varthabharthi

ಸಂಪಾದಕೀಯ

ರಾಜಕೀಯ ಅಪರಾಧೀಕರಣಕ್ಕೆ ಕೊನೆ ಯಾವಾಗ?

ವಾರ್ತಾ ಭಾರತಿ : 4 Oct, 2018

ಗಾಂಧಿ, ನೆಹರೂ, ಲೋಹಿಯಾ, ಎಕೆಜಿ ಕಾಲದ ರಾಜಕಾರಣ ಈಗಿಲ್ಲ. ದೇಶದ ರಾಜಕಾರಣದಲ್ಲಿ ಹಣ ಹಾಗೂ ತೋಳ್ಬಲದ ಪ್ರಾಬಲ್ಯ ಹೆಚ್ಚಾಗಿ ಮೂರು ದಶಕಗಳೇ ಗತಿಸಿದವು. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ಎಂಬ ತ್ರಿವಳಿ ಅನಿಷ್ಟಗಳು ವಕ್ಕರಿಸಿದ ಆನಂತರ ನಮ್ಮ ಜನ ಪ್ರತಿನಿಧಿಸಭೆಗಳೂ ಕ್ರಿಮಿನಲ್ ಆರೋಪಿಗಳ ತಾಣಗಳಾಗಿವೆ. ಲೋಕ ಸಭೆ ಹಾಗೂ ರಾಜ್ಯಗಳ ವಿಧಾನ ಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಚುನಾಯಿತ ಪ್ರತಿನಿಧಿಗಳು ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊತ್ತು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್(ಎಡಿಆರ್) ಸಂಸ್ಥೆ ಈ ವರ್ಷ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ ಶೇ. 35ರಷ್ಟು ಮುಖ್ಯಮಂತ್ರಿಗಳು ಕ್ರಿಮಿನಲ್ ಖಟ್ಲೆಗಳನ್ನು ಎದುರಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸುವಾಗ ಬಹಿರಂಗವಾದ ಅಂಕಿ ಅಂಶಗಳನ್ನು ಆಧರಿಸಿ ಸದರಿ ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸಿದೆ. ಇದು ನಿಜಕ್ಕೂ ಭಾರತದ ಜನತಂತ್ರದ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂದು, ಅದಕ್ಕಾಗಿ ಕಾಯ್ದೆಯೊಂದನ್ನು ಸಂಸತ್ತು ರೂಪಿಸಬೇಕೆಂದು ಸುಪ್ರೀಂ ಕೋರ್ಟು ತೀರ್ಪು ನೀಡಿದೆ.

ಲೋಕಸಭೆ ಹಾಗೂ ರಾಜ್ಯಗಳ ವಿಧಾನ ಸಭೆಗಳಿಗೆ ಮಾತ್ರವಲ್ಲ ಸ್ಥಳೀಯ ಸಂಸ್ಥೆಗಳಿಗೆ ದುಡ್ಡಿಲ್ಲದ ಪ್ರಾಮಾಣಿಕರು ಚುನಾಯಿತರಾಗುವುದೇ ಅಸಾಧ್ಯವಾಗಿರುವ ಈ ಕಾಲ ಘಟ್ಟದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಈ ತೀರ್ಪು ಸ್ವಾಗತಾರ್ಹವಾಗಿದೆ. ರಾಜಕೀಯ ಅಪರಾಧೀಕರಣ ತಡೆಯಬೇಕೆಂದು ಎಲ್ಲರೂ ಮಾತನಾಡುತ್ತಾರೆ. ಆದರೆ ಇದಕ್ಕೆ ದಾರಿ ಯಾವುದು, ಪರಿಹಾರ ಸೂತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ಅಂತಲೇ ಈ ಪ್ರಶ್ನೆಯನ್ನು ಸುಪ್ರೀಂ ಕೋರ್ಟು ಸಂಸತ್ತಿನ ಅಂಗಳಕ್ಕೆ ಎಸೆದಿದೆ. ಸಂಸತ್ತು ವಿವೇಚನೆಯಿಂದ ದಾರಿ ಕಂಡುಕೊಳ್ಳಬೇಕಾಗಿದೆ. ರಿಯಲ್ ಎಸ್ಟೇಟ್, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ ಮತ್ತು ಮೈನಿಂಗ್ ಮಾಫಿಯಾದವರು ಈಗ ಚುನಾವಣೆಗೆ ಸ್ಪರ್ಧಿಸಿ ಸುಲಭವಾಗಿ ಗೆದ್ದು ಬರುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಅಲುಗಾಡುತ್ತಿವೆ. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಜನಪ್ರತಿನಿಧಿಗಳೇ ಅದಕ್ಕೆ ಧಕ್ಕೆ ತರುತ್ತಿದ್ದಾರೆ. ಅಂತಲೇ ಸುಪ್ರೀಂ ಕೋರ್ಟು ಕಿವಿ ಹಿಂಡಿ ಬುದ್ಧಿ ಹೇಳಬೇಕಾಗಿ ಬಂದಿದೆ. ಈ ರಾಜಕೀಯ ಅಪರಾಧೀಕರಣ ಗ್ರಾಮ ಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ಎಲ್ಲೆಡೆ ವ್ಯಾಪಕವಾಗಿ ಹರಡಿದೆ. ಪಂಚಾಯತ್ ಚುನಾವಣೆಯ, ನಗರಸಭೆಯ ಒಂದು ಸ್ಥಾನ ಗೆಲ್ಲಲು ಕೋಟಿ, ಕೋಟಿ ರೂ. ಖರ್ಚು ಮಾಡುತ್ತಾರೆ. ಇನ್ನು ವಿಧಾನಸಭೆ ಹಾಗೂ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಖರ್ಚು ಮಾಡುವ ಹಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಒಂದು ಲೋಕಸಭಾ ಸ್ಥಾನ ಗೆಲ್ಲಲು ಐವತ್ತು ಕೋಟಿ ಖರ್ಚು ಮಾಡಿದವರಿದ್ದಾರೆ. ವಿಧಾನ ಸಭಾ ಚುನಾವಣೆ ಗೆಲ್ಲಲು ಕನಿಷ್ಠ ಮೂವತ್ತುಕೋಟಿ ಖರ್ಚು ಮಾಡುತ್ತಾರೆ. ಹೀಗೆ ಖರ್ಚು ಮಾಡಿ ಗೆದ್ದು ಬಂದವರು ಅಧಿಕಾರಕ್ಕೆ ಬಂದ ಆನಂತರ ಅದರ ನೂರು, ಸಾವಿರಪಟ್ಟು ಗಳಿಸುತ್ತಾರೆ. ಇಂಥವರೆಲ್ಲ ಅಪರಾಧ ಹಿನ್ನೆಲೆ ಹೊಂದಿದವರಾಗಿರುತ್ತಾರೆ. ಇದು ಸರಿ ದಾರಿಗೆ ಬರುವುದು ಅಷ್ಟು ಸುಲಭವಲ್ಲ.

ಕರ್ನಾಟಕದ ರಾಜಕಾರಣವನ್ನೇ ಉದಾಹರಣೆಗೆ ತೆಗೆದುಕೊಂಡರೆ 2008ರಿಂದ 2013ರವರೆಗೆ ಈ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರಕಾರದಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದವರೇ ಆಡಳಿತದ ಆಯಕಟ್ಟಿನ ಜಾಗಗಳನ್ನು ಹಿಡಿದು ಕುಳಿತಿದ್ದರು. ಬಳ್ಳಾರಿ ಗಣಿ ಸಂಪತ್ತನ್ನು ಕೊಳ್ಳೆ ಹೊಡೆದವರು ಸಂವಿಧಾನಾತ್ಮಕ ಆಡಳಿತಕ್ಕೇ ಸವಾಲು ಒಡ್ಡಿದ್ದರು. ಬಳ್ಳಾರಿ ರಿಪಬ್ಲಿಕ್ ನಿರ್ಮಿಸಿದ್ದರು. ಈ ಗಣಿ ಮಾಫಿಯಾ ತನ್ನ ಅಕ್ರಮ ದಂಧೆಗಳಿಗೆ ರಾಜಕೀಯ ಅಧಿಕಾರವನ್ನು ರಕ್ಷಾಕವಚವನ್ನಾಗಿ ಬಳಸಿಕೊಂಡಿತ್ತು. ಇದು ಕರ್ನಾಟಕದ ಕತೆ ಮಾತ್ರವಲ್ಲ ದೇಶದ ಬಹುತೇಕ ರಾಜ್ಯಗಳು ಹಾಗೂ ಸಂಸತ್ತಿನಲ್ಲಿ ಇಂಥ ಮಾಫಿಯಾಗಳು ಪ್ರಭಾವಶಾಲಿಯಾಗಿವೆ. ಹೀಗೆ ಅಧಿಕಾರದ ರುಚಿ ಹತ್ತಿದ ಈ ಮಾಫಿಯಾಗಳು ಕಳೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲೂ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸಿದ್ದವು. ಚುನಾವಣೆಯ ಬಳಿಕ ಶಾಸಕರ ಖರೀದಿಗೆ ಈಗಲೂ ಯತ್ನಿಸುತ್ತಿವೆ. ಇದು ದೇಶದ ಇಂದಿನ ಪರಿಸ್ಥಿತಿ. ಕಲುಷಿತಗೊಂಡಿರುವ ರಾಜಕಾರಣವನ್ನು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ. ಸುಪ್ರೀಂ ಕೋರ್ಟ್ ಹೇಳಿದಂತೆ ಸಂಸತ್ತು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಆದರೆ ಜನಪ್ರತಿನಿಧಿ ಸಭೆಗಳಲ್ಲೂ ಕ್ರಿಮಿನಲ್ ಆರೋಪಿಗಳೇ ತುಂಬಿಕೊಂಡಿರುವಾಗ ಇಂಥ ಕಾಯ್ದೆ ರೂಪಿಸುವುದು ಸುಲಭವಲ್ಲ. ಇದಕ್ಕಾಗಿ ಚುನಾವಣಾ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕಾಗಿದೆ. ಜನರೂ ಇಂಥವರನ್ನು ತಿರಸ್ಕರಿಸಬೇಕಾಗಿದೆ. ಅಪರಾಧದ ಹಿನ್ನೆಲೆ ಹೊಂದಿದವರಿಗೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು. ಈ ಪ್ರಶ್ನೆಯಲ್ಲಿ ರಾಜಕೀಯ ಮಾತ್ರವಲ್ಲ ರಾಷ್ಟ್ರೀಯ ಒಮ್ಮತಾಭಿಪ್ರಾಯ ರೂಪುಗೊಳ್ಳಬೇಕಾಗಿದೆ.

ನಮ್ಮ ದೇಶದ ರಾಜಕಾರಣದ ಶುದ್ಧೀಕರಣದ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಭಾರತದ ಜನಸಾಮಾನ್ಯರು, ಹಳ್ಳಿಗಾಡಿನ ರೈತ ಕಾರ್ಮಿಕರು, ಬಡವರು, ದಲಿತರು ಈ ದೇಶದ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಈಗ ರಾಜಕಾರಣದ ಶುದ್ಧೀಕರಣದ ಮಹತ್ಕಾರ್ಯ ಜನರಿಂದಲೇ ನಡೆಯಬೇಕಾಗಿದೆ. ಬರೀ ಚುನಾಯಿತ ಪ್ರತಿನಿಧಿಗಳಿಗೆ ಬಿಟ್ಟರೆ ಇದು ಸರಿ ಹೋಗುವುದಿಲ್ಲ, ಗಣಿ ಮಾಫಿಯಾಗಳು, ಮರಳು ಮಾಫಿಯಾಗಳು, ರಿಯಲ್ ಎಸ್ಟೇಟ್ ಕುಳಗಳು, ಕೋಮುವಾದಿಗಳು ಚುನಾವಣೆಯಲ್ಲಿ ಗೆಲ್ಲದಂತೆ, ಕಳಂಕಿತರು ಶಾಸನ ಸಭೆಗಳನ್ನು ಪ್ರವೇಶಿಸದಂತೆ ಜನತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮತದಾರರನ್ನು ಜಾಗೃತಗೊಳಿಸುವ ಕಾರ್ಯ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)