ಕುಸ್ತಿ ಕೋಚ್ ಯಶ್ವೀರ್ ಸಿಂಗ್ ಇನ್ನಿಲ್ಲ
ಹೊಸದಿಲ್ಲಿ, ಸೆ.21: ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತ ಕುಸ್ತಿ ಕೋಚ್ ಯಶ್ವೀರ್ ಸಿಂಗ್(56 ವರ್ಷ)ಗುರುವಾರ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ.
ಸಿಂಗ್ ಕಳೆದ ಮೂರು ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದು ಕುಟುಂಬ ಸ್ನೇಹಿತರು ತಿಳಿಸಿದ್ದಾರೆ.
ಸುಶೀಲ್ ಕುಮಾರ್ರನ್ನು ಸ್ಟಾರ್ ಕುಸ್ತಿಪಟುವನ್ನಾಗಿ ರೂಪಿಸಿರುವ ಸಿಂಗ್ ವಿಶ್ವ ಕುಸ್ತಿ ಒಕ್ಕೂಟ(ಫಿಲಾ)ದಿಂದ ಶ್ರೇಷ್ಠ ಕೋಚ್ ಗೌರವಕ್ಕೆ ಪಾತ್ರರಾಗಿದ್ದರು. 2010ರಲ್ಲಿ ಸುಶೀಲ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ನಂತರ ಸಿಂಗ್ಗೆ ಫಿಲಾ ಈ ಗೌರವ ನೀಡಿತ್ತು.
2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಸುಶೀಲ್ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದಾಗ ಸಿಂಗ್ ರಾಷ್ಟ್ರೀಯ ಕೋಚ್ ಆಗಿದ್ದರು. ಸಿಂಗ್ಗೆ 2012ರಲ್ಲಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದರು.
Next Story