varthabharthi

ಆರೋಗ್ಯ

ವೈಕಿಂಗ್ ಕಾಯಿಲೆ ಎಂದರೇನು ? ಅದು ಹೇಗೆ ಉಂಟಾಗುತ್ತದೆ ?

ವಾರ್ತಾ ಭಾರತಿ : 26 Sep, 2018

ಕೈ ಚರ್ಮದ ಅಂಗಾಂಶಗಳು ನಿಧಾನವಾಗಿ ದಪ್ಪವಾಗಿ ಪೆಡಸಾಗುವ ಈ ಕಾಯಿಲೆ 8ರಿಂದ 11ನೇ ಶತಮಾನದವರೆಗೆ ಸ್ಕಾಂಡಿನೇವಿಯಾದಲ್ಲಿ ಪ್ರಬಲವಾಗಿದ್ದ ವೈಕಿಂಗ್ ಸಮುದಾಯದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದರಿಂದ ಆ ಹೆಸರನ್ನೇ ಅಂಟಿಸಿಕೊಂಡಿದೆ. ತಾಂತ್ರಿಕವಾಗಿ ಈ ಕಾಯಿಲೆಯನ್ನು ‘ಡುಪೆಟ್ರನ್ಸ್ ಕಾಂಟ್ರಾಕ್ಚರ್’ ಎಂದು ಕರೆಯಲಾಗುತ್ತದೆ.

ಇದು ಕೈ ವಿರೂಪಗೊಳ್ಳುವ ಕಾಯಿಲೆಯಾಗಿದ್ದು,ಬೆರಳುಗಳು ಅಂಗೈಯತ್ತ ಬಾಗಿರುತ್ತವೆ ಮತ್ತು ಸಂಪೂರ್ಣವಾಗಿ ಹೊರಗೆ ಚಾಚಲು ಸಾಧ್ಯವಾಗುವುದಿಲ್ಲ. ಕೈಗಳ ಚರ್ಮದ ಕೆಳಗೆ ದಪ್ಪ ತಂತುಗಳಂತಿರುವ ಅಂಗಾಂಶಗಳ ಗಂಟುಗಳು ಕ್ರಮೇಣವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಅಂತಿಮವಾಗಿ ಬೆರಳುಗಳನ್ನು ಬಗ್ಗಿದ ಸ್ಥಿತಿಯಲ್ಲಿ ಅಂಗೈನತ್ತ ಎಳೆಯುತ್ತವೆ. ಈ ಕಾಯಿಲೆೆಯು ಅಂಗೈಯೊಳಗಿನ,ಹೆಚ್ಚಾಗಿ ಮುಂದೋಳಿನ ನಾಲ್ಕು ಮತ್ತು ಐದನೇ ಮೂಳೆಗಳ ನಡುವಿನ ಅಂಗಾಂಶಗಳು ದಪ್ಪವಾಗುವುದರಿಂದ ಉಂಟಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಈ ಕಾಯಿಲೆಗೆ ತುತ್ತಾದರೆ ವ್ಯಕ್ತಿಗೆ ದಿನನಿತ್ಯದ ಕೆಲಸಗಳನ್ನು ಮಾಡುವುದೂ ಕಷ್ಟವಾಗುತ್ತದೆ.

ಸ್ಕಾಂಡಿನೇವಿಯಾ ಮೂಲದ ವೈಕಿಂಗ್ ಜನರು ಉತ್ತರ ಯುರೋಪ್ ಮತ್ತು ಅದರಾಚೆಗೂ ವಿಸ್ತರಿಸಿಕೊಂಡಿದ್ದು,ವಿಶ್ವಾದ್ಯಂತ ಸುತ್ತುತ್ತಿದ್ದಾಗ ಸ್ಥಳೀಯ ಮಹಿಳೆಯರನ್ನು ಮದುವೆ ಮಾಡಿಕೊಂಡು ಅವರಿಗೆ ಸಂತಾನವನ್ನು ಕರುಣಿಸುತ್ತ ಈ ಕಾಯಿಲೆ ಎಲ್ಲೆಡೆ ಹರಡಲು ಕಾರಣರಾಗಿದ್ದರು ಎನ್ನಲಾಗಿದೆ.

ವೈಕಿಂಗ ಕಾಯಿಲೆಯು ಸಾಮಾನ್ಯ ಆನುವಂಶಿಕ ವೈಕಲ್ಯ ಎನ್ನುವುದನ್ನು ಹಲವಾರು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಕಾಯಿಲೆಯು ಹೆಚ್ಚಾಗಿ 45 ವರ್ಷಕ್ಕಿಂತ ಮೇಲಿನ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವ್ಯಕ್ತಿಯ ವಂಶವಾಹಿಯಲ್ಲಿ ಈ ವೈಕಲ್ಯವಿದ್ದ ಮಾತ್ರಕ್ಕೆ ಆತ ಈ ರೋಗಕ್ಕೆ ಗುರಿಯಾಗುವುದು ಕಡ್ಡಾಯವೇನಲ್ಲ. ಮೂರ್ಛೆರೋಗ,ಮಧುಮೇಹದಿಂದ ಬಳಲುತ್ತಿರುವವರು ಮತ್ತು ಮದ್ಯಪಾನದ ಚಟವನ್ನು ಹೊಂದಿರುವವರನ್ನು ಈ ಕಾಯಿಲೆಯು ಹೆಚ್ಚಾಗಿ ಕಾಡುತ್ತದೆ.

 ಈ ಕಾಯಿಲೆಯು ನಿಧಾನವಾಗಿ ಅಭಿವೃದ್ಧಿಗೊಳ್ಳುತ್ತದೆ. ಆರಂಭದಲ್ಲಿ ಅಂಗೈಯಲ್ಲಿಯ ನಾರುನಾರಾದ ಅಂಗಾಂಶಗಳು ದಪ್ಪವಾಗಲು ಆರಂಭಗೊಳ್ಳುತ್ತವೆ ಮತ್ತು ನಂತರ ಪೆಡಸಾಗುತ್ತವೆ. ಬಳಿಕ ನಿಧಾನವಾಗಿ ಬೆರಳುಗಳು ಪೆಡಸಾಗತೊಡಗುತ್ತವೆ ಮತ್ತು ನಂತರ ಒಳಗಡೆ ಬಗ್ಗತೊಡಗುತ್ತವೆ ಅಥವಾ ಮಡಿಚಿಕೊಳ್ಳತೊಡಗುತ್ತವೆ. ಅವುಗಳ ನಮ್ಯತೆಯು ಅಥವಾ ಒಳಗೆ ಹೊರಗೆ ಚಾಚುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇಂತಹ ಪೀಡಿತ ಬೆರಳುಗಳನ್ನು ಸಂಪೂರ್ಣವಾಗಿ ನೆಟ್ಟಗೆ ಮಾಡಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕೈಗಳಿಗೆ ಗವಸು ಧರಿಸುವುದು,ಇತರರಿಗೆ ಹಸ್ತಲಾಘವ ನೀಡುವುದು ಅವಾ ಕೈಗಳನ್ನು ಜೇಬಿನೊಳಗೆ ತೂರಿಸುವಂತಹ ಸರಳ ಕಾರ್ಯಗಳೂ ಕಷ್ಟಕರವಾಗುತ್ತವೆ.

ಹೆಚ್ಚಿನ ಪ್ರಕರಣಗಳಲ್ಲಿ ಈ ಕಾಯಿಲೆಯು ಮೊದಲಿಗೆ ಉಂಗುರ ಬೆರಳನ್ನು ಬಾಧಿಸುತ್ತದೆ ಎನ್ನುವುದು ಕಂಡುಬಂದಿದೆ. ಹೆಬ್ಬೆರಳು ಮತ್ತು ತೋರುಬೆರಳು ಈ ಕಾಯಿಲೆಗೆ ತುತ್ತಾಗುವುದು ಅಪರೂಪ. ವರ್ಷಗಳು ಕಳೆದಂತೆ ಈ ಕಾಯಿಲೆಯು ನಿಧಾನವಾಗಿ ಬಲಿಯುತ್ತದೆ. ಚರ್ಮದ ಕೆಳಗೆ ಬೆಳೆಯುವ ಗಂಟುಗಳು ಸ್ಪರ್ಶಕ್ಕೆ ಅತಿಯಾದ ಸಂವೇದನಾಶೀಲತೆಯನ್ನು ಹೊಂದಿರಬಹುದು,ಆದರೆ ಇವು ನೋವನ್ನುಂಟು ಮಾಡುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಈ ಕಾಯಿಲೆ ಒಂದೇ ಕೈಯನ್ನು ಬಾಧಿಸುತ್ತದೆ.

ಈ ಕಾಯಿಲೆಗೆ ಚಿಕಿತ್ಸೆಯು ಅದರ ತೀವ್ರತೆಯನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಗುಣಪಡಿಸಬಹುದಾಗಿದೆ. ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಸಾದ್ಯವಾಗದಿದ್ದಷ್ಟು ತೀವ್ರಗೊಂಡರೆ ಶಸ್ತ್ರಚಿಕಿತ್ಸೆಯು ಅಗತ್ಯವಾಗುತ್ತದೆ. ಆದರೆ ಸ್ಥಿತಿಯು ತೀವ್ರವಾಗಿ ಹದಗೆಟ್ಟಿದ್ದರೆ ಯಾವ ಚಿಕಿತ್ಸೆಯೂ ಫಲ ನೀಡದಿರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)