varthabharthi

ಸಂಪಾದಕೀಯ

ಪರೋಪಕಾರ ಅಪರಾಧವಲ್ಲ

ವಾರ್ತಾ ಭಾರತಿ : 2 Oct, 2018

ಈ ದೇಶದಲ್ಲೆಂದಲ್ಲ, ವಿಶ್ವದಲ್ಲೇ ಅತೀ ಹೆಚ್ಚು ಸಾವು ನೋವುಗಳು ಸಂಭವಿಸುವುದು ಯಾವುದೇ ಯುದ್ಧ ಭೂಮಿಗಳಲ್ಲ. ಬದಲಿಗೆ ಹೆದ್ದಾರಿಗಳಲ್ಲಿ. ಭಾರತವಂತೂ ರಸ್ತೆ ಅಪಘಾತಗಳಿಗೆ ಕುಖ್ಯಾತವಾಗಿದೆ. ದುರಂತವೆಂದರೆ, ಈ ಅಪಘಾತದಿಂದ ಸಾವುಗಳಾಗಲು ವಾಹನಗಳನ್ನು ಓಡಿಸಬೇಕೆಂದೇನಿಲ್ಲ. ಭಾರತದಲ್ಲಿ ಅಪಘಾತದ ಸಾವುನೋವುಗಳನ್ನು ವಿಶ್ಲೇಷಿಸಿದಾಗ ಕಳೆದ ವರ್ಷ ಪ್ರತಿ ದಿನ ಸರಾಸರಿ 56 ಪಾದಚಾರಿಗಳ ಜೀವಗಳನ್ನು ನಮ್ಮ ರಸ್ತೆಗಳು ಬಲಿ ಪಡೆದಿವೆ. 2014ರಲ್ಲಿ ನಡೆದ ಪಾದಚಾರಿಗಳ ಸಾವುಗಳನ್ನು ಗಮನಿಸಿದರೆ 2017ರಲ್ಲಿ ಸಾವಿನ ಸಂಖ್ಯೆ ಶೇ. 66ರಷ್ಟು ಹೆಚ್ಚಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇವು ಪಾದಚಾರಿಗಳ ಸಾವಿಗೆ ಸಂಬಂಧಿಸಿದ್ದಾಗಿದ್ದರೆ, ಇನ್ನು ವಾಹನಗಳಲ್ಲಿ ಕುಳಿತವರ ಸ್ಥಿತಿ ಏನಾಗಬೇಕು? 2016ರಲ್ಲಿ ಸುಮಾರು ಐದು ಲಕ್ಷ ಅವಘಡ ಪ್ರಕರಣಗಳು ಸಂಭವಿಸಿದ್ದು, ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿರುವುದನ್ನು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಭಾರತದಲ್ಲಿ ಅವಘಡಗಳು ಪ್ರಯಾಣಿಕರು ಅಥವಾ ಚಾಲಕರನ್ನು ನೇರವಾಗಿ ಮೃತ್ಯುವಿನ ಕಡೆಗೆ ಕೊಂಡೊಯ್ಯುವುದಕ್ಕೆ ಮುಖ್ಯ ಕಾರಣ ರಸ್ತೆ ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಅಪಘಾತ ನಡೆದ ತಕ್ಷಣ ಸಿಗಬೇಕಾದ ವೈದ್ಯಕೀಯ ನೆರವು ಸಿಗದೇ ಇರುವುದು. ತುರ್ತು ಚಿಕಿತ್ಸೆ ಸಿಗದೇ ಇರುವುದರಿಂದ, ನಡು ರಸ್ತೆಯಲ್ಲಿ ಅಥವಾ ಆಸ್ಪತ್ರೆಯ ಬಾಗಿಲಲ್ಲೇ ಗಾಯಾಳು ಮೃತಪಡಬೇಕಾಗುತ್ತದೆ. ದುರಂತ ಸಂಭವಿಸಿದಾಗ ಮಾನವೀಯ ಕೈಗಳು ನೆರವಿಗೆ ದೊರಕಿದರೆ ಈ ದೇಶದಲ್ಲಿ ಅದೆಷ್ಟೋ ಗಾಯಾಳುಗಳು ಸಾವಿಗೀಡಾಗದಂತೆ ತಡೆಯಬಹುದು. ಆದರೆ ಅಪಘಾತ ಸಂಭವಿಸಿದಾಗ ಜನಸಾಮಾನ್ಯರು ನೆರವಿಗೆ ಧಾವಿಸಲು ಇಷ್ಟವಿದ್ದರೂ, ಎಲ್ಲಿ ತಾವೇ ಅಪಘಾತದ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆಯೋ ಎಂಬ ಭಯದಲ್ಲಿ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಮಾನವೀಯತೆಯ ಸೋಲು ದೇಶದಲ್ಲಿ ಅಪಘಾತದಿಂದಾಗುವ ಸಾವುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಈ ನಿಟ್ಟಿನಲ್ಲಿ, ಕರ್ನಾಟಕ ಸರಕಾರ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅಪಘಾತದ ತಕ್ಷಣವೇ ವೈದ್ಯಕೀಯ ನೆರವು ನೀಡುವಂತಹ ಆಪತ್ಬಾಂಧವರಿಗೆ ರಕ್ಷಣೆ ಒದಗಿಸುವ ಕರ್ನಾಟಕ ಜೀವ ರಕ್ಷಕ ಮತ್ತು ವೈದ್ಯಕೀಯ ವೃತ್ತಿ ನಿರತರ ಮುಸೂದೆಗೆ ಇದೀಗ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಇದರಿಂದ ಜೀವ ರಕ್ಷಿಸಿದ ತಪ್ಪಿಗೆ ನ್ಯಾಯಾಲಯ, ಪೊಲೀಸ್ ಠಾಣೆಗಳಿಗೆ ಅಲೆದಾಡುವ ಜನಸಾಮಾನ್ಯರ ಆತಂಕ ದೂರವಾಗಿದೆ. ಈ ಮೂಲಕ, ರಾಜ್ಯ ಸರಕಾರ ಮಾನವೀಯತೆ ನಡು ರಸ್ತೆಯಲ್ಲಿ ವಿಲ ವಿಲ ಒದ್ದಾಡಿ ಸಾಯುವಂತಹ ದುರಂತಗಳನ್ನು ತಪ್ಪಿಸಿದೆ. ಒಬ್ಬ ಗಾಯಾಳು ಸಾವು ಬದುಕಿನ ನಡುವೆ ಒದ್ದಾಡುತ್ತಿರುವುದನ್ನು ಅಸಹಾಯಕವಾಗಿ ನೋಡುತ್ತಾ ನಿಂತರೆ ಆತನ ಸಾವಿನಲ್ಲಿ ನಾವು ಕೂಡ ಭಾಗಿಧಾರರೇ ಹೌದು. ಹೆಚ್ಚಿನ ಸಾವುಗಳು ಸಂಭವಿಸುವುದು ಅಪಘಾತಗಳಿಂದಲ್ಲ, ನಾಗರಿಕರೆಂದು ಕರೆಸಿಕೊಂಡವರ ಇಂತಹ ಬೇಜವಾಬ್ದಾರಿತನದಿಂದ. ಇದಕ್ಕಾಗಿ ಆ ನಾಗರಿಕರನ್ನಷ್ಟೇ ದೂರುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಯಾರಾದರೂ ತಕ್ಷಣ ನೆರವಿಗೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು ಎಂದೇ ಇಟ್ಟುಕೊಳ್ಳೋಣ. ಪೊಲೀಸರ ಮೊದಲ ಗುರಿಯೇ ಆ ಆಪತ್ಬಾಂಧವನಾಗಿರುತ್ತಾನೆ. ನೆರವಿಗೆ ಧಾವಿಸದ ಜನರು, ದುರಂತವನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ತಾಣಗಳಲ್ಲಿ ಹಾಕಿ ಲೈಕುಗಳನ್ನು ಪಡೆಯುತ್ತಿದ್ದರೆ, ನೆರವಿಗೆ ಧಾವಿಸಿದಾತ ಪೊಲೀಸರಿಂದ ಹತ್ತು ಹಲವು ಪ್ರಶ್ನೆಗಳಿಗೆ ಅಪರಾಧಿ ಸ್ಥಾನದಲ್ಲಿ ನಿಂತು ಉತ್ತರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಗಾಯಾಳು ಏನಾದರೂ ಮೃತಪಟ್ಟರೆ ಜೀವನ ಪರ್ಯಂತ ಠಾಣೆ, ನ್ಯಾಯಾಲಯ ಎಂದು ಅಲೆಯಬೇಕಾಗುತ್ತದೆ. ಇನ್ನೊಂದು ಅಪರಾಧಿ ವಲಯವೂ ಈ ಅಪಘಾತಗಳ ಹಿಂದೆ ಸುತ್ತಿಕೊಂಡಿದೆ. ಯಾವುದೇ ಅಪಘಾತ ನಡೆದಾಕ್ಷಣ ಅಲ್ಲಿಗೆ ತಕ್ಷಣ ಹಾಜರಾಗಿ ಅವರನ್ನು ನಿರ್ದಿಷ್ಟ ಆಸ್ಪತ್ರೆಗಳಿಗೆ ಹೊತ್ತೊಯ್ದು ಗಾಯಾಳುಗಳಿಂದ ಹಣ ಸುಲಿಯುವ ದಂಧೆಯೊಂದು ನಡೆಯುತ್ತಿದೆ. ಆಸ್ಪತ್ರೆಗಳಿಂದ ಪರೋಕ್ಷವಾಗಿ ನೇಮಿಸಲ್ಪಟ್ಟಿರುವ ಇವರು, ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗಳಿಗೆ ದಾಖಲಿಸದೇ ದುಬಾರಿ ಆಸ್ಪತ್ರೆಗಳಿಗೆ ಕೊಂಡೊಯ್ಯುತ್ತಾರೆ. ಇವರಿಗೂ ಪೊಲೀಸ್ ಇಲಾಖೆಗಳ ನಡುವೆ ಅನೈತಿಕ ಒಪ್ಪಂದವೊಂದಿರುತ್ತದೆ. ಈ ಕಾರಣದಿಂದಲೇ ಪ್ರಾಮಾಣಿಕನಾಗಿರುವ ಒಬ್ಬ, ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಅಕಾರಣ ಅಡೆತಡೆಗಳು ಎದುರಾಗುತ್ತವೆ.

ಹೊಸ ಮಸೂದೆ ಆಪತ್ಬಾಂಧವರಿಗೆ ಹಲವು ರೀತಿಯಲ್ಲಿ ನೆರವಾಗುತ್ತದೆ. ಮೊದಲಾದರೆ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸಿದಾತ ಪೊಲೀಸರು ಬಂದು ವಿಚಾರಣೆ ನಡೆಸುವವರೆಗೆ ಅಲ್ಲೇ ಉಳಿಯಬೇಕಾಗಿತ್ತು. ಆತನ ಹೆಸರು, ದೂರವಾಣಿ ಸಂಖ್ಯೆ, ವಿಳಾಸವನ್ನು ಕಡ್ಡಾಯವಾಗಿ ನೀಡಬೇಕಾಗಿತ್ತು. ಆದರೆ ಮಸೂದೆಯಿಂದಾಗಿ ಇನ್ನು ಮುಂದೆ ಆಪತ್ಬಾಂಧವ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ತೆರಳಬಹುದಾಗಿದೆ. ಒಂದು ವೇಳೆ, ಆತ ಮಾಡಿದ ಸೇವೆಯನ್ನು ಪ್ರಶ್ನಿಸಿ ಪೊಲೀಸ್ ಅಧಿಕಾರಿಗಳು ಅಥವಾ ವೈದ್ಯರು ಸಮಸ್ಯೆ ಉಂಟು ಮಾಡಿದರೆ ಅಂಥವರ ವಿರುದ್ಧ ದೂರು ದಾಖಲಿಸುವ ಅಧಿಕಾರವೂ ಆಪತ್ಬಾಂಧವನಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಪರೋಪಕಾರಿಗಳಿಗೆ ಸರಕಾರವೇ ಆರ್ಥಿಕ ನೆರವನ್ನು ನೀಡಲಿದೆ. ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಮತ್ತೆ ಮತ್ತೆ ಹಾಜರಾಗುವುದರಿಂದ ವಿನಾಯಿತಿ ಮಾತ್ರವಲ್ಲ, ಒಂದು ವೇಳೆ ಹಾಜರಾಗಲೇಬೇಕು ಎನ್ನುವಂತಹ ಸನ್ನಿವೇಶ ನಿರ್ಮಾಣವಾದರೆ ಅದಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇಡೀ ದೇಶದಲ್ಲೇ ಇಂತಹದೊಂದು ಮಸೂದೆಯನ್ನು ಮೊದಲಬಾರಿಗೆ ಕರ್ನಾಟಕ ಜಾರಿಗೆ ತರಲು ಹೊರಟಿದೆ. ಖಂಡಿತವಾಗಿಯೂ ಇದು ಮುಂದಿನ ದಿನಗಳಲ್ಲಿ ಅಪಘಾತಗಳಿಂದಾಗುವ ಸಾವುನೋವುಗಳನ್ನು ಇಳಿಕೆ ಮಾಡಲಿದೆ.

ಕರ್ನಾಟಕ ಈ ನಿಟ್ಟಿನಲ್ಲಿ ಇತರೆಲ್ಲ ರಾಜ್ಯಗಳಿಗೆ ಮಾದರಿಯಾಗಬೇಕಾಗಿದೆ. ಇದು ಕೇವಲ ಗಾಯಾಳುಗಳ ಪ್ರಾಣವನ್ನಷ್ಟೇ ಉಳಿಸುವುದಿಲ್ಲ. ಜನರಲ್ಲಿ ಅಳಿದುಳಿದ ಮಾನವೀಯತೆ ಸಾಯದಂತೆ ನೋಡಿಕೊಳ್ಳುತ್ತದೆ. ಆಪತ್ಬಾಂಧವನನ್ನು ಸರಕಾರವೂ ಗುರುತಿಸುವುದರಿಂದ ನೆರವಿಗೆ ಧಾವಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಜನರಲ್ಲಿ ಪರೋಪಕಾರ ಮನಸ್ಥಿತಿ ಬೆಳೆಯುತ್ತದೆ. ಇದು ಕೇವಲ ರಸ್ತೆ ಅಪಘಾತಕ್ಕೆ ಮಾತ್ರ ಅನ್ವಯವಾಗಬೇಕಾಗಿಲ್ಲ. ಯಾರೋ ಒಬ್ಬ ಕ್ರಿಮಿನಲ್‌ನ ಚೂರಿಗೆ ಬಲಿಯಾದವನನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸುವ ಆಪತ್ಬಾಂಧವನಿಗೂ ಅನ್ವಯಿಸಬೇಕು. ಪರೋಪಕಾರ, ನೆರವು, ಮಾನವೀಯತೆ ಇವೆಲ್ಲ ಅಪರಾಧ ಅಲ್ಲ ಎನ್ನುವುದನ್ನು ನಮ್ಮ ಕಾನೂನು ಜನರಿಗೆ ಬಹಿರಂಗವಾಗಿ ಸಾರುವಂತಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)