varthabharthi

ಸಿನಿಮಾ

ನಿರ್ದೇಶಕ ಸುಭಾಷ್ ಕಪೂರ್ ಮೇಲೆ #ಮೀಟೂ ಕಳಂಕ

‘ಮೊಗಲ್’ ಚಿತ್ರದ ನಿರ್ಮಾಪಕ ಹುದ್ದೆಯಿಂದ ಹಿಂದೆ ಸರಿದ ಆಮಿರ್

ವಾರ್ತಾ ಭಾರತಿ : 11 Oct, 2018

ಮುಂಬೈ,ಅ.11 : ಗುಲ್ಶನ್ ಕುಮಾರ್ ಅವರ ಜೀವನ ವೃತ್ತಾಂತ ಆಧರಿತ ‘ಮೊಗಲ್' ಚಿತ್ರದ ನಿರ್ಮಾಪಕರಾಗಲು ಒಪ್ಪಿದ್ದ ನಟ ಆಮಿರ್ ಖಾನ್, ಆ ಚಿತ್ರದ ನಿರ್ದೇಶಕ ಸುಭಾಷ್ ಕಪೂರ್ ಮೇಲೆ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ  ತಮ್ಮ ಈ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.

ಸುಭಾಷ್ ಕಪೂರ್ ಅಥವಾ ಚಿತ್ರ ತಯಾರಕರ ಹೆಸರೆತ್ತದೆಯೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಆಮಿರ್ ಮತ್ತವರ ಪತ್ನಿ ಕಿರಣ್ ರಾವ್, “ಆಮಿರ್ ಖಾನ್ ಪ್ರೊಡಕ್ಷನ್ಸ್ ನಲ್ಲಿ ನಾವು ಯಾವತ್ತೂ  ಲೈಂಗಿಕ ದುರ್ವರ್ತನೆ ಸಹಿಸುವುದಿಲ್ಲ. ಎರಡು ವಾರಗಳ ಹಿಂದೆ #ಮೀಟೂ ಕಥೆಗಳು ಹೊರಬರಲಾರಂಭಿಸಿದಂದಿನಿಂದ ನಾವು ಜತೆಯಾಗಿ ಕೆಲಸ ಮಾಡುವವರೊಬ್ಬರೂ ಲೈಂಗಿಕ ದುರ್ವರ್ತನೆ ತೋರಿದ  ಆರೋಪ ಎದುರಿಸುತ್ತಿದ್ದಾರೆಂದು ಯಾರೋ ಹೇಳಿದರು,'' ಎಂದು ತಿಳಿಸಿದೆ.

“ಯಾರ ವಿರುದ್ಧವೂ ಆರೋಪ ಹೊರಿಸದೆ ಹಾಗೂ ಈ ನಿರ್ದಿಷ್ಟ ಆರೋಪಗಳ ಬಗ್ಗೆ ಯಾವುದೇ ತೀರ್ಮಾನಕ್ಕೂ ಬಾರದೆ ನಾವು ಈ ಚಿತ್ರದಿಂದ ದೂರ ಸರಿಯಲು ನಿರ್ಧರಿಸಿದ್ದೇವೆ,'' ಎಂದು ಆಮಿರ್ ಮತ್ತು ಕಿರಣ್ ರಾವ್ ಹೇಳಿಕೆ ತಿಳಿಸಿದೆ.

2014ರಲ್ಲಿ  ನಟಿ ಗೀತಿಕಾ ತ್ಯಾಗಿ ಅವರು ಸುಭಾಷ್ ಕಪೂರ್ ವಿರುದ್ಧ ಎಫ್‍ಐಆರ್ ದಾಖಲಿಸಿ ಆಕೆಗೆ ಪಾರ್ಟಿಯೊಂದರ ವೇಳೆ ಅವರು ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪಿಸಿದ್ದರು. ಅಕ್ಟೋಬರ್ 9ರಂದು ಈ ಬಗ್ಗೆ ಟ್ವೀಟ್ ಮಾಡಿದ್ದ ಗೀತಿಕಾ ತಾನು ಸುಭಾಷ್ ಕೆನ್ನೆಗೆ ಬಾರಿಸುತ್ತಿರುವ ಯುಟ್ಯೂಬ್ ವೀಡಿಯೋ ಕೂಡ ಶೆರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಕೆ ಟ್ವೀಟ್ ಮಾಡಿ ಆಮಿರ್ ಖಾನ್ ಅವರು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವವರ ಜತೆ ಕೆಲಸ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದರು.

ತರುವಾಯ ಸುಭಾಷ್ ಕಪೂರ್ ಅವರನ್ನು ‘ಮೊಗಲ್' ಚಿತ್ರದಿಂದ  ಕೈಬಿಟ್ಟಿರುವ ಬಗ್ಗೆ ಚಿತ್ರದಲ್ಲಿ ಹಣ ಹೂಡುತ್ತಿರುವ ಟಿ ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)