varthabharthi

ಸಂಪಾದಕೀಯ

ಬ್ಯಾಂಕ್‌ಗಳ ವಿಲೀನ ಸುಧಾರಣೆಯೋ? ತೇಪೆಯೋ?

ವಾರ್ತಾ ಭಾರತಿ : 21 Sep, 2018

ಬ್ಯಾಂಕ್‌ಗಳ ವಿಲೀನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಇದನ್ನು ಸರಕಾರ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಎಂದು ಕರೆಯುತ್ತಿದೆ. ಪಾವತಿಯಾಗದ ಸಾಲಗಳ ಬೃಹತ್ ಹೊರೆಯಿಂದ ಆರ್ಥಿಕವಲಯವನ್ನು ರಕ್ಷಿಸಲು ಸರಕಾರ ಹತ್ತು ಹಲವು ಯಡವಟ್ಟುಗಳನ್ನು ಮಾಡುತ್ತಾ ಇನ್ನಷ್ಟು ಆಪತ್ತುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ನೋಟು ನಿಷೇಧದ ನಿರ್ಧಾರವೂ ಇಂತಹದೇ ಒಂದು ಗೊಂದಲಕಾರಿ ನಿರ್ಧಾರವಾಗಿತ್ತು. ನೋಟು ನಿಷೇಧದ ಪರಿಣಾಮಗಳನ್ನು ದೇಶ ಇಂದು ಅನುಭವಿಸುತ್ತಿದೆ. ದೇಶದ ಮೂರು ಪ್ರಮುಖ ಸಾರ್ವಜನಿಕ ರಂಗದ ಬ್ಯಾಂಕ್‌ಗಳನ್ನು (ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್) ವಿಲೀನಗೊಳಿಸುವ ಮೋದಿ ಸರಕಾರದ ನಿರ್ಧಾರವು ಮರುಪಾವತಿಯಾಗದ ಸಾಲಗಳ ಹೊರೆಯಿಂದ ತತ್ತರಿಸಿರುವ ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟಿಗೆ ತೇಪೆ ಹಚ್ಚುವ ಕೆಲಸವಾಗಿದೆಯಷ್ಟೆ. ಆದರೆ ಇದರಿಂದಾಗಿ ಸಾರ್ವಜನಿಕರಂಗದ ಬ್ಯಾಂಕ್‌ಗಳ ಸ್ವಾಸ್ಥ ಸುಧಾರಣೆಯಾಗಲಿದೆಯೆಂದು ಭಾವಿಸುವುದಾದರೆ ಅದೊಂದು ಕೇಂದ್ರ ಸರಕಾರದ ಹಗಲುಗನಸಲ್ಲದೆ ಬೇರೇನೂ ಅಲ್ಲ.

ಬ್ಯಾಂಕ್‌ಗಳ ವಿಲೀನದಿಂದಾಗಿ,ಅವುಗಳ ಕಾರ್ಯನಿರ್ವಹಣೆಯ ದಕ್ಷತೆ ಹೆಚ್ಚುವುದರ ಜೊತೆಗೆ ಗ್ರಾಹಕ ಸೇವೆಯಲ್ಲೂ ಸುಧಾರಣೆಯಾಗಲಿದೆ ಎಂದು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೇಲುಸ್ತುವಾರಿ ಹೊಂದಿರುವ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಪ್ರತಿಪಾದಿಸುತ್ತಿದ್ದಾರೆ. ಆದರೆ, ಈ ಸುಧಾರಣೆ ಹೇಗೆ ಆಗಲಿದೆಯೆಂಬ ಬಗ್ಗೆ ಈ ಇಲಾಖೆ ತುಟಿಬಿಚ್ಚುತ್ತಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾದುದೆಂದರೆ ಒಂದು ದುರ್ಬಲ ಬ್ಯಾಂಕನ್ನು, ಬಲಿಷ್ಠವಾದ ಬ್ಯಾಂಕ್ ಜೊತೆ ವಿಲೀನಗೊಳಿಸಿದಲ್ಲಿ, ಆಗ ದುರ್ಬಲ ಬ್ಯಾಂಕನ್ನು ಮಾತ್ರ ರಕ್ಷಿಸಿದಂತಾಗುತ್ತದೆ. ಆದರೆ ಇದೇ ವೇಳೆ, ಸಾಕಷ್ಟು ಸಶಕ್ತವಾಗಿಯೇ ಇರುವ ಇನ್ನೊಂದು ಬ್ಯಾಂಕ್ ಕೂಡಾ ಈ ವಿಲೀನದಿಂದಾಗಿ ದುರ್ಬಲಗೊಳ್ಳುವ ಸಾಧ್ಯತೆಯಿರುತ್ತದೆ. ಬ್ಯಾಂಕ್ ಆಫ್ ಬರೋಡಾ ಕೂಡಾ ಇದೇ ಪರಿಸ್ಥಿತಿ ಎದುರಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ಆಫ್ ಬರೋಡಾ , ಆರ್ಥಿಕವಾಗಿ ಹಿಂದಿಗಿಂತ ಉತ್ತಮ ನಿರ್ವಹಣೆಯನ್ನು ತೋರಿಸುತ್ತಾ ಬಂದಿದೆ. ಆದರೆ ಬ್ಯಾಂಕುಗಳ ವಿಲೀನದ ಬಳಿಕ, ಈ ಪುನಶ್ಚೇತನದ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಎಲ್ಲಾ ಬ್ಯಾಂಕುಗಳನ್ನು ರಕ್ಷಿಸಲು ಸರಕಾರವು ಬಯಸುತ್ತಿದೆಯೆಂದು ಹೇಳುವ ಮೂಲಕ ಕೇಂದ್ರ ವಿತ್ತ ಸಚಿವ ಅರುಣ್‌ಜೇಟ್ಲಿ ಸಾರ್ವಜನಿಕ ರಂಗದ ಬ್ಯಾಂಕ್ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ. ಬ್ಯಾಂಕ್‌ಗಳ ವಿಲೀನದ ಪರಿಣಾಮವಾಗಿ ಯಾವುದೇ ಉದ್ಯೋಗಿಯು ಪ್ರತಿಕೂಲವಾದ ಸೇವಾನಿರ್ವಹಣೆಯ ಪರಿಸ್ಥಿತಿಯನ್ನು ಎದುರಿಸುವುದಿಲ್ಲ. ಈ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ಜೇಟ್ಲಿ ಈಗಾಗಲೇ ಹೇಳಿಕೊಂಡಿದ್ದಾರೆ.ಆದರೆ ಈ ಹಿಂದೆ ಭಾರತೀಯ ಸ್ಟೇಟ್‌ಬ್ಯಾಂಕ್‌ನೊಂದಿಗೆ ಅದರ ಸಹವರ್ತಿ ಬ್ಯಾಂಕುಗಳು ಕೂಡಾ ವಿಲೀನಗೊಂಡಿದ್ದವು. ವಿಲೀದಿಂದಾಗಿ ತಮ್ಮ ವೃತ್ತಿಬದುಕಿನ ಪ್ರಗತಿಯಲ್ಲಿ ಪ್ರತಿಕೂಲ ಪರಿಣಾಮವುಂಟಾಗಿರುವ ಬಗ್ಗೆ ಸಹವರ್ತಿ ಬ್ಯಾಂಕುಗಳ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ. ಈಗ ಎಸ್‌ಬಿಐನ ಅಧಿಕಾರಿಗಳ ಎದುರು ತಮ್ಮನ್ನು ದ್ವಿತೀಯ ದರ್ಜೆಯ ನಾಗರಿಕರೆಂಬ ಭಾವನೆಯಲ್ಲಿ ಕಾಣಲಾಗುತ್ತಿದೆ ಮತ್ತು ತಮ್ಮ ಉದ್ಯೋಗ ಭಡ್ತಿಯ ಅವಕಾಶಗಳಿಗೆ ಹಿನ್ನಡೆಯುಂಟಾಗಿದೆಯೆಂದವರು ನೊಂದಿದ್ದಾರೆ.

ಭಾರತೀಯ ಆರ್ಥಿಕತೆಗೆ ಸಾರ್ವಜನಿಕ ರಂಗದ ಬ್ಯಾಂಕುಗಳು ತುಂಬಾ ತಲೆನೋವಾಗಿ ಪರಿಣಮಿಸಿವೆ.ದೇಶದ ಒಟ್ಟು ಬ್ಯಾಂಕಿಂಗ್ ವಲಯದ ಮೂರನೇ ಎರಡರಷ್ಟಿರುವ ಸಾರ್ವಜನಿಕರಂಗದ ಬ್ಯಾಂಕುಗಳು, ಮರುಪಾವತಿಯಾಗದ ಸಾಲಗಳು, ಅನುತ್ಪಾದಕ ಆಸ್ತಿಗಳ ಹೊರೆಯಿಂದಾಗಿ ಕಂಗಾಲಾಗಿವೆ. ಇದರಿಂದಾಗಿ ಉತ್ತಮ ಆರ್ಥಿಕ ಬೆಳವಣಿಗೆಗೆ ಅವಕಾಶ ಮಾಡಿಕೊಡಲು, ಹೊಸ ಸಾಲಗಳನ್ನು ಪೂರೈಕೆ ಮಾಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ ಈ ಸಮಸ್ಯೆಗಳಿಗೆಲ್ಲಾ ಜೇಟ್ಲಿ ಬ್ಯಾಂಕ್‌ಗಳ ವಿಲೀನವೇ ಅಂತಿಮ ಪರಿಹಾರವೆಂದು ಪದೇ ಪದೇ ಸಾರುತ್ತಲೇ ಬರುತ್ತಿದ್ದಾರೆ.

ಬೃಹತ್ ಕಾರ್ಪೊರೇಟ್ ಉದ್ಯಮಿಗಳಿಗೆ ದೊಡ್ಡ ಮೊತ್ತದ ಸಾಲವನ್ನು ನೀಡಿ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ಕೈಸುಟ್ಟುಕೊಂಡಿರುವುದು ಈಗ ಹಳೆಯ ವಿಷಯವಾಗಿದೆ. ಭವಿಷ್ಯದಲ್ಲಿ ಬ್ಯಾಂಕುಗಳು ಕಾರ್ಪೊರೇಟ್ ವಲಯಗಳಿಗೆ ಬೃಹತ್ ಮೊತ್ತದ ಸಾಲವನ್ನು ನೀಡುವ ಮೊದಲು ನಿರ್ಣಯಾತ್ಮಕವಾದ ಒಂದು ಸಮಸ್ಯೆಯನ್ನು ಅವು ಬಗೆಹರಿಸಬೇಕಿದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲ ನೀಡಿಕೆಯಲ್ಲಿ ವಂನೆಯ ಆರೋಪಗಳ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾಗೃತದಳ ಹಾಗೂ ತನಿಖಾದಳಗಳು ಕೈಗೊಂಡಿರುವ ಕ್ರಮಗಳಿಂದ ಕೆಲವು ಬ್ಯಾಂಕ್‌ಗಳ ಹಿರಿಯ ಮ್ಯಾನೇಜರ್‌ಗಳು ಮಾನಸಿಕ ಯಾತನೆಗೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗ ನಡುವೆ ವಿಶ್ವಾಸ ನಿರ್ಮಾಣದ ಪ್ರಕ್ರಿಯೆ ನಡೆಯಬೇಕಾದ ಅಗತ್ಯವಿದೆ.

 ಕೆಲವೇ ಬೃಹತ್ ಬ್ಯಾಂಕ್‌ಗಳನ್ನು ಸೃಷ್ಟಿಸಲು ಹಾಗೂ ಸರಕಾರಕ್ಕೆ ಆರ್ಥಿಕ ವ್ಯವಹಾರ ಸುಗಮಗೊಳಿಸುವ ಉದ್ದೇಶಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ವಿವೇಚನಾರಹಿತವಾಗಿ ವಿಲೀನಗೊಳಿಸುವುದು ತೀರಾ ತಪ್ಪು. ದೊಡ್ಡ ಬ್ಯಾಂಕ್‌ಗಳನ್ನು ಸೃಷ್ಟಿಸಲು ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದು ಯಾಕೆಂಬ ತಾತ್ವಿಕ ಪ್ರಶ್ನೆಗೆ ಕೇಂದ್ರ ಸರಕಾರದ ಬಳಿ ಯಾವುದೇ ಸಮರ್ಪಕವಾದ ಉತ್ತರವಿಲ್ಲ. ಯಾವುದೇ ಒಂದು ಸಂಸ್ಥೆಯು ದೊಡ್ಡದಾಗಿ ರೂಪುಗೊಂಡಲ್ಲಿ, ಅದರ ವ್ಯವಸ್ಥೆಯು ಕೂಡಾ ದೊಡ್ಡದಾಗಿಬಿಡುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅವು ವಿಫಲತೆಯನ್ನು ಕಂಡಲ್ಲಿ, ಅವುಗಳನ್ನು ರಕ್ಷಿಸುವುದು ಕೂಡಾ ಬೃಹತ್ ಸಮಸ್ಯೆಯಾಗಿಬಿಡುತ್ತದೆ.

ಈ ನಿಟ್ಟಿನಲ್ಲಿ, ಇಂದು ಬ್ಯಾಂಕ್‌ಗಳು ಬಿಕ್ಕಟ್ಟು ಎದುರಿಸಲು ನಿಜವಾದ ಕಾರಣಗಳು ಏನು ಎನ್ನುವುದರ ಕಡೆಗೆ ಸರಕಾರ ಗಮನ ಹರಿಸಬೇಕು. ರಾಜಕೀಯ ವರ್ಗ ಹಾಗೂ ಅಧಿಕಾರಶಾಹಿಯ ಮಧ್ಯಪ್ರವೇಶವಿಲ್ಲದೆ ಕಾರ್ಯನಿರ್ವಹಿಸಬಲ್ಲ ಹೆಚ್ಚು ವೃತ್ತಿಪರತೆಯುಳ್ಳ ಮ್ಯಾನೇಜರ್‌ಗಳ ಸಮೂಹವನ್ನು ಸಿದ್ಧಗೊಳಿಸಬೇಕಾಗಿದೆ. ಭಾರತದಲ್ಲಿ ಬ್ಯಾಂಕ್ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರುವುದು ಸರ್ವೇಸಾಮಾನ್ಯವಾಗಿದೆ. ಪ್ರಬಲ ಉದ್ಯಮ ಸಂಸ್ಥೆಗಳ ಪರವಾಗಿ ಕೆಲವೊಮ್ಮೆ ಉನ್ನತ ಮ್ಯಾನೇಜರ್‌ಗಳು ಲಾಬಿ ನಡೆಸುತ್ತಿರುತ್ತಾರೆ. ಇಂತಹ ಮ್ಯಾನೇಜರ್‌ಗಳು, ಅಗತ್ಯ ಸನ್ನಿವೇಶಗಳಲ್ಲಿ ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ. ಈ ಪಿಡುಗು ಭಾರತದಲ್ಲಂತೂ ಸಾರ್ವಜನಿಕರಂಗದ ಬ್ಯಾಂಕುಗಳಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಈ ದಿಕ್ಕಿನ ಕಡೆಗೆ ಕಣ್ಣನ್ನೇ ಹೊರಳಿಸದೆ, ವಿಲೀನದ ತೇಪೆಯ ಮೂಲಕ ಬ್ಯಾಂಕ್‌ಗಳನ್ನು ಮೇಲೆತ್ತಬಹುದು ಎಂಬ ಸರಕಾರದ ನಿರ್ಧಾರ ಇನ್ನಷ್ಟು ಆಪತ್ತುಗಳನ್ನು ಆರ್ಥಿಕ ವಲಯದ ಮೇಲೆ ಆಹ್ವಾನಿಸಿಕೊಂಡಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)