಳಿಗಾಗಿ ಅಲ್ಲ. ಒಬ್ಬ ಶಿಕ್ಷಕನು ಸಾಹಿತಿಯಾದರೆ (ಒಳ್ಳೆಯ) ಶಿಕ್ಷಕರಾಗಿಯೂ ಇವರು ಕಲೆ/ಸಂಗೀತ/ಸಾಹಿತ್ಯದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ ಎಂಬ ಪ್ರಶಂಸೆ ಪ್ರಕಟವಾಗಬೇಕು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ, ಅವರನ್ನು ದೇಶದ ಸತ್ಪ್ರಜೆಗಳನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು ಎಂಬುದಕ್ಕಾಗಿ ಇಷ್ಟನ್ನು ಹೇಳಬೇಕಾಯಿತೇ ಹೊರತು ವಿಷಯಾಂತರಗೊಳಿಸುವುದಕ್ಕಲ್ಲ. ಒಬ್ಬ ಕನ್ಹಯ್ಯ ಕುಮಾರ್, ಒಬ್ಬ ಖಾಲಿದ್ ರಾಜಕೀಯ ನಾಯಕರಾಗಿ ಹೊರಹೊಮ್ಮಬಹುದು. ಆದರೆ ನಾಯಕತ್ವವೆಂದರೆ ರಾಜಕೀಯ ನಾಯಕತ್ವ ವೆಂದೇ ತಿಳಿದು ಸಮಾಜ ಸಂಭ್ರಮಿಸಬಾರದು.

ಐನ್‌ಸ್ಟೈನ್, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ರಘುರಾಮರಾಜನ್ ಮುಂತಾದವರು ರಾಜಕೀಯಕ್ಕಿಳಿಯಲೇ ಇಲ್ಲ. ಆದರೆ ವರ್ತಮಾನವು ಮರೆಯಲಾಗದ, ಮರೆಯಬಾರದ ವ್ಯಕ್ತಿಗಳಾದರು. ಆದ್ದರಿಂದ ವಿದ್ಯಾರ್ಥಿಯೊಬ್ಬ ತಾನು ಮತ್ತೆ ಪಡೆಯಲಾರದ ವಿದ್ಯಾರ್ಥಿ ಸಂದರ್ಭವನ್ನು ಕಳೆದುಕೊಳ್ಳದೆ ಅದನ್ನು ಶೈಕ್ಷಣಿಕ ಸಾಧನೆಗೆ ಮೀಸಲಾಗಿಡಬೇಕು. ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಬೇಕಾದ್ದು ಅವಶ್ಯ. ಪ್ರಾಯಃ ಅವರಿಗೂ ದೇಶದ ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳನ್ನು ಪರಿಚಯಿಸುವುದಕ್ಕಾಗಿ ಆರಂಭಿಸಿದ ಅನೇಕ ಪ್ರಯೋಗಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳೂ ಒಂದು. ಆದರೆ ಇವು ಬಾಹ್ಯ ಪ್ರವೇಶ ಮಾತ್ರವಲ್ಲ, ಪ್ರಭಾವವೂ ಇಲ್ಲದ ರೀತಿಯಲ್ಲಿ ನಡೆಯಬೇಕು. ಅವರಲ್ಲಿ ಪ್ರತಿಭೆ, ಪಾಂಡಿತ್ಯ (ರಾಜಕಾರಣಕ್ಕೆ ಪಾಂಡಿತ್ಯ ಬೇಕಿಲ್ಲವೆಂದು ನಮ್ಮ ರಾಜಕೀಯ ಸಾಬೀತು ಮಾಡಿದೆ!), ನಾಯಕತ್ವದ ಗುಣವಿದ್ದರೆ ಅವರು ಶಿಕ್ಷಣ ಮುಗಿಸಿ ಅಥವಾ ಶಿಕ್ಷಣವನ್ನು ತ್ಯಜಿಸಿ ರಾಜಕೀಯವನ್ನು ಆಯ್ದುಕೊಂಡು ತಮ್ಮ ಹಣೆಬರಹವನ್ನು ನಿರ್ಧರಿಸಿಕೊಳ್ಳಬಹುದು. ಆದರೆ ಶಿಕ್ಷಣ ಸಂಸ್ಥೆಯೊಳಗಿದ್ದೇ ರಾಜಕೀಯ ನಡೆಸುವ ಮರಕುಟಿಗತನವನ್ನು ಸಮಾಜ ಸಹಿಸಿದ್ದೇ ಆದಲ್ಲಿ ಅದು ನಮ್ಮ ಆರೋಗ್ಯಪೂರ್ಣ ವಾತಾವರಣವನ್ನು ಕಲುಷಿತಗೊಳಿಸುವುದು ಮಾತ್ರವಲ್ಲ, ವಿನಾಶಕ್ಕೊಯ್ಯುವುದು ಖಂಡಿತ.

ನಮ್ಮ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿತನವನ್ನು ಎಂದೋ ಕಳೆದುಕೊಂಡಿವೆ. ಅವೀಗ ರಾಜಕೀಯ ಪಕ್ಷಗಳ ಯುವವಿಭಾಗದಂತೆಯೋ ಹಿಂಸಾಶಾಖೆಗಳಾಗಿಯೋ ಕೆಲಸಮಾಡುತ್ತಿವೆ. ಭಾಷಣಕ್ಕೂ ಬಂದ್‌ಗಳಿಗೂ ವಿದ್ಯಾರ್ಥಿಗಳನ್ನು ಬಳಸುವುದು ಎಲ್ಲ ಕಡೆ ನಡೆಯುತ್ತಿದೆ. ರಾಜಕೀಯ ನಾಯಕರು ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದರಲ್ಲಿ ಪರಿಣತರು. ಆದರೆ ಈಚೀಚೆಗೆ ತಮ್ಮ ಮಕ್ಕಳನ್ನೇ ಬಾವಿಗೆ ತಳ್ಳಿ ಆಳ ನೋಡುವುದನ್ನು ಸಮಾಜವು ಕಂಡು ಧನ್ಯವಾಗಿದೆ. ಮುಂದಿನ ಪೀಳಿಗೆಯೆಂಬ ತಮ್ಮ ಕಾಲಿಗೆ ತಾವೇ ಕಲ್ಲು ಹಾಕುವ ಇಂತಹ ಶಂಕುಸ್ಥಾಪನೆಯ ಕಾಲ ಎಂದು ಮುಗಿಯುತ್ತದೆಯೋ? ವಿದ್ಯಾರ್ಥಿಗಳನ್ನು ಹೀಗೆ (ಕು)ರೂಪಿಸುವುದರಲ್ಲಿ ಮಾಧ್ಯಮಗಳ ಪಾತ್ರವೇನೂ ಕಡಿಮೆಯಿಲ್ಲ. ಅವರೂ ತಾವೇಕೆ ಹಿಂದುಳಿಯಬೇಕೆಂಬ ತರಾತುರಿಯಲ್ಲಿ ವಿದ್ಯಾರ್ಥಿತನದ ರಾಜಕೀಯವನ್ನು ಪ್ರಧಾನ ಸುದ್ದಿಯೆಂಬಂತೆ ಮಾತ್ರವಲ್ಲ, ಕೆಲವೊಮ್ಮೆ ಜಾಹೀರಾತುಗಳಂತೆಯೂ ಪ್ರಕಟಿಸುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಅಕ್ರಮಗಳನ್ನು, ಹಿಂಸೆಗಳನ್ನು ಶಮನಗೊಳಿಸುವಂತೆ ಕರ್ತವ್ಯಬದ್ಧರಾಗಿರಬೇಕಾಗಿದ್ದ ಮಾಧ್ಯಮಗಳು ಇವನ್ನು ಇನ್ನಷ್ಟು ಉಲ್ಬಣವಾಗುವಂತೆ ಉಪ್ಪು-ಖಾರ ಹಚ್ಚಿ ಚಿತ್ರಿಸುತ್ತಾರೆ. ಸಿನೆಮಾಗಳಲ್ಲಿ ವಿದ್ಯಾರ್ಥಿ ನಾಯಕರು ಮಾಡುವ ಹುಡುಗಾಟಿಕೆ, ಪುಂಡಾಟ ಇವನ್ನು ನಮ್ಮ ವಿದ್ಯಾರ್ಥಿಗಳು ಅನುಸರಿಸುತ್ತಾರೆಯೇ ಅಥವಾ ನಮ್ಮ ವಿದ್ಯಾರ್ಥಿಗಳನ್ನು ಈ ಸಿನೆಮಾಗಳು ಅನುಸರಿಸುತ್ತವೆಯೇ ಎಂದು ಹೇಳುವುದು ಕಷ್ಟವಾಗುವಂತೆ ಈ ಚಕ್ರಭ್ರಮಣ ಸಾಗುತ್ತಿದೆ.

 ಇಂತಹ ಮಾಧ್ಯಮಗಳು ಯಾವನೇ ವಿದ್ಯಾರ್ಥಿ ನಾಯಕನಲ್ಲಿ ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ, ಪಠ್ಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸುವುದು ಇಂದು ಕಾಣಿಸುತ್ತಿಲ್ಲ. ನೀವು ಶಿಕ್ಷಣದಲ್ಲಿ (ಅಥವಾ ನಿಮ್ಮ ಶಿಕ್ಷಣ ಜೀವನದಲ್ಲಿ) ಏನು ಸಾಧಿಸಬೇಕೆಂದಿದ್ದೀರಿ? ವಿದ್ಯಾರ್ಥಿಗಳು ಒಂದಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು? ಮುಂತಾದ ವಿಚಾರಗಳನ್ನು ಕೆದಕಿ, ಕೆಣಕುವ ಬದಲಾಗಿ ನಿಮ್ಮ ನೆಚ್ಚಿನ ರಾಷ್ಟ್ರ ನಾಯಕರ್ಯಾರು? ಈ ಬಾರಿ ಯಾರು ಪ್ರಧಾನ/ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ? ನೀವು ಯಾವ ಮಂತ್ರಿಗಳ ರಾಜೀನಾಮೆಯನ್ನು ಬಯಸುತ್ತೀರಿ? ಇವೇ ಮೊದಲಾದ ಪ್ರಶ್ನೆಗಳನ್ನು ಹುಟ್ಟುಹಾಕಿ ನಿಜಕ್ಕೂ ಶಿಕ್ಷಣದ ಕುರಿತು ಒಂದಿಷ್ಟು ಪ್ರೀತಿಯಿರುವ ವಿದ್ಯಾರ್ಥಿಯನ್ನೂ ರಾಜಕೀಯಕ್ಕೆ (ಬರ)ಸೆಳೆಯುವ ದಾರ್ಶನಿಕ ಯತ್ನವನ್ನು ಮಾಡುತ್ತಾರೆ.

ವಿದ್ಯಾರ್ಥಿ ಸಂಘಗಳ ಚುನಾವಣೆಯಲ್ಲಿ ಯಾವ ವಿದ್ಯಾರ್ಥಿ ಚುನಾಯಿತನಾದ ಎಂಬುದಕ್ಕಿಂತಲೂ (ಈ ಲೇಖನದ ಆರಂಭದಲ್ಲಿ ಪ್ರಸ್ತಾವಿಸಿದಂತೆ) ಯಾವ ರಾಜಕೀಯ ಸಂಘಟನೆಯ ಪರವಾದ ಅಭ್ಯರ್ಥಿ ಗೆಲುವು ಪಡೆದಿದ್ದಾನೆ ಎಂಬುದೇ ಮಹತ್ವವಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿ ವಿದ್ಯಾರ್ಥಿಯಾಗಿ ಉಳಿಯುವುದಿಲ್ಲ, ಅಭ್ಯರ್ಥಿಯಾಗುತ್ತಾನೆ. ಅಷ್ಟೇ ಅಲ್ಲ, ಗೆದ್ದ ಮತ್ತು ಸೋತ ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳು ಎಂದೂ ಪರಸ್ಪರ ರಾಜಿಯಾಗದಂತೆ ಮತ್ತು ಅವರ ನಡುವಣ ಚುನಾವಣಾ ಮನಸ್ತಾಪವು ವಿದ್ಯಾರ್ಥಿವರ್ಷಗಳನ್ನು ದಾಟಿ ಜೀವನ ವರ್ಷಕ್ಕೆ ವ್ಯಾಪಿಸುವಂತೆ ಮಾಡುವಲ್ಲಿ ನೆರವಾಗುತ್ತಾರೆ.

ಹೀಗಾಗಬಾರದು. ನಮ್ಮ ಮಗ(ಳು) ಇಂತಹ ರಾಜಕೀಯ ಪಕ್ಷದ ಪರವಾಗಿ ವಿದ್ಯಾರ್ಥಿ ನಾಯಕರಾದರು ಎಂಬ ಉದ್ಗಾರ ಹೆತ್ತವರಿಂದ ಬರಬಾರದು. ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಚುನಾವಣೆಯ ಫಲಿತಾಂಶಗಳಿಗೆ ರಾಷ್ಟ್ರ/ರಾಜ್ಯ ರಾಜಕಾರಣ, ಹಣ, ಹೆಂಡ ಕಾರಣವಾಗಬಾರದು. ಚುನಾವಣೆ ನಡೆಯಲಿ. ಅದು ಸಂಸಾರದ ಜಗಳದಂತೆ ಶಿಕ್ಷಣ ಸಂಸ್ಥೆಯೆಂಬ ಮನೆಯೊಳಗೇ ಇರಲಿ. ಅದರ ಘಾಟು, ವಾಸನೆ ಹೊರಗೆ ವ್ಯಾಪಿಸದಿರಲಿ. ಶಿಕ್ಷಕರು ವಿದ್ಯಾರ್ಥಿಗಳೂ ಪಾಠದತ್ತ ಹೆಚ್ಚು ಗಮನ ಕೊಟ್ಟರೆ ಅದೇ ದೊಡ್ಡ ಸಾಧನೆ. ಇದು ಎಲ್ಲರಿಗೂ ಪಾಠವಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)