varthabharthi

ಸಂಪಾದಕೀಯ

ಭಾರತ-ಪಾಕಿಸ್ತಾನ ಮಾತುಕತೆ ನಿಲ್ಲದಿರಲಿ

ವಾರ್ತಾ ಭಾರತಿ : 26 Sep, 2018


ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ದೇಶಗಳು. ಆದ್ದರಿಂದ ಪರಸ್ಪರ ಹೊಂದಿಕೊಂಡು ಹೋಗಬೇಕಾಗಿರುವುದು ಎರಡೂ ದೇಶಗಳಿಗೆ ಕ್ಷೇಮ. ಒಂದೇ ಸಂಸ್ಕೃತಿ, ಜೀವನ ವಿಧಾನವನ್ನು ಹೊಂದಿರುವ ಎರಡೂ ದೇಶಗಳ ಜನ ಸ್ನೇಹ ಬಾಂಧವ್ಯವನ್ನು ಬಯಸುತ್ತಾರೆ. ಆದರೆ, ಆಳುವ ವರ್ಗಗಳ ತಪ್ಪುಗಳಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಡುತ್ತಲೇ ಬಂದಿದೆ. ಈ ವಾರ ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಸಚಿವ ಮಟ್ಟದ ಸಭೆ ನಡೆಯಬೇಕಾಗಿತ್ತು. ಆದರೆ, ಏಕಾಏಕಿ ಮಾತುಕತೆ ರದ್ದಾಗಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾಮಾನ್ಯ ಸಭೆಗೆ ಮುನ್ನ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರ ಸಭೆ ನಡೆಯಬೇಕೆಂದು ಪ್ರಧಾನಿ ಮೋದಿಗೆ ಬರೆದಿದ್ದ ಪತ್ರದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆ ಸುಶ್ಮಾ ಸ್ವರಾಜ್ ಪಾಕಿಸ್ತಾನ ವಿದೇಶಾಂಗ ಸಚಿವರಾದ ಮುಹಮ್ಮದ್ ಖುರೇಷಿ ಅವರೊಂದಿಗೆ ಮಾತುಕತೆ ನಡೆಸುವುದು ಖಚಿತವಾಗಿತ್ತು. ಆದರೆ, ಇದಾದ ಕೇವಲ 24 ತಾಸುಗಳಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಸಭೆಯನ್ನು ಭಾರತ ಏಕಾಏಕಿ ರದ್ದುಪಡಿಸಿದೆ. ಈ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಬಹಳ ವಿಚಿತ್ರವಾಗಿ ಬೆಳೆದುಕೊಂಡು ಬಂದಿದೆ. ಅಕ್ಕಪಕ್ಕದಲ್ಲಿರುವ ಉಭಯ ದೇಶಗಳು ಒಮ್ಮಾಮ್ಮೆ ತೀರಾ ಹತ್ತಿರಕ್ಕೆ ಬರುತ್ತವೆ. ಸಂಬಂಧ ಇನ್ನೇನು ಸುಧಾರಿಸುತ್ತದೆ ಎಂದು ಎರಡೂ ದೇಶಗಳ ಜನತೆ ಸಂತಸ ಪಡುತ್ತಿರುವಾಗಲೇ ದಿಢೀರನೆ ಯಾವುದೋ ಒಂದು ಬೆಳವಣಿಗೆ ನಡೆದು ನಿಗದಿತ ಮಾತುಕತೆ ರದ್ದಾಗುತ್ತದೆ. ಈ ಬಾರಿಯೂ ಹಾಗೆಯೇ ಆಗಿದೆ. ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಸೈನಿಕನೊಬ್ಬನನ್ನು ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಈ ಬಾರಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ. ಇದರ ಜೊತೆಗೆ ಕಾಶ್ಮೀರದ ಮೂವರು ಪೊಲೀಸರನ್ನು ಅವರ ಮನೆಗಳಿಂದ ಅಪಹರಣ ಮಾಡಿ ಉಗ್ರಗಾಮಿಗಳು ಗುಂಡಿಕ್ಕಿ ಕೊಂದು ಹಾಕಿರುವುದು ಪರಿಸ್ಥಿತಿ ಹದಗೆಡಲು ಇನ್ನಷ್ಟು ಕಾರಣವಾಗಿದೆ. ಇದರಿಂದ ಅಸಮಾಧಾನಗೊಂಡ ಭಾರತ ಸರಕಾರ ಈ ಬೆಳವಣಿಗೆ ಪಾಕಿಸ್ತಾನದ ದುಷ್ಟ ನೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ನಿಜವಾದ ಮುಖ ಬಯಲಾಗಿದೆ ಎಂದು ಭಾರತ ಟೀಕಿಸಿದೆ.

ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿದ ಪೈಶಾಚಿಕ ಘಟನೆ ಖಂಡನೀಯ. ಇದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು. ಇದರ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ, ಹತ್ಯೆಗೆ ಒಳಗಾದ ಸೈನಿಕನ ದೇಹ ಸಿಗುವ ಒಂದು ದಿನದ ಮೊದಲೇ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ‘‘ಶತ್ರುಗಳ ಕತ್ತನ್ನು ನಾವೂ ಕತ್ತರಿಸುತ್ತೇವೆ. ಆದರೆ, ಅದನ್ನು ಪ್ರಕಟಪಡಿಸುವುದಿಲ್ಲ’’ ಎಂದು ಹೇಳಿದ್ದರು. ಈ ರೀತಿ ಅವರು ಹೇಳಿರುವುದು ಸರಿಯಲ್ಲ. ನಿರ್ಮಲಾ ಸೀತಾರಾಮನ್ ಆಡಿದ ಮಾತು ತೀವ್ರ ಟೀಕೆಗೆ ಗುರಿಯಾಗಿದೆ. ಯಾವುದೇ ಸಂದರ್ಭದಲ್ಲೂ ಸೇಡಿಗೆ ಸೇಡು ಎಂಬ ನೀತಿ ಉತ್ತರವಲ್ಲ. ಇದರಿಂದ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಹಿನ್ನಡೆಯಾಗುತ್ತದೆ. ಕಾಶ್ಮೀರ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಭಯೋತ್ಪಾದಕರಿಗೆ ಪ್ರಚೋದನೆ ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಇದಕ್ಕಾಗಿ ಅಮಾಯಕ ಕಾಶ್ಮೀರದ ಜನತೆ ಬೆಲೆ ತೆರಬೇಕಾಗಿಲ್ಲ. ಭಯೋತ್ಪಾದಕರು ಮತ್ತು ಸೇನಾ ಪಡೆಗಳ ನಡುವೆ ಸಿಲುಕಿ ಕಾಶ್ಮೀರದ ಜನರು ತೀವ್ರ ತೊಂದರೆಗೊಳಗಾಗಿದ್ದಾರೆ. ಇನ್ನೊಂದೆಡೆ ಎರಡೂ ದೇಶಗಳ ಸಂಬಂಧವೂ ಹದಗೆಡುತ್ತಿದೆ. ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ದೇಶಗಳಿಗೆ ಯುದ್ಧ ಎಂಬುದು ಒಂದು ಶಾಪವಿದ್ದಂತೆ. ಯುದ್ಧ, ರಕ್ತಪಾತ ಯಾವ ದೇಶಕ್ಕೂ ಒಳ್ಳೆಯದನ್ನು ಮಾಡುವುದಿಲ್ಲ. ಸುರಕ್ಷಿತ ತಾಣಗಳಲ್ಲಿರುವ ಕೆಲವರು ವೀರಾವೇಶದ ದೇಶಪ್ರೇಮವನ್ನು ಪ್ರದರ್ಶಿಸಬಹುದು. ಆದರೆ, ಜನಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗುತ್ತಾರೆ. ದೇಶದ ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ. ಆದ್ದರಿಂದ ಉಭಯ ದೇಶಗಳ ಸಂಬಂಧ ಸುಧಾರಣೆಯಲ್ಲಿ ಭಾರತ ತಾಳ್ಮೆಯ ಹೆಜ್ಜೆಯನ್ನು ಇಡಬೇಕಾಗಿದೆ.  

ಭಾರತ-ಪಾಕಿಸ್ತಾನ-ಬಾಂಗ್ಲಾದೇಶಗಳು ಒಂದೇ ಭೂಪ್ರದೇಶಕ್ಕೆ ಸೇರಿದ ದೇಶಗಳಾಗಿವೆ. ಈ ಮೂರು ದೇಶಗಳೂ ಒಕ್ಕೂಟ ರಚಿಸಿಕೊಂಡು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಅಭಿವೃದ್ಧಿ ಯತ್ತ ಮುಂದೆ ಸಾಗಬೇಕೆಂದು ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಹೇಳುತ್ತಿದ್ದರು. ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರಿಂದ ಹಿಡಿದು ಇತ್ತೀಚಿನ ವರೆಗೆ ದೇಶ ಅದೇ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ಉಭಯ ದೇಶಗಳ ಸಂಬಂಧ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಲಾಹೋರ್‌ಗೆ ಬಸ್ ಮತ್ತು ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ನೆಮ್ಮದಿ ಬಹಳ ದಿನ ಉಳಿಯಲಿಲ್ಲ. ಪರಿಸ್ಥಿತಿ ಹದಗೆಡುತ್ತಲೇ ಬಂತು. ಕಾಶ್ಮೀರ ಗಡಿ ಪ್ರದೇಶದಲ್ಲಿ ಉಗ್ರಗಾಮಿಗಳ ದಾಳಿ ಇದೇ ಮೊದಲ ಬಾರಿ ನಡೆದಿಲ್ಲ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಯಾಗಬಾರದೆಂದು ಭಯೋತ್ಪಾದಕ ಶಕ್ತಿಗಳು ಆಗಾಗ ದಾಳಿಯನ್ನು ಮಾಡುತ್ತಲೇ ಇವೆ. ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಯಾಗುತ್ತದೆ ಎನ್ನುವಂತಹ ಸಂದರ್ಭದಲ್ಲಿ ಭಯೋತ್ಪಾದಕರಿಂದ ದಾಳಿಗಳು ಹೆಚ್ಚಾಗುತ್ತವೆ. ಆದ್ದರಿಂದ ಎರಡೂ ದೇಶಗಳು ಈ ದಾಳಿಗಳಿಗೆ ಸೊಪ್ಪು ಹಾಕದೆ ಪರಸ್ಪರ ಸಂಬಂಧ ಸುಧಾರಣೆಗೆ ಆಸ್ಪದ ನೀಡಬೇಕು.

ಕಾಶ್ಮೀರ ಉಗ್ರಗಾಮಿ ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ಖಂಡಿಸಿ ಹಾಗೂ ಬಿಎಸ್‌ಎಫ್ ಯೋಧರ ಕತ್ತು ಸೀಳಿದ ಘಟನೆಯನ್ನು ಪ್ರತಿಭಟಿಸಿ ಉಭಯ ದೇಶಗಳ ಸಚಿವ ಮಟ್ಟದ ಸಭೆಯನ್ನು ಭಾರತ ಬಹಿಷ್ಕರಿಸಿತು. ಆದರೆ, ವಿದೇಶಾಂಗ ಸಚಿವರ ಸಭೆಯನ್ನು ರದ್ದುಪಡಿಸುವ ಬದಲು ಈ ಸಭೆಯನ್ನು ನಡೆಸಿ ಭಯೋತ್ಪಾದಕ ದಾಳಿಯ ವಿಷಯವನ್ನು ಪಾಕಿಸ್ತಾನದ ವಿದೇಶಾಂಗ ಸಚಿವರ ಗಮನಕ್ಕೆ ತರಬೇಕಾಗಿತ್ತು. ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಏಕಾಏಕಿ ಮಾತುಕತೆಯನ್ನು ರದ್ದುಪಡಿಸಿರುವುದರಿಂದ ಈ ಅವಕಾಶವನ್ನು ಕಳೆದುಕೊಂಡಂತಾಗಿದೆ. ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವ ಮಟ್ಟದ ಸಭೆಯ ರದ್ದತಿಯಿಂದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಾತುಕತೆಯನ್ನು ಸ್ಥಗಿತಗೊಳಿಸುವುದರಿಂದ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತದೆ.

ಎಷ್ಟೇ ಅಡ್ಡಿ ಆತಂಕಗಳು ಎದುರಾಗಲಿ ಉಭಯ ದೇಶಗಳ ನಡುವಿನ ಸೌಹಾರ್ದ ಮಾತುಕತೆ ಪ್ರಕ್ರಿಯೆ ಮುಂದುವರಿಯಬೇಕು. ರದ್ದುಪಡಿಸಿದ ವಿದೇಶಾಂಗ ಸಚಿವ ಮಟ್ಟದ ಸಭೆಯನ್ನು ಮತ್ತೆ ನಡೆಸಬೇಕು. ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಯೊಂದೇ ಈ ನಿಟ್ಟಿನಲ್ಲಿ ಉಳಿದ ದಾರಿಯಾಗಿದೆ. ಆದ್ದರಿಂದ ಎರಡೂ ದೇಶಗಳು ಪರಸ್ಪರ ಸಕಾರಾತ್ಮಕವಾಗಿ ವರ್ತಿಸಬೇಕು. ಭಾರತ ಮತ್ತು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ನೆರೆಹೊರೆಯ ದೇಶಗಳಾಗಿರುವುದರಿಂದ ನಿರಂತರ ಕಚ್ಚಾಡಿಕೊಂಡೇ ಇರಲು ಸಾಧ್ಯವಿಲ್ಲ. ಆದ್ದರಿಂದ ವಿದೇಶಾಂಗ ಸಚಿವ ಮಟ್ಟದ ಸಭೆಯನ್ನು ಮುಂದುವರಿಸಲು ಭಾರತ ಹಿಂಜರಿಯಬಾರದು. ಪಾಕಿಸ್ತಾನ ಕೂಡಾ ಸಕಾರಾತ್ಮಕವಾಗಿ ವರ್ತಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)