varthabharthi

ಸಂಪಾದಕೀಯ

ಆಧಾರ್ ಕಡ್ಡಾಯ: ಕಣ್ಣು ಮುಚ್ಚಾಲೆಯ ತೀರ್ಪು

ವಾರ್ತಾ ಭಾರತಿ : 27 Sep, 2018

ಸರ್ವೋಚ್ಚ ನ್ಯಾಯಾಲಯ ಬುಧವಾರದಂದು ಭಾರತದ 12 ಸಂಖ್ಯೆಗಳ ಬಯೋಮೆಟ್ರಿಕ್ ಗುರುತಿನ ಯೋಜನೆ ಆಧಾರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಮೂಲಕ ಕಳೆದ ಒಂಬತ್ತು ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಗೆ ಪೂರ್ಣವಿರಾಮ ಹಾಕಿದೆ. ತೀರ್ಪು ಆಧಾರ್‌ನ್ನು ಸಂವಿಧಾನ ಬದ್ಧ ಎಂದು ಹೇಳಿದರೂ ಎಲ್ಲ ವಿಭಾಗಗಳಲ್ಲೂ ಕಡ್ಡಾಯವಲ್ಲ ಎಂದೂ ಹೇಳಿದೆ. ಇದರಿಂದಾಗಿ ಆಧಾರ್‌ನ ಪರವಾಗಿರುವವರೂ, ವಿರುದ್ಧವಾಗಿರುವವರೂ ಒಟ್ಟಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕೆಲವರು ಕೇಂದ್ರ ಸರಕಾರಕ್ಕೆ ಮುಖಭಂಗವಾಗಿದೆ ಎಂದು ಹೇಳಿದರೆ, ಇನ್ನು ಕೆಲವರು, ಇದು ಮೋದಿ ಸರಕಾರದ ಗೆಲುವು ಎಂದು ತೀರ್ಪನ್ನು ವ್ಯಾಖ್ಯಾನಿಸುತ್ತಿದ್ದಾರೆ.

ಪಂಚ ಸದಸ್ಯರ ಪೀಠದಲ್ಲಿ ಬಹುತೇಕ ಎಲ್ಲ ನ್ಯಾಯಾಧೀಶರು ಆಧಾರ್ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಅಭಿಪ್ರಾಯಿಸಿದ್ದು, ಅದನ್ನು ಸಾಂವಿಧಾನಿಕವಾಗಿ ಸಿಂಧುಗೊಳಿಸಲು ಕೆಲವೊಂದು ಹೆಚ್ಚುವರಿ ಬದಲಾವಣೆಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಆದರೆ, ನ್ಯಾಯಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಾಧೀಶ ಡಿ.ವೈ.ಚಂದ್ರಚೂಡ ಈ ಕುರಿತು ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದು ಆಧಾರ್‌ನ್ನು ಸಂಪೂರ್ಣವಾಗಿ ಅಸಾಂವಿಧಾನಿಕ ಎಂದು ತಿಳಿಸಿದ್ದಾರೆ. ಈ ಆದೇಶದ ಸಂಪೂರ್ಣ ವರದಿ ಹೊರಬೀಳುತ್ತಿದ್ದಂತೆ ಕೆಲವರು, ಇನ್ನು ಭಾರತದಲ್ಲಿ ಆಧಾರ್ ಇಲ್ಲದೆ ಬದುಕಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ. ಬಹುಮತದ ಆಧಾರದಲ್ಲಿ ಇವರ ಮಾತಿಗೆ ಮಾನ್ಯತೆ ಸಿಗುವುದಿಲ್ಲವಾದರೂ, ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಇವರ ಕಳವಳವನ್ನು ನಾವು ಅಲ್ಲಗಳೆಯುವಂತೆಯೇ ಇಲ್ಲ. ಒಬ್ಬ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸುವಷ್ಟು ಆಧಾರ್ ಸಮಸ್ಯೆ ಗಂಭೀರವಾಗಿದೆ ಎನ್ನುವುದನ್ನು ಇದು ಹೇಳುತ್ತದೆ. ಕೆಲವು ಕಡ್ಡಾಯಗಳನ್ನು ಹಿಂದೆಗೆಯುವ ಮೂಲಕ ಆಧಾರ್‌ನ್ನು ಸಂವಿಧಾನ ಬದ್ಧಗೊಳಿಸಬಹುದು ಎಂದು ನ್ಯಾಯಾಲಯ ತಿಳಿಸುತ್ತದೆ.

ಈ ಹಿಂದೆ ಯಾವುದೆಲ್ಲ ಸೇವೆಗಳು ಆಧಾರ್ ಕಡ್ಡಾಯ ಎಂದು ಹೇಳುತ್ತಿತ್ತೋ, ಅವುಗಳಲ್ಲಿ ಹಲವು ಸೇವೆಗಳಿಗೆ ಆಧಾರ್ ಕಡ್ಡಾಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಆಧಾರದಲ್ಲಿ ಜನರು ಆಧಾರ್ ಸಮಸ್ಯೆಯಿಂದ ನಿರಾಳವಾದರು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇಷ್ಟಕ್ಕೂ ಅಧಾರ್ ಯಾವುದಕ್ಕೆಲ್ಲ ಅಗತ್ಯವಿಲ್ಲ ಎನ್ನುವುದನ್ನೊಮ್ಮೆ ಗಮನಿಸೋಣ. ಬ್ಯಾಂಕ್ ಖಾತೆಗಳು: ಆಧಾರ್‌ಪರ ತೀರ್ಪನ್ನು ಬರೆದ ಎ.ಕೆ.ಸಿಕ್ರಿ, ಹಣ ವಂಚನೆ (ತಡೆ) ಕಾಯ್ದೆಯಡಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿದರೆ ಖಾಸಗಿತನದ ಉಲ್ಲಂಘನೆಯಾಗುತ್ತದೆ ಮತ್ತು ಇದು ಸರಕಾರದ ಹಿತಾಸಕ್ತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಜೋಡಣೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಡುತ್ತದೆ. ಸಿಮ್ ಕಾರ್ಡ್: ಕೆಲವರು ಸಿಮ್ ಕಾರ್ಡ್‌ನ ದುರುಪಯೋಗ ಮಾಡಿದರು ಎಂದ ಮಾತ್ರಕ್ಕೆ ಪ್ರತಿಯೊಬ್ಬ ಪ್ರಜೆಯ ಖಾಸಗಿ ಜೀವನದ ಮೇಲೆ ನಿಗಾಯಿಡುವುದು ಸೂಕ್ತವಲ್ಲ. ಹಾಗಾಗಿ ಸಿಮ್ ಕಾರ್ಡ್‌ಗೆ ಆಧಾರ್ ಜೋಡಣೆ ಅಸಾಂವಿಧಾನಿಕ ಎಂದು ನ್ಯಾಯಪೀಠ ತಿಳಿಸಿದೆ. ಹಾಗಾಗಿ ಜೋಡಣೆಯ ಅಗತ್ಯವಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ.

ಶೈಕ್ಷಣಿಕ ಯೋಜನೆಗಳು: ಸಿಬಿಎಸ್‌ಇ, ನೀಟ್, ಯುಜಿಸಿ ಮತ್ತು ಇತರ ಕೆಲವು ಶೈಕ್ಷಣಿಕ ಸಂಸ್ಥೆಗಳು ವಿಧಿ 7ರ ವ್ಯಾಪ್ತಿಯಿಂದ ಹೊರಗಿರುವ ಕಾರಣ ಇವುಗಳಿಗೆ ಆಧಾರ್ ಕಡ್ಡಾಯಗೊಳಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ವಿಧಿ 7, ಸರಕಾರದ ಸಬ್ಸಿಡಿಯನ್ನು ಪಡೆಯಲು ಆಧಾರ್ ಒದಗಿಸುವುದನ್ನು ಕಡ್ಡಾಯಗೊಳಿಸುವ ಹಕ್ಕನ್ನು ಸರಕಾರಕ್ಕೆ ನೀಡುತ್ತದೆ. ಶಾಲಾ ದಾಖಲಾತಿ ಅಥವಾ ಸರ್ವ ಶಿಕ್ಷ ಅಭಿಯಾನದ ಲಾಭ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೆ ಮಕ್ಕಳು ಇತರ ಲಾಭಗಳು ಅಥವಾ ಸಬ್ಸಿಡಿಗಳು, ನೋಂದಣಿ ಸಂಖ್ಯೆ ಪಡೆಯಬೇಕಾದ ಸಂದರ್ಭದಲ್ಲಿ ಆಧಾರ್ ಕಡ್ಡಾಯವಾಗಿ ಅಗತ್ಯವಿದೆ. (ಇಲ್ಲಿ ಹೆತ್ತವರ ಅಥವಾ ಪೋಷಕರ ಸಮ್ಮತಿ ಅಗತ್ಯವಿದೆ).ಹಾಗೆಯೇ ಹೆತ್ತವರ ಸಮ್ಮತಿಯೊಂದಿಗೆ ಆಧಾರ್ ಪಡೆದುಕೊಂಡ ಮಕ್ಕಳು ವಯಸ್ಕರಾದಾಗ ಈ ಯೋಜನೆಯ ಲಾಭವನ್ನು ಪಡೆಯಲು ಬಯಸದ ಪಕ್ಷದಲ್ಲಿ ಆಧಾರ್ ಯೋಜನೆಯಿಂದ ಹೊರಬರುವ ಅವಕಾಶವನ್ನು ಅವರಿಗೆ ನೀಡಲಾಗಿದೆ.

ಖಾಸಗಿ ಕಂಪೆನಿಗಳು: ಸರಕಾರದ ಜೊತೆಗೆ ಇತರ ಖಾಸಗಿ ಕಂಪೆನಿಗಳೂ ಆಧಾರ್ ಪಡೆಯುವುದಕ್ಕೆ ಅನುಮತಿ ನೀಡುವ 57ನೇ ವಿಧಿಯನ್ನು ಅಸಾಂವಿಧಾನಿಕ ಎಂದು ಕರೆದಿರುವ ನ್ಯಾಯಾಲಯ ಈ ನಿಬಂಧನೆಯನ್ನು ರದ್ದುಗೊಳಿಸಿದೆ. ಆಧಾರ್‌ನ್ನು ಖಾಸಗಿ ಕಂಪೆನಿಗಳು ಪಡೆಯುವುದು ಕಾನೂನಾತ್ಮಕವಾಗಬೇಕಾದರೆ ಅದಕ್ಕೆ ಸೂಕ್ತ ಕಾನೂನಿನ ಅಗತ್ಯವಿದೆ. ಅದು ಕೂಡಾ ಖಾಸಗಿತನದ ಎಲ್ಲ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕು. ಹಾಗಾಗಿ ಸದ್ಯ ಖಾಸಗಿ ಕಂಪೆನಿಗಳು ಆಧಾರ್ ಪಡೆಯುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಇದು ಮಹತ್ವದ ಅಂಶವಾಗಿದೆ. ಆದರೆ ಇಷ್ಟರಿಂದ, ದೇಶದ ಪ್ರಜೆಗಳು ಆಧಾರ್‌ನಿಂದ ಸಂಪೂರ್ಣ ಮುಕ್ತರಾಗುವುದಿಲ್ಲ. ಆಧಾರ್ ಹೊಂದಲು ಇಷ್ಟವಿಲ್ಲದ ಪ್ರಜೆಗಳು, ನನಗೆ ಆಧಾರ್ ಅಗತ್ಯವಿಲ್ಲ ಎಂಬ ನಿಲುವು ತಾಳಲು ಸದ್ಯದ ತೀರ್ಪಿನಿಂದ ಖಂಡಿತ ಸಾಧ್ಯವಿಲ್ಲ.

ಆಧಾರ್ ಹಲವು ಪ್ರಮುಖ ಸೇವೆಗಳಿಗೆ ಕಡ್ಡಾಯವಾಗಿದೆ. ಕಲ್ಯಾಣ: ಸರಕಾರಿ ಸೌಲಭ್ಯಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಆಧಾರ್ ಕಡ್ಡಾಯ ಮಾಡಿರುವುದು ಸಾಂವಿಧಾನಿಕವಾಗಿದೆ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್ ಇದರಿಂದ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ. ಅಂದರೆ, ಸಬ್ಸಿಡಿ ಮತ್ತು ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಅಗತ್ಯವಿದೆ. ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆ ಮತ್ತು ಆದಾಯ ತೆರಿಗೆ ಪಾವತಿಯ ವೇಳೆ ಅದನ್ನು ಪಡೆಯುವುದು ಕಾನೂನಾತ್ಮಕವಾಗಿ ದೇಶದ ಹಿತಾಸಕ್ತಿಯನ್ನು ಹೊಂದಿದೆ ಮತ್ತು ಅದರಿಂದ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಪಂಚ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಅಂದರೆ, ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆ ಕಡ್ಡಾಯ ಮತ್ತು ಆದಾಯ ತೆರಿಗೆ ಪಾವತಿ ವೇಳೆಯೂ ಅದು ಬೇಕಾಗುತ್ತದೆ. ಈ ತೀರ್ಪು ಒಟ್ಟಿನಲ್ಲಿ ಏನನ್ನು ಹೇಳುತ್ತದೆ? ಕಾನೂನಾತ್ಮಕವಾಗಿ ಭಾರತದಲ್ಲಿ ಉಳಿಯಬೇಕಾದರೆ ಪ್ರತಿಯೊಬ್ಬರೂ ಆಧಾರ್‌ನ್ನು ಹೊಂದಲೇ ಬೇಕಾಗಿದೆ.

ಸರಕಾರ ಸಬ್ಸಿಡಿ ಸೇವೆಗಳನ್ನು ಪಡೆಯಲು ಆಧಾರ್ ಕಡ್ಡಾಯ ಮಾಡಿದ್ದುದರಿಂದ ಆದ ಹಲವು ಅನಾಹುತಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ರೇಷನ್ ಕಾರ್ಡ್‌ಗೆ ಆಧಾರ್ ಕಡ್ಡಾಯ ಮಾಡಿದ್ದರಿಂದ ರೇಷನ್ ಇಲ್ಲದೆ ಮೃತಪಟ್ಟ ಘಟನೆಗಳು ದೇಶಾದ್ಯಂತ ಸಂಭವಿಸಿದ್ದವು. ನ್ಯಾಯಾಲಯದ ತೀರ್ಪಿನ ಪ್ರಕಾರ ಸಬ್ಸಿಡಿಯ ಯಾವುದೇ ಸವಲತ್ತುಗಳನ್ನು ಪಡೆಯಬೇಕಾದರೂ ಇದೀಗ ಆಧಾರ್ ಹೊಂದಲೇ ಬೇಕು. ಬ್ಯಾಂಕಿಗೆ ಆಧಾರ್ ಕಡ್ಡಾಯವಿಲ್ಲ ಎನ್ನುತ್ತಲೇ, ಪಾನ್‌ಕಾರ್ಡ್‌ಗೆ ಕಡ್ಡಾಯವೆಂದು ತೀರ್ಪು ಹೇಳುತ್ತದೆ. ಇದೇ ಸಂದರ್ಭದಲ್ಲಿ ಬ್ಯಾಂಕ್ ಖಾತೆ ತೆಗೆಯಲು ಪಾನ್ ಕಾರ್ಡ್ ಕಡ್ಡಾಯ ಎಂದು ಬ್ಯಾಂಕ್ ಹೇಳುತ್ತದೆ. ಅಂದರೆ ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಕಡ್ಡಾಯವಾದಂತೆಯೇ ಅಲ್ಲವೇ? ಸರಕಾರದ ಯಾವುದೇ ಸಬ್ಸಿಡಿಯನ್ನು ಪಡೆಯಬೇಕಾದರೆ ಆಧಾರ್ ಕಡ್ಡಾಯ ಎಂದ ಮೇಲೆ, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಶ್ರೀಸಾಮಾನ್ಯನೂ ಆಧಾರ್‌ನ್ನು ಹೊಂದಲೇ ಬೇಕಾಗುತ್ತದೆ. ಆಧಾರ್‌ನ್ನು ನೀವು ಕಡ್ಡಾಯವಾಗಿ ಹೊಂದಲೇ ಬೇಕು ಎನ್ನುವುದನ್ನು ಸುಪ್ರೀಂಕೋರ್ಟ್ ದೇಶದ ಜನರಿಗೆ ಅತ್ಯಂತ ನಾಜೂಕಿನ ಮಾತಿನಲ್ಲಿ ಹೇಳಿದೆ ಎಂದೇ ನಾವು ತೀರ್ಪನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)