varthabharthi

ಸಂಪಾದಕೀಯ

ಅಮೆರಿಕದ ಸ್ನೇಹಕ್ಕೆ ತೆತ್ತ ಬೆಲೆ ತೈಲ ಬೆಲೆಯೇರಿಕೆ

ವಾರ್ತಾ ಭಾರತಿ : 24 Sep, 2018

ನೆಹರೂ ಅವರನ್ನು ನಾವು ಇಂದಿಗೂ ಸ್ಮರಿಸುವುದು, ಅವರು ದೇಶಕ್ಕೊಂದು ಸ್ಪಷ್ಟ ವಿದೇಶಾಂಗ ನೀತಿಯನ್ನು ಬರೆದಿಟ್ಟರು. ಎರಡು ಬೃಹತ್ ರಾಷ್ಟ್ರಗಳು ಸ್ವತಂತ್ರ ಭಾರತವನ್ನು ತಮ್ಮ ಮೂಗಿನ ನೇರಕ್ಕೆ ಎಳೆಯುವ ಸಂದರ್ಭದಲ್ಲಿ ಅವರು ಮಧ್ಯಮ ದಾರಿಯನ್ನು ಆರಿಸಿಕೊಂಡರು. ಜೊತೆಗೆ, ರಶ್ಯಾದ ಸಮತಾವಾದದ ಕುರಿತಂತೆ ಮೃದು ನಿಲುವನ್ನು ತಾಳಿದರು. ವಿಶ್ವದ ತೃತೀಯ ಶಕ್ತಿಯ ನೇತೃತ್ವವನ್ನು ವಹಿಸಿಕೊಳ್ಳುವ ಮಟ್ಟಿಗೆ ಭಾರತ ನೆಹರೂ ಮತ್ತು ಇಂದಿರಾ ಕಾಲದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿತ್ತು. ಸ್ವಾತಂತ್ರಾನಂತರದ ಭಾರತದ ಅಭಿವೃದ್ಧಿಯಲ್ಲಿ ನೆಹರೂ ಅವರ ಈ ದೂರದೃಷ್ಟಿ ಭಾರೀ ಪಾತ್ರವನ್ನು ವಹಿಸಿತ್ತು. ಆದರೆ ಕಳೆದ ಎರಡು ದಶಕಗಳಲ್ಲಿ ಭಾರತ ಒಂದು ಸ್ಪಷ್ಟ ವಿದೇಶಾಂಗ ನೀತಿಯೇ ಇಲ್ಲದೆ ತೊಳಲಾಡುತ್ತಿದೆ. ಅಮೆರಿಕವನ್ನು ಹತ್ತಿರವಾಗಿಸುತ್ತಾ ಹೋಗುವುದೇ ವಿಶ್ವದಲ್ಲಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಲು ಭಾರತಕ್ಕಿರುವ ಮಾರ್ಗ ಎಂದು ನಮ್ಮನ್ನಾಳುವವರು ತಿಳಿದುಕೊಂಡಿದ್ದಾರೆ. ಭಾರತದ ಈ ಭ್ರಮೆಯನ್ನು ಅಮೆರಿಕ ಕೂಡ ಸರಿಯಾಗಿಯೇ ಬಳಸಿಕೊಂಡಿದೆ. ಇಂದು ಭಾರತ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟುಗಳಿಗೆ ಅಮೆರಿಕದ ಕುರಿತಂತೆ ನಮ್ಮ ನಾಯಕರಿಗಿರುವ ಭ್ರಮೆಯೇ ಕಾರಣವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ದರ ಬೆಂಕಿಯಂತೆ ಏರುತ್ತಿರುವ ಹಿಂದೆಯೂ ಭಾರತದ ಪ್ರಮಾದ ಭರಿತ ವಿದೇಶಾಂಗ ನೀತಿಯಿದೆ. ಇರಾನ್ ವಿರುದ್ಧ ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧಗಳ ವಿಚಾರದಲ್ಲಿ ಭಾರತವು ಜಾಣ್ಮೆಯ ನಡೆಯನ್ನು ಅನುಸರಿಸಿದ್ದರೆ, ತೈಲ ನಿರಂತರ ಬೆಲೆಯೇರಿಕೆಯ ಹೊಡೆತದಿಂದ ಭಾರತವು ತಪ್ಪಿಸಿಕೊಳ್ಳಲು ಸಾಧ್ಯವಿತ್ತು ಎಂಬ ವಾದವನ್ನು ಹಲವರು ಮಂಡಿಸುತ್ತಿದ್ದಾರೆ. ಅಣು ಒಪ್ಪಂ ಮುರಿದುಬಿದ್ದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ, ಭಾರತವು ಇರಾನ್‌ನಿಂದ ತೈಲದ ಆಮದನ್ನು ಕಡಿಮೆಗೊಳಿಸಿತ್ತು.

ಇರಾನ್ ಜೊತೆಗಿನ ನಂಟನ್ನು ಕಡಿಮೆಗೊಳಿಸಲು ಅಮೆರಿಕದ ಒತ್ತಡ ಹೆಚ್ಚಾದಂತೆ ಭಾರತವೂ ಅದಕ್ಕೆ ತಲೆಬಾಗುತ್ತಾ ಬಂತು. ಭಾರತವು ಇರಾನ್‌ನಿಂದ ತೈಲ ಆಮದುಮಾಡಿಕೊಳ್ಳದೆ ತನ್ನ ತೈಲ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವೆಂದು ಭಾರತೀಯ ಪೆಟ್ರೋಲಿಯಂ ಹಾಗೂ ತೈಲ ಸಚಿವಾಲಯ ಮತ್ತು ಪ್ರಮುಖ ತೈಲ ಕಂಪೆನಿಗಳ ಸಿಇಒಗಳು ಪದೇ ಪದೇ ಹೇಳಿಕೊಳ್ಳುತ್ತಾ ಬಂದಿದ್ದರು. ಆದರೆ, ಇರಾನ್ ಜೊತೆಗಿನ ತೈಲ ಆಮದು ರದ್ದತಿಯಿಂದ ಉಂಟಾಗಬಹುದಾದ ಭೌಗೋಳಿಕ-ರಾಜಕೀಯ ಪರಿಣಾಮಗಳ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಚಿಂತಿಸಲಿಲ್ಲ. ನಿರ್ಬಂಧದ ಬಳಿಕ ಇರಾನ್ ಬಗ್ಗೆ ತನ್ನ ಸ್ಪಷ್ಟವಾದ ನೀತಿಯನ್ನು ಪ್ರಕಟಿಸಲು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಭಾರತವು ಭವಿಷ್ಯದಲ್ಲಿ ಎಷ್ಟು ಸಮಯದವರೆಗೆ ತೈಲಕ್ಕಾಗಿ ಇರಾನ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಸಾಧ್ಯವಿದೆ ಎಂಬ ಪ್ರಶ್ನೆಗೂ ಉತ್ತರವಿಲ್ಲ.

ಭಾರತವು ಭವಿಷ್ಯದಲ್ಲಿ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲು ಅವಕಾಶ ನೀಡುವಂತೆ ಅಮೆರಿಕವನ್ನು ಕೋರಬಹುದು. ಆದರೆ, ಇರಾನ್ ಜೊತೆಗಿನ ತೈಲ ಆಮದನ್ನು ನಿಲ್ಲಿಸಿದಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಮೇಲಿನ ಸುಂಕಗಳಿಗೆ ರಿಯಾಯಿತಿ ನೀಡುವುದಾಗಿ ಅಮೆರಿಕವು ಅಮಿಷವೊಡ್ಡಲೂ ಬಹುದು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದಾಗಿನಿಂದಲೇ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜೊತೆಗಿನ ಅಣು ಒಪ್ಪಂದವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ಭಾರತದ ವಿದೇಶಾಂಗ ಇಲಾಖೆಯ ಯೋಜನಾ ವಿಭಾ ಕೂಡಾ, ಇರಾನ್‌ನಿಂದ ತೈಲ ರಫ್ತನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳತೊಡಗಿತ್ತು.

ಆದರೆ ವಾಸ್ತವಿಕವಾಗಿ ಇರಾನ್ ಜೊತೆಗಿನ ಭಾರತದ ಸಂಬಂಧವು ತೈಲ ಖರೀದಿಯ ದೃಷ್ಟಿಯಿಂದ ಮಾತ್ರವಲ್ಲ ರಾಜಕೀಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆಯೆಂದು ತಿಳಿದಿದ್ದರೂ, ಮೋದಿ ಸರಕಾರ ಅದನ್ನು ಕಡೆಗಣಿಸಿತ್ತು. ಇರಾನ್ ಜೊತೆಗಿನ ಅಣು ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದರೊಂದಿಗೆ ಡೊನಾಲ್ಡ್ ಟ್ರಂಪ್, ಭಾರತವನ್ನು ಕೂಡಾ ಇಕ್ಕಟ್ಟಿನ ಸನ್ನಿವೇಶಕ್ಕೆ ಸಿಲುಕಿಸಿದ್ದರು. ಇರಾನ್ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿದ್ದ ಟ್ರಂಪ್, ಭಾರತ ಸೇರಿದಂತೆ ತನ್ನ ಜೊತೆಗಾರ ರಾಷ್ಟ್ರಗಳಿಗೂ ಇರಾನ್ ಜೊತೆಗೆ ಆರ್ಥಿಕ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಸೂಚಿಸಿತ್ತು. ಇದೀಗ ಇರಾನ್ ಜೊತೆಗಿನ ಭಾರತದ ತೈಲ ಆಮದನ್ನು ನಿಯಂತ್ರಿಸಿರುವ ಅಮೆರಿಕವು, ಭಾರತದ ವಿದೇಶಾಂಗ ನೀತಿಯ ಮೇಲೆ ಪರೋಕ್ಷವಾಗಿ ಹಸ್ತಕ್ಷೇಪ ಮಾಡಿದೆ.

ಭಾರತವು ಅಮೆರಿಕದ ಜೊತೆ ಅಣು ಒಪ್ಪಂದವನ್ನು ಏರ್ಪಡಿಸಿಕೊಂಡ 12 ವರ್ಷಗಳಲ್ಲಿ, ಉಭಯ ದೇಶಗಳ ಬಾಂಧವ್ಯ ದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇತರ ದೇಶಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಅತ್ಯಧಿಕ ಸಂಖ್ಯೆಯ ಭೇಟಿ ನೀಡಿದ್ದಾರೆ. ಹಿಂದಿನ ಒಬಾಮ ಆಡಳಿತ ಕೂಡಾ ಭಾರತದೊಂದಿಗೆ ಸ್ನೇಹಪರ ಹಾಗೂ ಸೌಹಾರ್ದಯುತವಾದ ಸಂಬಂಧವನ್ನು ಹೊಂದಿತ್ತು. ಆದರೆ ಭಾರತ, ಪಾಕಿಸ್ತಾನ ಹಾಗೂ ಇರಾನ್ ಮೂರು ದೇಶಗಳಿಗೂ ಭಾರೀ ಪ್ರಯೋಜನಕಾರಿಯಾಗಿದ್ದಂತಹ ಅನಿಲ ಪೈಪ್‌ಲೈನ್ ಯೋಜನೆಯಿಂದ ಹೊರಬರುವಂತೆ ಭಾರತವನ್ನು ಬಲವಂತಪಡಿಸಿತ್ತು.
ನಗದು ಅಮಾನ್ಯತೆ ಹಾಗೂ ಜಿಎಸ್‌ಟಿ ಅನುಷ್ಠಾನ ಮತ್ತಿತರ ಸಮಸ್ಯೆಗಳಿಂದ ಬಸವಳಿದಿರುವ ಭಾರವು ಇದೀಗ ಇರಾನ್‌ನಿಂದ ತೈಲ ಪೂರೈಕೆಯನ್ನು ಕಡಿದುಕೊಳ್ಳಲೇಬೇಕಾಗಿ ಬಂದಿರುವುದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇರಾನ್‌ನಿಂದ ತೈಲ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಲಿ ಅಥವಾ ಕಡಿಮೆ ಮಾಡುವುದಾಗಲಿ ಭಾರತಕ್ಕೆ ಮುಂಬರುವ ದಿನಗಳಲ್ಲಿ ಭಾರೀ ಸಮಸ್ಯೆಯನ್ನು ತಂದೊಡ್ಡಲಿದೆ. ಸದ್ಯದ ಪರಿಸ್ಥಿತಿ ಯನ್ನು ಅವಲೋಕಿಸಿದಾಗ ಮುಂಬರುವ ದಿನಗಳಲ್ಲಿ ತೈಲ ಬೆಲೆಗಳು ಇಳಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಇದರಿಂದಾಗಿ ಭಾರತದ ಆರ್ಥಿಕತೆಯು ಕೂಡಾ ಗಂಭೀರವಾಗಿ ಕುಂಠಿತಗೊಳ್ಳುವ ಭೀತಿಯೂ ಉಂಟಾಗಿದೆ.ಒಂದು ವೇಳೆ ಭಾರತವು ಇರಾನ್ ಜೊತೆಗಿನ ತೈಲ ಆಮದನ್ನು ಸಂಪೂರ್ಣವನ್ನು ಕಡಿದುಕೊಂಡಲ್ಲಿ, ಆ ದೇಶದ ಜೊತೆಗಿನ ಬಾಂಧವ್ಯವು ಸರಿಹೋಗಲು ಹಲವು ವರ್ಷಗಳೇ ಬೇಕಾದೀತು.ಈ ಹಿಂದೆ ಇರಾನ್ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ ಸೇರಿದಂತೆ ಹಲವಾರು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪರವಾಗಿ ವಾದಿಸಿತ್ತು. ಇದಕ್ಕಿಂತಲೂ ಭಾರತಕ್ಕೆ ಎಂದೂ ಯಾವ ರೀತಿಯಲ್ಲೂ ಪ್ರತಿಕೂಲವಾಗಿ ವರ್ತಿಸಿರದ ಒಂದು ಸ್ನೇಹಯುತ ರಾಷ್ಟ್ರದ ಜೊತೆಗಿನ ಬಾಂಧವ್ಯವನ್ನು ತಾನಾಗಿಯೇ ಹಾಳುಮಾಡಿ ಕೊಂಡಂತಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)