varthabharthi


ನೇಸರ ನೋಡು

ದ್ರಾವಿಡ ಸಂಸ್ಕೃತಿಯ ಅಸ್ಮಿತೆ: ‘ಪೆರಿಯಾರ್’

ವಾರ್ತಾ ಭಾರತಿ : 23 Sep, 2018
ಬಿ.ಎನ್.ರಂಗನಾಥ ರಾವ್

ಪ್ರಾಚೀನ ಇತಿಹಾಸ ಮತ್ತು ವರ್ತಮಾನದ ರಾಜಕಾರಣಗಳು ಬ್ರಾಹ್ಮಣೇತರರ ಮೇಲೆ ಬ್ರಾಹ್ಮಣರ ಪ್ರಾಬಲ್ಯವನ್ನು ಹೆಚ್ಚಿಸಿವೆ ಎಂಬುದು ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಶೋಷಿತ ಜಾತಿಗಳು ತಮ್ಮ ಆತ್ಮಗೌರವವನ್ನು ಸ್ಥಾಪಿಸುವುದೇ ಬ್ರಾಹ್ಮಣ ಪ್ರಾಬಲ್ಯ ಮುರಿಯಲು ಮದ್ದೆಂದು ಗಾಢವಾಗಿ ನಂಬಿದ್ದ ರಾಮಸ್ವಾಮಿ ನಾಯ್ಕರ್ ಅವರು ತುಳಿತಕ್ಕೊಳಗಾದವರ ಸಂಘಟನೆಯಲ್ಲಿ ತೊಡಗಿಕೊಂಡರು. ಜನರಲ್ಲಿ ಜಾಗೃತಿ ಉಂಟುಮಾಡಲು, ತಮ್ಮ ವಿಚಾರಗಳನ್ನು ಪ್ರಚುರ ಪಡಿಸಲು ರಾಜಕೀಯ ನಿಯತಕಾಲಿಕಗಳನ್ನು ಪ್ರಕಟಿಸಲಾರಂಭಿಸಿದರು. ಬ್ರಾಹ್ಮಣ ಪ್ರಾಬಲ್ಯದ ಶೋಷಣೆಯಂತೆಯೇ, ಕರ್ಮಠ ಹಿಂದೂ ಧರ್ಮದ ದಬ್ಬಾಳಿಕೆ ಮತ್ತು ಮಹಿಳೆಯರ ಶೋಚನೀಯ ಸಾಮಾಜಿಕ ಸ್ಥಿತಿಗತಿಗಳು ರಾಮಸ್ವಾಮಿ ನಾಯ್ಕರ್ ಅವರನ್ನು ಕಾಡುತ್ತಿದ್ದ ಸಮಸ್ಯೆಗಳಾಗಿದ್ದವು. ಧರ್ಮದ ಹೆಸರಿನಲ್ಲಿ ಪುರೋಹಿತ ವರ್ಗ ನಡೆಸಿರುವ ನಿರ್ಲಜ್ಜ ರಾಜಕಾರಣದಿಂದ ಅವರು ಕ್ರುದ್ಧರಾಗಿದ್ದರು.


ಇಪ್ಪತ್ತೊಂದನೆಯ ಶತಮಾನದ ಇಂದಿನ ಭಾರತದ ರಾಜಕಾರಣದಲ್ಲಿ ಹೆಚ್ಚು ಪ್ರಸ್ತುತರಾಗುವ ಮೂವರು ಸುಧಾರಣಾವಾದಿ ನಾಯಕರಲ್ಲಿ ತೀವ್ರ ಸುಧಾರಣಾವಾದಿಗಳು ಇ.ವಿ.ರಾಮಸ್ವಾಮಿ ನಾಯ್ಕರ್ ಅವರು. ಇನ್ನಿಬ್ಬರು ಮಹನೀಯರು ಗಾಂಧಿ ಮತ್ತು ಅಂಬೇಡ್ಕರ್. ‘ಪೆರಿಯಾರ್’ ಎಂದೇ ಖ್ಯಾತರಾದ ರಾಮಸ್ವಾಮಿ ನಾಯ್ಕರ್ ಅವರ 140ನೇ ಹುಟ್ಟುಹಬ್ಬದ ವರ್ಷ ಇದು. ಹುಟ್ಟುಹಬ್ಬಕ್ಕಿಂತ ಮಿಗಿಲಾಗಿ, ಪೆರಿಯಾರ್ ಅವರು ಹೆಚ್ಚು ಸ್ಮರಣೀಯ ಆದರ್ಶ ಪುರುಷರಾಗಿ ನಮ್ಮನ್ನು ಕಾಡುವುದು ಇಂದಿನ ಹಿಂದುತ್ವ ರಾಜಕಾರಣ ಮತ್ತು ದ್ರಾವಿಡ ರಾಜಕಾರಣಗಳಿಂದಾಗಿ. ರಾಮಸ್ವಾಮಿಯವರು 1879ರಲ್ಲಿ ಈರೋಡ್ ಪಟ್ಟಣದಲ್ಲಿ ಜನಿಸಿದರು.ಅವರೇ ಹೇಳಿಕೊಂಡಿರುವಂತೆ, ಕರ್ನಾಟಕದ ಬಲಿಜ ಸಮುದಾಯಕ್ಕೆ ಸೇರಿದವರು. ಶೂದ್ರವರ್ಗದಲ್ಲಿ ಈ ಸಮುದಾಯ ಸ್ವಲ್ಪಮೇಲಾಗಿತ್ತು. ತಂದೆ ವ್ಯಾಪಾರದಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದರು. ರಾಮಸ್ವಾಮಿಯವರ ಬಾಲ್ಯ ಮತ್ತು ಶಿಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅವರು ಬನಾರಸ್‌ಗೆ ಹೋಗಿ ಸ್ವಲ್ಪಕಾಲ ಅಲ್ಲಿದ್ದು, ನಂತರ ಈರೋಡಿಗೆ ವಾಪಸಾಗಿ ಕುಟುಂಬದ ವ್ಯಾಪಾರಿ ವೃತ್ತಿಯಲ್ಲಿ ತೊಡಗಿಕೊಂಡವರು. ಸ್ವಲ್ಪಕಾಲ ಈರೋಡ್ ಪುರಸಭೆಯ ಅಧ್ಯಕರೂ ಆಗಿದ್ದರು. ಇದು ರಾಮಸ್ವಾಮಿಯವರ ಬಾಹ್ಯ ಚಹರೆ. ಇಂದಿಗೂ ನಮಗೆ ತುಂಬ ಮುಖ್ಯವಾಗುವುದು ಅವರ ಅಂತರಂಗದ ಸುಧಾರಣಾವಾದಿ ವ್ಯಕ್ತಿತ್ವ ಮತ್ತು ಅವರ ಸಾಮಾಜಿಕ ಹಿನ್ನೆಲೆ; ಬ್ರಾಹ್ಮಣ ಸಮುದಾಯ ಮೇಲುಗೈ ಪಡೆದಿದ್ದ ಸಾಮಾಜಿಕ ಹಿನ್ನೆಲೆ.\

ವಸಾಹತುಶಾಹಿಗೆ ಮುಂಚೆಯೇ ಸಾಮಾಜಿಕವಾಗಿ ಉನ್ನತ ಸ್ಥಾನಮಾನ ಹೊಂದಿದ್ದ ಬ್ರಾಹ್ಮಣರು ಬ್ರಿಟಿಷರ ಆಡಳಿತದಲ್ಲಿ ರಾಜಕೀಯವಾಗಿಯೂ ಆರ್ಥಿಕವಾಗಿಯೂ ಮೇಲುಗೈ ಪಡೆದರೆಂಬುದು ಐತಿಹಾಸಿಕ ಸತ್ಯ. ಬದುಕಿನ ಎಲ್ಲ ರಂಗಗಳಲ್ಲೂ ಬ್ರಾಹ್ಮಣರು ಹೊಂದಿದ್ದ ಪ್ರಾಬಲ್ಯ ಮಹಾರಾಷ್ಟ್ರದಲ್ಲಿ ಜ್ಯೋತಿರಾವ್ ಫುಲೆ ಮತ್ತು ಬಿ.ಆರ್.ಅಂಬೇಡ್ಕರ್ ಅವರುಗಳ ಶೋಷಣೆ ವಿರೋಧಿ ಚಳವಳಿ ಮತ್ತು ರಾಜಕೀಯ ಕಾರ್ಯಾಚರಣೆಗಳಿಗೆ ಪ್ರೇರಣೆಯಾಗಿತ್ತು. ದಕ್ಷಿಣ ಭಾರತದಲ್ಲಿ ಇದೇ ಪ್ರೇರಣೆಯಿಂದ ಆಂದೋಲನಕ್ಕೆ ಧುಮುಕಿದವರು ರಾಮಸ್ವಾಮಿ ನಾಯ್ಕರ್. ನಾಯ್ಕರ್ ಅವರು ಜ್ಯೋತಿರಾವ್ ಫುಲೆ ಮತ್ತು ಅಂಬೇಡ್ಕರ್ ಅವರಂತೆ ಮನು ಸಂಸ್ಕೃತಿಯ ಉಗ್ರ ವಿರೋಧಿಗಳಾಗಿದ್ದರು. ಆಧುನಿಕ ಚಿಂತಕರೂ ಚತುರ ಸಂಘಟನಕಾರರೂ ಆಗಿದ್ದರು. 1920ರಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ನಾಯ್ಕರ್, ಕಾಂಗ್ರೆಸ್‌ನಲ್ಲಿ ಬ್ರಾಹ್ಮಣರೇ ತುಂಬಿಕೊಂಡಿದ್ದಾರೆ ಎಂಬ ಕಾರಣದಿದಂದ ಆ ಪಕ್ಷ ತೊರೆದರು. ಆದರೆ ಅವರನ್ನು ಅಂತರಂಗದಲ್ಲಿ ತೀವ್ರವಾಗಿ ಕಾಡಿದ್ದು ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದ ವಿದ್ಯಾರ್ಥಿನಿಲಯದಲ್ಲಿ ಬ್ರಾಹ್ಮಣರಿಗೆ ಮತ್ತು ಬ್ರಾಹ್ಮಣೇತರರಿಗೆ ಪ್ರತ್ಯೇಕ ಪಂಕ್ತಿಗಳಲ್ಲಿ ಊಟ,ತಿಂಡಿ ಬಡಿಸುತ್ತಿದ್ದುದು.

ಪ್ರಾಚೀನ ಇತಿಹಾಸ ಮತ್ತು ವರ್ತಮಾನದ ರಾಜಕಾರಣಗಳು ಬ್ರಾಹ್ಮಣೇತರರ ಮೇಲೆ ಬ್ರಾಹ್ಮಣರ ಪ್ರಾಬಲ್ಯವನ್ನು ಹೆಚ್ಚಿಸಿವೆ ಎಂಬುದು ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಶೋಷಿತ ಜಾತಿಗಳು ತಮ್ಮ ಆತ್ಮಗೌರವವನ್ನು ಸ್ಥಾಪಿಸುವುದೇ ಬ್ರಾಹ್ಮಣ ಪ್ರಾಬಲ್ಯ ಮುರಿಯಲು ಮದ್ದೆಂದು ಗಾಢವಾಗಿ ನಂಬಿದ್ದ ರಾಮಸ್ವಾಮಿ ನಾಯ್ಕರ್ ಅವರು ತುಳಿತಕ್ಕೊಳಗಾದವರ ಸಂಘಟನೆಯಲ್ಲಿ ತೊಡಗಿಕೊಂಡರು. ಜನರಲ್ಲಿ ಜಾಗೃತಿ ಉಂಟುಮಾಡಲು, ತಮ್ಮ ವಿಚಾರಗಳನ್ನು ಪ್ರಚುರ ಪಡಿಸಲು ರಾಜಕೀಯ ನಿಯತಕಾಲಿಕಗಳನ್ನು ಪ್ರಕಟಿಸಲಾರಂಭಿಸಿದರು. ಬ್ರಾಹ್ಮಣ ಪ್ರಾಬಲ್ಯದ ಶೋಷಣೆಯಂತೆಯೇ, ಕರ್ಮಠ ಹಿಂದೂ ಧರ್ಮದ ದಬ್ಬಾಳಿಕೆ ಮತ್ತು ಮಹಿಳೆಯರ ಶೋಚನೀಯ ಸಾಮಾಜಿಕ ಸ್ಥಿತಿಗತಿಗಳು ರಾಮಸ್ವಾಮಿ ನಾಯ್ಕರ್ ಅವರನ್ನು ಕಾಡುತ್ತಿದ್ದ ಸಮಸ್ಯೆಗಳಾಗಿದ್ದವು. ಧರ್ಮದ ಹೆಸರಿನಲ್ಲಿ ಪುರೋಹಿತ ವರ್ಗ ನಡೆಸಿರುವ ನಿರ್ಲಜ್ಜ ರಾಜಕಾರಣದಿಂದ ಅವರು ಕ್ರುದ್ಧರಾಗಿದ್ದರು. ಒಂದು ದೇಶ, ಒಂದು ಸಮಾಜ ಅಥವಾ ಒಬ್ಬ ವ್ಯಕ್ತಿಗೆ ಧರ್ಮ ಏಕೆ ಬೇಕು? ಅದು ದೇಶ ಸಮಾಜವನ್ನು ಒಂದುಗೂಡಿಸಲಿದೆಯೇ ಅಥವಾ ಒಡೆದು ಹೋಳು ಮಾಡಲಿದೆಯೇ ಎಂಬುದು ಅವರ ಮುಖ್ಯ ಜಿಜ್ಞಾಸೆಯಾಗಿತ್ತು. ಮಾನವರು ಸಮುದಾಯಗಳಾಗಿ ಬಾಳ್ವೆಮಾಡಲು ತೊಡಗಿದನಂತರ, ತಮ್ಮ ದಿನನಿತ್ಯಜೀವನದಲ್ಲಿ ಸುವ್ಯವಸ್ಥೆ ಹೊಂದಿರಲು ಒಂದು ವ್ಯವಸ್ಥೆ ಬೇಕೆನ್ನಿಸಿದಾಗ ಧರ್ಮವು ಹುಟ್ಟಿರಬೇಕು ಎಂಬುದು ಅವರ ಚಿಂತನೆಯಾಗಿತ್ತು. ಹೀಗೆ ಪೂರ್ವಜರು ಧಾರ್ಮಿಕ ಗೊತ್ತುಪಾಡುಗಳನ್ನು ಮಾಡಿಕೊಂಡರು. ಆನಂತರ ನಮ್ಮ ನಾಡಿಗೆ ಬಂದ ಬ್ರಾಹ್ಮಣರು ನಮ್ಮ ನಡುವಣ ಮುಗ್ಧಜನರನ್ನು ವಂಚಿಸಿದರು. ಎಲ್ಲರನ್ನೂ ಗುಲಾಮರನ್ನಾಗಿ ಮಾಡಿಕೊಂಡರು.

ಶೋಷಿತ ಜಾತಿಗಳವರು ಆತ್ಮಗೌರವ ಬೆಳೆಸಿಕೊಂಡು ಈ ದಾಸ್ಯ ಜೀವನದಿಂದ ಹೊರಬಂದು ಸ್ವತಂತ್ರರಾಗಬೇಕು ಎಂಬುದು ಅವರ ಆಂದೋಲನದ ಮುಖ್ಯ ಪ್ರಣಾಳಿಕೆಯಾಗಿತ್ತು. ಸ್ತ್ರೀಯರ ಹಕ್ಕುಗಳು ಮತ್ತು ಸ್ವಾತಂತ್ಯದ ಬಗ್ಗೆ ತೀವ್ರವಾದ ಕಾಳಜಿ ಹೊಂದಿದ್ದ ಅವರು ಸೃಷ್ಟಿಕರ್ತನು ಸ್ತ್ರೀಯರಿಗೆ, ಪುರುಷರಿಗೆ ಪ್ರತ್ಯೇಕವಾದ ಶಕ್ತಿಸಾಮರ್ಥ್ಯಗಳನ್ನು ಅನುಗ್ರಹಿಸಿಲ್ಲ. ಬುದ್ಧಿವಂತರು, ಶಕ್ತಿಶಾಲಿಗಳು ಸ್ತ್ರೀಪುರುಷರಿಬ್ಬರಲ್ಲೂ ಇದ್ದಾರೆ. ಹಾಗೆಯೇ ದಡ್ಡರು, ಅವಿವೇಕಿಗಳೂ ಕೂಡ. ಹೆಂಗಸರನ್ನು ನಿಂದಿಸಿ ಗುಲಾಮರಂತೆ ಕಾಣುವುದು ಅನ್ಯಾಯವಾದದ್ದು ಹಾಗೂ ಕೇಡಿಗತನದಿಂದ ಕೂಡಿದ್ದು ಎಂಬುದು ಅವರ ದೃಢನಿಲುವಾಗಿತ್ತು. ಮಹಿಳೆಯರ ಮೇಲೆ ಹಿಂದೂ ಪುರುಷರು ನಡೆಸುವ ದೌರ್ಜನ್ಯಗಳಲ್ಲಿ ವಿಧವೆಯರ ಮೇಲೆ ನಡೆಸುವ ವಿಧವಾ ವಿವಾಹ ಸಲ್ಲದೆಂಬ ಪುರೋಹಿತಶಾಹಿ ನೀತಿಯನ್ನು, ಅದರ ಹಿಂದಿನ ಶೋಷಣೆಗಳನ್ನೂ ಖಂಡಿಸುತ್ತಿದ್ದ ಅವರು ಶುರುವಿನಿಂದಲೂ ವಿಧವಾ ವಿವಾಹವನ್ನು ದೃಢವಾಗಿ ಪ್ರತಿಪಾದಿಸುತ್ತಿದ್ದರು. ತಮ್ಮ ಮನೆಯಲ್ಲೇ ಹದಿಮೂರು ವರ್ಷಕ್ಕೇ ತಂಗಿಯ ಮಗಳು ವಿಧವೆಯಾದಾಗ ಗುಟ್ಟಾಗಿ ಅವಳಿಗೆ ಮರುಮದುವೆ ಮಾಡಿಸಿ ಸ್ವಂತ ಜೀವನದಲ್ಲೇ ನುಡಿದಂತೆ ನಡೆದು ಆದರ್ಶವಾದವರು.

ಶೋಷಿತ ಜಾತಿಗಳ, ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದ ರಾಮಸ್ವಾಮಿ ನಾಯ್ಕರ್ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ಉಗ್ರ ಚಳವಳಿ ನಡೆಸಿ ಯಶಸ್ವಿಯಾದರು. ರಾಮಾಯಣ ಮತ್ತಿತರ ಹಿಂದೂ ಧಾರ್ಮಿಕ ಗ್ರಂಥಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ಅವರು ಬ್ರಾಹ್ಮಣ ಪುರೋಹಿತರನ್ನು ಭ್ರಷ್ಟರು, ವಂಚಕರು, ಕಾಮಪಿಪಾಸುಗಳು ಎಂದು ಜರೆಯುತ್ತಿದ್ದರು. ಕಾಂಗ್ರೆಸ್ ತ್ಯಜಿಸಿದ ನಂತರ ರಾಮಸ್ವಾಮಿ ನಾಯ್ಕರ್ ಅವರು ಮತ್ತೆ ರಾಜಕೀಯ ರಂಗಕ್ಕೆ ಧುಮುಕಿದ್ದು 1944ರಲ್ಲಿ. ಆಗ ಅವರು ‘ದ್ರಾವಿಡಕಳಗಂ’ ರಾಜಕೀಯ ಪಕ್ಷ ಕಟ್ಟಿದರು. 1930ರ ನಂತರ ಪೆರಿಯಾರ್ ಎಂದೇ ಖ್ಯಾತರಾಗಿದ್ದ ರಾಮಸ್ವಾಮಿ ನಾಯ್ಕರ್ ಅವರ ದ್ರಾವಿಡ ಮುನ್ನೇತ್ರ ಕಳಗಂನ ಮುಖ್ಯ ಗುರಿ, ದಕ್ಷಿಣ ಭಾರತದಲ್ಲಿ ದ್ರಾವಿಡನಾಡು ಎಂಬ ಪ್ರತ್ಯೇಕ ಸಾರ್ವಭೌಮ ರಾಷ್ಟ್ರದ ಸೃಷ್ಟಿಯಾಗಿತ್ತು. ಸ್ವಾತಂತ್ರ್ಯ ಮತ್ತು ಗಣರಾಜ್ಯ ಇವೆರಡೂ ದಕ್ಷಿಣದ ದ್ರಾವಿಡರ ಮೇಲೆ ಉತ್ತರದ ಆರ್ಯನ್ನರ ಆಳ್ವಿಕೆಯನ್ನು ವಿಧ್ಯುಕ್ತಗೊಳಿಸಲಿವೆ ಎಂದು ಭಾವಿಸಿದ್ದ ಅವರು, 1947 ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಗಳಿಸಿದಾಗ ಹಾಗೂ 1950ರ ಜನವರಿ 26ರಂದು ಗಣರಾಜ್ಯವಾದಾಗ ಎರಡೂ ದಿನ ಶೋಕ ಆಚರಿಸಿದ್ದರು. 1949ರಲ್ಲಿ ರಾಮಸ್ವಾಮಿಯವರ ಅನುಯಾಯಿಗಳ ಒಂದು ಬಣ ಅವರಿಂದ ದೂರ ಸರಿದು ‘ದ್ರಾವಿಡ ಮುನ್ನೇಟ್ರ ಕಳಗಂ’ ಎಂಬ ಹೊಸ ಪಕ್ಷವನ್ನು ಕಟ್ಟಿತು. 1967ರಲ್ಲಿ ನಡೆದ ಪ್ರಮುಖ ಸ್ಥಳೀಯ ಚುನಾವಣೆಯಲ್ಲಿ ಡಿಎಂಕೆ ಪ್ರಾದೇಶಿಕ ಪಕ್ಷದ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂತು. ತಮಿಳುನಾಡಿನ ಪ್ರಬಲ ಪಕ್ಷವಾಗಿದ್ದ ಕಾಂಗ್ರೆಸ್ ನೆಲಕಚ್ಚಿತು.

ಡಿಎಂಕೆ ವಿಜಯಕ್ಕೆ ರಾಮಸ್ವಾಮಿ ಪ್ರಣೀತ ದ್ರಾವಿಡ ಅಸ್ಮಿತೆ ಭದ್ರ ಬುನಾದಿಯಾಗಿತ್ತು. ಡಿಎಂಕೆ ವಿಜಯ ಪೆರಿಯಾರ್ ಅವರ ನಿರೀಕ್ಷೆಗೆ ತಕ್ಕುದಾಗಿರಲಿಲ್ಲ. ತಮಿಳರಿಗೆ ಪ್ರತ್ಯೇಕ ತಮಿಳು ರಾಷ್ಟ್ರ ಪೆರಿಯಾರ್ ಅವರ ಬೇಡಿಕೆಯಾಗಿತ್ತು. ಭಾರತ ಒಕ್ಕೂಟದೊಳಗಿನ ಸ್ವಾಯತ್ತ ರಾಜ್ಯದ ಸ್ಥಾನಮಾನದಿಂದ ಅವರಿಗೆ ತೃಪ್ತಿಯಾಗಿರಲಿಲ್ಲ. ಈ ಅತೃಪ್ತಿಯೊಂದಿಗೇ ರಾಮಸ್ವಾಮಿಯವರು 1973ರಲ್ಲಿ ನಿಧನಹೊಂದಿದರು. ರಾಮಸ್ವಾಮಿಯವರ ದ್ರಾವಿಡ ಸಂಸ್ಕೃತಿಯ ಪರಿಕಲ್ಪನೆ ಮತ್ತು ಆದರ್ಶಗಳನ್ನೇ ಬಂಡವಾಳವಾಗಿಟ್ಟುಕೊಂಡು ಅಧಿಕಾರಕ್ಕೆ ಬಂದ ಡಿಎಂಕೆ ಈಗ ಮೊದಲಿನಂತಿಲ್ಲ. ರಾಮಸ್ವಾಮಿಯವರೊಂದಿಗೆ ನಿಕಟ ಸಂಪರ್ಕಹೊಂದಿದ್ದ ಅವರ ರಾಜಕೀಯ ಶಿಷ್ಯರುಗಳಾದ ಅಣ್ಣಾದೊರೈ ಮತ್ತು ಕರುಣಾನಿಧಿ ಈಗಿಲ್ಲ. ಡಿಎಂಕೆಯಿಂದ ಹೊರನಡೆದು ಎಂ.ಜಿ.ರಾಮಚಂದ್ರನ್ ಎಐಎಡಿಎಂಕೆ ಕಟ್ಟಿದ್ದು, ಅವರ ನಂತರ ಜಯಲಲಿತಾ ಆ ಪಕ್ಷದ ಏಕಮೇವ ನಾಯಕಿಯಾಗಿ ಮೆರೆದದ್ದು ಎಲ್ಲವೂ ಈಗ ಇತಿಹಾಸ. ಡಿಎಂಕೆ ಮತ್ತು ಎಐಎಡಿಎಂಕೆ ಎರಡರಲ್ಲೂ ಹೊಸ ನಾಯಕರ ದರ್ಬಾರು. ಈ ಮಧ್ಯೆ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದಿದ್ದು ದ್ರಾವಿಡ ನಾಡಿನಲ್ಲಿ ಹಲವಾರು ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ.ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಸದ್ಯಕ್ಕೆ ಅಲ್ಲಿ ನೆಲೆಯಿಲ್ಲವಾದರೂ ನೆಲೆಯೂರಲು ಅದು ಹರಸಾಹಸ ಮಾಡುತ್ತಿದೆ. ಈ ಮಧ್ಯೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಅಲ್ಲಿನ ಜನರು ದ್ರಾವಿಡ ಅಸ್ಮಿತೆಗೆ ಭಂಗ ತರದಂತಹ ಹೊಸ ರಾಜಕೀಯ ಶಕ್ತಿಯೊಂದಕ್ಕಾಗಿ ಕಾದುನಿಂತಿರುವಂತೆ ಕಾಣುತ್ತದೆ.

ಸಮ್ಮಿಶ್ರ ಸರಕಾರದ ಈ ದಿನಗಳಲ್ಲಿ ಪ್ರದೇಶ ಪಕ್ಷಗಳ ನೆರವಿಲ್ಲದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಉಳಿಯುವುದು ಕಷ್ಟ ಎಂಬುದನ್ನು ಅರಿತಿರುವ ಬಿಜೆಪಿ, ಡಿಎಂಕೆ/ಎಐಎಡಿಎಂಕೆ ಎರಡಕ್ಕೂ ಗಾಳಹಾಕುವ ಸನ್ನಾಹಗಳನ್ನು ನಡೆಸುತ್ತಿದೆ. ದ್ರಾವಿಡ ಅಸ್ಮಿತೆಯ ಆಧಾರದ ಮೇಲೇ ನಿಂತಿರುವ ತಮಿಳುನಾಡು ರಾಜಕೀಯ ಬಿಜೆಪಿಯೊಂದಿಗೆ ರಾಜಿ ಮಾಡಿಕೊಳ್ಳಬಹುದೇ ಎಂಬುದು ಇಂದಿನ ರಾಜಕಾರಣದ ಗಹನ ಪ್ರಶ್ನೆ. ತನ್ನ ಈ ಅಸ್ಮಿತೆಯನ್ನು ಬಿಟ್ಟುಕೊಡದೆ ದ್ರಾವಿಡ ಪಕ್ಷಗಳು ಈ ಹಿಂದೆ ರಾಜಕೀಯವಾಗಿ ರಾಜಿಮಾಡಿಕೊಂಡಿರುವುದುಂಟು, ಅಧಿಕಾರದ ಆಸೆಯಿಂದ. ‘‘ಹಿಂದೂ ಧರ್ಮದ ಕಟ್ಟಾ ವಿರೋಧಿಯಾಗಿದ್ದ ರಾಮಸ್ವಾಮಿಯವರೊಂದಿಗೆ ರಾಜಿಸಂಧಾನಕ್ಕೆ ಬಹಳ ಹಿಂದೆಯೇ, ಅಂದರೆ, 1944ರಲ್ಲಿ ಹಿಂದೂ ಮಹಾಸಭಾ ಮುಂದಾಗಿತ್ತು’’ ಎಂದು ಇತಿಹಾಸಕಾರ ಎ.ಆರ್.ವೆಂಕಟಾಚಲಪತಿ ಬರೆಯುತ್ತಾರೆ (ದಿ ಹಿಂದೂ, ಸೆ.18, 2018). ಪೆರಿಯಾರ್ ಅವರ ಹಳೆಯ ಮಿತ್ರರಾಗಿದ್ದ ಪಿ.ವರದರಾಜುಲು ನಾಯಿಡು ಅವರು ಈ ರಾಜಿಸಂಧಾನದ ಸೂತ್ರಧಾರರಾಗಿದ್ದರು. ನಾಯಿಡು ಅವರು 1944ರ ಸೆಪ್ಟಂಬರ್‌ನಲ್ಲಿ ಹಿಂದೂ ಮಹಾಸಭಾದ ನಾಯಕರುಗಳಾದ ಮೂಂಜೆ, ಶ್ಯಾಂಪ್ರಸಾದ್ ಮುಖರ್ಜಿ ಮತ್ತು ಪೆರಿಯಾರ್ ಅವರ ಭೇಟಿಗೆ ವ್ಯವಸ್ಥೆಮಾಡಿದ್ದರು. ಈ ಸಭೆಯಲ್ಲಿ ಪೆರಿಯಾರ್ ಅವರ ಜೊತೆ ಅವರ ಶಿಷ್ಯ ಸಿ.ಎನ್.ಅಣ್ಣಾದೊರೈ ಅವರೂ ಇದ್ದರು. ಹಿಂದೂ ಮಹಾ ಸಭಾದ ಪರವಾಗಿ ಮೂಂಜೆಯೊಬ್ಬರೇ ಭಾಗವಹಿಸಿದ್ದರು. ಶ್ಯಾಂಪ್ರಸಾದ್ ಮುಖರ್ಜಿಯವರು ಭಾಗವಹಿಸಿರಲಿಲ್ಲ.

ದಕ್ಷಿಣ ಭಾರತದ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲಾಯಿತೆನ್ನಲಾದ ಈ ಸಭೆಯಲ್ಲಿ ಪೆರಿಯಾರ್ ಅವರು ರಾಜ್ಯದಲ್ಲಿ ಬ್ರಾಹಣೇತರರ ಹಿತಾಸಕ್ತಿಗೆ ಒದಗಿರುವ ಅಪಾಯಗಳನ್ನು ವಿವರಿಸಿ, ದ್ರಾವಿಡಸ್ಥಾನದಿಂದ ಮಾತ್ರ ನಿಜವಾದ ಸ್ವಾತಂತ್ರ್ಯ ಸಾಧ್ಯ ಎಂಬ ಬೇಡಿಕೆಯನ್ನಿಟ್ಟಿದ್ದರಂತೆ. ಸುದೀರ್ಘ ಚರ್ಚೆಯನಂತರ ಭಾರತವು ಧರ್ಮಮುಕ್ತ ರಾಷ್ಟ್ರವಾಗ ಬೇಕು, ಬ್ರಾಹ್ಮಣತ್ವ/ಪುರೋಹಿತ ಶಾಹಿಹೋಗಬೇಕು, ಮದ್ರಾಸ್ ಸರಕಾರದಲ್ಲಿ ಬ್ರಾಹ್ಮಣರಿಗೆ ಪ್ರಾತಿನಿಧ್ಯವಿರಬಾರದು, ಸರಕಾರದಲ್ಲಿ ಆರ್ಯನ್ನರಾಗಲೀ ಕಾಂಗ್ರೆಸ್ಸಾಗಲೀ ಇರಬಾರದು ಎನ್ನುವ ಶರತ್ತುಗಳ ಮೇಲೆ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಹಿಂದೂ ಮಹಾಸಭಾ ಮತ್ತು ದ್ರಾವಿಡ ಆಂದೋಲನ ಒಟ್ಟಿಗೆ ಕೆಲಸ ಮಾಡುವ ನಿರ್ಧಾರಕ್ಕೆ ಬರಲಾಯಿತಂತೆ. ಇದಿಷ್ಟು ಮಾತುಕತೆ ಪೆರಿಯಾರ್ ಅವರ ‘ಕುಡಿಯರಸು’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತೆಂದೂ ವೆಂಕಟಾಚಲಪತಿ ಬರೆಯುತ್ತಾರೆ. ಆದರೆ ಈ ಒಪ್ಪಂದ ಮಾತುಕತೆಯ ಹಂತದಲ್ಲೇ ಉಳಿಯಿತು. ಈಗ ದ್ರಾವಿಡ ರಾಜಕೀಯದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೆಣಗಾಡುತ್ತಿರುವ ಬಿಜೆಪಿಯ ಜೊತೆ ದ್ರಾವಿಡ ಪಕ್ಷಗಳ ನಡೆ ಏನಿದ್ದೀತು? ಸದ್ಯಕ್ಕೇನೊ ಡಿಎಂಕೆ ನೂತನ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ದ್ರಾವಿಡ ಅಸ್ಮಿತೆಗೆ ಬದ್ಧರಾಗಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿಯ ಬಗ್ಗೆ ಅವರು ಅಷ್ಟೊಂದು ಉತ್ಸುಕರಾಗೇನೂ ಇಲ್ಲ. ಡಿಎಂಕೆ/ಎಐಎಡಿಎಂಕೆ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷವಾಗಲೀ ದ್ರಾವಿಡ ಸಂಸ್ಕೃತಿ ಮತ್ತು ಅಸ್ಮಿತೆ ಕುರಿತ ಪೆರಿಯಾರ್ ಮತ್ತು ಅಣ್ಣಾದೊರೈ ಸಿದ್ಧಾಂತಗಳೊಂದಿಗೆ ರಾಜಿಮಾಡಿಕೊಳ್ಳುವ ಧೈರ್ಯಮಾಡಲಾರರು ಎನ್ನುವುದು ದ್ರಾವಿಡ ರಾಜಕೀಯ ಒಳಸುಳಿಗಳನ್ನು ಬಲ್ಲವರ ಅಂಬೋಣ. ಅದು ನಿಜವಾದಲ್ಲಿ ಬಿಜೆಪಿಗೆ ಉತ್ತರ ಭಾರತದ ಪಕ್ಷವೆಂಬ ಹಣೆಪಟ್ಟಿ ಖಾಯಮ್ಮಾದ ಅಲಂಕಾರವಾದೀತು. ಅಧಿಕಾರ ಮೋಹದಿಂದ ದ್ರಾವಿಡ ಪಕ್ಷಗಳೂ ಪ್ರಸಕ್ತ ಜಾಯಮಾನವಾದ ಮೃದುಹಿಂದುತ್ವದ ಜಾಡಿಗೆ ಬಿದ್ದರೆ... 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)