varthabharthi

ಸಂಪಾದಕೀಯ

ಸರ್ಜಿಕಲ್ ಸ್ಟ್ರೈಕ್ ದಿನ: ಸೇನೆಯ ತ್ಯಾಗ, ಬಲಿದಾನಗಳ ಅಣಕವಾಗದಿರಲಿ

ವಾರ್ತಾ ಭಾರತಿ : 22 Sep, 2018

ಸೈನಿಕರ ತ್ಯಾಗಗಳನ್ನು ಸ್ಮರಿಸುತ್ತಲೇ ನಾವು ಆಧುನಿಕ ಭಾರತದ ಹಿರಿಮೆಯನ್ನು ಕೊಂಡಾಡಬೇಕಾಗುತ್ತದೆ. ಸ್ವಾತಂತ್ರೋತ್ತರ ದಿನಗಳಲ್ಲಿ ಭಾರತ ವಿಶ್ವದಲ್ಲಿ ಆತ್ಮವಿಶ್ವಾಸದೊಂದಿಗೆ ತಲೆಯೆತ್ತಿ ನಿಂತಿದ್ದರೆ ಅದರ ಹಿಂದೆ ಸಹಸ್ರಾರು ಸೈನಿಕರ ತ್ಯಾಗ ಬಲಿದಾನವಿದೆ. ಭಾರತದ ಅತಿ ದೊಡ್ಡ ಹೆಗ್ಗಳಿಕೆಯೆಂದರೆ, ಸೇನೆ ಎಂದಿಗೂ ಪ್ರಜಾಸತ್ತೆಯ ಮೇಲೆ ತನ್ನ ಹಸ್ತಕ್ಷೇಪಗಳನ್ನು ಮಾಡಿಲ್ಲದಿರುವುದು. ಭಾರತದ ರಾಜಕೀಯ ಬೆಳವಣಿಗೆಗಳ ಜೊತೆಗೆ ಸದಾ ಅಂತರವನ್ನು ಕಾಪಾಡುತ್ತಾ ಬಂದಿದೆ. ಪ್ರಜಾಸತ್ತೆಯ ಉಳಿವಿಗೆ ಪೂರಕವಾಗಿ ಕೆಲಸ ಮಾಡುತ್ತಾ ಬಂದಿದೆ. ನೆರೆಯ ಪಾಕ್‌ಗಿಂತ ಭಾರತ ಭಿನ್ನವಾಗುವುದೇ ಈ ಕಾರಣದಿಂದ. ಸ್ವಾತಂತ್ರಾನಂತರ ಹಲವು ಯುದ್ಧಗಳನ್ನು ನಮ್ಮ ಸೇನೆ ಗೆದ್ದುಕೊಟ್ಟಿದೆ. ಕಾರ್ಗಿಲ್ ಯುದ್ಧದಲ್ಲಂತೂ ಅಪಾರ ಸಾವು ನೋವುಗಳ ನಡುವೆಯೂ ಭಾರತದ ಒಂದಿಂಚು ನೆಲವನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲಿಲ್ಲ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾವನ್ನು ಸ್ವತಂತ್ರಗೊಳಿಸಿದ ಹೆಮ್ಮೆಯೂ ನಮ್ಮ ಸೇನೆಯದ್ದು. ಇವಿಷ್ಟೇ ಅಲ್ಲದೆ, ಪ್ರತಿ ವರ್ಷವೂ ಅದು ಸದ್ದಿಲ್ಲದೆ ಶತ್ರುಗಳ ವಿರುದ್ಧ ಕಾರ್ಯತಂತ್ರಗಳನ್ನು ರೂಪಿಸುತ್ತಾ ಅದರ ಬೇರೆ ಬೇರೆ ಸಂಚುಗಳನ್ನು ವಿಫಲಗೊಳಿಸುತ್ತಾ ಬರುತ್ತಿದೆ. ನಮ್ಮ ಸೇನೆ ಎಂದಿಗೂ ತನ್ನ ಕಾರ್ಯಸಾಧನೆಗಳನ್ನು ಬಹಿರಂಗಗೊಳಿಸಿಲ್ಲ. ಹಾಗೆ ಬಹಿರಂಗಗೊಳಿಸುವುದು ದೇಶದ ಭದ್ರತೆಯ ಹಿತದೃಷ್ಟಿಯಿಂದ ಸಾಧುವೂ ಅಲ್ಲ.

ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿದ ದಿನದಿಂದ ಒಂದಲ್ಲ ಒಂದು ನೆಪ ಹಿಡಿದು ಸೇನೆಯ ಕಾರ್ಯಯೋಜನೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಕೇಂದ್ರ ಸಚಿವರ ಅನಗತ್ಯ ಹೇಳಿಕೆಗಳು ಸೇನೆಯ ಮುಖ್ಯಸ್ಥರನ್ನು ಹಲವು ಬಾರಿ ಮುಜುಗರಕ್ಕೆ ಈಡು ಮಾಡಿವೆ. ಎರಡು ವರ್ಷಗಳ ಹಿಂದೆ ಸೇನೆ ನಡೆಸಿದೆ ಎನ್ನಲಾದ ‘ಸರ್ಜಿಕಲ್ ಸ್ಟ್ರೈಕ್’ ಕೂಡ ಇಂತಹದ್ದೇ ವಿವಾದವನ್ನು ಹುಟ್ಟಿಸಿ ಹಾಕಿತ್ತು. ಇಂತಹ ದಾಳಿಗಳನ್ನು ಸೇನೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ವೈರಿ ದೇಶದ ಗಡಿಯನ್ನು ದಾಟಿ ಮಿಂಚಿನೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ವಾಪಸಾಗುವುದು ಈ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಆದರೆ ಗಡಿಯನ್ನು ಉಲ್ಲಂಘಿಸಿ ಈ ರೀತಿ ನಡೆಸುವ ದಾಳಿಯನ್ನು ಎಲ್ಲ ದೇಶಗಳು ಮುಚ್ಚಿಡುತ್ತವೆ. ಕಾಶ್ಮೀರದಲ್ಲಿ ಉಗ್ರರ ದಾಳಿಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾದ ಕೇಂದ್ರ ಸರಕಾರ ಮುಖ ಉಳಿಸಿಕೊಳ್ಳುವ ಒಂದೇ ಉದ್ದೇಶದಿಂದ ಇಂತಹದೊಂದು ದಾಳಿಯನ್ನೇ ಸರಕಾರದ ಸಾಧನೆಯಾಗಿ ಬಿಂಬಿಸಲು ಯತ್ನಿಸಿತು. ಸೇನೆ ಈ ದಾಳಿಯನ್ನು ನಡೆಸಿತು ಎಂದೇ ಇಟ್ಟುಕೊಳ್ಳೋಣ. ಇದರಲ್ಲಿ ಸರಕಾರದ ಪಾತ್ರವೇನು? ದುರದೃಷ್ಟವಶಾತ್ ದೇಶದ ಇತಿಹಾಸದಲ್ಲೇ ಒಂದು ಸಾಮಾನ್ಯ ದಾಳಿಯನ್ನು ಬೃಹತ್ ಯುದ್ಧವನ್ನು ಗೆದ್ದಂತೆ ಸಂಭ್ರಮದಿಂದ ಸೇನಾ ಮುಖ್ಯಸ್ಥರಿಂದ ಪತ್ರಿಕಾಗೋಷ್ಠಿ ಮಾಡಿಸಿತು. ಅಂದಿನ ರಕ್ಷಣಾ ಸಚಿವರಂತೂ, ಸೇನೆಯ ಈ ಕಾರ್ಯವನ್ನು ಆರೆಸ್ಸೆಸ್ ಸಂಘಟನೆಗೆ ಅರ್ಪಿಸಿದರು.

ಈ ದೇಶದಲ್ಲಿ ಕೋಮುಗಲಭೆಗಳನ್ನು ಎಬ್ಬಿಸಿ ಆಂತರಿಕ ಭದ್ರತೆಗೆ ಸವಾಲಾದ, ಆ ಕಾರಣಕ್ಕಾಗಿಯೇ ನಿಷೇಧಕ್ಕೂ ಒಳಗಾಗಿದ್ದ, ಸ್ವಾತಂತ್ರ ಹೋರಾಟದಲ್ಲಿ ಎಳ್ಳಿನಷ್ಟೂ ಪಾಲನ್ನು ನೀಡದ ಸಂಘಟನೆ ಸರ್ಜಿಕಲ್ ಸ್ಟ್ರೈಕ್‌ಗೆ ಕಾರಣ ಎಂದು ಹೇಳುವ ಮೂಲಕ ದೇಶದ ಸೇನೆಯ ತ್ಯಾಗ ಬಲಿದಾನಗಳನ್ನು ಅವಮಾನಿಸಿತು. ಭಾರತ ಪಾಕ್ ನಡುವೆ ನಡೆದ ಹಲವು ಯುದ್ಧಗಳನ್ನು ನಮ್ಮ ಸೇನೆ ಗೆದ್ದಾಗ ಇಲ್ಲದ ಆರೆಸ್ಸೆಸ್, ಬಾಂಗ್ಲಾವನ್ನು ಸ್ವತಂತ್ರಗೊಳಿಸುವ ಸಂದರ್ಭದಲ್ಲಿ ಇಲ್ಲದ ಆರೆಸ್ಸೆಸ್, ಈ ‘ಸರ್ಜಿಕಲ್ ಸ್ಟ್ರೈಕ್’ನ ಸಂದರ್ಭದಲ್ಲಿ ಬಂದುದು ಹೇಗೆ? ಇದೀಗ ಕಾಶ್ಮೀರದಲ್ಲಿ ಉಗ್ರವಾದ ವಿಜೃಂಭಿಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಸೆಪ್ಟಂಬರ್ 29ನ್ನು ಸರ್ಜಿಕಲ್ ಸ್ಟ್ರೈಕ್ ದಿನವನ್ನಾಗಿ ಆಚರಿಸಬೇಕು ಎಂದು ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶನ ನೀಡಿದೆ. ಇಂತಹದೊಂದು ನಿರ್ದೇಶನವನ್ನು ನೀಡಲು ಯುಜಿಸಿಗೆ ಯಾವ ಕಾರಣವೂ ಇಲ್ಲ. ‘ಸರ್ಜಿಕಲ್ ಸ್ಟ್ರೈಕ್ ದಿನ’ವನ್ನು ನಿರ್ದಿಷ್ಟವಾಗಿ ಆಚರಿಸಲು ಯುಜಿಸಿ ಯಾಕೆ ನಿರ್ಧರಿಸಿತು ಮತ್ತು ಇದು ನಮ್ಮ ವಿದ್ಯಾಸಂಸ್ಥೆಗಳನ್ನು ಯಾವ ದಾರಿಯಲ್ಲಿ ಮುನ್ನಡೆಸಲಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಖಂಡಿತವಾಗಿಯೂ ಇದು ಕೇಂದ್ರ ಸರಕಾರದ ನೇರ ನಿರ್ದೇಶನವೆನ್ನುವುದನ್ನು ಎಲ್ಲ ವಿಶ್ವವಿದ್ಯಾನಿಲಯಗಳೂ ಅರ್ಥ ಮಾಡಿಕೊಂಡಿವೆ. ತಮಾಷೆಯೆಂದರೆ, ಈ ಸರ್ಜಿಕಲ್ ಸ್ಟ್ರೈಕ್ ಯಾವಾಗ ನಡೆಯಿತು, ಅದನ್ನು ನೋಡಿದವರು ಯಾರು? ಯಾಕಾಗಿ ನಡೆಯಿತು? ಮತ್ತು ಈ ಸ್ಟ್ರೈಕ್‌ನಿಂದ ಈ ದೇಶದ ಮೇಲಾದ ಪರಿಣಾಮಗಳೇನು? ಈ ಪ್ರಶ್ನೆಗಳಿಗೆ ಮೊದಲು ಯುಜಿಸಿ ಉತ್ತರಿಸಬೇಕಾಗಿದೆ. ಒಂದು ವೇಳೆ ಇದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಯುಜಿಸಿ ಹೇಳುತ್ತದೆಯಾದರೆ, ಮುಂದಿನ ದಿನಗಳಲ್ಲಿ ಡೋಕಾಲಾದಲ್ಲಿ ಮೋದಿಯವರ ಗೆಲುವಿನ ದಿನವನ್ನು ನಾವು ಆಚರಿಸಬೇಕಾಗುತ್ತದೆ. ಹಾಗೆಯೇ ಕಪ್ಪು ಹಣವನ್ನು ದಮನಿಸಿದ ದಿನವಾಗಿರುವ ನೋಟು ನಿಷೇಧದ ದಿನವನ್ನು ಆಚರಿಸಬೇಕಾಗುತ್ತದೆ. ಈ ದೇಶದಲ್ಲಿ ಬೆಲೆಯೇರಿಕೆಯನ್ನು ಇಳಿಸಲು ಕಾರಣವಾಯಿತು ಎಂದು ಹೇಳಿ ಜಿಎಸ್‌ಟಿ ತೆರಿಗೆ ಹೇರಿಕೆಯ ದಿನವನ್ನೂ ಆಚರಿಸಬೇಕಾಗುತ್ತದೆ. ಒಟ್ಟಾರೆಯಾಗಿ ಕೇಂದ್ರ ಸರಕಾರ ಸೇನೆಯಲ್ಲಿ ನಡೆಕಿದ ಹಸ್ತಕ್ಷೇಪವನ್ನು ಉನ್ನತ ಶಿಕ್ಷಣದಲ್ಲೂ ಮುಂದುವರಿಸಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.

  ರಾತ್ರೋರಾತ್ರಿ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಮೂಲಕ, ಪಾಕಿಸ್ತಾನ ಪ್ರದೇಶದಲ್ಲಿನ ಉಗ್ರಗಾಮಿಗಳ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು ಎಂದು ಕೇಂದ್ರ ಸರಕಾರ ಪ್ರತಿಪಾದಿಸುತ್ತಿದೆ. ನಿಜಕ್ಕೂ ಅದು ಸಾಧ್ಯವಾಗಿದೆಯೆಂದಾದರೆ ನಾವೆಲ್ಲ ಸೇನೆಗೆ ಋಣಿಯಾಗಿರಲೇಬೇಕಾಗುತ್ತದೆ. ನಮ್ಮ ಸೇನೆಗೆ ಆ ಶಕ್ತಿ, ಸಾಮರ್ಥ್ಯ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಕೇಂದ್ರ ಸರಕಾರ ಹೇಳುವಂತೆ ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಗಿದ್ದಿದ್ದರೆ, ಇಂದು ಕಾಶ್ಮೀರದಲ್ಲಿ ನಮ್ಮ ಸೇನೆಯ ಮೇಲೆ ಪದೇ ಪದೇ ಭೀಕರ ದಾಳಿಯನ್ನು ನಡೆಸುತ್ತಿರುವವರು ಯಾರು? ಇವರೆಲ್ಲ ಎಲ್ಲಿಂದ ಬಂದರು? ಈ ಸರ್ಜಿಕಲ್ ಸ್ಟ್ರೈಕ್ ನಡೆದಿರುವುದು ನಿಜವೇ ಆಗಿದ್ದರೆ ಇಂದು ಕಾಶ್ಮೀರದಲ್ಲಿ ಉಗ್ರವಾದಿಗಳ ಚಟುವಟಿಕೆ ತೀವ್ರ ಪ್ರಮಾಣದಲ್ಲಿ ಇಳಿದಿರಬೇಕಾಗಿತ್ತಲ್ಲವೇ? ಆದರೆ ಇತ್ತೀಚೆಗಷ್ಟೇ ನಮ್ಮ ಸೈನಿಕರ ಮೇಲೆ ನಡೆಯುತ್ತಿರುವ ಬರ್ಬರ ದಾಳಿ ಕಾಶ್ಮೀರದ ವಾಸ್ತವ ಸ್ಥಿತಿ ಏನು ಎನ್ನುವುದನ್ನು ತಿಳಿಸುತ್ತಿದೆ. ಹೀಗಿರುವಾಗ ಈ ದೇಶದ ವಿಶ್ವವಿದ್ಯಾನಿಲಯಗಳು ‘ಸರ್ಜಿಕಲ್ ಸ್ಟ್ರೈಕ್ ದಿನ’ ಎಂದು ಯಾತಕ್ಕಾಗಿ ಆಚರಿಸಚಬೇಕು? ಉಗ್ರರು ಇನ್ನಷ್ಟು ಭೀಕರ ರೀತಿಯಲ್ಲಿ ಕಾಶ್ಮೀರದಲ್ಲಿ ವಿಜೃಂಭಿಸುತ್ತಿರುವುದನ್ನು ಕೇಂದ್ರ ಸರಕಾರ ಆಚರಿಸಲು ಹೊರಟಿದೆಯೆ?

 ನಿಜ. ಈ ದೇಶ ಸೇನೆಯ ತ್ಯಾಗ ಬಲಿದಾನಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಸೇನೆಯ ಜೊತೆಗೆ ನಿಸ್ಸಂಶಯವಾಗಿ ಗುರುತಿಸಿಕೊಳ್ಳಬೇಕಾಗಿದೆ. ಆದರೆ ಅದಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ಎನ್ನುವ ಬಿಜೆಪಿಯ ಪ್ರಹಸನದ ಅಗತ್ಯವಿಲ್ಲ. ಪಾಕ್‌ನ ವಿರುದ್ಧ ಯುದ್ಧವನ್ನು ಗೆದ್ದ, ಬಾಂಗ್ಲಾವನ್ನು ಸ್ವತಂತ್ರಗೊಳಿಸಿದ ಅಥವಾ ಕಾರ್ಗಿಲ್ ನೆಲವನ್ನು ಮತ್ತೆ ನಮ್ಮದಾಗಿಸಿಕೊಂಡ ಹೆಮ್ಮೆಯ ದಿನಗಳನ್ನು ನಾವು ಆಚರಿಸಬಹುದಾಗಿದೆ. ಇವೆಲ್ಲವನ್ನು ಬಿಟ್ಟು, ಬಿಜೆಪಿಯ ರಾಜಕೀಯ ದುರುದ್ದೇಶದ ಕಾರಣಕ್ಕಾಗಿ ಸರ್ಜಿಕಲ್ ಸ್ಟ್ರೈಕ್‌ನ್ನು ವಿಶ್ವವಿದ್ಯಾನಿಲಯ ಆಚರಿಸಲು ಹೊರಟರೆ, ಅದು ನಮ್ಮ ಸೇನೆ ಈವರೆಗೆ ನಿಜವಾದ ಅರ್ಥದಲ್ಲಿ ಮಾಡಿಕೊಂಡು ಬಂದ ತ್ಯಾಗ ಬಲಿದಾನಗಳ ಅಣಕ ಮಾತ್ರವಾಗುತ್ತದೆ. ಜೊತೆಗೆ ಯುಜಿಸಿ ಅನುದಾನದ ದುರುಪಯೋಗವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)