varthabharthi

ಅನುಗಾಲ

ಸರ್ವೋಚ್ಚ ವಿರೋಧಾಭಾಸಗಳು

ವಾರ್ತಾ ಭಾರತಿ : 4 Oct, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಯಾರಾದರೊಬ್ಬ ಸಾರ್ವಜನಿಕವಾಗಿ ತನ್ನ ಪ್ರಾರ್ಥನೆಯನ್ನೋ ಇನ್ನಿತರ ಧಾರ್ಮಿಕ ಆಚರಣೆಯನ್ನೋ ಮಾಡಿದರೆ ಅದನ್ನು ಸಾರ್ವಜನಿಕ ಹಿತ-ಶಾಂತಿಗೆ ವಿರೋಧವಾಗುತ್ತದೆಂಬ ನೆಪ ಹೇಳಿ ನಿಷೇಧಿಸುವುದಾದರೂ ಹೇಗೆ? ಇನ್ನೂ ಮುಂದೆ ಯೋಚಿಸಿದರೆ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಅಯೋಧ್ಯಾ ವಿವಾದದಲ್ಲಿ ಮಂದಿರದ ಅಗತ್ಯವಾದರೂ ಏನಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ನೀಡಿದ ತೀರ್ಪನ್ನು ಅನುಸರಿಸಿ ತೀರ್ಮಾನಿಸಿದರೆ ಆಗ ಮತೀಯ ಶಕ್ತಿಗಳಿಂದ ಸಂಭವಿಸಬಹುದಾದ ಕಷ್ಟ-ನಷ್ಟವನ್ನು ತಾಳಿಕೊಳ್ಳುವವರು ಯಾರು?


ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಜನಸಾಮಾನ್ಯರಿಂದ ನಗೆಯನ್ನು ಉಕ್ಕಿಸಿವೆ; ವ್ಯಂಗ್ಯವನ್ನು ಸೃಷ್ಟಿಸಿವೆ. ಇದನ್ನು ಅಜ್ಞಾನವೆಂದು ತಳ್ಳಿಹಾಕಿದರೆ ಅಪಾಯವು ಕಟ್ಟಿಟ್ಟದ್ದು. ಏಕೆಂದರೆ ಇಂದು ಶ್ರೀಸಾಮಾನ್ಯರು ತಮಗನ್ನಿಸಿದ್ದನ್ನೆಲ್ಲ ಹೇಳುವುದಕ್ಕೆ ತೊಡಗಿದ್ದಾರೆ ಎನ್ನುವುದಕ್ಕಿಂತಲೂ ಹಾಗೆ ಹೇಳುವುದಕ್ಕೆ ಅವರು ಭಯಪಡುತ್ತಿಲ್ಲ ಎನ್ನುವುದೇ ಮುಖ್ಯ. ಆದ್ದರಿಂದ ಸರಳ, ಸಾಮಾನ್ಯ ಅಭಿಪ್ರಾಯಗಳ ಸಮಗ್ರೀಕರಣದಲ್ಲಿರುವ ಯಥಾರ್ಥ ತಿರುಳನ್ನು ಅವಲೋಕಿಸುವುದು ಮತ್ತು ಅದನ್ನು ಭೌದ್ಧಿಕ ವಲಯದಲ್ಲಿ ನಿಕಷಕ್ಕೆ ಒಡ್ಡುವುದು ಉಚಿತ.

ರಾಜಕಾರಣವು ಎಷ್ಟೊಂದು ಕಳಪೆಯಾಗಿದೆಯೆಂದರೆ ಈಗ ಮೇಲ್ಮನೆ, ಕೆಳಮನೆಯೆಂಬ ವ್ಯತ್ಯಾಸವಿಲ್ಲದೆ ಎಲ್ಲ ರಾಜಕೀಯಮನೆಗಳೂ ಪ್ರಜೆಗಳಿಗೆ ನಿಲುಕದ ಅತಂತ್ರ ಇಲ್ಲವೇ ಹೊಣೆಗೇಡಿ ಮನೆಗಳಾಗಿವೆ. ಮಾಧ್ಯಮಗಳು ಮತ್ತು ಅಧಿಕಾರಶಾಹಿ ತಮ್ಮ ಗುರುತರ ಜವಾಬ್ದಾರಿಯನ್ನು (ಅಪವಾದಗಳನ್ನು ಹೊರತುಪಡಿಸಿ) ಸರಿಯಾಗಿ ನಿರ್ವಹಿಸುತ್ತಿಲ್ಲವಾದ್ದರಿಂದ ಮತ್ತು ರಾಜಕಾರಣಿಗಳೊಡನೆ ಶಾಮೀಲಾಗುತ್ತಿರುವುದರಿಂದ ಜನರು ಅನಿವಾರ್ಯವಾಗಿ ನ್ಯಾಯಾಂಗದ ಕಡೆ ಮುಖಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ಕ್ರಿಯಾಶೀಲವಾಗಿರಬೇಕಾದ್ದು ಸ್ವಾಗತಾರ್ಹ. ದೇಶದ ಎಲ್ಲೆಡೆ ನ್ಯಾಯಾಲಯಗಳು ನಿಗದಿತ ವಿಧಿ- ವಿಧಾನಗಳಡಿ ಸಾಕಷ್ಟು ಕೆಲಸಮಾಡುತ್ತಿವೆ. ಆದರೆ ದೇಶವನ್ನು, ಸಮಾಜವನ್ನು ಕಾಡುವ ಅಶಾಂತಿ, ಬಿಕ್ಕಟ್ಟು, ಅವ್ಯವಸ್ಥೆ-ಇವು ಸಾಂವಿಧಾನಿಕ, ಇಲ್ಲವೇ ಕಾನೂನಿನ ಸ್ವರೂಪದ ಅಥವಾ ವ್ಯಾಖ್ಯಾನ/ವಿವಾದದ ಹಂತವನ್ನು ತಲುಪಿದಾಗ ಅಥವಾ ಮೂಲೆಯ ಬೆಂಕಿ ಕಾಡನ್ನೇ ಸುಡಲಾರಂಭಿಸಿದಾಗ, ಅದನ್ನು ತಿಳಿಗೊಳಿಸುವುದು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಕರ್ತವ್ಯವಾಗುತ್ತದೆ.

ಈಚೆಗೆ ಈ ಮಾದರಿಯ ಕೆಲವು ತೀರ್ಪುಗಳು ಸರ್ವೋಚ್ಚ ನ್ಯಾಯಾಲಯದ ಮುಖದಿಂದ ಹೊರಬಂದವು. ಇವು ಒಮ್ಮತದ ಇಲ್ಲವೇ ಬಹುಮತದ ತೀರ್ಪುಗಳು ಎಂಬ ವಿಭಜನೆ ಸಲ್ಲದು. ಏಕೆಂದರೆ ಒಟ್ಟಿನಲ್ಲಿ ಅನುಷ್ಠಾನಗೊಳ್ಳಲಿರುವ ಅಭಿಪ್ರಾಯವೇ ವಾಸ್ತವದ್ದು. ಉಳಿದಂತೆ ಭಿನ್ನಮತದ ಅಭಿಪ್ರಾಯಗಳು/ತೀರ್ಪುಗಳು ಬೌದ್ಧಿಕ ಕಸರತ್ತಿಗೆ, ವ್ಯಾಯಾಮಕ್ಕೆ ಆಹಾರವಾಗುತ್ತವೆಯೇ ಹೊರತು, ಮುಂದೆ ಎಂದೋ ಅವು ಬಹುಮತವನ್ನೋ ಒಮ್ಮತವನ್ನೋ ಕಾಣುವ ವರೆಗೆ ಕಾಗದದಲ್ಲಷ್ಟೇ ಉಳಿಯುತ್ತವೆ.

ಆಧಾರ್ ಎಂಬ ಒಂದು ಯೋಜನೆ ಕಾಂಗ್ರೆಸ್ ಸರಕಾರದ್ದು. ಇದರ ಅನುಷ್ಠಾನದ ನಾಯಕತ್ವವನ್ನು ಖ್ಯಾತ ತಂತ್ರಜ್ಞಾನ ಉದ್ಯಮಿ ನಂದನ್ ನಿಲೇಕಣಿ ವಹಿಸಿದರು. ಸ್ವತಂತ್ರ ಭಾರತದ ಅತ್ಯಂತ ವಿಸ್ತೃತ ಯೋಜನೆ ಇದಾಗಿತ್ತು. ತೆರಿಗೆದಾರರ ಕೋಟ್ಯಂತರ ರೂಪಾಯಿಯನ್ನು ದೋಚಿದರೆಂದು ಅವರನ್ನು ಟೀಕಿಸಿದವರು, ಅವರನ್ನು ಜೈಲುಪಾಲಾಗಿಸುತ್ತೇವೆಂದು ಹೇಳಿದವರೇ ಅವರ ಈ ಯೋಜನೆಯನ್ನು ಜಾರಿಗೆ ತಂದರೆಂಬುದು ವಿಪರ್ಯಾಸ ಮತ್ತು ವ್ಯಂಗ್ಯ.
  
ಈ ಕುರಿತ ತೀರ್ಪಿನಲ್ಲಿ ಪ್ರಜೆಯ ಖಾಸಗಿತನದ ಹಕ್ಕಿನ ಕುರಿತು ಸಾಕಷ್ಟು ವಾದ-ಪ್ರತಿವಾದಗಳು ನಡೆದವು. ಕೊನೆಗೂ ಸರ್ವೋಚ್ಚ ನ್ಯಾಯಾಲಯವು ಅಡ್ಡಗೋಡೆಯ ಮೇಲಿನ ದೀಪದಂತಹ ತೀರ್ಪನ್ನು ನೀಡಿತು. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಸರಕಾರದ ಯೋಜನೆಗಳ ಫಲಾನುಭವಕ್ಕೆ ಮಾತ್ರ ಆಧಾರ್ ಅನ್ವಯವಾಗಬೇಕೆಂಬ ಸಿದ್ಧಾಂತದಡಿ ಇತರ ವ್ಯವಹಾರಕ್ಕೆ ಮೊಬೈಲ್ ಮುಂತಾದ ಸೌಕರ್ಯಗಳ ನೋಂದಣಿಗೆ ಆಧಾರ್ ಆಧಾರವಾಗಿರಕೂಡದೆಂದು ಅಭಿಪ್ರಾಯಪಟ್ಟಿತು. ಖಾಸಗಿ ವಲಯದವರು ಆಧಾರ್‌ನ್ನು ಅಪೇಕ್ಷಿಸಬಾರದೆಂದು ಹೇಳಿತು. ಶಾಲೆ-ಕಾಲೇಜುಗಳ ಸೇರ್ಪಡೆಗೆ ಆಧಾರ್ ಬೇಕಿಲ್ಲವೆಂದು ಹೇಳಿತು. ಉಳಿದಂತೆ ಸರಕಾರವು ಆಧಾರ್‌ನ್ನು ಜಾರಿಮಾಡಬಹುದೆಂದು ಹೇಳಿತು. ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಬೇಡ; ಆದರೆ ಪ್ಯಾನ್ ಬೇಕು. ಪ್ಯಾನ್‌ಗೆ ಆಧಾರ್ ಬೇಕು ಎಂಬ ಸಂದಿಗ್ಧವನ್ನು ಬಗೆಹರಿಸದಾಯಿತು. ಆದರೆ ಈ ತೀರ್ಪು ಮೂಲಭೂತವಾಗಿ ಮನುಷ್ಯನ ಖಾಸಗಿತನದ ಮೇಲೆ ಹಲ್ಲೆಯಲ್ಲವೇ ಎಂಬ ಬಗ್ಗೆ ನಿಷ್ಠುರವಾಗಿ ಏನನ್ನೂ ಹೇಳದಾಯಿತು.

ಜಾರ್ಜ್ ಆರ್ವೆಲ್‌ನ 1984 ಕೃತಿಯನ್ನೋದಿದವರು ಇಂತಹ ಕೇಂದ್ರೀಕೃತ ಸಿಸಿ ಟಿವಿಯ ಭೀಕರತೆಯನ್ನು ಅರ್ಥಮಾಡಿಕೊಂಡಾರು. ಜಾನಪದ ಕಥೆಗಳಲ್ಲಿ ಅಂಜನ ಹಾಕಿ ಇಡೀ ಜಗತ್ತಿನ ಕಡೆ ನೋಟ ಬೀರುವಂತೆ ಈ ಒಂದು ಯೋಜನೆ ದೇಶದ ಎಲ್ಲ ಪ್ರಜೆಗಳನ್ನೂ ಒಂದು ಪಂಜರದಲ್ಲಿ ಬಂಧಿಸುತ್ತದೆಯೆಂಬ ಸಾಧ್ಯತೆಯ ಕುರಿತು ಸರ್ವೋಚ್ಚ ನ್ಯಾಯಾಲಯವು ಏನನ್ನೂ ಹೇಳಲು ವಿಫಲವಾಯಿತು. ನಮಾಝ್ ಮಾಡಲು, ಇಲ್ಲವೇ ಇಸ್ಲಾಮ್ ಧಾರ್ಮಿಕ ಆಚರಣೆಗೆ ಮಸೀದಿಯೆಂಬ ಕೇಂದ್ರ ಬೇಕೇ ಬೇಡವೇ ಎಂಬ ವಿವಾದದಲ್ಲಿ, ಸರ್ವೋಚ್ಚ ನ್ಯಾಯಾಲಯವು ಬಹುಮತದ ತೀರ್ಪಿನಲ್ಲಿ ಮಸೀದಿಯು ಅನಿವಾರ್ಯವಲ್ಲ ಎಂದು ಸಾರಿತು. ಇದು ಮಸೀದಿಗೆ ಮಾತ್ರವಲ್ಲ, ಮುಂದೆ ಚರ್ಚುಗಳಿಗೂ ಮಂದಿರಗಳಿಗೂ ಗುರುದ್ವಾರಗಳಿಗೂ ಅನ್ವಯಿಸಬಹುದು.

ಈ ಸಮಸ್ಯೆಯನ್ನು ವಿಶೇಷವಾಗಿ ಯಾರೂ ಚರ್ಚಿಸಿದಂತಿಲ್ಲ. ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಬಹುಸಂಖ್ಯಾತರು-ಅಲ್ಪಸಂಖ್ಯಾತರು ಎಂಬ ವಿಂಗಡಣೆಯು ಭಿನ್ನ ಮತ್ತು ಅನಪೇಕ್ಷಿತ ದಿಕ್ಕಿನಲ್ಲಿ ತನ್ನ ಸ್ಪಷ್ಟತೆಯನ್ನು ಕಂಡುಕೊಳ್ಳುತ್ತಿರುವಾಗ ಈ ತೀರ್ಪನ್ನು ಸ್ವಾಗತಿಸಿದವರ ಸಂಖ್ಯೆಯೇ ಹೆಚ್ಚು. ಯಾರಾದರೊಬ್ಬ ಸಾರ್ವಜನಿಕವಾಗಿ ತನ್ನ ಪ್ರಾರ್ಥನೆಯನ್ನೋ ಇನ್ನಿತರ ಧಾರ್ಮಿಕ ಆಚರಣೆಯನ್ನೋ ಮಾಡಿದರೆ ಅದನ್ನು ಸಾರ್ವಜನಿಕ ಹಿತ-ಶಾಂತಿಗೆ ವಿರೋಧವಾಗುತ್ತದೆಂಬ ನೆಪ ಹೇಳಿ ನಿಷೇಧಿಸುವುದಾದರೂ ಹೇಗೆ? ಇನ್ನೂ ಮುಂದೆ ಯೋಚಿಸಿದರೆ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಅಯೋಧ್ಯಾ ವಿವಾದದಲ್ಲಿ ಮಂದಿರದ ಅಗತ್ಯವಾದರೂ ಏನಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ನೀಡಿದ ತೀರ್ಪನ್ನು ಅನುಸರಿಸಿ ತೀರ್ಮಾನಿಸಿದರೆ ಆಗ ಮತೀಯ ಶಕ್ತಿಗಳಿಂದ ಸಂಭವಿಸಬಹುದಾದ ಕಷ್ಟ-ನಷ್ಟವನ್ನು ತಾಳಿಕೊಳ್ಳುವವರು ಯಾರು?

ಇವು ಸ್ವಲ್ಪಗಂಭೀರ ಸಮಸ್ಯೆಗಳನ್ನು ತಂದೊಡ್ಡಿದರೆ ಇನ್ನು ಕೆಲವು ತೀರ್ಪುಗಳು ನಗೆಪಾಟಲನ್ನು, ಅಪಹಾಸ್ಯವನ್ನು ತಂದೊಡ್ಡಿವೆ. ಭಾರತೀಯ ದಂಡ ಸಂಹಿತೆಯ 377ನೇ ಕಲಮಿನಡಿ ಅಪರಾಧಗಳಾಗುತ್ತಿದ್ದ ನಡತೆಗಳು ಅಸಾಂವಿಧಾನಿಕವೆಂದು ಸರ್ವೋಚ್ಚ ನ್ಯಾಯಾಲಯವು ಸಾರಿದೆ. ಈ ಕಲಮಿನಡಿ ನ್ಯಾಯಾಲಯದ ಮೆಟ್ಟಲೇರಿದ ಸಾವಿರಾರು ಪ್ರಕರಣಗಳಿವೆ. ನಮ್ಮ ಪುರಾಣದಲ್ಲೂ ಹರಿ-ಹರ ಸುತನ ಕಲ್ಪನೆಯಿದೆ. ಆದರೆ ಈ ತೀರ್ಪಿನಿಂದಾಗಿ ಸಲಿಂಗ ಕಾಮವು ಮಾತ್ರವಲ್ಲ ಜೀವಿಗಳ ಯಾವುದೇ ದೈಹಿಕ, ಲೈಂಗಿಕ ಸಂಬಂಧವು ಕಾನೂನುಬದ್ಧವಾಗಿದೆ. ಪ್ರಾಣಿಗಳು ದೂರು ಸಲ್ಲಿಸುವುದಿಲ್ಲವಲ್ಲ! ಇತ್ತೀಚೆಗೆ ಹರ್ಯಾಣದಲ್ಲಿ ಆಡಿನ ಮೇಲೆ ಮನುಷ್ಯರು ಅತ್ಯಾಚಾರ ನಡೆಸಿದ ಪ್ರಕರಣವೊಂದು ನಡೆದು ಭಾರತವು ವಿಶ್ವದೆದುರು ತಲೆತಗ್ಗಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಇಂತಹ ತೀರ್ಪು ಬಂದಾಗ ಇದರ ಬಹುಮುಖೀ ಪರಿಣಾಮವೇನೆಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗಿ ವಿವರಿಸಿಲ್ಲ. ಸರ್ವೋಚ್ಚ ನ್ಯಾಯಾಲಯವು ಗಯಟೆ, ಮಿಲ್, ಶೇಕ್ಸ್‌ಪಿಯರ್ ಮುಂತಾದವರ ದಾರ್ಶನಿಕ ಮಾತುಗಳನ್ನು ಸಾಕಷ್ಟು ಉಲ್ಲೇಖಿಸಿದೆಯಾದರೂ ಇಂತಹ ಸಂಬಂಧಗಳು ಯಾವ ಕಾನೂನಿನಡಿ ವಿವಾಹವೋ ಅಥವಾ ಇನ್ನೇನೋ ಆಗುತ್ತವೆಂದು ಪರಿಣತರಿಗೂ ಗೊತ್ತಿಲ್ಲ. ಮನುಷ್ಯನ ಸ್ವಾಯತ್ತತೆ, ಸ್ವಾತಂತ್ರ್ಯ ಯಾವುದೇ ಮಾದರಿಯನ್ನೂ ಪಡೆಯಬಹುದೆಂಬುದಕ್ಕೆ ಈ ತೀರ್ಪೇ ಸಾಕ್ಷಿ. ಭಾರತೀಯ ಸಮಾಜವು ಎದುರಿಸದ ಸಂದಿಗ್ಧಗಳು ಮುಂದೆ ನಡೆಯಬಾರದಂತೆ ಇರಬೇಕಾದ ಜಾಗ್ರತೆಗಳನ್ನು ಸರ್ವೋಚ್ಚ ನ್ಯಾಯಾಲಯವು ವಿವರಿಸಿಲ್ಲ; ಮತ್ತು ಸಮಸ್ಯೆಗಳನ್ನು ನಿವಾರಿಸಿಲ್ಲ.

ಪ್ರಗತಿಯ, ಆಧುನಿಕತೆಯ ಹೆಸರಿನಲ್ಲಿ ಬದುಕುವ ವಿಧಾನಕ್ಕೆ ಹೊಸ ಸ್ವರೂಪವನ್ನು ನೀಡುವ ವ್ಯಕ್ತಿಗಳಿಗೆ ತಮ್ಮ ಮುಂದಿನ ತಲೆಮಾರನ್ನು ಸಿದ್ಧಪಡಿಸುವುದಾದರೂ ಹೇಗೆಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತಲೆಕೆಡಿಸಿಕೊಂಡಿಲ್ಲ. ಹೊಳೆ ಸಿಕ್ಕಾಗ ಸೇತುವೆಯ ಕುರಿತು ಚಿಂತಿಸಿದರಾಯಿತು, ಬಿಡಿ. ಸಮಾಜಕ್ಕೆ ಲಾಗಾಯ್ತಿನಿಂದ ಅಂಟಿದ ವ್ಯಭಿಚಾರವೆಂಬ ಗುಟ್ಟಿನ ಜಾಡ್ಯ ಒಂದು ಅಗತ್ಯ ತುರಿಕೆಯಂತಿತ್ತು. ಸಾಮಾಜಿಕವಾಗಿ ವ್ಯಕ್ತಿಗೌರವವನ್ನು ಬಹಿರಂಗವಾಗಿ ಕಳೆದುಕೊಳ್ಳಲು ತಯಾರಿಲ್ಲದ ನಾಚಿಕೆ ಪ್ರವೃತ್ತಿಯಿಂದಾಗಿ ಅನೇಕರಿಗೆ ವ್ಯಭಿಚಾರವು ಬೇಕಾಗಿತ್ತು. ಭಾರತೀಯ ದಂಡ ಸಂಹಿತೆಯ 497ನೇ ಕಲಮಿನಡಿ ಪರಪತ್ನಿಯೊಂದಿಗೆ ನಡೆಸಬಹುದಾದ ಲೈಂಗಿಕ ಸಂಬಂಧವು ಲೈಂಗಿಕವೆನ್ನಿಸಿಕೊಳ್ಳುತ್ತಿತ್ತು. ಕಲಮಿನ ವಿವರಣೆ ಇಲ್ಲಿ ಮತ್ತು ಈಗ ಅನುಚಿತ, ಅಪ್ರಸ್ತುತ. ಆದರೆ ಈ ಕಲಮಿನಡಿ ಸಂಬಂಧಿತ ಮಹಿಳೆಯು ತಪ್ಪುದಾರಳಾಗದಂತೆ ಕಾನೂನು ಜಾಗ್ರತೆ ವಹಿಸಿತ್ತು.

ಪ್ರಾಯಃ ಅಹಲ್ಯೆಗೆ, ಯಶೋಧರೆಗೆ, ಶಿಕ್ಷೆಯಿರಲಿಲ್ಲ. ಇದಕ್ಕೂ ಐತಿಹಾಸಿಕ ಕಾರಣವಿತ್ತು. ಆಂಗ್ಲರ ಮತ್ತು ಕ್ರೈಸ್ತ ಧರ್ಮದ ಮಹಿಳಾಪರ ಮಡಿವಂತಿಕೆ ಈ ಕಲಮಿನಲ್ಲಿ ಕೆಲಸಮಾಡಿತ್ತು. ವಿವೇಚನೆಯನ್ನು ಪುರುಷನೇ ತಾಳಬೇಕು ಮತ್ತು ಮಹಿಳೆಯ ಗೌರವವು ಎಲ್ಲ ಕಾಲ-ಸಂದರ್ಭದಲ್ಲೂ ಅಮೂಲ್ಯವೆಂದು ತಿಳಿಯಲಾಗಿತ್ತು. ಶೋಷಣೆಯ ಕ್ರೌರ್ಯವು ಆಕೆಯನ್ನು ಬಾಧಿಸದಂತೆ ಜಾಗ್ರತೆವಹಿಸಲಾಗಿತ್ತು. ಇದು ಅವಳನ್ನು ಅವಮಾನಿಸುವ ಉದ್ದೇಶದಿಂದ ಜಾರಿಮಾಡಲಾದ ಕಾನೂನೇ ಅಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯವು ಈ ವಿಚಾರವನ್ನು ಹೊಸಬಗೆಯಲ್ಲಿ ಶೋಧಿಸಿ ಒಂದು ವಿಲೋಮ ನ್ಯಾಯವನ್ನು ಕಂಡುಹಿಡಿಯಿತು. ಮಹಿಳೆಯು ಪುರುಷನ ಆಸ್ತಿಯಲ್ಲ, ಆಕೆಗೂ ವೈಯಕ್ತಿಕತೆ ಮತ್ತು ಸ್ವಾತಂತ್ರ್ಯವಿದೆ ಎಂದೆಲ್ಲ ವಿವರಿಸಿತು. ಆದರೆ ಒಟ್ಟು ಸಮಸ್ಯೆಯ ಬೇರನ್ನು ಅಲುಗಾಡಿಸುವಲ್ಲಿ ವಿಫಲವಾಯಿತು. ಒಂದು ಸ್ವಲ್ಪ ಯೋಚಿಸಿದರೆ ಸರ್ವೋಚ್ಚ ನ್ಯಾಯಾಲಯದ ತರ್ಕ ವಿರೋಧಾಭಾಸದಿಂದ ಕೂಡಿದೆಯೆಂಬುದು ಗೊತ್ತಾಗುತ್ತದೆ. ಮಹಿಳೆಯನ್ನು ಈ ಕಲಮು ತಾರತಮ್ಯದಿಂದ ಕಂಡಿದೆಯೆಂಬುದಕ್ಕೆ ಆಧಾರವೇನು? ಯಾವುದಾದರೂ ಅಪರಾಧದಲ್ಲಿ ಮಹಿಳೆಗೆ ಸೌಲಭ್ಯವನ್ನು, ವಿನಾಯಿತಿಯನ್ನು ನೀಡಿದರೆ ಅದು ಅವಳನ್ನು ಕೀಳಾಗಿ ಕಂಡಿದೆಯೆಂಬ ತರ್ಕವನ್ನು ಅಧರಿಸುವ ನ್ಯಾಯ ಯಾವುದು? ಒಂದು ವೇಳೆ ಅವಳಿಗೆ ನೀಡಿದ ಈ ಸೌಲಭ್ಯವು ಅವಳನ್ನು ತಾರತಮ್ಯದಿಂದ ಕಂಡಿದೆಯಾದರೆ ಅದನ್ನು ಪುರುಷರು ಆರೋಪಿಸಿ ತಮಗೂ ಶಿಕ್ಷೆಯಾಗಬಾರದೆಂದು ವಾದಿಸುವುದು ಸರಿ.

ಆದರೆ ಅಕ್ರಮ ಸಂಬಂಧವು ತಪ್ಪೆಂದು ಪರಿಗಣಿಸಿದಾಗ ಅದರಲ್ಲಿ ಭಾಗಿಯಾದ ಮಹಿಳೆಗೂ ಶಿಕ್ಷೆ ನೀಡುವುದು ನೈಜ ನ್ಯಾಯವಾಗುತ್ತಿತ್ತು. ಈಗ ಎಲ್ಲವೂ ನಿರಾಳವಾಗಿದೆ. ಇದನ್ನು ಶ್ರೀಸಾಮಾನ್ಯರು ಗುರುತಿಸಿದ್ದಾರೆಂಬುದು ಈ ತೀರ್ಪಿನ ಆನಂತರ ಬಂದ ಟೀಕೆ-ಟಿಪ್ಪಣಿಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಇನ್ನೊಂದು ಇಂತಹ ತೀರ್ಪು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ್ದು. ಅತಿಸಂಪ್ರದಾಯಬದ್ಧರ ಮನೆಗಳಲ್ಲಿ (ಹಿಂದೂ ಮನೆಗಳಲ್ಲಿ ಕಂಡಿದ್ದೇನೆ; ಇತರರಲ್ಲಿ ಹೇಗೋ ಗೊತ್ತಿಲ್ಲ!) ಮುಟ್ಟಾದವರನ್ನು ಮೂರು ದಿನಗಳ ಮೈಲಿಗೆಯೆಂಬಂತೆ ಮನೆಯಿಂದ ದೂರವಿಡುತ್ತಾರೆ. ಈ ಬಗ್ಗೆ ನಿಖರತೆಯಿಲ್ಲದ ಸಾಂಸ್ಥಿಕ ವಾತಾವರಣದಲ್ಲಿ ವಯೋಮಾನದ ಆಧಾರದಲ್ಲಿ ಅವರಿಗೆ ಪ್ರವೇಶವನ್ನು ನಿಷೇಧಿಸುತ್ತಾರೆ. ಇದೊಂದು ಆರೋಗ್ಯಕ್ಕೆ ಮತ್ತು ಲಿಂಗಾಧಾರಿತ ದೈಹಿಕ ಸಹಜತೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದರೂ ಇದನ್ನು ಧಾರ್ಮಿಕವಾಗಿ ಪರಿಗಣಿಸುವುದು ಸರಿಯಲ್ಲದಿದ್ದರೂ ಇದನ್ನು ವಿದ್ಯಾವಂತರೂ ಒಪ್ಪಿಕೊಂಡಂತೆ ನಡೆದು ಬರುತ್ತಿತ್ತು. ಈಗಲೂ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುವುದಕ್ಕೆ ಋತುಚಕ್ರ ಅಡ್ಡಿಬರುವ ಮನೆಗಳಿವೆ. ಇವೆಲ್ಲ ಸರಿಯಲ್ಲ, ನೀವು ಭಾಗವಹಿಸಬಹುದು ಎಂದು ಗೋಗರೆದರೂ ಹಿಂಜರಿಯುವ ವಿದ್ಯಾವಂತ ಆಧುನಿಕ ಮಹಿಳೆಯರೂ ಇದ್ದಾರೆ. ಇಂತಹ ಸಮಾಜದಲ್ಲಿ ಶಬರಿಮಲೆ ಮಾತ್ರವಲ್ಲ ಇನ್ನಿತರ ಅನೇಕ ದೇವಾಲಯಗಳಲ್ಲಿ ಲಿಖಿತ ಮತ್ತು ಅಲಿಖಿತ ನೀತಿಸಂಹಿತೆಗಳಿವೆ. ನೇರವಾಗಿ ಗುರುತಿಸಲಾಗದ ಸಂದರ್ಭವನ್ನು ನಿವಾರಿಸಲು ಶಬರಿಮಲೆಯು ವಯಸ್ಸಿನ ಆಧಾರವನ್ನು ನಿಯಮಿಸಿದೆ. ಇದು ಕಾನೂನಿನಡಿ ಸರಿಯಲ್ಲ; ಸಾಂಸ್ಕೃತಿಕವಾಗಿಯೂ ಸರಿಯಲ್ಲ; ಧಾರ್ಮಿಕವಾಗಿ ಇದನ್ನು ಯಾರು ನಿಯಮಿಸಿದರೋ ಗೊತ್ತಿಲ್ಲ. ಸರ್ವೋಚ್ಚ ನ್ಯಾಯಾಲಯವು ಇಂತಹ ಒಂದು ಪ್ರವೇಶ ನಿಷೇಧವನ್ನು ಅನೂರ್ಜಿತಗೊಳಿಸಿದೆ.

ಇದು ಸರಿಯಾದ ತೀರ್ಮಾನವೂ ಹೌದು. ಆದರೆ ಪ್ರಶ್ನೆಯಿರುವುದು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ನೆಲೆಗೊಂಡ ವಿಧಿಗಳನ್ನು ನ್ಯಾಯಾಲಯಗಳು ಕಾನೂನಿನ ಸಮಸ್ಯೆಯೆಂಬ ವರ್ತುಲದೊಳಗೆ ತಂದು ತೀರ್ಪು ನೀಡಬಹುದೇ ಎಂಬುದು. ಇಂತಹ ಸೂಕ್ಷ್ಮ ವಿಚಾರಗಳನ್ನು ತೀರ್ಪಿನ ಆನಂತರವೂ ಸಮಾಜ ಹೇಗೆ ನಿಭಾಯಿಸುತ್ತದೆಂಬುದನ್ನು ಮುಂದಿನ ದಿನಗಳಲ್ಲಿ ಕುತೂಹಲದಿಂದ ಕಾದು ನೋಡಬೇಕು. ಆದರೆ ಈ ಆಧಾರದಲ್ಲಿ ಅಯೋಧ್ಯೆಯ ಪ್ರಕರಣವೂ ಬರಿಯ ಆಸ್ತಿಯ ಹಕ್ಕಿನ ಪ್ರಶ್ನೆಯಾಗುತ್ತದೆಯೇ ಅಥವಾ ನಂಬಿಕೆಯ ಪ್ರಶ್ನೆಯಾಗುತ್ತದೆಯೇ ಎಂಬುದನ್ನೂ ಕಾದು ನೋಡಬೇಕು. ಆಸ್ತಿಯ ಮೇಲಣ ಹಕ್ಕಿನ ಪ್ರಶ್ನೆಯಾದರೆ ಆಗ ಅದು ರಾಮದೇವರ ಸಮಸ್ಯೆಯಾಗುವುದಿಲ್ಲ. ಎರಡು ಬಣಗಳ ನಡುವಣ ಐಷಾರಾಮ ವಿವಾದವಾಗುತ್ತದೆ. ದಾಖಲೆಗಳೇ ಮುಖ್ಯವಾಗುತ್ತವೆ ಮತ್ತು ಪೌರಾಣಿಕ ನಂಬಿಕೆಗಳು ನಗಣ್ಯವಾಗಬಹುದು. ಇದು ರಾಮಮಂದಿರದ ಹೋರಾಟವನ್ನು ದುರ್ಬಲಗೊಳಿಸಿದರೆ 2019ರ ಚುನಾವಣೆಯ ಮೇಲೆ ಪ್ರಭಾವವನ್ನು ಬೀರಬಹುದು.
ವರ್ತಮಾನದ ಜಗತ್ತೇ ವಿರೋಧಾಭಾಸದ್ದು. ಆದ್ದರಿಂದ ಇವನ್ನೆಲ್ಲ ಸಹಜವೆಂದು ಸ್ವೀಕರಿಸುವುದೇ ಪ್ರಗತಿಪರತೆಯಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)