varthabharthi

ಅನುಗಾಲ

ತಣಿಯದ ಶಬರಿಮಲೆ

ವಾರ್ತಾ ಭಾರತಿ : 11 Oct, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತ್ರಿವಳಿ ತಲಾಖ್ ತೀರ್ಪು ತಂದುಕೊಟ್ಟ ನೆಮ್ಮದಿಯನ್ನು ಈ ತೀರ್ಪು ಬಹುಮತೀಯರಲ್ಲಿ ತಂದಿಲ್ಲ. ಅನ್ಯಮತೀಯ ಮಹಿಳೆಯರ ಸಮಾನತೆಯನ್ನು ಗೌರವಿಸಿದ ಸಮಾಜವು ಈ ಬೆಳಕು ಬೆಂಕಿಯಾಗಿ ತಮ್ಮ ಅಂಡನ್ನೇ ಸುಡುತ್ತದೆಂಬ ಪರಿಸ್ಥಿತಿ ಬಂದಾಗ ನೀರನ್ನು ಹುಡುಕಿಕೊಂಡು ಅಂಡಲೆಯುವುದನ್ನು ಕಂಡರೆ ನಗುಬರುತ್ತದೆ.


ಈ ದೇಶದ ಬಹುಪಾಲು ಸಮಸ್ಯೆಗಳು ಹುಟ್ಟಿಕೊಂಡಿರುವುದೇ ದೇವರು, ಪೂಜಾಕೇಂದ್ರ ಮತ್ತು ಧರ್ಮದಿಂದ. ಇದನ್ನು ನಮ್ಮ ಪುರೋಹಿತಶಾಹಿಯು ಸಾರಾ ಸಗಟಾಗಿ ಖಂಡಿಸಬಹುದು; ಏಕೆಂದರೆ ಅವರ ಹಿತಾಸಕ್ತಿ ಅಡಗಿರುವುದೇ ಈ ತ್ರಿವಳಿಗಳಲ್ಲಿ. ಧರ್ಮದ (ಅಥವಾ ಧರ್ಮಗಳ- ಏಕೆಂದರೆ ಇಂದು ಧರ್ಮ ಎಂಬುದು ಮತ ಎಂಬ ಅರ್ಥದಲ್ಲೇ ಬಳಕೆಯಾಗುತ್ತಿದೆ) ಸಾರ ಅರ್ಥವಾಗುವುದು ಮನುಷ್ಯಕುಲದ ಹಿತವಿರಬಹುದು; ಆದರೆ ಪಟ್ಟಭದ್ರರ ಹಿತವು ಇಂತಹ ಹಾದಿಯಲ್ಲಿ ಸಾಧನೆಯಾಗುವುದಿಲ್ಲ. ಆದ್ದರಿಂದ ಎಲ್ಲರೂ ಕತ್ತಲಲ್ಲಿದ್ದರೆ ಬೆಳಕು ತೋರಬಹುದು. ಎಲ್ಲರೂ ಬೆಳಕಿಗೆ ಬಂದರೆ, ಬೆಳಕನ್ನು ಕಂಡರೆ, ಬೆಳಕು ತೋರುವುದಾದರೂ ಯಾರಿಗೆ ಮತ್ತು ಯಾಕೆ? ಆದ್ದರಿಂದ ಕತ್ತಲೆಗೆ (‘ತನ್ನದೇ ಆದ’ ಎಂಬ ಕ್ಲೀಶೆಯೊಂದಿಗೆ) ಮಹತ್ವವಿದೆ ಮತ್ತು ಬೆಳಕು ಎಷ್ಟು ಮುಖ್ಯವೋ ಕತ್ತಲೂ ಅಷ್ಟೇ ಮುಖ್ಯ. ಹಗಲು ಎಷ್ಟು ಮುಖ್ಯವೋ ಇರುಳೂ ಅಷ್ಟೇ ಮುಖ್ಯ.

 ಜೀವಜಾಲದಲ್ಲಿ ಇಂತಹ ವಿಚಾರಗಳನ್ನು ಸೃಷ್ಟಿಸಿಕೊಂಡದ್ದು ಮನುಷ್ಯನ ವೈಶಿಷ್ಟ್ಯ. ಇವು ಪ್ರಾಯಃ ಮನುಷ್ಯನಿಗೆ ನೆಮ್ಮದಿಯನ್ನು ತರುತ್ತದೆಂಬ ಕಾರಣಕ್ಕೆ ಸೃಷ್ಟಿಸಲ್ಪಟ್ಟವೋ ಗೊತ್ತಿಲ್ಲ. ನಾನಾ ನಮೂನೆಯ ದೇವರುಗಳು ಕಾಲಕಾಲಕ್ಕೆ ಪ್ರತ್ಯಕ್ಷರಾಗಿದ್ದಾರೆ; ಪೂಜೆಗೊಂಡಿದ್ದಾರೆ; ನೆಲೆಕಂಡಿದ್ದಾರೆ. ದೇವರುಗಳು ತಮ್ಮ ತಮ್ಮ ಅವತಾರ ಸಮಾಪ್ತಿಯಾಗಿ ಅದೃಶ್ಯರಾದ ಮೇಲೂ ಅವರುಗಳು ಎಬ್ಬಿಸಿದ ಹೊಗೆ, ಧೂಳು ಅದೃಶ್ಯವಾಗಲು ನಿರಾಕರಿಸಿದ್ದರ ಪ್ರಭಾವವೆಂಬಂತೆ ಸಮಾಜ ನಡೆದುಕೊಂಡಿದೆ. ಇದಕ್ಕಾಗಿಯೇ ಪೂಜಾಕೇಂದ್ರಗಳು ಸೃಷ್ಟಿಯಾದವು. ಈ ಕೇಂದ್ರಗಳಲ್ಲಿ ಮನುಷ್ಯನಿಗೆ ಅಗತ್ಯವಿದ್ದ ಧಾತುಗಳು ವಿಕಾಸಗೊಂಡಿವೆಯೆಂದು ತಿಳಿದರೆ ತಪ್ಪಾಗುತ್ತದೆ. ಏಕೆಂದರೆ ಅವು ಎಂದೂ ಸಾಂಸ್ಕೃತಿಕ ಕೇಂದ್ರಗಳಾಗಲೇ ಇಲ್ಲ. ಬದಲಾಗಿ ಮೌಢ್ಯಗಳ, ಶೋಷಣೆಯ, ಪಟ್ಟಭದ್ರಧರ್ಮಗಳ ಕೇಂದ್ರಗಳಾದವು. ಬಿಂದ್ರನ್‌ವಾಲೆ ಸಿಖ್ಖರ ಸರ್ವೋಚ್ಚ ಪೂಜಾಕೇಂದ್ರದಲ್ಲಿ ಅವಿತು ಇಂದಿರಾ ಸರಕಾರ ‘ಆಪರೇಷನ್ ಬ್ಲೂಸ್ಟಾರ್’ ನಡೆಸಬೇಕಾಗಿ ಬಂದದ್ದು ಈ ದೇವರು, ಪೂಜಾಕೇಂದ್ರ ಮತ್ತು ಧರ್ಮಗಳೆಂಬ ವಿಚಾರಗಳ ದುರ್ದೈವ. (ಈ ‘ದುರ್ದೈವ’ ಎಂಬ ಪದದಲ್ಲೂ ಒಂದು ‘ದೈವ’ವಿರುವುದು ನಮ್ಮ ‘ಸುದೈವ!’)

ಆದರೆ ನಮ್ಮ ದಾರ್ಶನಿಕರು ಕಾಲದುದ್ದಕ್ಕೂ ಸಾಮಾಜಿಕ ಸಾಮರಸ್ಯವನ್ನು, ಜೀವಿಗಳ ಒಳಿತನ್ನು ಸಾಧಿಸಬೇಕಾದರೆ ಈ ಮೂರು ವಿಚಾರಗಳನ್ನು ಹೊರತುಪಡಿಸಿದರೆಂಬುದನ್ನು ನೆನಪಿಸಿದರೆ ಈ ಮೂರು ವಿಚಾರಗಳು ಸಮಾಜಕ್ಕೆ ನಿಜಕ್ಕೂ ಅಗತ್ಯವಿದ್ದುವೇ ಎಂದು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕು. ದರಿದ್ರ ನಾರಾಯಣನ ಸೇವೆಯೇ ನೈಜದೇವರ ಸೇವೆಯೆಂದು ಹೇಳಿದರೆ ಕೈಚಪ್ಪಾಳೆ ತಟ್ಟುತ್ತೇವಾದರೂ ಮತ್ತೆ ಮಡಿಯುಟ್ಟು (ಮದ ಮತ್ಸರ ಮೋಹ ಒಳಗಿಟ್ಟುಕೊಂಡು) ಅಸ್ಪಶ್ಯತೆಯನ್ನು ಆಚರಿಸಿ ಧನ್ಯರಾಗುತ್ತೇವೆ. ಸಮಾಜದ ಕಟ್ಟಕಡೆಯವನಿಗೆ ಸರ್ವ ಅನುಕೂಲಗಳು ಲಭ್ಯವಾಗುವ ವರೆಗೆ ಯಾವ ದೇವರೂ ಸಾರ್ಥಕವಾಗುವುದಿಲ್ಲವೆಂಬುದು ನೆನಪಿದ್ದರೆ ಅಥವಾ ಕನಿಷ್ಠ ಅಂತಹದ್ದೊಂದು ವಿಚಾರವು ಮನಸ್ಸಿನಲ್ಲಿದ್ದರೆ, ಸಾಮಾಜಿಕ ಹಿತ ಸದ್ಯದಲ್ಲದಿದ್ದರೂ ಎಂದಾದರೂ ಸಾಧ್ಯ.

ಶಬರಿಮಲೆಯ ಕುರಿತ ಸರ್ವೋಚ್ಚ ನ್ಯಾಯಾಲಯದ ಬಹುಮತದ ತೀರ್ಪು ಸರ್ವಮಾನ್ಯವಾಗಬೇಕಿತ್ತು. ಅದರ ಅಲ್ಪಮತದ ತೀರ್ಪು ಧಾರ್ಮಿಕ ಭಾವನೆಗಳಲ್ಲಿ ನ್ಯಾಯಾಲಯಗಳು ಪ್ರವೇಶಿಸುವುದು ಎಷ್ಟು ಸರಿ ಎಂಬ ಅಭಿಪ್ರಾಯವನ್ನು ಬಹಿರಂಗಪಡಿಸಿದವಾದರೂ ಈ ಪ್ರಶ್ನೆ ಈಗಾಗಲೇ ‘ತ್ರಿವಳಿ ತಲಾಖ್’ ಮತ್ತು ‘ನಮಾಝ್‌ಗೆ ಮಸೀದಿಯ ಅವಶ್ಯಕತೆ’ಯ ಕುರಿತ ತೀರ್ಪುಗಳಲ್ಲಿ ವೇದ್ಯವಾಗಿತ್ತು. ವಿಶೇಷವೆಂದರೆ ಮೊದಲಿನ ಎರಡು ತೀರ್ಪುಗಳು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದವಾಗಿದ್ದು ಅವು ಪ್ರಕಟಗೊಂಡಾಗ ಹೆಚ್ಚು ಸಂತೋಷಪಟ್ಟದ್ದು ಇತರ ಧರ್ಮೀಯರೇ. ನಮ್ಮದಲ್ಲದ ಸಮಸ್ಯೆಗೆ ಯಾವುದೇ ಪರಿಹಾರ ಬಂದರೂ ಸಂತಸ ಪಡುವ ಅಪೂರ್ವ ಸಾಮರ್ಥ್ಯ ಈ ದೇಶದ ಜನರಿಗಿದೆ. ಭ್ರಷ್ಟತೆಯನ್ನು ಹೊರತುಪಡಿಸಿದರೆ ಇದೊಂದೇ ಈ ದೇಶದ ಜಾತ್ಯತೀತ ನಡತೆ. ತ್ರಿವಳಿ ತಲಾಖ್‌ನ ಕುರಿತ ತೀರ್ಪು ಮುಸ್ಲಿಮ್ ಸಮುದಾಯಕ್ಕೆ ಅದರಲ್ಲೂ ಮುಸ್ಲಿಮ್ ಮಹಿಳೆಯರಿಗೆ ಸಂಬಂಧಿಸಿದ್ದು. ಅದು ಮುಸ್ಲಿಮ್ ಪುರುಷರ ಕೈಯಲ್ಲಿ ಮಹಿಳೆಯರ ಶೋಷಣೆಯನ್ನು ತಡೆಯುತ್ತದೆಂಬುದಕ್ಕಾಗಿ ಚಾರಿತ್ರಿಕ ದಾಖಲೆಯಾಯಿತು. ಆದರೆ ಇದರ ಮೂಲಕ ಮುಸ್ಲಿಮ್ ಸಮುದಾಯದ ಮೇಲೆ ಸೇಡು ತೀರಿಸಿಕೊಂಡೆವೆಂದು ಭಾವಿಸಿದ ಬಹುಮತೀಯರು ಸಾಕಷ್ಟಿದ್ದಾರೆ. ಇದು ಮಾನವೀಯತೆಗಿಂತಲೂ ಮತ್ಸರಜನ್ಯವಾದದ್ದೆಂದು ಹೇಳಿದರೆ ಕುಹಕವಾಗಲಾರದು. ಪ್ರಾಯಃ ಕಾನೂನು ಬದ್ಧ ಬಹುಪತ್ನಿತ್ವವನ್ನು ನಿಷೇಧಿಸಿದರೆ ಬಹುಮತೀಯರು ಇನ್ನಷ್ಟು ಸಂತೋಷಪಡಬಹುದೇನೋ? ಯಾರೂ ಆ ಕುರಿತು ಇನ್ನೂ ನ್ಯಾಯಾಲಯದ ಮೆಟ್ಟಲನ್ನೇರಿಲ್ಲ.

ಇದೇ ಅನುಮಾನಗಳನ್ನು ನಮಾಝ್‌ನ ಕುರಿತ 1994ರ ತೀರ್ಪು ಮತ್ತು ಅದನ್ನು ಸ್ಥಿರೀಕರಿಸಿದ ಇತ್ತೀಚೆಗಿನ ತೀರ್ಪು ಸೃಷ್ಟಿಸಿವೆ. ಒಂದರ್ಥದಲ್ಲಿ ಪೂಜಾಕೇಂದ್ರಗಳು ಅನಗತ್ಯ ಸೌಕರ್ಯಗಳು ಎಂಬುದನ್ನು ನ್ಯಾಯಾಲಯಗಳು ಹೇಳಹೊರಟಿವೆ. ಇದು ಅಗತ್ಯವೂ ಇತ್ತು. ಏಕೆಂದರೆ ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವನ್ನೂ ಧರ್ಮವೆಂಬ ಹೆಸರಿನಲ್ಲಿ ಹತ್ತಿಕ್ಕುವ, ಒಡೆಯುವ ಪ್ರತೀತಿ ಶಕ್ತವಾಗುತ್ತಿದೆ. ರಸ್ತೆಯೊಂದು ನಮ್ಮ ವಠಾರದಲ್ಲಿ ಹಾದು ಹೋಗುತ್ತದೆಯಾದರೆ ಮತ್ತು ಅದು ಹಾಗೆ ಹಾದುಹೋಗಬಾರದೆಂದರೆ ಅತ್ಯಂತ ಸುಲಭದ ‘ದಾರಿ’ಯೆಂದರೆ ಅಲ್ಲಿ ಒಂದು ಪೂಜಾಕೇಂದ್ರವನ್ನು ಮಾಡುವುದು. ಆಗ ಸಮಾಜ ತನ್ನಿಂದ ತಾನಾಗಿಯೇ ಎಚ್ಚರಗೊಂಡು ಧರ್ಮ ಮೊದಲು, ರಸ್ತೆ ಮತ್ತೆ ಎಂಬ ಘೋಷಣೆಯನ್ನು ಹಾಕುತ್ತದೆ. ಧರ್ಮದ ‘ದಾರಿ’ ಸಲೀಸಾಗುತ್ತದೆ. ವಾಸ್ತವದ ‘ದಾರಿ’ ಮುಚ್ಚುತ್ತದೆ; ಅಥವಾ ಅಲ್ಲಿಂದ ಬೇರೆಡೆಗೆ ಪಲಾಯನ ಮಾಡುತ್ತದೆ. (‘ಮೈಲಿಕಲ್ಲಮ್ಮ’ ದೇವರುಗಳು ಸೃಷ್ಟಿಯಾದದ್ದೇ ಹೀಗೆ.) ಆದರೆ ನ್ಯಾಯಾಲಯದ ಈ ತೀರ್ಪಿನಿಂದಾಗಿ ಯಾರೂ ತನಗೆ ಪೂಜೆ ಮಾಡಲು, ಆರಾಧಿಸಲು, ಒಟ್ಟಿನಲ್ಲಿ ತನ್ನ, ತನ್ನ ಸಮುದಾಯದ ನಂಬಿಕೆಯನ್ನು ಅನುಷ್ಠಾನಗೊಳಿಸಲು ಇಂತಹದ್ದೇ ಮಾರ್ಗ ಬೇಕೆಂಬುದನ್ನು ಸ್ಥಾಪಿಸಲು ಈ ತೀರ್ಪು ಅಡ್ಡಿಯಾಗಿದೆ. ಮತ್ತು ಸಾಮಾಜಿಕ ಅಗತ್ಯಗಳು ಮತೀಯ ಅಗತ್ಯಗಳಿಗಿಂತ ಮುಖ್ಯ ಎಂಬ ಧರ್ಮಾತೀತ ನಂಬಿಕೆಗಳನ್ನು ಎತ್ತಿಹಿಡಿದಿದೆ.

ಆದರೆ ಈ ಸಂತೋಷಗಳು ಹೆಚ್ಚು ದಿನ ಇರಲಾರವು ಎಂಬುದನ್ನು ಶಬರಿಮಲೆಯ ತೀರ್ಪು ತೋರಿಸಿಕೊಟ್ಟಿದೆ. ಶಬರಿಮಲೆ ಎಲ್ಲ ಪೂಜಾಕೇಂದ್ರಗಳಂತೆ ಒಂದು ಪೂಜಾ ಕೇಂದ್ರ. ಶ್ರೇಷ್ಠವೋ ಕನಿಷ್ಠವೋ ಹೇಳಬಾರದು. ದೇವರುಗಳ ಒಲಿಂಪಿಕ್ಸ್ ಅಥವಾ ದರ್ಜೆ ಇನ್ನೂ ದಾಖಲಾಗಿಲ್ಲ. ನಮ್ಮಲ್ಲಿ ಎಲ್ಲಾ ಜಾತಿ-ಮತಗಳ ಜನರನ್ನು ಸೆಳೆಯುವ ಹಲವು ಶ್ರದ್ಧಾಕೇಂದ್ರಗಳಲ್ಲಿ ಶಬರಿಮಲೆಯೂ ಒಂದು. ಆದ್ದರಿಂದ ಅದೂ ಒಂದು ಪ್ರಜಾಕೇಂದ್ರ. ಅವರವರ ಭಾವ, ಭಕ್ತಿಯನ್ನು ಗೌರವಿಸೋಣ. ನಮ್ಮಲ್ಲನೇಕರು ಅನೇಕದಿನಗಳ ವ್ರತ ಮಾಡಿ ತಮ್ಮ ಎಂದಿನ ದುರಭ್ಯಾಸಗಳನ್ನೆಲ್ಲ ಕಷ್ಟಪಟ್ಟು ದೂರ ಮಾಡಿ ಶಬರಿಮಲೆಗೆ ಹೋಗಿ ಬರುತ್ತಾರೆ. ಆದರೆ ಮೊದಲಿನ ದುರಭ್ಯಾಸವನ್ನು ಬಿಡುವ ಬುದ್ಧಿಯನ್ನು ಮಾತ್ರ ಅಯ್ಯಪ್ಪ ಅವರಿಗೆ ಕರುಣಿಸಿಲ್ಲ. ಈ ದೌರ್ಬಲ್ಯ ಗೊತ್ತಿರುವುದರಿಂದಲೇ ನಮ್ಮ ಖಳನಾಯಕರಿಗೆ, ರಾಜಕಾರಣಿಗಳಿಗೆ ಪೂಜಾಕೇಂದ್ರಗಳೆಂದರೆ ಎಲ್ಲಿಲ್ಲದ ಅತೀವ ಆಸಕ್ತಿ. ಆದಾಯಕರ ಇಲಾಖೆ ದಾಳಿಯಾಯಿತೆಂದರೆ ತಿರುಪತಿ, ಕೊಲ್ಲೂರು, ಧರ್ಮಸ್ಥಳ ಹೀಗೆ ಯಾತ್ರೆ ಕೈಗೊಳ್ಳುವುದನ್ನು, ಪಕ್ಷದಲ್ಲಿ ಭಿನ್ನಮತ ಗೋಚರಿಸಿದರೆ ಹೋಮ-ಹವನಗಳನ್ನು ನಡೆಸುವುದನ್ನು ನೀವು ಗಮನಿಸಿರಬಹುದು. ಇವೆಲ್ಲ ಮಕ್ಕಳಾಗದಿದ್ದರೆ ಅಶ್ವತ್ಥಕಟ್ಟೆಗೆ ಸುತ್ತು ಹಾಕಿದಷ್ಟೇ ಎಂದು ಕಡೆಗಣಿಸಬಾರದು. ಏಕೆಂದರೆ ಇವುಗಳು ಬಹುಪಾಲು ತಮ್ಮ ದೋಷಗಳನ್ನು ಪರಿಹಾರಮಾಡಿಕೊಳ್ಳುವ ನೆಪದಲ್ಲಿ ಮುಚ್ಚಿಕೊಳ್ಳುವುದಕ್ಕಾಗಿ, ಎಲ್ಲ ಧರ್ಮಗಳಲ್ಲೂ ಇರುವ ಬಹುಸಂಖ್ಯಾತ ಆಸ್ತಿಕ ಸಮುದಾಯದ ಅನುಕಂಪ, ಬೆಂಬಲ, ಮೆಚ್ಚುಗೆ ಗಳಿಸುವುದಕ್ಕೆ, ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುವುದಕ್ಕಾಗಿಯೇ ಮಾಡಿಕೊಂಡ ಉದ್ದೇಶಪೂರ್ವಕ ನಟನೆಗಳು.

ಆದರೆ ಈ ತೀರ್ಥಕ್ಷೇತ್ರಯಾತ್ರೆಯ ಸುಖ, ಸಂತೋಷ, ನೆಮ್ಮದಿ ತಮಗೆ ಮಾತ್ರ ಇರಲಿ ಎಂಬ ಭಾವನೆಯನ್ನು ಯಾರೂ ಇಟ್ಟುಕೊಳ್ಳಬಾರದು. ಅದು ಎಲ್ಲರಿಗೂ ದಕ್ಕಬೇಕಲ್ಲ! ಧರ್ಮಕಾರಣವಾಗಿ ಅಥವಾ ರಾಜಕಾರಣವಾಗಿ ಹೇಗೆಯೇ ಇರಲಿ, ಅದರಿಂದ ಸಮುದಾಯದ ಮಾನವಿಕ ಒಳಿತಾಗುವುದಿದ್ದರೆ ಅದನ್ನು ಸ್ವಾಗತಿಸೋಣ. ಸದ್ಯದ ಪರಿಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೇರಳದ ಸರಕಾರವು ತನ್ನ ರಾಜಕಾರಣಕ್ಕಾಗಿಯೇ ಸ್ವಾಗತಿಸಿದೆಯೆಂದುಕೊಂಡರೂ ಅದು ಅಗತ್ಯ ಲಿಂಗಾಧಾರಿತ ಸಮಾನತೆಯನ್ನಂತೂ ತಂದುಕೊಟ್ಟಿತೆಂದು ಸಂತಸಪಡಬೇಕು.

 ತ್ರಿವಳಿ ತಲಾಖ್ ತೀರ್ಪು ತಂದುಕೊಟ್ಟ ನೆಮ್ಮದಿಯನ್ನು ಈ ತೀರ್ಪು ಬಹುಮತೀಯರಲ್ಲಿ ತಂದಿಲ್ಲ. ಅನ್ಯಮತೀಯ ಮಹಿಳೆಯರ ಸಮಾನತೆಯನ್ನು ಗೌರವಿಸಿದ ಸಮಾಜವು ಈ ಬೆಳಕು ಬೆಂಕಿಯಾಗಿ ತಮ್ಮ ಅಂಡನ್ನೇ ಸುಡುತ್ತದೆಂಬ ಪರಿಸ್ಥಿತಿ ಬಂದಾಗ ನೀರನ್ನು ಹುಡುಕಿಕೊಂಡು ಅಂಡಲೆಯುವುದನ್ನು ಕಂಡರೆ ನಗುಬರುತ್ತದೆ. ಕ್ಲೀಶೆಯಾಗಿರುವ ಉದಾಹರಣೆಯನ್ನೇ ಮತ್ತೆ ನೆನಪು ಮಾಡಿಕೊಂಡರೆ- ಬುದ್ಧ, ವಿವೇಕಾನಂದರು ಎಲ್ಲರಿಗೂ ಬೇಕು; ನನ್ನ ಮಗ ಮಾತ್ರ ಸಿದ್ಧಾರ್ಥ, ನರೇಂದ್ರರಾಗಬಾರದು. ಹಾಗೆಯೇ ಮುಸ್ಲಿಮ್ ಮಹಿಳೆ ಸ್ವತಂತ್ರಳಾದರೆ ಸಂತೋಷ; ಬಹುಸಂಖ್ಯಾತರ ಮನೆಗಳ ಮಹಿಳೆಯರು ಕಾಲಗತಿಯಲ್ಲಿ ಮುಂದೆ ಹೋಗಬಾರದು.

 ಇದೇ ಸಂಪ್ರದಾಯ ಮೊನ್ನೆಮೊನ್ನೆಯ ವರೆಗೂ ವ್ಯಭಿಚಾರದ ಕಲ್ಪನೆಯ ಕಡೆಗೂ ಇತ್ತು. ಪುರುಷನಿಗೆ ಮಾತ್ರ ವ್ಯಭಿಚಾರಿಯಾಗುವ ಹಕ್ಕಿದೆಯೆಂಬ ಕಲ್ಪನೆ ನಮ್ಮ ಸಮಾಜದಲ್ಲಿತ್ತು. ಮಹಿಳೆ ಜಾರಿದರೂ ಅದು ಭಾರತೀಯ ದಂಡ ಸಂಹಿತೆಯ 497ನೇ ಕಲಮಿನಡಿ ಕಾನೂನಿನಡಿ ತಪ್ಪಾಗುತ್ತಿರಲಿಲ್ಲ. ಅದಕ್ಕಾಗಿ ಅನೈತಿಕ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಿದೆ. ಇದನ್ನು ಆಂಗ್ಲ ಭಾಷೆಯಲ್ಲಿ Suppression of Immoral Traffic Act ಅಥವಾ SITA (ಸೀತಾ) ಕಾಯ್ದೆಯೆಂದು ಹೇಳುತ್ತಾರೆ! ಆದರೆ ಕಲಮು 497 ರದ್ದಾದ ಆನಂತರ ಮಹಿಳೆಯರ ಗೌರವವೂ ಇಮ್ಮಡಿಯಾಗಿದೆ. ಒಳ್ಳೆಯದರಲ್ಲಿ ಮಾತ್ರವಲ್ಲ ಕೇಡಿನಲ್ಲೂ ಮಹಿಳೆಯು ಪುರುಷನಷ್ಟೇ ಸ್ವತಂತ್ರಳು ಎಂಬುದನ್ನು ಕಾನೂನು ಮಾನ್ಯಗೊಳಿಸಿದೆ. ಈಗ ಚಿಂತಿಸುವ ಸರದಿ ಪುರುಷರದ್ದು.

 ಕೇರಳದಲ್ಲಿ ಮಹಿಳೆಯರಿಗೆ ಶಬರಿಮಲೆಯ ದಾರಿ ತೆರೆದ ಆನಂತರ ಈ ಕುರಿತು ಆಸ್ತಿಕರ ಅದರಲ್ಲೂ ಅಯ್ಯಪ್ಪ ಭಕ್ತರ ದೊಡ್ಡ ಪ್ರತಿಭಟನೆ ವ್ಯಕ್ತವಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ಪುನರ್ವಿಮರ್ಶೆಯ ಅರ್ಜಿ ದಾಖಲಾಗಿದೆ. ಮಹಿಳೆಯರನ್ನು ಗೌರವಿಸುವುದೇ ಭಾರತೀಯರ ಅನಾದಿ ಸಂಸ್ಕೃತಿಯೆಂದು, ‘‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’’ ‘‘ಶ್ರದ್ಧೆಯ ಮಾತೆಯರೇ’’ ಎಂದು ಘೋಷಿಸುವ, ಕ್ರೈಸ್ತ ಸನ್ಯಾಸಿನಿಯರ ಮೇಲಣ ದೌರ್ಜನ್ಯವನ್ನು ಇನ್ನಿಲ್ಲದಂತೆ ಖಂಡಿಸುವ, ಸಂಘ ಪರಿವಾರವೂ ಈ ಪ್ರತಿಭಟನೆಯನ್ನು ಬೆಂಬಲಿಸಿದೆ. ಇಷ್ಟೇ ಆದರೆ ವಿಚಿತ್ರವೇನಿರಲಿಲ್ಲ. ಬಲಪಂಥೀಯ ಮತ್ತು ಮತೀಯ ರಾಜಕಾರಣದ ವಿರೋಧಾಭಾಸ ಹಗಲಿನ ಮುಗಿಲುರಹಿತ ಸೂರ್ಯನಷ್ಟೇ ಸ್ಪಷ್ಟ. ಕೇರಳದಲ್ಲಿ ಈಗ ಇರುವುದು ಎಡಪಂಥೀಯ ಸರಕಾರ. ಅದನ್ನು ಮತೀಯಭಾವನೆಗಳಿಂದಷ್ಟೇ ಬಗ್ಗುಬಡಿಯಬಹುದು. ವಿಚಾರವಿವರಗಳನ್ನು ಜನ ಅರ್ಥಮಾಡಿಕೊಂಡರೆ ಅವರೂ ಮಹಿಳೆಯರಿಗೆ ಹೀಗೆ ಬಂದೊದಗಿದ ಅನುಕೂಲವನ್ನು ತಿರಸ್ಕರಿಸಲಾರರು. ಆದ್ದರಿಂದ ರಾಜಕಾರಣವೇ ಮುಖ್ಯವಾಗಿ ಮಹಿಳೆ ಕಸಬರಿಗೆಯಂತೆ ಮೂಲೆಪಾಲಾಗುವುದು ಕೇರಳದ ಮಟ್ಟಿಗೆ ಭಾರತೀಯ ಸಂಸ್ಕೃತಿಯ ಹಿತವಾಗುತ್ತದೆ. ಆದರೆ ಪ್ರಗತಿಯ ಕುರಿತು ಮಾತನಾಡುತ್ತಿರುವ, ಹಗಲಿರುಳೂ ಸಂಘ ಪರಿವಾರದ ಮತಾಂಧತೆಯನ್ನು, ಮತೀಯ ಹಿಂಸಾತ್ಮಕ ಚಟುವಟಿಕೆಗಳನ್ನು ಟೀಕಿಸುವ ಕಾಂಗ್ರೆಸ್ ಕೂಡಾ ಈ ಚಳವಳಿಯಲ್ಲಿ ಬಲಪಂಥೀಯರೊಂದಿಗಿದೆ. ಹಿಂದೂಗಳ ಮನವೊಲಿಸಲು ನಡೆಸುವ ಈ ಅನೈತಿಕ ‘ದ್ವಿಕೋಣ’ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆಂದು ಅಥವಾ ಈ ಎರಡೂ ಕೋಣಗಳ ಕೊರಳಿನ ಮೇಲೆ ಎಡಪಂಥೀಯರ ನೇಗಿಲಿನ ನೊಗ ನಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ವಿಷಾದದ ಸಂಗತಿಯೆಂದರೆ ಸಾಕಷ್ಟು ಮಹಿಳೆಯರು ಈ ತೀರ್ಪಿನ ಪರವಾಗಿ ಮಾತನಾಡದಿರುವುದು. ಅಷ್ಟವಂಕನೆಂಬ ಬದಗನ ಏಟನ್ನು ಸಹಿಸುವ ವ್ಯಭಿಚಾರಿ ಅಮೃತಮತಿ ಮತ್ತೆ ಮತ್ತೆ ನೆನಪಾಗುತ್ತಾಳೆ. ಹಿಂದೆ ಶಬರಿಮಲೆಯನ್ನು ಪ್ರವೇಶಿಸಿದ ಆರೋಪಕ್ಕೆ ತುತ್ತಾದ ಕರ್ನಾಟಕದ ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಕೂಡಾ ಶಬರಿಮಲೆಗಿಂತ ಬಹರೈನ್ ದೇಶವೇ ವಾಸಿಯೆಂದು ತಿಳಿದುಕೊಂಡು ಪಲಾಯನಮೌನವಾದದ್ದು ಅನೇಕ ಪ್ರಶ್ನೆಗಳನೆತ್ತುತ್ತದೆ. ನಮ್ಮ ಮಹಿಳೆಯರಿಗೆ-ಯಾವುದೇ ಧರ್ಮವಿರಲಿ, ಜಾತಿ-ಮತಗಳಿರಲಿ, ಗುಲಾಮಗಿರಿ, ಪಾರತಂತ್ರ್ಯವೇ ಇಷ್ಟವಾಗುತ್ತಿದೆಯೇ? ‘‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’’ ಎಂಬುದನ್ನು ಸತ್ಯಗೊಳಿಸಲು ಇಷ್ಟಪಡುತ್ತಿದ್ದಾರೆಯೇ?

ಸ್ತ್ರೀವಾದಿಗಳು ಉತ್ತರಿಸಬೇಕು. ಆದರೆ ಉತ್ತರಿಸದಿದ್ದರೆ ಬೇತಾಳ ಕಥೆಗಳಲ್ಲಿನ ಹಾಗೆ ತಲೆ ಸಾವಿರ ಹೋಳುಗಳಾಗಿ ಒಡೆದು ಹೋಗುವುದಿಲ್ಲವಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)