ಬಾಲಿವುಡ್ 'ಅರ್ಜುನ್ರೆಡ್ಡಿ' ಶಹೀದ್
ತೆಲುಗಿನ ಸೂಪರ್ಹಿಟ್ ಚಿತ್ರ ‘ಅರ್ಜುನ್ರೆಡ್ಡಿ’ ಹಿಂದಿಗೆ ರಿಮೇಕ್ ಆಗಲಿದೆಯೆಂಬ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ ಆ ಚಿತ್ರದ ಪಾತ್ರವರ್ಗದಲ್ಲಿ ಯಾರ್ಯಾರಿರುವರೆಂಬ ಬಗ್ಗೆ ಬಾಲಿವುಡ್ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿತ್ತು. ತೆಲುಗಿನ ‘ಅರ್ಜುನ್ ರೆಡ್ಡಿ’ಯ ನಿರ್ದೇಶಕ ಸಂದೀಪ್ ವಾಂಗಾ ಅವರೇ ಚಿತ್ರದ ಬಾಲಿವುಡ್ ರಿಮೇಕ್ಗೂ ನಿರ್ದೇಶನದ ಸಾರಥ್ಯ ಹಿಡಿಯಲಿದ್ದಾರೆ. ಚಿತ್ರದ ನಾಯಕನಾಗಿ ಶಹೀದ್ ಕಪೂರ್ ಆಯ್ಕೆಯಾಗಿರುವುದು ಕೂಡಾ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ನಾಯಕಿಯಾಗಿ ನವನಟಿ ತಾರಾ ಸುತಾರಿಯಾ ಆಯ್ಕೆಯಾಗಿದ್ದರೆಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ. ಇದೀಗ, ಶಹೀದ್ಗೆ ನಾಯಕಿಯಾಗಿ ಇನ್ನೋರ್ವ ಉದಯೋನ್ಮುಖ ನಟಿ ಕೀರಾ ಅಡ್ವಾಣಿ ಅಭಿನಯಿಸಲಿರುವುದು ಇದೀಗ ಖಚಿತಪಟ್ಟಿದೆ.
ಹಾಗೆ ನೋಡಿದರೆ, ಅರ್ಜುನ್ ರೆಡ್ಡಿಯ ಬಾಲಿವುಡ್ ರಿಮೇಕ್ಗೆ ನಿರ್ದೇಶಕರು ಮೊದಲಿಗೆ ಪರಿಗಣಿಸಿದ್ದು ಕೀರಾ ಅಡ್ವಾಣಿಯನ್ನಂತೆ. ಎಲ್ಲಾ ಸರಿಹೋಗಿದ್ದರೆ, ಚಿತ್ರವು ಕಳೆದ ಆಗಸ್ಟ್ನಲ್ಲೇ ಸೆಟ್ಟೇರಬೇಕಿತ್ತು. ಆಗ ಕೀರಾ ಅಡ್ವಾಣಿ ಬೇರೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದ ಕಾರಣ ಸಂದೀಪ್, ನಾಯಕಿ ಪಾತ್ರಕ್ಕಾಗಿ ಬೇರೆ ನಟಿಯರ ಶೋಧ ಆರಂಭಿಸಿದ್ದರು. ಇದೀಗ ಚಿತ್ರದ ಶೂಟಿಂಗ್ ಆಕ್ಟೋಬರ್ನಲ್ಲಿ ಆರಂಭವಾಗಿರುವ ಕಾರಣ ಕೀರಾ ಅಡ್ವಾಣಿಗೆ ಕಾಲ್ಶೀಟ್ ನೀಡಲು ಸುಲಭವಾಯಿತು.
ತೆಲುಗಿನ ಅರ್ಜುನ್ ರೆಡ್ಡಿ ನನ್ನ ಅಚ್ಚುಮೆಚ್ಚಿನ ಚಿತ್ರಗಳ ಲ್ಲೊಂದಾಗಿದೆ. ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಹಲವಾರು ಆಯಾಮಗಳಿವೆ. ಹೀಗಾಗಿ ಅಭಿನಯ ಪ್ರದರ್ಶನಕ್ಕೆ ಈ ಚಿತ್ರದಲ್ಲಿ ಸಾಕಷ್ಟು ಅವಕಾಶಗಳಿವೆಯೆಂದು ಕೀರಾ ಸಂತಸ ವ್ಯಕ್ತಪಡಿಸಿದ್ದಾರೆ.