varthabharthiಸಂಪಾದಕೀಯ

ಮಾನವ ಮಲ ಹೊರುವವರಿಗೆ ಸ್ವಚ್ಛತೆ ಎಂದರೆ ಸೇವೆಯೇ?

ವಾರ್ತಾ ಭಾರತಿ : 1 Oct, 2018

ಪ್ರಧಾನಿ ಮೋದಿಯವರು ‘ಸ್ವಚ್ಛತಾ ಹೀ ಸೇವಾ’ ಎಂಬ ಘೋಷಣೆಯನ್ನು ಮಾಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಈ ದೇಶದಲ್ಲಿ ಸ್ವಚ್ಛತೆಗಾಗಿಯೇ ಕೋಟ್ಯಂತರ ಹಣವನ್ನು ಸುರಿಯಲಾಗುತ್ತಿದೆ ಮತ್ತು ಅಧಿಕಾರಿಗಳು, ಮಧ್ಯವರ್ತಿಗಳು ಆ ಹಣವನ್ನು ದೋಚುತ್ತಿದ್ದಾರೆ. ಹಾಗಾದರೆ, ಸ್ವಚ್ಛತೆಯೇ ಸೇವೆ ಎಂಬ ಹೇಳಿಕೆಯನ್ನು ಸರಕಾರ ಯಾರಿಗೆ ನೀಡುತ್ತಿದೆ? ಈ ದೇಶದಲ್ಲಿ ಬೀದಿ ಗುಡಿಸುವ, ಮಲ ಹೊರುವ ಕಾರ್ಮಿಕರಿಗೆ ಇಂತಹದೊಂದು ಕರೆಯನ್ನು ನೀಡುತ್ತಿದೆಯೇ? ದೇಶವನ್ನು ನಿಜವಾದ ಅರ್ಥದಲ್ಲಿ ಶುಚಿಗೊಳಿಸುತ್ತಿರುವ ಪೌರ ಕಾರ್ಮಿಕರ ಹೀನ ಬದುಕನ್ನು ಗಮನಿಸಿದರೆ, ಸರಿಯಾದ ವೇತನ, ಸರಿಯಾದ ಸಮಯಕ್ಕೆ ಸಿಗದೆ ಅವರನ್ನು ಶೋಷಿಸುತ್ತಿರುವುದನ್ನು ನೋಡುತ್ತಿದ್ದರೆ, ಮಲದ ಗುಂಡಿಯೊಳಗೆ ಅವರ ಬದುಕು ನಾಶವಾಗುತ್ತಿರುವುದನ್ನು ಗಮನಿಸಿದರೆ ಮೋದಿಯ ಸೇವೆಯ ಹೇಳಿಕೆ ಇಂತಹ ಪೌರ ಕಾರ್ಮಿಕರನ್ನು ಉದ್ದೇಶಿಸಿಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ತಮ್ಮ ಪುಸ್ತಕ ಕರ್ಮಯೋಗಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಡಮಾಲಿಗಳ ಕೆಲಸ ಒಂದು ಆಧ್ಯಾತ್ಮಿಕ ಅನುಭವ ಎಂದು ಹೇಳಿರುವುದನ್ನು ಸ್ಮರಿಸಿಕೊಳ್ಳಬೇಕು.

ಕೇವಲ ಶೌಚಾಲಯಗಳನ್ನು ನಿರ್ಮಿಸುವುದರ ಮೇಲೆ ಗಮನಹರಿಸಲಾಗಿರುವ ಸ್ವಚ್ಛತಾ ಆಂದೋಲನ, ಭಾರತದಲ್ಲಿ ಶೌಚಾಲಯಗಳ ಸ್ವಚ್ಛತೆ ವಿಷಯದಲ್ಲಿ ಜಾತಿಯ ಆಯಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇಂದು ರಸ್ತೆಯಲ್ಲಿ ಕೆಲ ನಿಮಿಷ ರಾಜಕಾರಣಿಗಳು ಕಸ ಗುಡಿಸುವ ಪ್ರಹಸನ ಮಾಡಿ ಕಾಣೆಯಾಗುತ್ತಾರೆ. ಆದರೆ ಬಳಿಕ ನಿಜವಾದ ಅರ್ಥದಲ್ಲಿ ಮಲ ಬಳಿಯುವವರು, ರಸ್ತೆ ಗುಡಿಸುವವರು ದಲಿತರೇ ಆಗಿದ್ದಾರೆ. ಹಾಗೆಯೇ ಭಾರತದಲ್ಲಿರುವ ಎಲ್ಲ ಶೌಚಾಲಯಗಳ ಗುತ್ತಿಗೆಗಳನ್ನು ಮೇಲ್ಜಾತಿಯವರು ವಹಿಸಿರುತ್ತಾರಾದರೂ, ಅದರ ಶುಚಿಗೊಳಿಸುವ ಕೆಲಸಗಳು ಮಾತ್ರ ಒಂದು ನಿರ್ದಿಷ್ಟ ಜಾತಿಯೇ ವಹಿಸಿಕೊಳ್ಳಬೇಕಾಗುತ್ತದೆ. ಈ ದೇಶ ಸ್ವಚ್ಛತೆಗೆ ಒಂದು ನಿರ್ದಿಷ್ಟ ಜಾತಿಯನ್ನಷ್ಟೇ ನೆಚ್ಚಿಕೊಂಡಿರುವುದು ಸ್ವಚ್ಛತಾ ಆಂದೋಲನದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. 2011ರ ಸಮೀಕ್ಷೆಯ ಪ್ರಕಾರ, ದೇಶಾದ್ಯಂತ 7,40,078 ಮನೆಗಳಲ್ಲಿ ಮಾನವ ಜಾಡಮಾಲಿಗಳು ಒಣ ಶೌಚಾಲಯಗಳಿಂದ ಮಲವನ್ನು ಹೊರತೆಗೆಯುತ್ತಾರೆ. ಗ್ರಾಮೀಣ ಭಾರತದಲ್ಲಿ 1,82,505 ಕುಟುಂಬಗಳು ಮಾನವ ಮಲ ಹೊರುವ ಕೆಲಸ ಮಾಡುತ್ತಿವೆ ಎಂದು 2011ರ ಸಮೀಕ್ಷೆ ತಿಳಿಸುತ್ತದೆ. ಭಾರತದಲ್ಲಿ ಮಲ ಹೊರುವ ಪದ್ಧತಿಯು ಈಗಲೂ ಪ್ರಚಲಿತದಲ್ಲಿದೆ ಎಂಬುದನ್ನು ಮೇಲಿನ ಅಂಕಿಅಂಶಗಳು ತೋರಿಸುತ್ತವೆ.

ಮಲ ಹೊರುವ ಪದ್ಧತಿಯು ಈಗಲೂ ಈ ಮಟ್ಟದಲ್ಲಿ ಆಚರಣೆಯಲ್ಲಿದೆ ಎಂದರೆ ಇದನ್ನು ತಡೆಯಲು ಕಾನೂನು ಮತ್ತು ಸರಕಾರದ ನೀತಿಗಳು ವಿಫಲವಾಗಿವೆ ಎಂದೇ ಹೇಳಬೇಕು. ಮಾನವ ಮಲಹೊರುವ ಉದ್ಯೋಗ ಮತ್ತು ಒಣ ಶೌಚಾಲಯಗಳ ನಿರ್ಮಾಣ (ತಡೆ) ಕಾಯ್ದೆ, 1993ರ ಅನುಷ್ಠಾನದಿಂದ ಒಂದಷ್ಟು ಭರವಸೆ ಮೂಡಿತ್ತಾದರೂ ಮುಂದಿನ ಮೂರೂವರೆ ವರ್ಷಗಳ ಕಾಲ ಈ ಕಾಯ್ದೆ ಅನುಷ್ಠಾನಕ್ಕೆ ಬಾರದೆ ನಿರುಪಯುಕ್ತವಾಯಿತು. 1993ರ ಕಾನೂನಿನ ನಿಬಂಧನೆಗಳನ್ನು ಜಾರಿ ಮಾಡಲು ರಾಜ್ಯಗಳನ್ನು ಬಲವಂತಪಡಿಸದ ಭಾರತದ ಒಕ್ಕೂಟ ರಚನೆಯೇ ಈ ಕಾನೂನು ವಿಫಲವಾಗಲು ಒಂದು ಕಾರಣ. ಕೇವಲ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಎರಡು ಸಾವಿರ ರೂ. ಅತೀ ಕನಿಷ್ಠ ದಂಡದ ಪರಿಣಾಮವಾಗಿ ಈ ಕಾಯ್ದೆಯು ಜನರ ಮೇಲೆ ಯಾವುದೇ ಪರಿಣಾಮ ಬೀರುವಲ್ಲಿ ಸೋತಿತು. ಈ ಕಾಯ್ದೆಯ ವೈಫಲ್ಯ ಹಲವು ಕಾನೂನು ಹೋರಾಟಗಳಿಗೆ ನಾಂದಿಯಾಯಿತು. ಅದರ ಫಲವಾಗಿ 2014ರ ಕೇಂದ್ರ ಸರಕಾರದ ವಿರುದ್ಧ ಸಫಾಯಿ ಕರ್ಮಚಾರಿ ಆಂದೋಲನ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಲ ಹೊರುವ ಕಾರ್ಮಿಕರ ಪುನರ್ವಸತಿಗಾಗಿ ಅನೇಕ ನಿರ್ದೇಶಗಳನ್ನು ನೀಡಿತು. ಸಫಾಯಿ ಕರ್ಮಚಾರಿ ಆಂದೋಲನ ಪ್ರಕರಣದಲ್ಲಿ ಸೂಚಿಸಲಾದ ಸಲಹೆಗಳನ್ನು ಅಳವಡಿಸಿಕೊಂಡು ಮಾನವ ಮಲ ಹೊರುವ ಉದ್ಯೋಗ (ತಡೆ) ಮತ್ತು ಅವರ ಪುನರ್ವಸತಿ ಕಾಯ್ದೆ 2013ನ್ನು ಜಾರಿಗೆ ತರಲಾಯಿತು.

ಭಾರತದ ಅನೇಕ ಶಾಸನಗಳಂತೆ 2013 ಕಾಯ್ದೆಯೂ ಸಮರ್ಪಕವಾಗಿ ಜಾರಿಗೆ ಬರಲಿಲ್ಲ. ಒಣ ಶೌಚಾಲಯಗಳು ಈಗಲೂ ಇವೆ ಮತ್ತು ಅವುಗಳನ್ನು ದಲಿತರು ಸ್ವಚ್ಛಗೊಳಿಸುವ ಕಾರ್ಯವೂ ಮುಂದುವರಿದಿದೆ. 2013ರ ಕಾಯ್ದೆಯಲ್ಲಿ ಪುನರ್ವಸತಿಯ ಬಗ್ಗೆ ತಿಳಿಸಲಾಗಿದ್ದರೂ ಅನುಷ್ಠಾನಕ್ಕೆ ಬಂದ ನಂತರ ಮುದ್ರಣಗೊಂಡ ನಿಯಮಗಳಲ್ಲಿ ಪುನರ್ವಸತಿಯ ಕುರಿತು ಯಾವುದೇ ಉಲ್ಲೇಖವಿಲ್ಲ. ಈ ಕಾನೂನಿನಲ್ಲಿ ಸ್ವಚ್ಛತಾ ಕಾರ್ಯದ ಸಮಯದಲ್ಲಿ ಕಾರ್ಮಿಕರಿಗೆ ಒದಗಿಸಬೇಕೆಂದು ತಿಳಿಸಲಾಗಿರುವ ರಕ್ಷಣೆಗಳನ್ನು ಆಡಳಿತವರ್ಗ ಒದಗಿಸುತ್ತಿಲ್ಲ. ಇದರಿಂದ ಮಲ ಹೊರುವ ಕಾರ್ಮಿಕರು ಅತ್ಯಂತ ಹೀನಾಯ ಸ್ಥಿತಿಗಳಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದು ಅವರ ಬದುಕೇ ಅಪಾಯದಲ್ಲಿದೆ.

   ಮಲ ಹೊರಲು ವ್ಯಕ್ತಿಯನ್ನು ಒತ್ತಾಯ ಮಾಡಿದ ಕಾರಣಕ್ಕೆ ಒಬ್ಬನೇ ಒಬ್ಬನಿಗೆ ಈವರೆಗೂ ಶಿಕ್ಷೆಯಾಗದಿರುವುದು ಈ ಕಾನೂನಿನ ಅನುಷ್ಠಾನದಲ್ಲಿ ಇರುವ ಕೊರತೆಯನ್ನು ತೋರಿಸುತ್ತದೆ. ಇದನ್ನು ಬದಲಾಯಿಸಲು ಸರಕಾರ ಆಸಕ್ತಿ ವಹಿಸಬೇಕು. ಜಿಲ್ಲಾ ಆಯುಕ್ತರು, ಪೊಲೀಸರು, ಪಂಚಾಯತ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಈ ಕಾನೂನಿನ ಬಗ್ಗೆ ಅರಿವು ಮೂಡಿಸಿ ಅದನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕು ಎಂಬುದನ್ನು ತಿಳಿಸಬೇಕು. ಸರಿಯಾದ ಸುರಕ್ಷಾ ಸಾಧನಗಳನ್ನು ಒದಗಿಸದೆ ಮಲ ಹೊರುವ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕ್ರಮ ಜರುಗಿಸುವಲ್ಲೂ ಸರಕಾರ ಕಠಿಣ ನಿಲುವು ತಾಳಬೇಕು. ಲೈಂಗಿಕ ಹಕ್ಕುಗಳ ಕುರಿತಂತೆ ನಮ್ಮ ಕಾನೂನು ವ್ಯವಸ್ಥೆ ಹೊಂದಿರುವ ಕಾಳಜಿ, ದಲಿತರ ಬದುಕುವ ಹಕ್ಕುಗಳ ಬಗ್ಗೆ ಯಾಕಿಲ್ಲ ಎನ್ನುವುದು ಪ್ರಶ್ನೆ. ಶಬರಿ ಮಲೆಗೆ ಮಹಿಳೆಯರು ಹೋಗಬೇಕೋ, ಬೇಡವೋ ಎನ್ನುವುದು ಸಾವು ಬದುಕಿನ ಪ್ರಶ್ನೆಯಲ್ಲ. ಆದರೆ, ಮಲದ ಗುಂಡಿಯಿಂದ ದಲಿತರನ್ನು ಮೇಲೆತ್ತುವುದು ಭಾರತದ ಘನತೆಯ ಅಳಿವು ಉಳಿವಿನ ಪ್ರಶ್ನೆ. ಈ ನಿಟ್ಟಿನಲ್ಲಿ ದೇಶ ಜಾಗೃತಗೊಂಡರೆ ಮಾತ್ರ, ಮೋದಿಯ ಸ್ವಚ್ಛತಾ ಆಂದೋಲನ ಯಶಸ್ವಿಯಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)