varthabharthi

ಸಂಪಾದಕೀಯ

ಅಮೆರಿಕದ ಉದ್ಧಟಕ್ಕೆ ಭಾರತದ ಉತ್ತರ

ವಾರ್ತಾ ಭಾರತಿ : 8 Oct, 2018

ಎಲ್ಲಾ ದೇಶಗಳೂ ತಮ್ಮ ತಮ್ಮ ಹಿತಾಸಕ್ತಿಗಳಿಗೆ ಪೂರಕವಾಗಿ ವಿದೇಶಾಂಗ ನೀತಿಗಳನ್ನು ರೂಪಿಸಿಕೊಳ್ಳುತ್ತವೆ. ನೆಹರೂ ನೇತೃತ್ವದ ಸ್ವತಂತ್ರ ಭಾರತವಂತೂ ಈ ನಿಟ್ಟಿನಲ್ಲಿ ಜಾಗರೂಕವಾದ ಹೆಜ್ಜೆಗಳನ್ನಿಟ್ಟಿತು. ರಶ್ಯ-ಅಮೆರಿಕದ ನಡುವೆ ಶೀತಲ ಸಮರ ತೀವ್ರವಾಗಿದ್ದ ಸಂದರ್ಭದಲ್ಲಿ ವಿಶ್ವದ ತೃತೀಯ ಶಕ್ತಿಯ ನೇತಾರನಾಗಿ ಅದು ಹೊರ ಹೊಮ್ಮಿತು. ಪಾಕಿಸ್ತಾನ ಅತ್ಯಾತುರದಲ್ಲಿ ಅಮೆರಿಕದ ತೆಕ್ಕೆಗೆ ಬಿದ್ದಾಗ, ಭಾರತ ರಶ್ಯದ ಜೊತೆಗೆ ಮೃದು ನಿಲುವನ್ನು ಹೊಂದಿತು. ತಳಮಟ್ಟದಿಂದ ಮೇಲೆದ್ದು ನಿಲ್ಲಬೇಕಾದ ಭಾರತಕ್ಕೆ ಅಮೆರಿಕದಂತಹ ಬಂಡವಾಳ ಶಾಹಿ ದೇಶಕ್ಕಿಂತ, ರಶ್ಯಾದಂತಹ ಸಮತಾವಾದಿ ದೇಶದ ಸಾಮಿಪ್ಯದ ಅಗತ್ಯವಿದೆ ಎನ್ನುವುದನ್ನು ನೆಹರೂ ಮನಗಂಡರು. ಆದರೂ ಅವರು ಎಂದಿಗೂ ರಶ್ಯದ ಜೊತೆಗೆ ಮುಕ್ತವಾಗಿ ಗುರುತಿಸಿಕೊಂಡಿರಲಿಲ್ಲ. ಸಣ್ಣದೊಂದು ಅಂತರವನ್ನು ಸದಾ ಉಳಿಸಿಕೊಂಡಿದ್ದರು. ಸೋವಿಯತ್ ರಶ್ಯ ಛಿದ್ರವಾಗುವವರೆಗೂ ಈ ಸಂಬಂಧ ಮುಂದುವರಿದಿತ್ತು.

ಭಾರತ ತಳ ಮಟ್ಟದಲ್ಲಿ ಸಾಧಿಸಿದ ಅಭಿವೃದ್ಧಿಯ ಹಿಂದೆ, ನೆಹರೂ ಅವರ ದೂರದೃಷ್ಟಿಯಿದೆ. 90ರ ದಶಕದ ಬಳಿಕ ಭಾರತದ ವಿದೇಶಾಂಗ ನೀತಿ ದುರ್ಬಲಗೊಳ್ಳತೊಡಗಿತು. ಇರಾಕ್ ಮೇಲೆ ಅಮೆರಿಕ ಯುದ್ಧ ಘೋಷಣೆ ಮಾಡಿದ ಬಳಿಕದ ದಿನಗಳಲ್ಲಿ ಭಾರತ ಗೊಂದಲಕಾರಿ ನಡೆಯನ್ನು ಇಡತೊಡಗಿತು. ಅದಾಗಲೇ ಅಮೆರಿಕವೆನ್ನುವ ಬೆಂಕಿಯಿಂದ ಪಾಕಿಸ್ತಾನ ಸುಡುತ್ತಿತ್ತು. ಈ ಹೊತ್ತಿಗೆ ಪಾಕಿಸ್ತಾನದ ಮೇಲಿನ ದ್ವೇಷವನ್ನೇ ಅಡಿಪಾಯವಾಗಿಟ್ಟುಕೊಂಡು ಭಾರತವೂ ಅಮೆರಿಕದ ಸ್ನೇಹಕ್ಕಾಗಿ ಹಂಬಲಿಸತೊಡಗಿತು. ಮಧ್ಯ ಪ್ರಾಚ್ಯವೂ ಸೇರಿದಂತೆ ಜಗತ್ತಿನ ಹಲವು ವಿದ್ಯಮಾನಗಳಲ್ಲಿ ತನ್ನ ನಿಲುವುಗಳನ್ನು ಬದಲಿಸತೊಡಗಿತು. ಅಂತಿಮವಾಗಿ ಅಮೆರಿಕದ ಜೊತೆಗಿನ ಅಣು ಒಪ್ಪಂದ, ಭಾರತದ ಕುರಿತಂತೆ ತೃತೀಯ ದೇಶಗಳು ಇಟ್ಟಿದ್ದ ಎಲ್ಲ ನಂಬಿಕೆಗಳನ್ನು ಹುಸಿ ಮಾಡಿತು. ಅಮೆರಿಕ-ಪಾಕಿಸ್ತಾನ ನಡುವಿನ ಸಂಬಂಧ ಹಳಸಿದ ಹೊತ್ತಿನಲ್ಲೇ ಭಾರತ ಅಮೆರಿಕದ ಸ್ನೇಹಕ್ಕಾಗಿ ತನ್ನ ಆಂತರಿಕ ಹಿತಾಸಕ್ತಿಗಳನ್ನು ಬಲಿಕೊಡುವ ಸಾಹಸಕ್ಕಿಳಿಯಿತು.

ಪಾಕಿಸ್ತಾನ ಒಂದೆಡೆ ಚೀನಾದ ಜೊತೆಗೆ ಸಂಬಂಧವನ್ನು ಬಿಗಿಗೊಳಿಸ ತೊಡಗಿದಂತೆಯೇ ಅಮೆರಿಕ ಭಾರತದ ಕಡೆಗೆ ಮೃದುವಾಗ ತೊಡಗಿತು. ಅಷ್ಟೇ ಅಲ್ಲ, ಇಂದಿಗೂ ಅಮೆರಿಕದ ಹಿಡಿತದಿಂದ ಪೂರ್ಣ ಪ್ರಮಾಣದಲ್ಲಿ ಪಾರಾಗಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಪಾಕಿಸ್ತಾನದ ಸಾರ್ವಭೌಮತ್ವದ ಮೇಲೆ ಅಮೆರಿಕ ಹಲವು ಬಾರಿ ದಾಳಿ ನಡೆಸಿದೆ. ವಸಾಹತು ದೇಶವೋ ಎಂಬಂತೆ ನಡೆಸಿಕೊಂಡಿದೆ. ಅಮೆರಿಕದ ಸ್ನೇಹದಿಂದ ಕೊಲ್ಲಿ ರಾಷ್ಟ್ರಗಳು ಹೇಗೆ ಆಂತರಿಕ ಬೆದರಿಕೆಯನ್ನು ಎದುರಿಸುತ್ತಿವೆ ಎನ್ನುವುದನ್ನು ಜಗತ್ತು ನೋಡುತ್ತಿದೆ. ‘‘ಸೌದಿ ತನ್ನ ಬೆಂಬಲ ಇಲ್ಲದೇ ಇದ್ದರೆ ಎರಡು ವಾರವೂ ಉಳಿಯಲಾರದು’’ ಎಂಬಂತಹ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷರು ನೀಡಿದರು. ಇದು ಒಂದು ದೇಶದ ಸಾರ್ವಭೌಮತೆಯ ಮೇಲೆ ನಡೆದ ನೇರ ದಾಳಿಯೇ ಆಗಿದೆ. ಅದರ ವಿರುದ್ಧ ಅಷ್ಟೇ ತೀವ್ರವಾದ ಹೇಳಿಕೆಯನ್ನು ನೀಡಿ, ಖಂಡಿಸುವುದರಲ್ಲೂ ಸೌದಿ ವಿಫಲ ವಾಯಿತು. ಒಂದು ದೇಶ, ಸಣ್ಣ ಸಣ್ಣ ಲಾಭಕ್ಕಾಗಿ ದೇಶದ ಆ ಂತರಿಕ ಭದ್ರತೆಯನ್ನು ಇನ್ನೊಂದು ದೇಶದ ಕೈಗೆ ಒಪ್ಪಿಸಿದರೆ ಏನಾಗಬಹುದು ಎನ್ನುವುದಕ್ಕೆ ಸೌದಿ ಮತ್ತು ಪಾಕಿಸ್ತಾನ ಉದಾಹರಣೆಗಳಾಗಿ ನಮ್ಮ ಮುಂದಿದೆ. ಪಾಕಿಸ್ತಾನ ಮತ್ತು ಕೊಲ್ಲಿ ರಾಷ್ಟ್ರಗಳು ಎದುರಿಸುತ್ತಿರುವ ಆತಂಕಗಳನ್ನು ಮುಂದೊಂದು ದಿನ ಭಾರತವೂ ಎದುರಿಸಬೇ ಕಾಗುತ್ತದೆ ಎನ್ನುವ ಸೂಚನೆ ಈಗಾಗಲೇ ಅಮೆರಿಕದಿಂದ ಭಾರತಕ್ಕೂ ಸಿಕ್ಕಿದೆ.

  ರಶ್ಯ ಮತ್ತು ಭಾರತದ ನಡುವೆ ನಡೆದಿರುವ ಎಂಟು ರಕ್ಷಣಾ ಒಪ್ಪಂದಗಳು ಭಾರತದ ಪಾಲಿಗೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಈ ಒಪ್ಪಂದ ತೀವ್ರ ಚರ್ಚೆಗೆ ಬರಲು ಕಾರಣ, ಅಮೆರಿಕ ಸ್ಪಷ್ಟವಾಗಿ ಇದರ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ ರುವುದು. ಭಾರತವು ರಶ್ಯದ ಜೊತೆಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವುದನ್ನು ತಾನು ಸಹಿಸುವುದಿಲ್ಲ ಎಂಬ ಹೇಳಿಕೆಯನ್ನು ಇತ್ತೀಚೆಗೆ ಅಮೆರಿಕ ನೀಡಿತು. ಭಾರತ ಸರ್ವ ಸ್ವತಂತ್ರ ದೇಶ. ಎರಡು ದಶಕಗಳ ಹಿಂದಿನವರೆಗೂ ಭಾರತ ತನ್ನದೇ ಆದ ಸ್ಪಷ್ಟ ವಿದೇಶಾಂಗ ನೀತಿಯನ್ನು ಹೊಂದಿತ್ತು. ಅಮೆರಿಕದ ಯಾವುದೇ ನೆರವಿಲ್ಲದೆ ಭಾರತ ವಿಶ್ವದಲ್ಲಿ ಅಭಿವೃದ್ಧಿಹೊಂದುತ್ತಿರುವ ದೇಶವಾಗಿ ಗುರುತಿಸಿಕೊಂಡಿತ್ತು. ಪಾಕಿಸ್ತಾನದ ಜೊತೆಗೆ ಎರಡು ಪ್ರಮುಖ ಯುದ್ಧಗಳನ್ನು ಗೆದ್ದುಕೊಂಡಿತ್ತು. ಅಮೆರಿಕದ ನೆರವು ಪಾಕಿಸ್ತಾನಕ್ಕೆ ಇದ್ದಾಗಲೂ, ಬಾಂಗ್ಲಾವನ್ನು ಪಾಕಿಸ್ತಾನದಿಂದ ಸ್ವತಂತ್ರಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು. ಇಂತಹ ಭಾರತಕ್ಕೆ ಅಮೆರಿಕ ಇಂದು ಆದೇಶ ನೀಡುವ ಮಟ್ಟಕ್ಕೆ ಬಂದಿದೆ ಎಂದರೆ ಅದರ ಹಿಂದೆ, ಭಾರತದ ವಿದೇಶಾಂಗ ನೀತಿಯ ಸ್ಪಷ್ಟ ವೈಫಲ್ಯ ಎದ್ದು ಕಾಣುತ್ತ್ತದೆ. ಅಮೆರಿಕದ ಸ್ನೇಹಕ್ಕಾಗಿ ಅದು ಹೇಳಿದಲ್ಲೆಲ್ಲ ಸಹಿ ಹಾಕುತ್ತಾ, ಅವರ ವೈರಿ ರಾಷ್ಟ್ರಗಳನ್ನೆಲ್ಲ ತನ್ನ ವೈರಿ ರಾಷ್ಟ್ರಗಳಾಗಿ ಪರಿವರ್ತಿಸುತ್ತಾ ಬಂದ ಪರಿಣಾಮ ಇದಾಗಿದೆ.

ಇಂದು ಭಾರತ ರೂಪಾಯಿ ಡಾಲರ್ ಎದುರು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತೈಲಬೆಲೆಯೇರಿಕೆಯಾಗುತ್ತಿದೆ. ಇರಾನ್ ವಿರುದ್ಧ ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧಗಳ ವಿಚಾರದಲ್ಲಿ ಭಾರತವು ಜಾಣ್ಮೆಯ ನಡೆಯನ್ನು ಅನುಸರಿಸಿದ್ದರೆ ಇಂದು ತೈಲದ ಬೆಲೆ ಈ ಪರಿಯಲ್ಲಿ ಏರುತ್ತಿರಲಿಲ್ಲವೇನೋ? ಭಾರತವು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದೆ ಇದ್ದರೂ ತನ್ನ ತೈಲ ಆವಶ್ಯಕತೆಗಳನ್ನು ಅಮೆರಿಕ ಮೂಲಕ ಈಡೇರಿಸಿಕೊಳ್ಳಲು ಸಾಧ್ಯ ಎನ್ನುವ ದೇಶದೊಳಗಿನ ಕಾರ್ಪೊರೇಟ್ ವಲಯದ ತಪ್ಪು ಅಭಿಪ್ರಾಯಕ್ಕೆ ದೇಶದ ಜನರು ಬೆಲೆ ತೆರಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇರಾನ್ ಮತ್ತು ಇರಾಕ್ ಭಾರತದೊಂದಿಗೆ ಸದಾ ಸ್ನೇಹವನ್ನು ಬಯಸುತ್ತಿದ್ದವು. ಅಮೆರಿಕಕ್ಕಾಗಿ ಭಾರತವು ಇರಾಕ್ ವಿರುದ್ಧ ನಿಂತಿತು. ಇದೀಗ ಇರಾನ್ ಜೊತೆಗೆ ಸ್ನೇಹವನ್ನು ಸಂಪೂರ್ಣ ಕಡಿದುಕೊಳ್ಳುವ ಹಂತಕ್ಕೆ ಬಂದಿದೆ. ಭಾರತವು ಯಾರ ಜೊತೆಗೆ ಸಂಬಂಧವನ್ನು ಹೊಂದಬೇಕು, ಯಾರ ಜೊತೆಗೆ ವ್ಯಾಪಾರವನ್ನು ಮಾಡಬೇಕು ಎನ್ನುವುದು ಭಾರತದ ಹಿತಾಸಕ್ತಿಗೆ ಪೂರಕವಾಗಿ ಇರಬೇಕೇ ಹೊರತು, ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಯಲ್ಲ. ಈ ನಿಟ್ಟಿನಲ್ಲಿ ಅಮೆರಿಕಕ್ಕೆ ಸ್ಪಷ್ಟ ಸಂದೇಶವೊಂದನ್ನು ನೀಡುವುದು ಭಾರತದ ಆದ್ಯ ಕರ್ತವ್ಯವಾಗಿದೆ. ಬಹುಶಃ ಭಾರತ-ರಶ್ಯ ನಡುವಿನ ದ್ವಿಪಕ್ಷೀಯ ಒಪ್ಪಂದ ಈ ಸಂದೇಶವನ್ನು ಅಮೆರಿಕಕ್ಕೆ ತಲುಪಿಸಿದೆ. ಆದರೆ ಸಮಸ್ಯೆ ಇಲ್ಲಿಗೇ ಮುಗಿಯುವುದಿಲ್ಲ.

ತಡವಾಗಿಯಾದರೂ ಅಮೆರಿಕದ ಜೊತೆಗಿನ ಸಂಗದಿಂದ ಆಗಬಹುದಾದ ದೂರಗಾಮಿ ದುಷ್ಪರಿಣಾಮಗಳ ಕುರಿತಂತೆ ಭಾರತಕ್ಕೆ ಅರಿವಾಗಿದೆ. ಇರಾನ್‌ನ ಜೊತೆಗೆ ಪರೋಕ್ಷ ನಂಟನ್ನು ಉಳಿಸಿಕೊಳ್ಳಲು ಬೇರೆ ದಾರಿಗಳನ್ನು ಹುಡುಕುತ್ತಿದೆ. ಭಾರತದ ರಾಜಕೀಯ ತಂತ್ರವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಅಮೆರಿಕ ಅಮಾಯಕ ಅಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಅಮೆರಿಕವು ಭಾರತದ ಮೇಲೆ ಇನ್ನಷ್ಟು ಒತ್ತಡಗಳನ್ನು ಹೇರುವ ಸಾಧ್ಯತೆಗಳಿವೆ ಮತ್ತು ಭಾರತ ಉಪಖಂಡ ಅಮೆರಿಕದ ಒತ್ತಡ ಗಳನ್ನು ಒಂದಾಗಿ ಎದುರಿಸುವುದಕ್ಕೆ ಮನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತ ಉಪಖಂಡ ಮೊತ್ತ ಮೊದಲು ಶಾಂತಿಗೆ ಆದ್ಯತೆಯನ್ನು ನೀಡಬೇಕು. ತನ್ನ ನೆರೆ ರಾಷ್ಟ್ರಗಳ ಜೊತೆಗೆ ಸ್ನೇಹವನ್ನು ಉತ್ತಮ ಪಡಿಸಿಕೊಳ್ಳದೇ ಅಮೆರಿಕದ ಮುಷ್ಟಿಯಿಂದ ಬಿಡುಗಡೆ ಪಡೆಯುವುದು ಭಾರತಕ್ಕಾಗಲಿ, ಪಾಕಿಸ್ತಾನಕ್ಕಾಗಲಿ ಸಾಧ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)