varthabharthi

ಸಂಪಾದಕೀಯ

ರಫೇಲ್ ಹಗರಣ: ಅಂಬಾನಿಗೆ ಬೆಣ್ಣೆ-ದೇಶಕ್ಕೆ ದೊಣ್ಣೆ

ವಾರ್ತಾ ಭಾರತಿ : 25 Sep, 2018

ರಫೇಲ್ ಒಪ್ಪಂದದ ಕುರಿತಂತೆ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಅವರು ತಮ್ಮ ವೌನ ಮುರಿಯುತ್ತಿದ್ದಂತೆಯೇ ಫ್ರಾನ್ಸ್ ಮತ್ತು ಭಾರತದ ಉಭಯ ನಾಯಕರೂ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದ್ದಾರೆ. ಈವರೆಗೆ ಒಪ್ಪಂದದ ಹೊಣೆಯನ್ನು ಫ್ರಾನ್ಸ್‌ನ ತಲೆಗೆ ಕಟ್ಟಿ ನುಣುಚಿಕೊಳ್ಳುತ್ತಿದ್ದ ಕೇಂದ್ರ ಸರಕಾರಕ್ಕೆ, ಹೊಲ್ಲಾಂಡ್ ಹೇಳಿಕೆ ಮರ್ಮಾಘಾತ ನೀಡಿದೆ. ರಫೇಲ್ ಒಪ್ಪಂದಕ್ಕೆ ರಿಲಯನ್ಸ್‌ನ್ನುಪಾಲುದಾರನನ್ನಾಗಿಸಿದ್ದು ತಾನಲ್ಲ, ಫ್ರಾನ್ಸ್‌ನ ಡಸಾಲ್ಟ್ ಏವಿಯೇಶನ್ ಎಂದು ಇತ್ತೀಚೆಗೆ ಮೋದಿ ಸರಕಾರ ಸ್ಪಷ್ಟನೆ ನೀಡಿತ್ತು. ಇದೀಗ ಹೊಲ್ಲಾಂಡ್ ಅವರು, ರಿಲಯನ್ಸ್ ಕಂಪೆನಿಯನ್ನು ರಫೇಲ್ ಒಪ್ಪಂದದ ಭಾರತೀಯ ಪಾಲುದಾರನನ್ನಾಗಿ ನಿಯೋಜಿಸುವಂತೆ ಭಾರತ ಸರಕಾರವೇ ಸೂಚನೆಯನ್ನು ನೀಡಿತ್ತು ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದಾರೆ. ಇಷ್ಟಾದ ಬಳಿಕವೂ ಸರಕಾರ, ತಾನು ನಿರಪರಾಧಿ ಎಂದು ಹೇಳಿಕೊಳ್ಳುತ್ತಿದೆ ಮಾತ್ರವಲ್ಲ, ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿಯು, ಭಾರತದ ಇದುವರೆಗಿನ ಅತಿ ದೊಡ್ಡ ರಕ್ಷಣಾ ಹಗರಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದು ಲಕ್ಷ ಕೋಟಿ ರೂಪಾಯಿಯ ರಫೇಲ್ ಒಪ್ಪಂದಕ್ಕೆ ಹೋಲಿಸಿದರೆ ಬೊಫೋರ್ಸ್ ಹಗರಣ ಏನೂ ಅಲ್ಲ. ಪ್ರಧಾನಿಯವರು ಎಲ್ಲಾ ರೀತಿಯ ನಿಯಮ ಹಾಗೂ ಕಾನೂನುಗಳನ್ನು ಉಲ್ಲಂಘಿಸಿ ಓರ್ವ ನಿರ್ದಿಷ್ಟ ಉದ್ಯಮಿಯ ಪ್ರಯೋಜನಕ್ಕಾಗಿ ದೇಶದ ಬೊಕ್ಕಸವನ್ನು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆಂಬ ಗಂಭೀರ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಈ ಇಡೀ ಹಗರಣಕ್ಕೆ ಸಂಬಂಧಿಸಿ ಮೋದಿ ಸರಕಾರವು ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುತ್ತಿದೆ ಹಾಗೂ ಸಂಸತ್ತನ್ನು ತಪ್ಪುದಾರಿಗೆಳೆಯುತ್ತಿದೆ. ಒಂದು ಹಂತದಲ್ಲಿ, ಈ ಒಪ್ಪಂದದ ಹಿಂದಿರುವುದು ಹಿಂದಿನ ಯುಪಿಎ ಸರಕಾರ ಎಂಬ ಹೇಳಿಕೆಯನ್ನು ನೀಡಿ ಜಾರಿಕೊಳ್ಳಲು ಯತ್ನಿಸಿತ್ತು. ಹಿಂದಿನ ಯುಪಿಎ ಸರಕಾರವು, ದೇಶದ ವಾಯುಪಡೆಯನ್ನು ಬಲಪಡಿಸುವ ಉದ್ದೇಶದೊಂದಿಗೆ, ಫ್ರೆಂಚ್ ಕಂಪೆನಿ ಡಸಾಲ್ಟ್‌ನಿಂದ 126 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಬಯಸಿತ್ತು. ಬೊಫೋರ್ಸ್‌ಗನ್ ಹಗರಣದಲ್ಲಿ ಭಾರೀ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಸರಕಾರವು, ರಫೇಲ್ ಒಪ್ಪಂದದಲ್ಲಿ ಯಾವುದೇ ಅವ್ಯಹಾರಗಳು ನಡೆಯದಂತೆ ಭಾರೀ ಎಚ್ಚರಿಕೆ ವಹಿಸಿತ್ತು.ಈ ಹಿನ್ನೆಲೆಯಲ್ಲಿ ಅದು ರಕ್ಷಣಾ ಒಪ್ಪಂದಗಳ ಜಾರಿಗಾಗಿ ರಕ್ಷಣಾ ಸಚಿವಾಲಯ ಹಾಗೂ ಸೇನಾಪಡೆಗಳ ಸಂಬಂಧಪಟ್ಟ ಇಲಾಖೆಗಳ ಸಮಿತಿಗಳನ್ನು ಕೂಡಾ ರಚಿಸಿತ್ತು. ಯಾವುದೇ ರಕ್ಷಣಾ ಒಪ್ಪಂದವನ್ನು ಏರ್ಪಡಿಸಿಕೊಳ್ಳುವ ಮುನ್ನ ಈ ಸಮಿತಿಗಳ ಶಿಫಾರಸುಗಳನ್ನು ಪಡೆಯುವುದನ್ನು ಅದು ಕಡ್ಡಾಯಗೊಳಿಸಿತ್ತು. ಈ ವ್ಯವಸ್ಥೆಯಡಿ ಪ್ರತಿಯೊಂದು ರಕ್ಷಣಾ ಒಪ್ಪಂದವು ಹಲವಾರು ಹಂತಗಳಲ್ಲಿ ಪರಿಶೀಲನೆಗೊಳಗಾಗಬೇಕಿತ್ತು.ಯುಪಿಎ ಸರಕಾರವು ಏರ್ಪಡಿಸಿಕೊಂಡ ರಫೇಲ್ ಒಪ್ಪಂದವು ಈ ಎಲ್ಲಾ ಹಂತಗಳನ್ನು ಹಾದುಹೋಗಿತ್ತು. ಈ ಒಪ್ಪಂದದಡಿ ವಾಯುಪಡೆಯ ಆರು ಸ್ಕ್ವಾಡ್ರನ್‌ಗಳಿಗೆ 126 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಅಂತಿಮವಾಗಿ ತೀರ್ಮಾನಿಸಲಾಗಿತ್ತು.

ರಕ್ಷಣಾ ವಸ್ತುಗಳ ತಯಾರಿಕೆಯಲ್ಲಿ ಸ್ವದೇಶದ ಕೈಗಾರಿಕೆಗಳನ್ನು ಸ್ವ್ವಾವಲಂಬಿಯಾಗುವಂತೆ ಮಾಡುವ ಉದ್ದೇಶವನ್ನು ಕೂಡಾ ಹಿಂದಿನ ಯುಪಿಎ ಸರಕಾರ ಹೊಂದಿತ್ತು. ರಫೇಲ್ ಯುದ್ಧ ವಿಮಾನಗಳನ್ನು ಯೋಗ್ಯದರಗಳಲ್ಲಿ ಖರೀದಿಸುವ ವಿಚಾರವಾಗಿ ಅದು 2012ರಲ್ಲಿ ಸುದೀರ್ಘ ಚರ್ಚೆಗಳನ್ನು ನಡೆಸಿತ್ತು. ಆ ಪ್ರಕಾರ ಪ್ರತಿಯೊಂದು ವಿಮಾನವನ್ನು 670 ಕೋಟಿ ರೂ. ದರದಲ್ಲಿ ಖರೀದಿಸುವುದಾಗಿ ಒಪ್ಪಂದವಾಗಿತ್ತು. ಆ ಪೈಕಿ 18 ಯುದ್ಧ ವಿಮಾನಗಳನ್ನು ನೇರವಾಗಿ ಫ್ರಾನ್ಸ್ ನಿಂದ ತರುವುದಾಗಿಯೂ, ಉಳಿದ 108 ವಿಮಾನಗಳನ್ನು ಫ್ರಾನ್ಸ್‌ನಿಂದ ತರುವ ಬಿಡಿಭಾಗಗಳಿಂದ ಸಾರ್ವಜನಿಕರಂಗದ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಘಟಕಗಳಲ್ಲಿ ಜೋಡಿಸುವುದಾಗಿ ನಿರ್ಧರಿಸಲಾಗಿತ್ತು. ಈ ಮಧ್ಯೆ ಕೇಂದ್ರದಲ್ಲಿ ಸರಕಾರ ಬದಲಾಯಿತು. ನೂತನ ಮೋದಿ ಸರಕಾರವು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಫ್ರಾನ್ಸ್ ಜೊತೆ ಮಾತುಕತೆಗಳನ್ನು ಮುಂದುವರಿಸಿತು. 2015ರಲ್ಲಿ ಡಸಾಲ್ಟ್ ಕಂಪೆನಿಯ ಸಿಇಒ ಭಾರತಕ್ಕೆ ಆಗಮಿಸಿ,ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆಗಳು ಪೂರ್ಣಗೊಂಡಿವೆ ಹಾಗೂ ವಿಮಾನಖರೀದಿ ದರಗಳು ಕೂಡಾ ಅಂತಿಮಗೊಂಡಿವೆ ಎಂದು ತಿಳಿಸಿದ್ದರು. ಆದರೆ, ಓರ್ವ ಬಂಡವಾಳಶಾಹಿ ಉದ್ಯಮಿಯ ಲಾಭಕ್ಕೋಸ್ಕರ ಪ್ರಧಾನಿ ನರೇಂದ್ರ ಮೋದಿ ವಾಯುಪಡೆ ಅಥವಾ ರಕ್ಷಣಾ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಕೇವಲ ಎರಡೇ ದಿನಗಳಲ್ಲಿ ಇಡೀ ಒಪ್ಪಂದದ ನಿಯಮಾವಳಿಗಳು ಹಾಗೂಶರತ್ತುಗಳನ್ನು ಬುಡಮೇಲು ಮಾಡಿಬಿಟ್ಟರು.

‘ನೂತನ ಒಪ್ಪಂದ’ದ ಅನುಸಾರ ಕೇಂದ್ರ ಸರಕಾರವು 126 ವಿಮಾನಗಳ ಬದಲಿಗೆ ಕೇವಲ 36 ವಿಮಾನಗಳನ್ನು ತಲಾ 1660 ಕೋಟಿ ರೂ. ದರದಲ್ಲಿ ಖರೀದಿಸುವುದಾಗಿ ನಿರ್ಧರಿಸಿತ್ತು. ಆದರೆ ಯುಪಿಎ ಸರಕಾರವು ಪ್ರತಿ ವಿಮಾನವನ್ನು ತಲಾ 670 ಕೋಟಿ ರೂ.ದರದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ಮೊದಲು ವಿಮಾನದ ಬಿಡಿಭಾಗಗಳನ್ನು ಫ್ರಾನ್ಸ್‌ನಿಂದ ತಂದು,ಎಚ್‌ಎಎಲ್‌ನಲ್ಲಿ ಜೋಡಿಸುವುದೆಂದು ನಿರ್ಧರಿಸ ಲಾಗಿತ್ತು. ಆದರೆ ಮೋದಿ ಸರಕಾರವು ಇಂತಹ ತಂತ್ರಜ್ಞಾನದ ವರ್ಗಾವಣೆಯ ಅಗತ್ಯವಿಲ್ಲವೆಂದು ನಿರ್ಧರಿಸಿತ್ತು. ಎಲ್ಲಾ 36 ವಿಮಾನಗಳನ್ನು ಡಸಾಲ್ಟ್ ಕಂಪೆನಿಯೇ ನಿರ್ಮಿಸುವುದಾಗಿ ತೀರ್ಮಾನಿಸಿತು.
 
ಮೇಕ್ ಇನ್ ಇಂಡಿಯಾ ಘೋಷಣೆಯನ್ನೇ ವ್ಯಂಗ್ಯಮಾಡುವ ರೀತಿಯಲ್ಲಿ ರಫೇಲ್ ಒಪ್ಪಂದದ ಪ್ರಕ್ರಿಯೆಯಿಂದ ಎಚ್‌ಎಎಲ್‌ನ್ನು ಹೊರತುಪಡಿಸಲಾಯಿತು. ಅದರ ಬದಲು ಅನಿಲ್ ಅಂಬಾನಿಯ ಹೊಸ ಹಾಗೂ ಅನನುಭವಿ ಕಂಪೆನಿ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್‌ಗೆಈ ಒಪ್ಪಂದದಲ್ಲಿ ಭಾಗಿಯಾಗಲು ಅವಕಾಶ ನೀಡಲಾಯಿತು. ಪ್ರಧಾನಿಯ ನೆರವಿನೊಂದಿಗೆ ಡಸಾಲ್ಟ್‌ಜೊತೆಗೆ ಅನಿಲ್ ಅಂಬಾನಿ ಕಂಪೆನಿಯ ಜಂಟಿ ಒಪ್ಪಂದವನ್ನು ಏರ್ಪಡಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡ್ ಅವರ ಗೆಳತಿ, ನಟಿ ಜೂಲಿಯೋ ಗಯೆಟ್ ಸಿನೆಮಾವೊಂದನ್ನು ನಿರ್ಮಿಸುವುದಕ್ಕೆ ನೆರವಾಗಲು ಆಕೆಗೆ ದೊಡ್ಡ ಮೊತ್ತವೊಂದನ್ನು ನೀಡುವ ಒಪ್ಪಂದಕ್ಕೆ ರಿಲಯನ್ಸ್ ಸಹಿಹಾಕಿತ್ತು.

ಭಾರತಕ್ಕೆ ಪೂರೈಕೆಯಾಗಲಿರುವ ರಫೆಲ್ ಯುದ್ಧ ವಿಮಾನಗಳಿಗೆ ವಿಶೇಷ ನಮೂನೆಯ ಉಪಕರಣಗಳ ಅಗತ್ಯವಿರುವುದರಿಂದ, ಪ್ರತಿ ವಿಮಾನದ ದರವನ್ನು 1 ಸಾವಿರ ಕೋಟಿ ರೂ.ಗೆಹಠಾತ್ತನೆ ಏರಿಸಲಾಗಿದೆಯೆಂದು ಮೋದಿ ಸರಕಾರ ಸಮರ್ಥಿಸಿಕೊಂಡಿತ್ತು. ಆದರೆ ಆ ಉಪಕರಣಗಳ ಉಪಯುಕ್ತತೆಯನ್ನು ಸೇನಾ ಸಮಿತಿಗಳು ಪ್ರಮಾಣೀಕೃತಗೊಳಿಸಿಲ್ಲ.

ತನಗೆ ರಫೇಲ್ ಯುದ್ಧ ವಿಮಾನಗಳು ತುರ್ತಾಗಿ ಬೇಕಾಗಿ ರುವುದರಿಂದ ಒಪ್ಪಂದದಲ್ಲಿ ಬದಲಾವಣೆ ಮಾಡಬೇಕಾಯಿತೆಂದು ಮೋದಿ ಸರಕಾರದ ಇನ್ನೊಂದು ವಾದವಾಗಿದೆ. ಆದರೆ ಇದಕ್ಕಾಗಿ ಇಡೀ ಪ್ರಕ್ರಿಯೆಯನ್ನೇ ಬುಡಮೇಲುಗೊಳಿಸುವುದು ಎಷ್ಟು ಸರಿ?. ಒಟ್ಟಾರೆಯಾಗಿ ಇಡೀ ಒಪ್ಪಂದದಲ್ಲೇ ಆಮೂಲಾಗ್ರ ಬದಲಾವಣೆ ಮಾಡಿದ ಹೊರತಾಗಿಯೂ , ಮೊದಲ ರಫೇಲ್ ಯುದ್ಧ ವಿಮಾನವು ಫ್ರಾನ್ಸ್‌ನಿಂದ 2019ರ ಸೆಪ್ಟಂಬರ್ ವೇಳೆಗಷ್ಟೇ ಭಾರತಕ್ಕೆ ಹಸ್ತಾಂತರಗೊಳ್ಳಲಿದೆ.‘ನಾನೂ ಲಂಚ ತಿನ್ನುವುದಿಲ್ಲ, ಬೇರೆಯವರಿಗೂ ಲಂಚ ತಿನ್ನಲು ಬಿಡಲಾರೆ’ ಎಂದು ಹೇಳಿಕೊಂಡು ಬರುತ್ತಿರುವ ಮೋದಿಯವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ, ಈವರೆಗೆ ತಾಳಿದ್ದ ವೌನವನ್ನು ಮುರಿಯಬೇಕು ಹಾಗೂ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಸಮಗ್ರವಾದ ತನಿಖೆಯನ್ನು ನಡೆಸಲು ಕೇಂದ್ರ ಸರಕಾರವು ಸದ್ಯವೇ ಜಂಟಿ ಸಂಸದೀಯ ತನಿಖಾ ಸಮಿತಿಯನ್ನು ರಚಿಸಬೇಕಾಗಿದೆ. ಆ ಮೂಲಕ ಒಪ್ಪಂದದ ಬಗ್ಗೆ ದೇಶದ ಜನತೆಯಲ್ಲಿ ಬಲವಾಗಿ ಬೇರೂರಿರುವ ಸಂದೇಹಗಳನ್ನು ನಿವಾರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)