varthabharthi


ನೇಸರ ನೋಡು

ದೇಜಗೌ: ಜನ್ಮಶತಾಬ್ದಿ ನೆನಪು

ವಾರ್ತಾ ಭಾರತಿ : 7 Oct, 2018
ಜಿ.ಎನ್.ರಂಗನಾಥ ರಾವ್

ದೇಜಗೌ ಅವರ ಜನ್ಮ ಶತಮಾನೋತ್ಸವ ಆಚರಣೆ ರಾಜ್ಯಾದ್ಯಂತ ನಡೆಯಲಿರುವುದು ನಿರೀಕ್ಷಿತವೇ. ಅದಕ್ಕೆ ನಾಂದಿಯಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಅಖಿಲ ಕರ್ನಾಟಕ ಜನಪದ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಈ ತಿಂಗಳ 4ರಂದು ಮೈಸೂರಿನಲ್ಲಿ ಶತಮಾನೋತ್ಸವವನ್ನು ಆಚರಿಸಿದೆ. ಕನ್ನಡಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವ ಇಂಥ ಸಂದರ್ಭಗಳು ಕೇವಲ ಅವರ ಸೇವೆಯನ್ನು ಕೊಂಡಾಡುವ ಉಪನ್ಯಾಸಗಳ ಸಮಾರಂಭವಾಗಬಾರದು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಚನಾತ್ಮಕವಾಗಿ ಏನನ್ನಾದರೂ ಮಾಡಬಾರದೇಕೆ ಎಂದು ಯೋಚಿಸಬೇಕಾದಂಥ ಪರಿಸ್ಥಿತಿ ಕನ್ನಡದಲ್ಲಿ ಈಗ ಒದಗಿ ಬಂದಿದೆ.


ತಾವೊಂದು ಬಿದಿರಿನ ಕೊಳವೆ, ಉಸಿರೆಲ್ಲ ಕನ್ನಡ ಎಂದು ನಂಬಿ ಬದುಕಿ ಕನ್ನಡಕ್ಕಾಗಿ ಗಂಧದ ಕೊರಡಂತೆ ಜೀವಭಾವ ತೇಯ್ದುಕೊಂಡ ಮಹನೀಯರು ಹಲವಾರು ಮಂದಿ. ಅವರಲ್ಲಿ ‘ಕನ್ನಡಕ್ಕಾಗಿ ಕೈ ಎತ್ತು ನೀ ಕಲ್ಪವೃಕ್ಷ’ ಎಂದು ಹಾಡಿದ ಕವಿ ಕುವೆಂಪು ಅವರಿಂದ ಕನ್ನಡ ದೀಕ್ಷೆ ಪಡೆದ, ದೇಜಗೌ ಎಂದೇ ಪ್ರಸಿದ್ಧರಾದ ದೇ.ಜವರೇ ಗೌಡರು ಕನ್ನಡ ಮರೆಯಲಾಗದ ಮಹಾನುಭಾವರು. ಎರಡು ವರ್ಷಗಳ ಹಿಂದೆ ತೊಂಬತ್ತೆಂಟನೆಯ ಇಳಿಪ್ರಾಯದಲ್ಲಿ ಸ್ವರ್ಗಸ್ಥರಾದ ದೇಜಗೌ ಅವರ ಜನ್ಮ ಶತಾಬ್ದಿಯ ವರ್ಷವಿದು. ಮೈಸೂರು ರೇಶಿಮೆಗೆ ಪ್ರಖ್ಯಾತವಾದ ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ, ವಿದ್ಯೆಯ ಗಂಧವೇ ಇಲ್ಲದ ಬಡಕುಟುಂಬದಲ್ಲಿ ಜನಿಸಿದ(09-07-1918) ದೇಜಗೌ, ಮೈಸೂರು ವಿಶ್ವವಿದ್ಯಾನಿಲಯದ ಕುಲಕಪತಿಯಾಗಿ, ಶಿಕ್ಷಣವೇತ್ತರಾಗಿ, ಕನ್ನಡದ ಅಪ್ರತಿಮ ಹೋರಾಟಗಾರರಾಗಿ, ನೂರಾರು ಗ್ರಂಥಗಳ ಕರ್ತೃವಾಗಿ ಕನ್ನಡದಲ್ಲಿ ಚಿರಸ್ಥಾಯಿಯಾಗಿರುವುದು ಒಂದು ಚೋದ್ಯವೇ.
 
‘ಹೋರಾಟದ ಬದುಕು’ ದೇಜಗೌ ಅವರ ಆತ್ಮಕಥೆ.ಇದು ಅಕ್ಷರಶಃ ಅವರ ಅನ್ವರ್ಥನಾಮವೂ ಹೌದು. ದೇಜಗೌ ಅವರ ಹೋರಾಟ ಎರಡು ನೆಲೆಯದು. ಒಂದು ವೈಯಕ್ತಿಕ ನೆಲೆಯದಾದರೆ ಮತ್ತೊಂದು ಸಾರ್ವತ್ರಿಕ ನೆಲೆಯ ಕನ್ನಡಪರ ಹೋರಾಟ. ಬಾಲ್ಯದಲ್ಲಿ ಮನೆಯಲ್ಲಿ ಒಪ್ಪೊತ್ತಿನ ಕೂಳಿಗೂ ತತ್ವಾರವಾಗಿದ್ದ ದಿನಗಳು. ಶಾಲೆ, ವಿದ್ಯಾಭ್ಯಾಸ ಎಂಬುದು ಗಗನ ಕುಸುಮವೇ. ಇಸ್ಕೂಲು ಎಂದರೆ ರೇಗಿ ಹೊಡೆದುಬಡಿದು ಮಾಡುತ್ತಿದ್ದ ಅಪ್ಪನಿಂದ ಬಾಲಕನ ಪಾಲಿಗೆ ಅನಿವಾರ್ಯವಾಗಿ ಒದಗಿ ಬಂದದ್ದು ಕುರಿಕಾಯುವ ಕೆಲಸ. ಕುರಿ ಕಾಯುತ್ತಲೇ ಶಾಲೆಯ ಕಿಟಕಿ ಹಿಂದೆ ನಿಂತು ಪಾಠಗಳನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದ ಬಾಲಕ ಜವರೇಗೌಡನಲ್ಲಿದ್ದ ವಿದ್ಯೆ ಕಲಿಯುವ ಸುಪ್ತ ಬಯಕೆ ಒಮ್ಮೆ ಪತ್ರಕರ್ತ ಎಚ್.ಕೆ.ವೀರಣ್ಣ ಗೌಡರ ಗಮನಕ್ಕೆ ಬಂದು ‘‘ಶಾಲೆಗೆ ಕಳುಹಿಸದಿದ್ದರೆ ಜೈಲಿಗೆ ಹೋಗಬೇಕಾಗುತ್ತೆ’’ ಎಂಬ ಅಸ್ತ್ರ ಪ್ರಯೋಗಿಸಿ ಬಾಲಕ ಶಾಲೆಯ ಮೆಟ್ಟಿಲೇರಲು ಕಾರಣರಾದರು. ಚನ್ನಪಟ್ಟಣದಲ್ಲಿ ಶಾಲಾ ವ್ಯಾಸಂಗ, ನಂತರ ಬೆಂಗಳೂರು, ಮೈಸೂರುಗಳಲ್ಲಿ ಓದಿ ಸ್ವಾತಕೋತ್ತರ ಪದವಿ ಗಳಿಸಿದ್ದು ಅವರ ಓದುವ ಛಲಕ್ಕೆ ದೊರೆತ ವಿಜಯ. 1946ರಲ್ಲಿ ಅಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ದೇಜಗೌ ಅವರಿಗೆ ಕನ್ನಡವೇ ಜೀವದುಸಿರಾಯಿತು. ಬಳಿಕ ದೇಜಗೌ ಹಿಂದಿರುಗಿ ನೋಡಿದ್ದೇ ಇಲ್ಲ.

ವಿಶ್ವವಿದ್ಯಾನಿಲಯದ ಒಳಗೂ ಹೊರಗೂ ಕನ್ನಡಕ್ಕಾಗಿ ದುಡಿದ ದೇಜಗೌ ಅವರು ಸಾಗಿಬಂದ ದಾರಿ ಸುಗಮ ಪಥವೇನೂ ಆಗಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಗೆ ರೂಪುರೇಖೆ ಸಿದ್ಧಪಡಿಸುವುದರಿಂದ ಹಿಡಿದು ಅದನ್ನು ವಿಶ್ವವಿಖ್ಯಾತವಾಗಿ ಕಟ್ಟಿಬೆಳೆಸಿದ ಕೀರ್ತಿ ದೇಜಗೌ ಅವರದು. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಕನ್ನಡ ಅಧ್ಯಯನ ಸಂಸ್ಥೆಯ ಸೂರಿನಡಿ ನಡೆಯಬೇಕೆಂಬುದು ಅವರ ಕನಸಾಗಿತ್ತು. ಎಂದೇ ಜಾನಪದ, ಭಾಷಾಂತರ, ಭಾಷಾ ವಿಜ್ಞಾನ, ಹರಿದಾಸ ಸಾಹಿತ್ಯ, ಶಾಸನ ಅಧ್ಯಯನ, ಗ್ರಂಥ ಸಂಪಾದನೆ, ವಿಶ್ವಕೋಶ ಪ್ರಕಟನೆ ಇವೇ ಮೊದಲಾದವುಗಳನ್ನು ಕನ್ನಡ ಅಧ್ಯಯನ ಕೇಂದ್ರದ ವ್ಯಾಪ್ತಿಗೆ ತಂದು ಅದನ್ನು ಒಂದು ಮಿನಿ ವಿಶ್ವವಿದ್ಯಾನಿಲಯದೋಪಾದಿಯಲ್ಲಿ ಕಟ್ಟಿ ಬೆಳೆಸಿದರು. ಜಗತ್ತಿನ ಮೂಲೆಮೂಲೆಗಳಲ್ಲಿ ಆಗುತ್ತಿರುವ ಜ್ಞಾನವಿಜ್ಞಾನದ ಸಂಶೋಧನೆಗಳು, ಬೆಳವಣಿಗೆಗಳು, ವಿದ್ಯಮಾನಗಳು, ಶ್ರೇಷ್ಠ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ದೊರೆಯುವಂತಾಗಬೇಕು ಎನ್ನುವುದು ದೇಜಗೌ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅಂತೆಯೇ ಎನ್ಸೈಕ್ಲೊಪೀಡಿಯಾ ಬ್ರಿಟಾನಿಕಾ ಮಾದರಿಯಲ್ಲಿ ಹದಿನಾಲ್ಕು ಸಂಪುಟಗಳ ಕನ್ನಡ ವಿಶ್ವಕೋಶ, ಎಪಿಗ್ರಾಫಿಯಾ ಕರ್ನಾಟಕದ ಪುನರ್ ಮುದ್ರಣ, ಕನ್ನಡ-ಇಂಗ್ಲಿಷ್ ನಿಘಂಟು ಮೊದಲಾದವುಗಳ ಪ್ರಕಟನೆಗೆ ದೇಜಗೌ ಆದ್ಯತೆ ನೀಡಿದರು.

ಶಿಕ್ಷಣವೇತ್ತರಾಗಿ ದೇಜಗೌ ಅವರ ದೃಷ್ಟಿದರ್ಶನಗಳು ಸ್ಪಷ್ಟರೂಪು ಪಡೆದದ್ದು ಅವರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅಧಿಕಾರಸ್ವೀಕರಿಸಿದ ನಂತರ. ಕುಲಪತಿಗಳಾಗಿ ಅವರು ಮೊದಲು ಮಾಡಿದ ಕಾರ್ಯಗಳಲ್ಲಿ ಆದರ್ಶಪ್ರಾಯವಾದುದು, ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ಕನ್ನಡಕ್ಕೆ ಆರ್ಥಪೂರ್ಣ ಸ್ಥಾನಮಾನ ತಂದುಕೊಟ್ಟದ್ದು. ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಅನುಷ್ಠಾನಕ್ಕೆ ಬರಬೇಕೆಂಬ ಅವರ ಹೆಬ್ಬಯಕೆ ಇಲ್ಲಿಂದ ದಾಂಗುಡಿ ಇಟ್ಟಿತು. ಅದಕ್ಕೆ ಪೂರಕವಾಗಿ ‘ಆಡಳಿತ ಸಾಹಿತ್ಯದ’ ನಿರ್ಮಾಣಕ್ಕೂ ಒತ್ತಾಸೆಯಾಗಿ ನಿಂತರು. ಮಂಗಳೂರು ಮತ್ತು ಬಿ.ಆರ್. ಪ್ರಾಜೆಕ್ಟ್‌ಗಳಲ್ಲಿ ಸ್ನಾತಕೋತ್ತರ ಕೇಂದ್ರಗಳ (ಮುಂದೆ ಪ್ರತ್ಯೇಕ ವಿಶ್ವವಿದ್ಯಾನಿಲಯಗಳೇ ಆದವು) ಸ್ಥಾಪನೆ, ಶಿಕ್ಷಣ ತಜ್ಞರು ಹೇಳುವಂತೆ ಅವರ ಆಡಳಿತ ಮತ್ತು ಶೈಕ್ಷಣಿಕ ವಿಕ್ರಮದ ಪ್ರತೀಕವೇ ಆಗಿವೆ.

ಇನ್ನೂರಕ್ಕೂ ಹೆಚ್ಚು ಕೃತಿಗಳ ಕರ್ತೃವಾದ ದೇಜಗೌ ಅವರು ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ನಡಿಯಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃತಿ ರಚನೆ ಮಾಡಿದ್ದಾರೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಸಂಶೋಧನೆ, ಆತ್ಮಕಥನ-ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ತಮ್ಮ ಸೃಜನಶೀಲತೆ ಮತ್ತು ಪಾಂಡಿತ್ಯವನ್ನು ಮೆರೆದವರು. ದೇಜಗೌ ಅವರನ್ನು ಕನ್ನಡದ ‘ಗದ್ಯ ಶಿಲ್ಪಿ’ ಎಂದು ಕರೆಯಲಾಗಿದೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಈ ಗದ್ಯ ಶಿಲ್ಪಿಯ ಸೃಜನಶೀಲ ಪ್ರತಿಭಾ ಕೌಶಲವನ್ನು ಈ ಒಂದೊಂದು ಪ್ರಕಾರಗಳಲ್ಲೂ ಅವರು ನಡೆಸಿರುವ ಪಯೋಗಗಳಲ್ಲಿ ಗುರುತಿಸಬಹುದಾಗಿದೆ. ‘ಹೋರಾಟದ ಬದುಕು’ ಆತ್ಮಕಥೆಯಲ್ಲಿನ ಅಚ್ಚ ದೇಸೀ ಕನ್ನಡದಿಂದ ಹಿಡಿದು ‘ಶ್ರೀ ರಾಮಾಯಣ ದರ್ಶನಂ ವಚನಚಂದ್ರಿಕೆ’ಯಲ್ಲಿನ ಸಂಸ್ಕೃತಭೂಯಿಷ್ಠ ಕನ್ನಡದವರೆಗೆ ಅವರ ಕೃತಿಗಳಲ್ಲಿನ ವಿಭಿನ್ನ ಶೈಲಿಯನ್ನೂ ಭಾಷಾ ಪ್ರಯೋಗವನ್ನು ನಿದರ್ಶನವಾಗಿ ನೋಡಬಹುದು. ಕುವೆಂಪು ಮತ್ತು ಅವರ ಸಾಹಿತ್ಯ ಕುರಿತು ಬರೆದಿರುವ ಕೃತಿಗಳು, ಜೀವನ ಚರಿತ್ರೆಗಳು, ಕನಕ ದಾಸರ ರಾಮಧಾನ್ಯ ಚರಿತ್ರೆ ಮತ್ತು ನಳ ಚರಿತ್ರೆಯಂಥ ಸಂಪಾದಿತರ ಕೃತಿಗಳು, ಟಾಲ್‌ಸ್ಟಾಯ್‌ನ ‘ವಾರ್ ಆ್ಯಂಡ್ ಪೀಸ್’, ‘ಅನ್ನಾಕರೇನಿನ’, ಜೇನ್ ಆಸ್ಟಿನ್ ಅವರ ‘ಪ್ರೈಡ್ ಆ್ಯಂಡ್ ಪ್ರಿಜುಡೀಸ್’ ಮೊದಲಾದ ಕೃತಿಗಳ ಕನ್ನಡ ಅನುವಾದಗಳು ದೇಜಗೌ ಅವರ ಸಾಹಿತ್ಯ ಸಾಧನೆಯನ್ನು ಬಿಂಬಿಸುವ ಮಹತ್ವದ ಕೊಡುಗೆಗಳು. ನಾಲ್ಕು ಸಂಪುಟಗಳಲ್ಲಿರುವ ಕುವೆಂಪು ಸಾಹಿತ್ಯ ಅಧ್ಯಯನ, ಕುವೆಂಪು ಸೂಕ್ತಿಮಾಲೆ, ಕುವೆಂಪು ದರ್ಶನ ಮತ್ತು ಸಂದೇಶ, ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ ಕುವೆಂಪು ಸಾಹಿತ್ಯದ ಅಧ್ಯಯನಕ್ಕೆ ನೆರವಾಗ ಬಲ್ಲ ಶ್ರೇಷ್ಠ ಆಕರ ಗ್ರಂಥಗಳು.

‘ಕನಸಿನ ಲೋಕದ ಕೊಲಂಬಸ್’ ಎನ್ನುವುದು ದೇಜಗೌ ಅವರಿಗೆ ದೊರತಿರುವ ಇನ್ನೊಂದು ಅಬಿಧಾನ.ಕೊಲಂಬಸ್ ಹೊಸ ನೆಲವನ್ನು ಹುಡುಕಿ ಹೊರಟ ಸಾಹಸಿ. ದೇಜಗೌ ಹೊಸ ಬೌದ್ಧಿಕ ಕ್ಷೇತ್ರಗಳ, ನೆಲೆಗಳ ಅನ್ವೇಷಣೆ ಕೈಗೊಂಡ ಕನ್ನಡದ ಸಾಹಸಿ. ಪ್ರೊ.ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ಈ ಮಾತು ಅತಿಶಯೋಕ್ತಿ ಏನಲ್ಲ ಎಂಬುದಕ್ಕೆ, ಅವರು ವಿಶ್ವದ ಎಲ್ಲ ಜ್ಞಾನವೂ ಕನ್ನಡದಲ್ಲಿ ಲಭ್ಯವಿರಬೇಕೆಂದು ರೂಪಿಸಿದ ವಿಶ್ವಕೋಶದಂಥ ಯೋಜನೆಗಳು, ಅನುವಾದಗಳು ಸಾಕ್ಷಿಯಾಗಿ ನಮ್ಮ ಕಣ್ಣಮುಂದಿವೆ. ತಮ್ಮ ನಂತರವೂ ಇಂಥ ಕಾರ್ಯ ಮುಂದುವರಿಯಬೇಕೆಂಬ ಉದ್ದೇಶದಿಂದ ಸ್ಥಾಪಿಸಲಾದ ಕುವೆಂಪು ವಿದ್ಯಾವರ್ಧಕ ಸಂಘ, ಕುವೆಂಪು ವಿದ್ಯಾ ಪರಿಷತ್, ಕುವೆಂಪು ಭಾಷಾ ಭಾರತಿ ಮೊದಲಾದವು ದೇಜಗೌ ಅವರ ಸಾಂಸ್ಥಿಕ ಸ್ವರೂಪದ ಸಾಧನೆಗಳಾಗಿವೆ. ‘ಕನ್ನಡದ ನಿತ್ಯ ಕುಲಪತಿ’ ಎನ್ನುವುದು ಅಭಿಮಾನಿಗಳು ದೇಜಗೌ ಅವರಿಗೆ ನೀಡಿರುವ ಮತ್ತೊಂದು ಅಬಿಧಾನ. ಈ ವರ್ಣನೆ ಹೆಚ್ಚು ಔಚಿತ್ಯ ಪೂರ್ಣವಾಗಿ ಕಾಣುವುದು ದೇಜಗೌ ಅವರ ಕನ್ನಡ ಪರ ಕಾಳಜಿಗಳಲ್ಲಿ. ಅವರು ಕನ್ನಡದ ಕಟ್ಟಾಳು ಅಷ್ಟೇ ಆಗಿರದೆ ದಣಿವರಿಯದ ಹೋರಾಟಗಾರರೂ ಆಗಿದ್ದರು. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಮೊದಲಾದ ಚಳವಳಿಗಳ ಅಗ್ರ ನಾಯಕರಾಗಿದ್ದವರು.

ಕನ್ನಡದ ಕೆಲಸ ಎಂದಾಗ ಅದೊಂದು ಸಾಮೂಹಿಕ ಕೆಲಸ, ಜನಸಮುದಾಯದ ಕೆಲಸ ಎಂದು ನಂಬಿದ್ದ ಅವರು ಹಿರಿಯರು, ಕಿರಿಯರಿಬ್ಬರನ್ನೂ ಜೊತೆಗೂಡಿಸಿಕೊಂಡೇ ಕನ್ನಡಕ್ಕೆ ದುಡಿದವರು. ಕನ್ನಡದಿಂದಲೇ ತಮ್ಮ ಮುಕ್ತಿ ಎಂದು ದೃಢವಾಗಿ ನಂಬಿದ್ದ ಅವರು ಕೊನೆಯುಸಿರಿರುವ ತನಕ ಹಾಗೇ ನಡೆದುಕೊಂಡವರು. ದೇಜಗೌ ಅವರ ಕನ್ನಡ ಒಲವಿನ ಬಗ್ಗೆ ಪ್ರೊ. ಎಂ.ಎಚ್.ಕೃಷ್ಣಯ್ಯನವರು ಒಂದು ಸ್ವಾರಸ್ಯಕರ ಸಂಗತಿ ಹೇಳುತ್ತಾರೆ. ಒಮ್ಮೆ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರೊ. ಸ.ಸ.ಮಾಳವಾಡ ಅವರು ಸಿನೆಮಾ ನೋಡಲು ದೇಜಗೌ ಅವರನ್ನು ಜೊತೆಯಲ್ಲಿ ಕರೆದೊಯ್ದರಂತೆ. ಆದರೆ ಆದದ್ದು ಬೇರೆ. ಮಾಳವಾಡರು ಇಂಗ್ಲಿಷ್ ಸಿನೆಮಾ ನೋಡಲು ಹೋದರೆ ದೇಜಗೌ ಕನ್ನಡ ಸಿನೆಮಾವೇ ಬೇಕೆಂದು ಹೋದರಂತೆ. ಇಬ್ಬರ ದಾರಿ ಬೇರೆಯಾಯಿತು. ನಂತರ ಮಾಳವಾಡರು ‘‘ಒಳ್ಳೆಯ ಸಿನೆಮಾ ತಪ್ಪಿಸಿಕೊಂಡಿರಿ’’ ಎಂದಾಗ ದೇಜಗೌ ಹೇಳಿದರಂತೆ: ‘‘ಕೆಲವರಿಗೆ ರಾಮನಿಂದ ಮುಕ್ತಿ, ಕೆಲವರಿಗೆ ಶಿವನಿಂದ ಮುಕ್ತಿ, ನನಗೆ ಕನ್ನಡದಿಂದಲೇ ಮುಕ್ತಿ.’’ ಗುಡಿಸಿಲಿನಿಂದ ಗಂಗೋತ್ರಿಯವರೆಗೆ ನಡೆದು ಬಂದ ಅವರನ್ನು ‘ಕನ್ನಡದ ನಿತ್ಯ ಕುಲಪತಿ’ ಎಂದು ಕರೆದಿರುವುದರಲ್ಲಿ ಅತಿಶಯವೇನೂ ಇಲ್ಲ.

 ದೇಜಗೌ ಅವರ ಜನ್ಮ ಶತಮಾನೋತ್ಸವ ಆಚರಣೆ ರಾಜ್ಯಾದ್ಯಂತ ನಡೆಯಲಿರುವುದು ನಿರೀಕ್ಷಿತವೇ. ಅದಕ್ಕೆ ನಾಂದಿಯಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಅಖಿಲ ಕರ್ನಾಟಕ ಜನಪದ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಈ ತಿಂಗಳ 4ರಂದು ಮೈಸೂರಿನಲ್ಲಿ ಶತಮಾನೋತ್ಸವವನ್ನು ಆಚರಿಸಿದೆ. ಕನ್ನಡಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವ ಇಂಥ ಸಂದರ್ಭಗಳು ಕೇವಲ ಅವರ ಸೇವೆಯನ್ನು ಕೊಂಡಾಡುವ ಉಪನ್ಯಾಸಗಳ ಸಮಾರಂಭವಾಗಬಾರದು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಚನಾತ್ಮಕವಾಗಿ ಏನನ್ನಾದರೂ ಮಾಡಬಾರದೇಕೆ ಎಂದು ಯೋಚಿಸಬೇಕಾದಂಥ ಪರಿಸ್ಥಿತಿ ಕನ್ನಡದಲ್ಲಿ ಈಗ ಒದಗಿ ಬಂದಿದೆ. ಕನ್ನಡಪರ ಹೋರಾಟವೆಂಬುದು ಕೇವಲ ವಸೂಲಿಯ ದಂಧೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಚಳವಳಿ ಮತ್ತು ಹೋರಾಟಗಳನ್ನು ರಚನಾತ್ಮಕವಾಗಿ ನಡೆಸುವುದು ಹೇಗೆ ಎಂಬುದರತ್ತ ದೃಷ್ಟಿಹರಿಸಬೇಕಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಇಳಿವಯಸ್ಸನ್ನೂ ಲೆಕ್ಕಿಸದೆ ಗಾಂಧಿ ಮಾರ್ಗದಲ್ಲಿ ಸತ್ಯಾಗ್ರಹ ನಡೆಸಿದವರು ದೇಜಗೌ.

ಆದರೆ ಈ ಶಾಸ್ತ್ರೀಯ ಸ್ಥಾನಮಾನದಿಂದ ಕನ್ನಡದ ಕೆಲಸ ಏನೆಲ್ಲ ಆಗುತ್ತಿದೆ? ಇದರಿಂದ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಏನೆಲ್ಲ ಫಲ ದೊರೆತಿದೆ ಎಂಬುದು ಜನತೆಗೆ ತಿಳಿಯಬೇಕಾಗಿದೆ. ಕನ್ನಡ ಶಿಕ್ಷಣ ಮಾಧ್ಯಮವಾಗಬೇಕೆಂಬ ಬೇಡಿಕೆಯಂತೂ ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ನನೆಗುದಿಗೆ ಬಿದ್ದಿದೆ. ಯಾರಿಗೂ ಅದರ ಬಗ್ಗೆ ಕಾಳಜಿ ಇದ್ದಂತಿಲ್ಲ. ಕನ್ನಡ ಶಾಲೆಗಳ ದುಃಸ್ಥಿತಿ, ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು, ಕನ್ನಡ ಪುಸ್ತಕೋದ್ಯಮದ ದುಃಸ್ಥಿತಿ ಹೀಗೆ ಕನ್ನಡದ ಹಲವಾರು ಸಮಸ್ಯೆಗಳು ಇತ್ಯರ್ಥವಾಗದೆ ಉಳಿದಿವೆ. ಈ ಎಲ್ಲ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರತಿಭಟನೆ, ಮನವಿ ಸಲ್ಲಿಕೆಗಳಿಗೆ ಮೀರಿ ರಚನಾತ್ಮಕ ರೀತಿಯಲ್ಲಿ ಕನ್ನಡ ಚಳವಳಿ ಮರುಹುಟ್ಟು ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯತತ್ಪರರಾಗುವುದು ದೇಜಗೌ ಅವರಿಗೆ ಜನ್ಮ ಶತಾಬ್ದಿಯ ಯೋಗ್ಯ ಕೊಡುಗೆಯಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)