varthabharthi


ಬುಡಬುಡಿಕೆ

ಗೋಡ್ಸೆ ಗಾಂಧಿಯನ್ನು ರಕ್ಷಿಸಲು ಬಂದಿದ್ದು....!!!

ವಾರ್ತಾ ಭಾರತಿ : 7 Oct, 2018
ಚೇಳಯ್ಯ chelayya@gmail.com

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗಾಂಧೀಜಿಯವರ 150ನೇ ಹುಟ್ಟು ಹಬ್ಬ ಆಚರಣೆಯ ಸಿದ್ಧತೆ ನಡೆಯುತ್ತಿರುವ ವರದಿ ಕೇಳಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ಗಾಂಧೀಜಿಯವರ ಚಿಂತನೆಯನ್ನು ದೇಶಾದ್ಯಂತ ಅನುಷ್ಠಾನಗೊಳಿಸುವ ಬಗ್ಗೆ ಮೋದಿಯವರು ಆಸಕ್ತಿವಹಿಸಿರುವುದು ಕೇಳಿ, ಗಾಂಧೀಜಿಯೇ ಮೋದಿಯವರ ರೂಪದಲ್ಲಿ ಪುನರ್ಜನ್ಮ ಎತ್ತಿರಬಾರದೇಕೆ? ಎಂದೆನಿಸಿತು. ಕಾಸಿ ನೇರವಾಗಿ ಮೋದಿಯವರ ನಿವಾಸವನ್ನು ಕಾವಲು ಕಾಯುತ್ತಿರುವ ಚೌಕೀದಾರ್‌ನಿಗೆ ಫೋನಾಯಿಸಿದ ‘‘ಸಾಬ್...ನರೇಂದ್ರ ಮೋದಿ ಮನೆಯಲ್ಲಿದ್ದಾರಾ? ನನಗೆ ಅವರ ಇಂಟರ್ಯೂ ಬೇಕು...’’
ಚೌಕೀದಾರ್ ಹೇಳಿದ ‘‘ಮೋದಿಯವರು ಇಂಟರ್ಯೂ ಕೊಡುವುದಿಲ್ಲ. ಅವರು ಗಾಂಧೀಜಿಯ 150ನೇ ಹುಟ್ಟುಹಬ್ಬದ ಅಂಗವಾಗಿ ಚುನಾವಣೆ ಮುಗಿಯುವವರೆಗೆ ವೌನವ್ರತ ಪಾಲಿಸುತ್ತಿದ್ದಾರೆ. ಬೇಕಾದರೆ ನಾನೇ ಇಂಟರ್ಯೂ ಕೊಡುತ್ತೇನೆ...’’
‘‘ರಫೇಲ್ ಬಗ್ಗೆ ಪ್ರಶ್ನೆ ಮಾಡುವುದಕ್ಕಲ್ಲ, ಗಾಂಧೀಜಿಯ ಚಿಂತನೆಗಳ ಬಗ್ಗೆ ಅವರ ಅಭಿಪ್ರಾಯ ಕೇಳುವುದಕ್ಕೆ....’’ ಕಾಸಿ ಚೌಕೀದಾರ್ ಜೊತೆಗೆ ಚೌಕಾಸಿ ಮಾಡಿದ.
‘‘ಗಾಂಧಿಯ ವಿಷಯದಲ್ಲಿ ಅವರು ಮಾತನಾಡಬಹುದು. ಆದರೆ ರೂಪಾಯಿ, ಡಾಲರ್ ಇತ್ಯಾದಿಗಳ ಬಗ್ಗೆ ಪ್ರಶ್ನೆ ಕೇಳಬಾರದು....’’ ಚೌಕೀದಾರ್ ಎಚ್ಚರಿಕೆ ನೀಡಿದ.
ಕಾಸಿ ಸಂಭ್ರಮದಿಂದ ತಲೆ ಆಡಿಸಿದ.
‘‘ಸರಿ...ಪ್ರಶ್ನೆಗಳನ್ನು ನಾವೇ ಕಲಿಸುತ್ತೇವೆ...ಅದನ್ನೇ ಬಂದು ಅವರಿಗೆ ಕೇಳಿದರೆ ಆಯಿತು...’’ ಚೌಕೀದಾರ್ ಹೇಳಿದ. ಕಾಸಿ ಅದಕ್ಕೂ ತಲೆಯಾಡಿಸಿದ.
***
 ಪತ್ರಕರ್ತ ಕಾಸಿಯ ಮುಂದೆ ನರೇಂದ್ರ ಮೋದಿಯವರು ಕುಳಿತು ಚರಕದಿಂದ ನೂಲು ತೆಗೆಯುತ್ತಾ ಇದ್ದರು. ಚರಕ ತಿರುಗಿಸುತ್ತಾ ಇದ್ದರೂ ಅದರಿಂದ ನೂಲು ಬರುತ್ತಿರಲಿಲ್ಲ. ಕಾಸಿ ಮೆಲ್ಲಗೆ ಕೇಳಿದ ‘‘ಸಾರ್...ಚರಕದಿಂದ ನೂಲು ಬರುತ್ತಿಲ್ಲ...’’
 ಮೋದಿಯವರು ತಲೆಯೆತ್ತಿ ದುರುಗುಟ್ಟಿ ನೋಡಿ ಹೇಳಿದರು ‘‘ವಿರೋಧ ಪಕ್ಷಗಳ ಸುಳ್ಳು ಆರೋಪ ಅದು. ನಾನು ಧರಿಸಿರುವ ಅಂಗಿ ಇದೇ ನೂಲಿನಿಂದ ಮಾಡಿರುವುದು. ನಾನು ಈ ಚರಕದಿಂದ ತೆಗೆದ ನೂಲನ್ನು ಭವಿಷ್ಯದಲ್ಲಿ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಶೀಘ್ರದಲ್ಲೇ ದೇಶದ ಆರ್ಥಿಕತೆ ಉತ್ತಮವಾಗುತ್ತದೆ....’’
ಮೋದಿ ಹೇಳುತ್ತಿದ್ದಾರೆ ಎಂದ ಮೇಲೆ ಚರಕದಿಂದ ನೂಲು ಬರುತ್ತಿರಬೇಕು ಎಂದೆನಿಸಿತು. ‘‘ಹೌದು ಸಾರ್...ನೂಲು ಬರುತ್ತಾ ಇದೆ...ಈಗ ನೋಡಿದೆ...ನಿಜಕ್ಕೂ ತುಂಬಾ ಕ್ವಾಲಿಟಿ ಇರುವ ನೂಲು ಇದು....’’
ಮೋದಿಯವರಿಗೆ ಖುಷಿಯಾಯಿತು ‘‘ಹೌದು ಮತ್ತೆ? ಈ ನೂಲಿನಿಂದ ತಯಾರಿಸಿದ ಹಗ್ಗಗಳಿಂದ ಈಗಾಗಲೇ ನೂರಕ್ಕೂ ಅಧಿಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....ಆ ಮೂಲಕ ಇದು ತುಂಬಾ ಗಟ್ಟಿಯಾದ ನೂಲು ಎನ್ನುವುದು ಸಾಬೀತಾಗಿದೆ....’’
‘‘ಸಾರ್...ಗಾಂಧೀಜಿಯ 150ನೇ ಹುಟ್ಟಿದ ದಿನ ಹಿನ್ನೆಲೆಯಲ್ಲಿ ಸತ್ಯ, ಅಹಿಂಸೆಯನ್ನು ಪ್ರಚಾರ ಪಡಿಸಲು ಏನೆಲ್ಲ ಕಾರ್ಯಕ್ರಮ ಹಾಕಿಕೊಂಡಿದ್ದೀರಿ?’’ ಕಾಸಿ ಕೇಳಿದ.
‘‘ನೋಡಿ ಗಾಂಧೀಜಿಯ ಬಗ್ಗೆ ತುಂಬಾ ತುಂಬಾ ತಪ್ಪು ವಿವರಗಳನ್ನು ನೀಡಲಾಗಿದೆ. ಅಹಿಂಸೆಯಲ್ಲಿ ನಂಬಿಕೆ ಇಟ್ಟಿದ್ದರೆ ಅವರು ಕೈಯಲ್ಲಿ ಕೋಲನ್ನು ಯಾಕೆ ಹಿಡಿದುಕೊಂಡು ಓಡಾಡುತ್ತಿದ್ದರು? ಮೊನ್ನೆ ಗಾಂಧಿ ಜಯಂತಿಯ ದಿನ ರೈತರು ಅದೇ ಕೋಲನ್ನು ಹಿಡಿದು ಪೊಲೀಸರನ್ನು ಬೆದರಿಸಿದರು. ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಲಾಯಿತು. ಗಾಂಧೀಜಿ ತಮ್ಮ ಕೈಯಲ್ಲಿರುವ ದೊಣ್ಣೆಯಿಂದ ಹೊಡೆದು ಬ್ರಿಟಿಷರನ್ನು ಓಡಿಸಿದರು. ನಮ್ಮ ಆರೆಸ್ಸೆಸ್‌ನವರು ಗಾಂಧೀಜಿಯ ಸ್ಮರಣಾರ್ಥವಾಗಿ ಆ ದೊಣ್ಣೆಯನ್ನು ಹಿಡಿದು ಕವಾಯತು ನಡೆಸುತ್ತಿದ್ದಾರೆ...’’
‘‘ಹಾಗಾದರೆ ಗಾಂಧೀಯನ್ನು ದೇಶ ಯಾವ ರೀತಿಯಲ್ಲಿ ಸ್ಮರಿಸಲಿದೆ...’’ ಕಾಸಿ ಕೇಳಿದ.
 ‘‘ನೋಡಿ....ಗಾಂಧೀಜಿ ಈ ದೇಶದಲ್ಲಿ ಸ್ವಚ್ಛತೆಗಾಗಿ ಹೋರಾಡಿದ್ದು. ಬ್ರಿಟಿಷರು ದೇಶಾದ್ಯಂತ ಅಲ್ಲಲ್ಲಿ ಗಲೀಜು ಮಾಡಿ ಹಾಕಿದ್ದರು ಎನ್ನುವ ಕಾರಣಕ್ಕೆ ಅವರನ್ನು ಓಡಿಸಿದರು. ಗಾಂಧೀಜಿಯವರು ಸ್ವಚ್ಛತೆಯನ್ನು ಇಷ್ಟ ಪಡುತ್ತಿದ್ದರು. ಅದಕ್ಕಾಗಿ ಸದಾ ಬೀದಿಯನ್ನು ಗುಡಿಸುತ್ತಿದ್ದರು. ಮೊನ್ನೆ ನಾನು ಕೂಡ ಬೀದಿ ಗುಡಿಸಿದೆ...ನೀವೆಲ್ಲ ನೋಡಿದ್ದೀರಿ...ಗಾಂಧೀಜಿಯ ಹಲವು ಸಿದ್ಧಾಂತಗಳನ್ನು ನಾವು ಯಥಾವತ್ ಅನುಷ್ಠಾನಗೊಳಿಸಲಿದ್ದೇವೆ...’’
‘‘ಯಾವ್ಯಾವ ಸಿದ್ಧಾಂತ ಸಾರ್?’’
‘‘ಮುಖ್ಯವಾಗಿ, ಕಸಗುಡಿಸುವವರಿಗೆ ಅದರಲ್ಲೇ ಮೋಕ್ಷ ಇದೆ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಆದುದರಿಂದ ಬೀದಿಯ ಕಸಗುಡಿಸುವವರ ಮಕ್ಕಳು ಕಡ್ಡಾಯವಾಗಿ ಕಸಗುಡಿಸುವ ವೃತ್ತಿಯನ್ನೇ ಮಾಡಬೇಕು ಎಂಬ ಮಸೂದೆಯೊಂದನ್ನು ತರಲಿದ್ದೇವೆ...ಇದು ಗಾಂಧೀಜಿಗೆ ನಾವು ನೀಡುವ ದೊಡ್ಡ ಶ್ರದ್ಧಾಂಜಲಿ....’’
‘‘ಸಾರ್...ಕಸಗುಡಿಸುವವರ ವೇತನ ಹೆಚ್ಚಳ ಮಾಡುವ ಬಗ್ಗೆ ಕಾರ್ಯಕ್ರಮ ಇದೆಯೆ?’’
‘‘ನೋಡಿ....ಕಸಗುಡಿಸುವವರು, ಮಲಹೊರುವವರ ವೇತನವನ್ನು ಹೆಚ್ಚಿಸಿದರೆ ಅವರು ಅದರಿಂದ ಮದ್ಯಪಾನದಂತಹ ದುಶ್ಚಟ ಅಂಟಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಅವರ ಮಕ್ಕಳು ಗಾಂಧೀತತ್ವವನ್ನು ಮರೆತು ದೊಡ್ಡ ಹುದ್ದೆಯ ಬೆನ್ನು ಹತ್ತಿ ಸುಖ, ವಿಲಾಸ ಜೀವನವನ್ನು ಆರಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆದುದರಿಂದ ಅವರ ವೇತನವನ್ನು ಇಳಿಸಿ, ಗಾಂಧೀಜಿಯ ಸರಳ ಜೀವನವನ್ನು ಅನುಸರಿಸಲು ಕರೆ ಕೊಡಲಿದ್ದೇವೆ....’’ ಮೋದಿ ಮಂದಸ್ಮಿತರಾಗಿ ವಿವರಿಸಿದರು.
‘‘ಸಾರ್...ಗಾಂಧೀಜಿಯನ್ನು ಕೊಂದದ್ದು ಗೋಡ್ಸೆ....’’ ಕಾಸಿ ಪ್ರಶ್ನೆಯನ್ನು ಅರ್ಧದಲ್ಲೇ ಕತ್ತರಿಸಿದರು.
‘‘ನೋಡಿ...ಗಾಂಧೀಜಿಯವರು ಈ ದೇಶದ ಪ್ರಧಾನಿಯಾಗುವುದಕ್ಕೆ ಸಂಚು ನಡೆಸಿದ್ದಾರೆ ಎಂಬ ಅನುಮಾನದಿಂದ ನೆಹರೂ ಅವರೇ ಗಾಂಧಿಯನ್ನು ಕೊಲ್ಲಿಸಿದ್ದಾರೆ. ನೆಹರೂ ಅವರ ಸಂಪುಟದ ಹಲವು ಸಂಸದರು ಗಾಂಧೀಜಿಗೆ ಬೆಂಬಲ ನೀಡಿದ್ದರು. ನೆಹರೂ ಪಕ್ಷವನ್ನು ಒಡೆದು ಅವರು ಇನ್ನೇನು ಅಧಿಕಾರ ಹಿಡಿಯಬೇಕು ಎನ್ನುವಾಗ ಹತ್ಯೆ ನಡೆಯಿತು. ಆದುದರಿಂದ ಅವರ ಹತ್ಯೆಯಲ್ಲಿ ನೆಹರೂ ಅವರ ಕೈವಾಡ ಇದೆ. ಇದನ್ನು ತಕ್ಷಣ ಎನ್‌ಐಎಯಿಂದ ನಾನು ತನಿಖೆ ಮಾಡಿಸಲಿದ್ದೇನೆ....’’
‘‘ಹಾಗಾದರೆ ಗೋಡ್ಸೆ....’’ ಕಾಸಿ ಅರ್ಥವಾಗದೆ ಕೇಳಿದ.
‘‘ಆತ ಗಾಂಧಿಯ ಹತ್ಯೆಯನ್ನು ತಡೆಯುವುದಕ್ಕೆ ಪಿಸ್ತೂಲ್ ಹಿಡಿದು ಬಂದಿದ್ದ. ಅಷ್ಟರಲ್ಲಿ ದೂರದಿಂದ ನಿಂತು ನೆಹರೂ ಕಳುಹಿಸಿದ ಶೂಟರ್‌ಗಳು ಗುಂಡು ಹಾರಿಸಿದರು. ಅಮಾಯಕ ಗೋಡ್ಸೆ ಪೊಲೀಸರ ವಶವಾದ....’’ ಮೋದಿ ವಿವರಿಸಿದರು.
‘‘ಆದರೆ ಗೋಡ್ಸೆ ತಪ್ಪೊಪ್ಪಿಕೊಂಡಿದ್ದಾನಲ್ಲ ಸಾರ್...’’ ಕಾಸಿ ಗೊಂದಲಗೊಂಡ.
‘‘ಗೋಡ್ಸೆಗೆ ಚಿತ್ರಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಯಿತು. ನಾವು ಗಾಂಧಿಗೆ ವಿಶ್ವದಲ್ಲೇ ದೊಡ್ಡದೊಂದು ಪ್ರತಿಮೆಯನ್ನು ಸ್ಥಾಪಿಸಲಿದ್ದೇವೆ. ಅದಕ್ಕಾಗಿ ವಿದೇಶದಿಂದ ಈಗಾಗಲೇ ಹಲವು ಸಾವಿರ ಕೋಟಿ ಸಾಲ ಕೇಳಿದ್ದೇವೆ. ಅದರಲ್ಲಿ ಗಾಂಧಿಯ ಪ್ರತಿಮೆ ನಿಲ್ಲಿಸಲಿದ್ದೇವೆ. ಅವರ ಪಕ್ಕದಲ್ಲೇ ಗೋಡ್ಸೆಯ ಒಂದು ಪ್ರತಿಮೆಯನ್ನೂ ಸ್ಥಾಪಿಸಲಿದ್ದೇವೆ....ಗಾಂಧೀಜಿಯವರು ಸಾಯುವಾಗ ‘ಹೇ ರಾಮ್’ ಎಂದು ಹೇಳಿದ್ದಲ್ಲ. ‘‘ಹೇ ರಾಮಮಂದಿರ್’’ ಎಂದು ಹೇಳಿದ್ದು. ಆದುದರಿಂದ ಅವರ ಕೊನೆಯ ಆಸೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲಿದ್ದೇವೆ....ಈ ಮೂಲಕ ಗಾಂಧಿಯ 150ನೇ ಹುಟ್ಟಿದ ದಿನವನ್ನು ಭರ್ಜರಿಯಾಗಿ ಆಚರಿಸಲಿದ್ದೇವೆ....’’
‘‘ಸಾರ್...ವೈಯಕ್ತಿಕವಾಗಿ ನಿಮ್ಮ ಜೀವನದಲ್ಲಿ ಗಾಂಧೀಜಿ ಯಾವ ರೀತಿಯಲ್ಲಿ ಪರಿಣಾಮ ಬೀರಿದ್ದಾರೆ...’’ ಕಾಸಿ ಕೊನೆಯ ಪ್ರಶ್ನೆ ಕೇಳಿದ.
‘‘ಗಾಂಧೀಜಿ ಆಗಾಗ ವೌನವ್ರತ ಮಾಡುತ್ತಿದ್ದರು. ಅದನ್ನು ನಾನು ಯಥಾವತ್ ಪಾಲಿಸುತ್ತಿದ್ದೇನೆ. ವೌನವ್ರತವೇ ನನ್ನ ರಾಜಕೀಯ ಜೀವನವನ್ನು ಮುನ್ನಡೆಸುತ್ತಿದೆ’’ ಎಂದವರೇ ತಮ್ಮ ವೌನವ್ರತವನ್ನು ಮುಂದುವರಿಸಿದರು.
ಮೋದಿಯ ಮುಂದಿದ್ದ ಅಣಬೆ ಭೋಜನವನ್ನೇ ಆಸೆಗಣ್ಣಿನಿಂದ ನೋಡುತ್ತಾ ಕಾಸಿ ಅಲ್ಲಿಂದ ಕಾಲ್ಕಿತ್ತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)