varthabharthi

ಸಂಪಾದಕೀಯ

ಆಚಾರಗೆಡಿಸುವ ಗೊಂದಲದ ತೀರ್ಪುಗಳು

ವಾರ್ತಾ ಭಾರತಿ : 29 Sep, 2018

ಮೊನ್ನೆ ಗುರುವಾರ, ನಮ್ಮ ಪರಮೋಚ್ಚ ನ್ಯಾಯಾಲಯವು ಎರಡು ಮಹತ್ವದ ತೀರ್ಪುಗಳನ್ನು ಹೊರಡಿಸಿದ್ದು ಅವು ವಿವಿಧ ವಲಯಗಳಲ್ಲಿ, ಪ್ರಶಂಸೆ, ಖಂಡನೆ ಅಥವಾ ಚರ್ಚೆಗೆ ಪಾತ್ರವಾಗಿವೆ. ನೂರಾರು ಪುಟಗಳಷ್ಟು ಉದ್ದವಿರುವ ಮತ್ತು ಕಾನೂನಿನ ಕ್ಲಿಷ್ಟ ಪದಗಳು, ತರ್ಕಗಳು ತುಂಬಿರುವ ತೀರ್ಪು ಗಳನ್ನು ಮೊದಲಿಂದ ಕೊನೆ ತನಕ ಖುದ್ದಾಗಿ ಓದುವ ಸಂಯಮವಾಗಲಿ ಅವುಗಳನ್ನು ಅರ್ಥಯಿಸಿಕೊಳ್ಳುವ ಸಾಮರ್ಥ್ಯವಾಗಲಿ ಜನಸಾಮಾನ್ಯನಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಸಂಕೀರ್ಣ ತೀರ್ಪುಗಳ ಅಧಿಕೃತ ಸಾರಾಂಶವನ್ನು ಸಂಕ್ಷಿಪ್ತವಾಗಿ, ಸರಳ ಭಾಷೆಯಲ್ಲಿ ಪತ್ರಿಕಾ ಪ್ರಕಟನೆ ಇತ್ಯಾದಿ ಉಪಾಧಿಗಳ ಮೂಲಕ ಜನ ಸಾಮಾನ್ಯರ ಮಾಹಿತಿಗಾಗಿ ಬಿಡುಗಡೆಗೊಳಿಸುವ ಕಾರ್ಯವನ್ನು ನಮ್ಮ ನ್ಯಾಯಾಲಯಗಳೇ ಮಾಡಬೇಕಿತ್ತು. ಆದರೆ ಸದ್ಯ ಅಂತಹ ಯಾವುದೇ ಏರ್ಪಾಡನ್ನು ನಮ್ಮ ನ್ಯಾಯಾಲಯಗಳು ಮಾಡಿಲ್ಲ. ಆದ್ದರಿಂದ, ಯಾವುದೇ ಮಹತ್ವದ ತೀರ್ಪು ಪ್ರಕಟವಾದ ಬೆನ್ನಿಗೆ ಆ ತೀರ್ಪಿನಲ್ಲಿ ಮುಖ್ಯವಾಗಿ ಏನನ್ನು ಹೇಳಲಾಗಿದೆ ಎಂಬ ಕುರಿತು ಊಹಾಪೋಹಗಳು ಆರಂಭವಾಗಿ ಬಿಡುತ್ತವೆ. ತೀರ್ಪು ನೀಡಿದವರು ಆ ಕುರಿತು ವಿವರಣೆ ನೀಡುವುದಕ್ಕೆ ಲಭ್ಯರಿರುವುದಿಲ್ಲ. ವಕೀಲರೊಡನೆ ಕೇಳೋಣವೆಂದರೆ ಅವರು ಏನು ಹೇಳುತ್ತಾರೆಂಬುದು ಅವರು ಯಾವ ಬಣದ ಪರ ವಕೀಲರೆಂಬುದನ್ನು ಅವಲಂಬಿಸಿರುತ್ತದೆ.

ಪ್ರತಿಯೊಂದು ಬಣದವರೂ ಅದು ತಮಗೆ ಪರವಾಗಿ ಬಂದ ತೀರ್ಪು ಎಂದು ಅದನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಲು ಆರಂಭಿಸುತ್ತಾರೆ. ಕೆಲವು ಧರ್ಮಗ್ರಂಥಗಳ ನಿಗೂಢ ವಚನಗಳಂತೆ, ಅಥವಾ ಕೆಲವು ನವ್ಯ ಕಾವ್ಯದ ಸಾಲುಗಳಂತೆ ನ್ಯಾಯಾಲಯದ ತೀರ್ಪುಗಳು ಕೂಡ ಅಸಹಾಯಕವಾಗಿ, ತಮ್ಮನ್ನು ವ್ಯಾಖ್ಯಾನಿಸುವವರ ಕೈಯಲ್ಲಿ ಹತ್ತು ಹಲವು ರೂಪಗಳನ್ನು ತಾಳಿ ಬಿಡುತ್ತವೆ. ತೀರ್ಪಿನ ವಿಷಯವು ಸಾರ್ವಜನಿಕರ ಆಸಕ್ತಿಯ ವಿಷಯವಾಗಿದ್ದರಂತೂ, ಮಾಧ್ಯಮಗಳ ಕೈಯಲ್ಲಿ ಅವು ರೂಪಗೆಟ್ಟು ಚಿಂದಿಯಾಗಿ ಬಿಡುತ್ತವೆ. ತೀರ್ಪನ್ನು ವರದಿ ಮಾಡುವವರು ತಮ್ಮ ಇಚ್ಛಾನುಸಾರ ಅದರ ಭಾಗಗಳನ್ನು ಆರಿಸಿ ಪ್ರಕಟಿಸುವ ಮೂಲಕ ಹಲವು ಅಪಾರ್ಥಗಳಿಗೆ ಕಾರಣರಾಗುತ್ತಾರೆ. ಗುರುವಾರ ಪ್ರಕಟವಾದ ಎರಡು ತೀರ್ಪುಗಳಿಗೂ ಈ ದುರ್ಗತಿ ಒದಗಿದೆ. ಗುರುವಾರ ಸುಪ್ರೀಂ ಕೋರ್ಟ್ ಪ್ರಕಟಿಸಿದ ಛ್ಠ್ಝಠಿಛ್ಟಿ ಕುರಿತಾದ ತೀರ್ಪನ್ನು ವರದಿ ಮಾಡಿದ ಹಲವರು, ಅದನ್ನು ವಿಪರೀತ ಸರಳೀಕರಿಸಿ ಈ ತನಕ ಶಿಕ್ಷಾರ್ಹ ಅಪರಾಧವಾಗಿದ್ದ ವ್ಯಭಿಚಾರ ಇನ್ನು ಮುಂದೆ ಶಿಕ್ಷಾರ್ಹ ಅಪರಾಧವಲ್ಲ ಎಂಬಂತೆ ವರದಿ ಮಾಡಿದರು. ಹಲವರು ಆ ಕಾರಣಕ್ಕಾಗಿಯೇ ಪ್ರಸ್ತುತ ತೀರ್ಪನ್ನು ಅನೈತಿಕ ಎಂದು ಖಂಡಿಸಿದರು. ನಿಜವಾಗಿ ನೈತಿಕತೆಯ ವಿಷಯದಲ್ಲಿ ನಮ್ಮಲ್ಲಿನ ವಿವಿಧ ಧಾರ್ಮಿಕ ವಲಯಗಳಲ್ಲಿ ಇರುವ ಕಟ್ಟು ನಿಟ್ಟಿನ ಪರಿಕಲ್ಪನೆಗಳಿಗೆ ಹೋಲಿಸಿದರೆ ನಮ್ಮ ಕಾನೂನು ವ್ಯವಸ್ಥೆಯ ಧೋರಣೆ ಮೊದಲಿಂದಲೇ ಬಹಳಷ್ಟು ಸಡಿಲವಾಗಿದೆ. ವ್ಯಭಿಚಾರದ ಒಂದೆರಡು ನಿರ್ದಿಷ್ಟ ಪ್ರಕಾರಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ನಮ್ಮ ಕಾನೂನುಗಳು ಬಹಳ ಹಿಂದೆಯೇ ಸಕ್ರಮಗೊಳಿಸಿಬಿಟ್ಟಿವೆ. ಪರಸ್ಪರ ಬಂಧುಗಳಲ್ಲದ ಮತ್ತು ಯಾವುದೇ ವೈವಾಹಿಕ ಸಂಬಂಧ ಇಲ್ಲದ ಸ್ತ್ರೀ ಪುರುಷರು ವರ್ಷಗಟ್ಟಲೆ ಒಂದೇ ಕೊಠಡಿಯಲ್ಲಿ ಜೊತೆಯಾಗಿ ಬದುಕುತ್ತಾ ಮಂಚ ಹಂಚಿಕೊಳ್ಳುತ್ತಿದ್ದರೂ ಅದು ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವಲ್ಲ. ಆದ್ದರಿಂದ, ವಸ್ತುಶಃ ವ್ಯಭಿಚಾರ ನಮ್ಮಲ್ಲಿ ಶಿಕ್ಷಾರ್ಹ ಅಪರಾಧವಾಗಿತ್ತು ಎಂಬ ನಂಬಿಕೆಯೇ ಒಂದು ಮೂಢ ನಂಬಿಕೆಯಾಗಿದೆ. ನಮ್ಮ ಸಮಾಜದಲ್ಲಿ ವ್ಯಭಿಚಾರ ಎಂಬ ಪದಕ್ಕಿರುವ ಪರಂಪರಾಗತ ಅರ್ಥಕ್ಕೂ ಕಾನೂನಿನ ಗ್ರಂಥಗಳಲ್ಲಿ ಬಳಸಲಾಗಿರುವ adultery    ಎಂಬ ಪದಕ್ಕೂ ಅಜಗಜಾಂತರವಿದೆ.

158 ವರ್ಷಗಳ ಇತಿಹಾಸವಿರುವ, ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 497 ಪ್ರಕಾರ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಅನುಮತಿ ಪಡೆದು ಆತನ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದರೆ ಅದೊಂದು ಶಿಕ್ಷಾರ್ಹ ಅಪರಾಧವೆನಿಸುವುದಿಲ್ಲ. ಇದೀಗ ಸೆಪ್ಟಂಬರ್27ರ ತನ್ನ ತೀರ್ಪಿನ ಮೂಲಕ ಸುಪ್ರೀಂ ಕೋರ್ಟು ಅನೂರ್ಜಿತ ಗೊಳಿಸಿರುವುದು, ಬಹಳ ದೋಷಪೂರ್ಣವಾಗಿದ್ದ ಈ ಸೆಕ್ಷನ್ 497 ಅನ್ನು. ಅದರ ಪ್ರಕಾರ, ಒಂದು ವೇಳೆ ಒಬ್ಬ ವ್ಯಕ್ತಿ ಒಬ್ಬ ಮಹಿಳೆಯ ಪತಿಯ ಅನುಮತಿ ಪಡೆಯದೆ ಆಕೆಯ ಜೊತೆ ಲೈಂಗಿಕ ಸಂಬಂಧ ಬೆಳೆಸಿದರೆ ಮಾತ್ರ ಅವನ ಕೃತ್ಯವು ಶಿಕ್ಷಾರ್ಹ ಅಪರಾಧವೆನಿಸಿಕೊಳ್ಳುತ್ತದೆ. ಆದರೆ ಇಲ್ಲಿ ಶಿಕ್ಷಾರ್ಹನಾಗುವುದು ಕೇವಲ ಪುರುಷನೇ ಹೊರತು ಸ್ತ್ರೀ ಅಲ್ಲ. ಒಂದು ವೇಳೆ ಪ್ರಸ್ತುತ ಸ್ತ್ರೀಯ ಅನುಮತಿ ಅಥವಾ ಒತ್ತಾಯದ ಮೇರೆಗೆ ಆ ಕೃತ್ಯ ನಡೆದಿದ್ದರೂ ಅದಕ್ಕಾಗಿ ಆಕೆ ಶಿಕ್ಷಾರ್ಹಳಾಗುವುದಿಲ್ಲ. ಹೆಚ್ಚೆಂದರೆ, ಆಕೆಯ ಕೃತ್ಯದಿಂದ ನೊಂದು ನೇರವಾಗಿ ಅದೇ ಕಾರಣದಿಂದ ಆಕೆಯ ಪತಿಯು ಆತ್ಮ ಹತ್ಯೆ ಮಾಡಿಕೊಂಡರೆ ಮಾತ್ರ ‘ಆತ್ಮಹತ್ಯೆಗೆ ಪ್ರಚೋದನೆ’ ನೀಡಿದ ಆರೋಪದಡಿ ಆಕೆಯನ್ನು ವಿಚಾರಣೆಗೆ ಒಳಪಡಿಸಬಹುದು ಅಥವಾ ಆಕೆಯ ವ್ಯಭಿಚಾರವು ಸಾಬೀತಾದಲ್ಲಿ ಅದು, ಆಕೆಯ ಪತಿಯು ಆಕೆಗೆ ವಿಚ್ಛೇದನ ನೀಡುವುದಕ್ಕೆ ಒಂದು ಸೂಕ್ತ ಕಾರಣವೆಂದು ಪರಿಗಣಿಸಬಹುದು. ಇದು ಆ ಕಾನೂನಿನ ಗಂಭೀರ ದೋಷ ಎಂಬುದರಲ್ಲಿ ಸಂಶಯವಿಲ್ಲ. ನಿಜವಾಗಿ ನಮ್ಮ ಪರಮೋಚ್ಚ ನ್ಯಾಯಾಲಯಕ್ಕೆ ವ್ಯಭಿಚಾರವನ್ನು ತಡೆಯುವ ಇರಾದೆ ಇದ್ದಿದ್ದರೆ ಅದು ಸೆಕ್ಷನ್ 497ರ ಈ ದೋಷವನ್ನು ನಿವಾರಿಸಲು, ಮುಖ್ಯವಾಗಿ ಎರಡು ಕೆಲಸಗಳನ್ನು ಮಾಡಬೇಕಿತ್ತು. ಮೊದಲನೆಯದಾಗಿ, ವ್ಯಭಿಚಾರವು ಪತಿಯ ಅನುಮತಿ ಇಲ್ಲದೆ, ಕೇವಲ ಹೆಣ್ಣಿನ ಅನುಮತಿಯಿಂದ ನಡೆದಿದ್ದರೆ ವ್ಯಭಿಚಾರಿ ಗಂಡು ಮತ್ತು ಹೆಣ್ಣು ಇಬ್ಬರನ್ನೂ ಸಮನಾಗಿ ಶಿಕ್ಷಾರ್ಹಗೊಳಿಸಬೇಕಿತ್ತು. ಎರಡನೆಯದಾಗಿ, ಪತಿಯ ಅನುಮತಿಯೊಂದಿಗೆ ವ್ಯಭಿಚಾರ ನಡೆದಿದ್ದರೆ ವ್ಯಭಿಚಾರವೆಸಗಿದ ಸ್ತ್ರೀ ಪುರುಷರಿಬ್ಬರಿಗೆ ಮಾತ್ರವಲ್ಲದೆ ಅದಕ್ಕೆ ಅನುಮತಿ ದಯಪಾಲಿಸಿದ ಆ ಹೆಣ್ಣಿನ ಪತಿಯನ್ನೂ ಶಿಕ್ಷೆಗೆ ಒಳಪಡಿಸಬೇಕಿತ್ತು. ಆದರೆ ನಮ್ಮ ಸುಪ್ರೀಂ ಕೋರ್ಟು ಕಾಳಜಿ ವಹಿಸಿರುವುದು ವ್ಯಭಿಚಾರದ ಬಗ್ಗೆ ಅಲ್ಲವೇ ಅಲ್ಲ. ಸೆಕ್ಷನ್ 497ರ ವಿರುದ್ಧ ಅರ್ಜಿ ಸಲ್ಲಿಸಿದ ಫಿರ್ಯಾದಿದಾರರ ಉದ್ದೇಶ ಕೂಡಾ ವ್ಯಭಿಚಾರವನ್ನು ತಡೆಯುವುದಾಗಿರಲಿಲ್ಲ.

ಹೆಣ್ಣು ತನ್ನ ಪತಿಯ ಮಾಲಕತ್ವದಲ್ಲಿರುವ ಒಂದು ಸರಕು ಅಲ್ಲವಾದ್ದರಿಂದ ವ್ಯಭಿಚಾರ ಸಮೇತ ಯಾವುದೇ ಕಾರ್ಯದಲ್ಲಿ ಹೆಣ್ಣಿನ ನಿರ್ಧಾರವು ಆಕೆಯ ಪತಿಯ ಅನುಮತಿಗೆ ಅಧೀನವಾಗಿರಬಾರದು ಎಂಬುದಷ್ಟೇ ಅರ್ಜಿದಾರರ ಹಾಗೂ ಕೋರ್ಟಿನ ಆಶಯವಾಗಿತ್ತು. ಈ ಮೂಲಕ ಅದು ಸ್ತ್ರೀ ಸ್ವಾತಂತ್ರ್ಯವನ್ನು ಹೊಸದೊಂದು ಮಜಲಿಗೆ ತಲುಪಿಸಿಬಿಟ್ಟಿದೆ. ವ್ಯಭಿಚಾರವೆಂಬ ಅಪರಾಧ ಪ್ರಕರಣದಲ್ಲಿ ಶಿಕ್ಷೆ ನೀಡುವ ವಿಷಯದಲ್ಲಿ ಹಿಂದಿನ ಕಾನೂನಿನಲ್ಲಿದ್ದ ಪಕ್ಷಪಾತ ಮತ್ತು ನ್ಯೂನತೆಯನ್ನು ನಿವಾರಿಸುವ ನೆಪದಲ್ಲಿ ಕೋರ್ಟು ಈ ವಿಷಯದಲ್ಲಿದ್ದ ಶಿಕ್ಷೆಯನ್ನೇ ಸಂಪೂರ್ಣವಾಗಿ ರದ್ದು ಪಡಿಸಿ ವ್ಯಭಿಚಾರವನ್ನು ದಂಡ ಸಂಹಿತೆಯ ವ್ಯಾಪ್ತಿಯ ಹೊರಗಟ್ಟಿ ಬಿಟ್ಟಿದೆ. ಈ ರೀತಿ ‘ಸ್ತ್ರೀಯನ್ನು ಪತಿಯ ದಾಸ್ಯದಿಂದ ಮುಕ್ತ ಗೊಳಿಸಿ ಆಕೆಗೆ ಸ್ವಾತಂತ್ರ್ಯ ಕೊಡಿಸುವ’ ಹೆಸರಲ್ಲಿ ಮತ್ತು ‘ವ್ಯಭಿಚಾರದ ವಿಷಯದಲ್ಲಿ ಆಕೆಗೆ ಪುರುಷ ಸಮಾನ ಹಕ್ಕನ್ನು ಕೊಡಮಾಡುವ’ ಹೆಸರಲ್ಲಿ ನಡೆದಿರುವ ಈ ಪ್ರಕ್ರಿಯೆ ಉಚಿತವಾಗೇನೂ ನಡೆದಿಲ್ಲ. ಈ ಪ್ರಕ್ರಿಯೆ ಸ್ತ್ರೀ ಪುರುಷರ ನಡುವಣ ಲೈಂಗಿಕ ಸಂಬಂಧವನ್ನು ಯಾವುದೇ ದೂರಗಾಮಿ ಪರಿಣಾಮಗಳಿಲ್ಲದ, ಕೇವಲ ಒಂದು ಶಾರೀರಿಕ ಕ್ರಿಯೆಯಾಗಿಸಿ ಅದನ್ನು ನೈತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ, ಪರಿಣಾಮಗಳ ಮತ್ತು ಜವಾಬ್ದಾರಿಗಳ ಚೌಕಟ್ಟಿನಿಂದ ಹೊರದಬ್ಬಿ ಬಿಡುತ್ತದೆ. ವಿವಾಹಬಾಹಿರ ಲೈಂಗಿಕ ಸಂಬಂಧವನ್ನು ಬೆಂಬಲಿಸುವ ಮೂಲಕ ಈ ತೀರ್ಪು ವಿವಾಹವೆಂಬ ಪರಂಪರಾಗತ ಸಂಸ್ಥೆಯಲ್ಲಿ ಮಹಿಳೆಗೆ ಇರುವ ಲಾಭ ಮತ್ತು ಭದ್ರತೆಗಳನ್ನು ಇಲ್ಲವಾಗಿಸಿ ಬಿಡುತ್ತದೆ. ಜೊತೆಗೆ ಅಂತಹ ಮಹಿಳೆಯರಿಗೆ ಜನಿಸುವ ಮಕ್ಕಳ ಭವಿಷ್ಯವನ್ನು ಕೂಡ ಅಭದ್ರಗೊಳಿಸಿಬಿಡುತ್ತದೆ. ಈ ಮೂಲಕ ಒಂದು ಅಸಂಬದ್ಧ ನಿಯಮವನ್ನು ತೊಲಗಿಸಿ ಅದಕ್ಕಿಂತ ಹೆಚ್ಚು ಅಸಂಬದ್ಧ ನಿಯಮವೊಂದನ್ನು ಸಮಾಜದ ಮೇಲೆ ಹೇರಲಾಗಿದೆ. ಇದು ಸಣ್ಣ ಬೆಲೆಯೇನೂ ಅಲ್ಲ.

 ಒಂದು ರೀತಿಯಲ್ಲಿ ನಮ್ಮ ನ್ಯಾಯಾಧೀಶರುಗಳು ಒಂದೊಂದಾಗಿ ವ್ಯಭಿಚಾರದ ವಿಭಿನ್ನ ಪ್ರಕಾರಗಳನ್ನು ಕ್ರಮೇಣ ಸಕ್ರಮಗೊಳಿಸುತ್ತಿದ್ದಾರೆ. ಮೂರು ವಾರಗಳ ಹಿಂದಷ್ಟೇ ಐಪಿಸಿ ಸೆಕ್ಷನ್ 377ರ ಕುರಿತು ತೀರ್ಪು ನೀಡಿದ ನಮ್ಮ ಸರ್ವೋಚ್ಚ ನ್ಯಾಯಾಲಯವು ಪರಸ್ಪರ ಸಹಮತದೊಂದಿಗೆ ನಡೆಯುವ ಸಲಿಂಗ ಕಾಮ ಅಪರಾಧವಲ್ಲ ಎಂದು ಘೋಷಿಸುವ ಮೂಲಕ ಸಲಿಂಗ ಕಾಮವನ್ನು ಸಕ್ರಮಗೊಳಿಸಿ ಬಿಟ್ಟಿತು. ವ್ಯಕ್ತಿಗತ ಸ್ವಾತಂತ್ರ್ಯ ಎಂಬುದು ಲಂಗು ಲಗಾಮಿಲ್ಲದ ಪರಮೋಚ್ಚ ಗುರಿಯಾಗಿಬಿಟ್ಟಾಗ, ಪರಸ್ಪರ ಸಹಮತವೇ ಸರಿ ತಪ್ಪುಗಳ ಅಂತಿಮ ಮಾನದಂಡವಾಗಿ ಬಿಟ್ಟಾಗ ಮತ್ತು ನೈತಿಕ ಮೌಲ್ಯಗಳು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲವೆಂಬಂತಾದಾಗ ಇಂತಹ ಬೆಳವಣಿಗೆ ಸಹಜ. ಗುರುವಾರ ಪ್ರಕಟವಾದ ಸುಪ್ರೀಂ ಕೋರ್ಟಿನ ಇನ್ನೊಂದು ತೀರ್ಪಿನ ಬಗ್ಗೆ ಕೂಡಾ ಸಾರ್ವಜನಿಕರಿಗೆ ತೀರಾ ಅಸಮರ್ಪಕ ಮಾಹಿತಿ ಒದಗಿಸಲಾಯಿತು. ಮುಸಲ್ಮಾನರು ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸಬೇಕೆಂಬ ನಿಯಮವೇನೂ ಇಸ್ಲಾಮ್ ಧರ್ಮದಲ್ಲಿ ಇಲ್ಲ ಎಂದು ಸುಪ್ರೀಂ ಕೋರ್ಟು ಪ್ರತಿಪಾದಿಸಿದೆ ಎಂಬ ವ್ಯಾಪಕ ಪ್ರಚಾರ ನಡೆಯಿತು. ಇದರಿಂದ ಮಸೀದಿ ಪಕ್ಷದವರು ಬಹಳ ದುಃಖಿತರಾದರು. ಮಸೀದಿ ವಿರೋಧಿಗಳು ಸಂಭ್ರಮಿಸಿದರು. ನಿಜವಾಗಿ ಸುಪ್ರೀಂ ಕೋರ್ಟು, ಮಸೀದಿ ಅಥವಾ ಪ್ರಾರ್ಥನೆಯ ಕುರಿತು ಯಾವುದೇ ಹೊಸ ತೀರ್ಪನ್ನು ನೀಡಿಲ್ಲ. ಮಾತ್ರವಲ್ಲ ಯಾರಾದರೂ ಈ ವಿಷಯದಲ್ಲಿ ಕೋರ್ಟ್‌ನಿಂದ ಹೊಸ ತೀರ್ಪನ್ನು ಅಪೇಕ್ಷಿಸಿಯೂ ಇರಲಿಲ್ಲ. ಬಾಬರಿ ಮಸೀದಿ - ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಹಳೆಯ ವ್ಯಾಜ್ಯವೊಂದು ಬಹುಕಾಲದಿಂದ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇದೆ ಮತ್ತು ಅದನ್ನು ವಿಚಾರಣೆಗೆ ಎತ್ತಿಕೊಳ್ಳಬೇಕಾದ ದಿನ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ವಿವಾದದ ಕುರಿತಂತೆ ಸುಪ್ರೀಂ ಕೋರ್ಟು ಸುಮಾರು 24 ವರ್ಷಗಳ ಹಿಂದೆ ಅಂದರೆ 1994ರಲ್ಲಿ ನೀಡಿದ್ದ ತೀರ್ಪಿನಲ್ಲಿ ಮುಸ್ಲಿಮರ ಧಾರ್ಮಿಕ ನಿಯಮಗಳ ಪ್ರಕಾರ ಆರಾಧನೆಗೆ ಮಸೀದಿ ಕಡ್ಡಾಯವಲ್ಲ ಆದ್ದರಿಂದ ಅಗತ್ಯ ಬಿದ್ದರೆ ಸರಕಾರವು ಮಸೀದಿಯ ಭೂಮಿಯನ್ನು ವಶಪಡಿಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ನಿಜವಾಗಿ ಅದು ಇಸ್ಲಾಮ್ ಧರ್ಮದ ಪ್ರಾಥಮಿಕ ತಿಳುವಳಿಕೆಯಾದರೂ ಇರುವ ಯಾರೊಬ್ಬರೂ ಅಂಗೀಕರಿಸಬಹುದಾದ ತೀರ್ಪಲ್ಲ.

ಏಕೆಂದರೆ, ನಿತ್ಯ ಐದು ಹೊತ್ತಿನ ನಮಾಝ್ ಅನ್ನು, ಶುಕ್ರವಾರದ ನಮಾಝ್ ಮತ್ತು ಪ್ರವಚನವನ್ನು ಮತ್ತು ಎರಡು ವಾರ್ಷಿಕ ಹಬ್ಬಗಳ ಸಂದರ್ಭದ ನಮಾಝ್ ಮತ್ತು ಪ್ರವಚನಗಳನ್ನು ಕ್ಲಪ್ತ ಸಮಯದಲ್ಲಿ ಸಾಮೂಹಿಕವಾಗಿ ಮಸೀದಿಯಲ್ಲೇ ನಿರ್ವಹಿಸಬೇಕು ಎಂಬುದು ಇಸ್ಲಾಮ್ ಧರ್ಮದಲ್ಲಿ ಎಲ್ಲ ಪಂಥಗಳು ಅಂಗೀಕರಿಸಿರುವ ನಿಲುವಾಗಿದೆ. 24 ವರ್ಷಗಳ ಹಿಂದಿನ ತೀರ್ಪೊಂದರಲ್ಲಿ ಹೇಳಲಾದ ಪ್ರಸ್ತುತ ಆಕ್ಷೇಪಾರ್ಹ ಮಾತುಗಳನ್ನು ಮಾತ್ರ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚಿಸಲಾಗಿದೆ. ಆ ಮಾತುಗಳು ಪಕ್ವವಲ್ಲದ್ದರಿಂದ ಅವುಗಳ ಕುರಿತು ತೀರ್ಮಾನವನ್ನು ಮರು ಪರಿಶೀಲನೆಗಾಗಿ ಒಂದು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕೆಂದು ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅದನ್ನು ಕೋರ್ಟು ಬಹುಮತದಿಂದ ತಿರಸ್ಕರಿಸಿದೆ. ಇದನ್ನೇ ಕೆಲವರು ಹೊಸ ತೀರ್ಪು ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಪ್ರಸ್ತುತ ಮೊಕದ್ದಮೆಯಲ್ಲಿದ್ದ ಮೂರು ಮಂದಿ ನ್ಯಾಯಾಧೀಶರುಗಳ ಪೈಕಿ ಒಬ್ಬರಾದ ನ್ಯಾ. ಎಸ್. ಅಬ್ದುಲ್ ನಝೀರ್ ಅವರು ತಮ್ಮ ಭಿನ್ನ ಮತೀಯ ತೀರ್ಪಿನಲ್ಲಿ ಹೇಳಿರುವಂತೆ, ಪ್ರಕರಣದ ಮಹತ್ವಕ್ಕೆ ಹೋಲಿಸಿದರೆ, 1994 ರ ತೀರ್ಪು ನೀಡಿದವರು ವಿಷಯದ ಕುರಿತು ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆ ನಡೆಸದೆ ಆ ತೀರ್ಪುನ್ನು ನೀಡಿರುವುದರಿಂದ ಅದನ್ನು ಮರುಪರಿಶೀಲಿಸುವುದಕ್ಕಾಗಿ ವಿಸ್ತೃತ ನ್ಯಾಯ ಪೀಠಕ್ಕೆ ಒಪ್ಪಿಸುವುದೇ ಸೂಕ್ತವಾಗಿದೆ. ಸದ್ಯ ಬಹುಸಂಖ್ಯೆಯ ಆಧಾರದಲ್ಲಿ ಈ ಅಭಿಮತವು ಸೋತಿದೆ. ಆದರೆ ಮಸೀದಿಯ ಪರ ಪಕ್ಷದವರು ಇದರಿಂದ ನಿರಾಶರಾಗಬೇಕಿಲ್ಲ. ಒಂದು ವಿಷಯದಲ್ಲಿ ಒಂದೇ ಕಾನೂನು ಇದ್ದಾಗಲೂ ಸುಪ್ರೀಂ ಕೋರ್ಟಿನ ನ್ಯಾಯಪೀಠದಲ್ಲಿ ಇರುವ ನ್ಯಾಯಾಧೀಶರುಗಳ ಒಲವುಗಳಿಗನುಸಾರ ವಿಭಿನ್ನ ತೀರ್ಪುಗಳು ಬಂದದ್ದಿದೆ. ಹಾಗೆಯೇ, ಅದು ತನ್ನ ತೀರ್ಪನ್ನು ತಾನೇ ಮರು ಪರಿಶೀಲಿಸಿ ಹಿಂದಿಗಿಂತ ಭಿನ್ನ ತೀರ್ಪು ನೀಡಿರುವ ದೃಷ್ಟಾಂತಗಳು ಕೂಡಾ ಸಾಕಷ್ಟಿವೆ. ಆದ್ದರಿಂದ ಪ್ರಸ್ತುತ ತೀರ್ಪಿನ ಬಗ್ಗೆ ಅಸಮಾಧಾನ ಇರುವವರು ಕಾನೂನು ಪ್ರಕಾರ ಪರ್ಯಾಯೋಪಾಯಗಳನ್ನು ಕಂಡುಕೊಳ್ಳುವುದು ಲೇಸು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)