varthabharthi

ಸಂಪಾದಕೀಯ

ರಾಜ್ಯದಲ್ಲಿ ಉಪಚುನಾವಣೆ: ಯಾರು ಹೊಣೆ?

ವಾರ್ತಾ ಭಾರತಿ : 10 Oct, 2018

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಚುನಾವಣೆ ಘೋಷಣೆಯ ಜೊತೆಗೇ ರಾಜ್ಯದಲ್ಲಿ ಖಾಲಿ ಉಳಿದಿರುವ ಮೂರು ಲೋಕಸಭಾ ಕ್ಷೇತ್ರಗಳಿಗೂ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಮಂಡ್ಯ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳ ಮತದಾರರ ಮೇಲೆ ಇದೀಗ ಅನಿರೀಕ್ಷಿತ ಚುನಾವಣೆಯೊಂದು ಹೇರಿಕೆಯಾದಂತಾಗಿದೆ. ಲೋಕಸಭಾ ಚುನಾವಣೆಗೆ ಇನ್ನು ಉಳಿದಿರುವುದು ಬರೇ ಐದು ತಿಂಗಳು. ಇದೀಗ ಈ ಮೂರೂ ಕ್ಷೇತ್ರಗಳಲ್ಲಿ ಚುನಾವಣೆ ನಡೆದು ಜನಪ್ರತಿನಿಧಿಗಳ ಆಯ್ಕೆಯಾದರೂ, ಐದು ತಿಂಗಳ ಬಳಿಕ ಮತ್ತೆ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಬೇಕಾಗಿದೆ. ಬರೇ ಐದು ತಿಂಗಳಿಗಾಗಿ ಲೋಕಸಭಾ ಚುನಾವಣೆಯನ್ನು ನಡೆಸುವುದು ಎಷ್ಟು ಸರಿ? ಇದು ಕರ್ನಾಟಕ ರಾಜಕೀಯ ವಲಯದಲ್ಲಿ ಚರ್ಚೆಗಳನ್ನು ಹುಟ್ಟಿಸಿ ಹಾಕಿದೆ.

ಚುನಾವಣಾ ಆಯೋಗದ ತರ್ಕದ ಪ್ರಕಾರ, ಮೂರು ಲೋಕಸಭಾ ಕ್ಷೇತ್ರ ಹಲವು ತಿಂಗಳುಗಳ ಹಿಂದೆಯೇ ಖಾಲಿ ಬಿದ್ದಿರುವುದರಿಂದ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಆದರೆ ಆಯ್ಕೆಯಾದ ಅಭ್ಯರ್ಥಿ ಎಷ್ಟು ತಿಂಗಳು ಕ್ಷೇತ್ರಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ವಿರುತ್ತದೆ ಎನ್ನುವುದನ್ನು ಗಮನಿಸುವಾಗ, ಈ ಚುನಾವಣೆಯಿಂದ ಆಯಾ ಕ್ಷೇತ್ರಗಳಿಗೆ ನಿಜಕ್ಕೂ ಎಷ್ಟರ ಮಟ್ಟಿಗೆ ಪ್ರಯೋಜನವಾಗಲಿದೆ ಎಂಬ ಪ್ರಶ್ನೆ ಏಳುತ್ತದೆ. ಈ ಕುರಿತಂತೆ ಹಲವು ರಾಜಕೀಯ ನಾಯಕರು ತಮ್ಮ ಆಕ್ಷೇಪಗಳನ್ನು ಎತ್ತಿದ್ದಾರೆ. ರಾಜಕೀಯ ಪಕ್ಷಗಳೂ ಈ ಚುನಾವಣೆಯ ಬಗ್ಗೆ ತಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸಿವೆ. ಐದು ತಿಂಗಳಲ್ಲಿ ಒಬ್ಬ ಜನಪ್ರತಿನಿಧಿಗೆ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಸಿಗುವುದೇ ಅನುಮಾನವಾಗಿರುವಾಗ, ಈ ಅವಧಿಯಲ್ಲಿ ಅವನು ಪ್ರಾಮಾಣಿಕವಾಗಿ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಸಾಧ್ಯವೇ? ಆಯ್ಕೆಯಾದ ಒಂದೆರಡು ತಿಂಗಳು ತನ್ನ ಸ್ಥಾನದ ಕಾರ್ಯವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಪೋಲಾಗಿ ಬಿಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಗೆದ್ದ ಬೆನ್ನಿಗೇ ಇನ್ನೊಂದು ಚುನಾವಣೆಯ ಪೂರ್ವ ತಯಾರಿಯಲ್ಲಿರುತ್ತಾನೆ. ಹೀಗಿರುವಾಗ, ಆತನಿಗೆ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವೆಲ್ಲಿರುತ್ತದೆ?

ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದು ಪೂರ್ವತಯಾರಿ ಪರೀಕ್ಷೆ ಇದ್ದಂತೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ನಡೆಸುವ ಅಭ್ಯಾಸ ಪಂದ್ಯ. ಆದರೆ ಇದಕ್ಕಾಗಿ ಶುಲ್ಕವನ್ನು ಮಾತ್ರ ಶ್ರೀಸಾಮಾನ್ಯನೇ ತೆರಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಇನ್ನೊಂದು ವಾದವೂ ಇದೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಚುನಾವಣೆ ನಡೆಸುವ ಅವಕಾಶವಿದ್ದೂ, ಐದು ತಿಂಗಳ ಕಾಲ ಒಂದು ಕ್ಷೇತ್ರವನ್ನು ಅಧಿಕಾರಿಗಳ ಕೈಗೆ ಒಪ್ಪಿಸುವುದು ಎಷ್ಟು ಸರಿ? ಇದು ಪ್ರಜಾಸತ್ತೆಗೆ ಮಾಡುವ ಅವಮಾನವಲ್ಲವೇ? ಈ ವಾದದಲ್ಲೂ ಅಲ್ಪ ಸ್ವಲ್ಪ ಹುರುಳಿದೆ. ಆದರೆ ಈ ಚುನಾವಣೆಯ ಮೂಲಕ ಐದು ತಿಂಗಳಲ್ಲಿ ದೊಡ್ಡ ಬದಲಾವಣೆಯೇನೂ ಆಗದು. ಎರಡು ಬಾರಿ ದಿಲ್ಲಿಗೆ ಹೋಗಿ ಬರುವಷ್ಟರಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದಿರುತ್ತದೆ. ಇಷ್ಟಕ್ಕಾಗಿ ವೆಚ್ಚವಾಗುವ ಹಣ, ನಡೆಯುವ ಅಕ್ರಮಗಳ ಬಲಿಪಶುಗಲು ಮಾತ್ರ ಮತದಾರರು.

ಈ ಚುನಾವಣೆಗಾಗಿ ನಾವು ಆಯೋಗವನ್ನು ವ್ಯರ್ಥ ಹೊಣೆ ಮಾಡುವುದಕ್ಕಿಂತ, ಈ ಚುನಾವಣೆಯನ್ನು ಜನರ ಮೇಲೆ ಹೇರಿದ ನಿಜವಾದ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯಬೇಕು. ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಕ್ಷೇತ್ರಗಳ ಮೇಲೆ ಲೋಕಸಭಾ ಚುನಾವಣೆ ಮತ್ತೊಮ್ಮೆ ಹೇರುವುದಕ್ಕೆ ಕಾರಣ ಕರ್ತರಾದವರು ನಿಜಕ್ಕೂ ಯಾರು? ಜನಪ್ರತಿನಿಧಿಗಳು ಅಕಾಲ ಮರಣಕ್ಕೀಡಾದಾಗ ಅಥವಾ ಇನ್ನಾವುದೋ ಗಂಭೀರ ಕಾರಣಗಳಿಗಾಗಿ ರಾಜೀನಾಮೆ ನೀಡಿದಾಗ ಅಲ್ಲಿ ಉಪ ಚುನಾವಣೆ ನಡೆಯುವುದು ಸಹಜ. ಆದರೆ ಇಲ್ಲಿ ರಾಜಕೀಯ ನಾಯಕರು ತಮ್ಮ ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ ಲೋಕಸಭೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂದು ಇಚ್ಛೆ ಇದ್ದವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾದರೂ ಏಕೆ? ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿರುತ್ತಾರೆ. ಗೆದ್ದ ಬಳಿಕ ಆ ಸ್ಥಾನಕ್ಕೆ ರಾಜೀನಾಮೆ ನೀಡುವುದು ಮತದಾರರಿಗೆ ವಂಚಿಸಿದಂತೆಯೇ ಅಲ್ಲವೇ? ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮತದಾರರ ಮೇಲೆ ಮತ್ತೊಂದು ಚುನಾವಣೆಯನ್ನು ಹೇರಬೇಕಾಗುತ್ತದೆ. ಇದರಿಂದ ದೇಶದ ಹಣ ಪೋಲಾಗುತ್ತದೆ ಎನ್ನುವ ಅರಿವು ರಾಜೀನಾಮೆ ನೀಡಿದ ರಾಜಕಾರಣಿಗಳಿಗೆ ಯಾಕಿರಲಿಲ್ಲ? ನಾಳೆ ಲೋಕಸಭಾ ಚುನಾವಣೆ ಘೋಷಣೆಯಾದಾಗ, ಇತ್ತೀಚೆಗೆ ಗೆದ್ದ ಕೆಲವು ಶಾಸಕರು ಅದರಲ್ಲೂ ಸ್ಪರ್ಧಿಸುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಅವರು ಗೆದ್ದರೆ ವಿಧಾನಸಭೆಗೆ ಮರು ಚುನಾವಣೆ ನಡೆಸಬೇಕು. ರಾಜಕಾರಣಿಗಳ ಈ ಬೇಜವಾಬ್ದಾರಿ ನಡೆಗೆ ಕಡಿವಾಣ ಹಾಕುವುದು ಇಂದಿನ ಅಗತ್ಯವಾಗಿದೆ.

ಯಾವುದೇ ರಾಜಕಾರಣಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಾರದು ಎನ್ನುವ ಕಠಿಣ ನಿಯಮವನ್ನು ಮಾಡಬೇಕು. ಚುನಾವಣೆಯಲ್ಲಿ ಗೆದ್ದರೆ ಆತ ಎರಡೂ ಕ್ಷೇತ್ರಗಳನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದ ಮೇಲೆ, ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾದರೂ ಯಾಕೆ? ರಾಜಕಾರಣಿಯ ವೈಯಕ್ತಿಕ ಸ್ವಾರ್ಥಕ್ಕಾಗಿ ಮತದಾರರು ಯಾಕೆ ಎರಡೆರಡು ಚುನಾವಣೆಗಳನ್ನು ಮೈಮೇಲೆ ಹೇರಿಕೊಳ್ಳಬೇಕು.? ಒಂದು ವೇಳೆ ಒಬ್ಬ ರಾಜಕಾರಣಿಯ ಕಾರಣದಿಂದ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆ ಹೇರಿಕೆಯಾಯಿತು ಎಂದಾದಲ್ಲಿ, ಆಯೋಗಕ್ಕೆ ವೆಚ್ಚವಾದ ಹಣವನ್ನು ಆ ಅಭ್ಯರ್ಥಿಯಿಂದಲೇ ಕಕ್ಕಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ, ಯಾವುದೇ ಗಂಭೀರಕಾರಣವಿಲ್ಲದೆ, ಎದುರಾಳಿಗಳ ಹಣದ ಆಮಿಷಕ್ಕೆ ಬಲಿಯಾಗಿ ರಾಜೀನಾಮೆ ನೀಡುವುದು ಕೂಡ ಅಪರಾಧವಾಗಿ ಪರಿಗಣಿಸಬೇಕು.

ರಾಜಕಾರಣಿಗಳು ಈ ಮೂಲಕ ಪ್ರಜಾಸತ್ತೆಯನ್ನು ಒಂದು ಅಣಕವಾಗಿಸುತ್ತಿದ್ದಾರೆ. ಒಂದು ಪಕ್ಷದಿಂದ ಸ್ಪರ್ಧಿಸಿ ಗೆದ್ದು, ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿ ಇನ್ನೊಂದು ಪಕ್ಷದಿಂದ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಮತದಾರರಿಗೆ ಮಾಡುವ ವಂಚನೆ ಮಾತ್ರವಲ್ಲ, ಅವರು ಪ್ರಜಾಸತ್ತೆಯನ್ನು ಸಾರ್ವಜನಿಕವಾಗಿ ಅಣಕಿಸುತ್ತಿದ್ದಾರೆ. ಇದರ ಜೊತೆ ಜೊತೆಗೇ, ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ, ತನ್ನ ಸ್ಥಾನದಲ್ಲಿ ಇದ್ದುಕೊಂಡೇ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಕೂಡ ಚುನಾವಣೆಯ ತಮಾಷೆಯಾಗಿದೆ. ಗೆದ್ದರೆ ಲೋಕಸಭೆಗೆ ರಾಜೀನಾಮೆ, ಸೋತರೆ, ಲೋಕಸಭೆಯಲ್ಲೇ ಮುಂದುವರಿಯುವ ಸಮಯ ಸಾಧಕ ರಾಜಕಾರಣಕ್ಕೆ ಕಡಿವಾಣ ಹಾಕುವುದು ಚುನಾವಣಾ ಆಯೋಗದ ಆದ್ಯತೆಯ ಕೆಲಸವಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ, ವರ್ಷಕ್ಕೆ ಎರಡು ಬಾರಿ ಮತದಾರರು ಚುನಾವಣೆಯನ್ನು ಎದುರಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)