varthabharthi

ಸಿನಿಮಾ

ತನುಶ್ರೀಗೆ ಲೈಂಗಿಕ ಕಿರುಕುಳ ಆರೋಪ : ನಾನಾ ಪಾಟೇಕರ್ ವಿರುದ್ಧ ಎಫ್‍ಐಆರ್ ದಾಖಲು

ವಾರ್ತಾ ಭಾರತಿ : 11 Oct, 2018

ಮುಂಬೈ,ಅ.11 : ನಟಿ ತನುಶ್ರೀ ದತ್ತಾಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಇಲ್ಲಿನ ಓಶಿವಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ತನುಶ್ರೀ ದೂರಿನ ಆಧಾರದಲ್ಲಿ ನಾನಾ ಪಾಟೇಕರ್ ಹೊರತಾಗಿ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಮೀ ಸಿದ್ದೀಖಿ ಹಾಗೂ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧವೂ  ಎಫ್‍ಐಆರ್ ದಾಖಲಾಗಿವೆ.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಹಾಗೂ 509 ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆಗೆ ಆಗಮಿಸಿದ ತನುಶ್ರೀ ಜತೆ ಆಕೆಯ ವಕೀಲ ನಿತಿನ್ ಸತ್ಪುತೆ ಕೂಡ ಇದ್ದರು. ಅಲ್ಲಿ ಆಕೆಯ ಆರೋಪ ಕುರಿತಂತೆ ಆಕೆಯ ಹೇಳಿಕೆ ದಾಖಲಿಸಿಕೊಂಡ ನಂತರ ಎಫ್‍ಐಆರ್ ದಾಖಲಾಗಿದೆ.

“ತನುಶ್ರೀ ಅವರಿಗೆ ಅರ್ಥವಾಗಲೆಂದು ಆಕೆಯ ಹೇಳಿಕೆಯನ್ನು ಇಂಗ್ಲಿಷ್ ಭಾಷೆಯಲ್ಲಿಯೇ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಮರಾಠಿಯಲ್ಲಿ ಬರೆಯಲಾರಂಭಿಸಿದರೂ ನಾವು ಇಂಗ್ಲಿಷಿನಲ್ಲಿ ಬರೆಯಲು ವಿನಂತಿಸಿದೆವು. ಹತ್ತು ವರ್ಷದ ಹಿಂದೆ ನಡೆದಿದ್ದು ಮತ್ತೆ ನಡೆಯದಿರಲಿ ಎಂಬುದೇ ನಮ್ಮ ಉದ್ದೇಶ,'' ಎಂದು ತನುಶ್ರೀ ವಕೀಲರು ತಿಳಿಸಿದರು.

ಮುಂಬೈ ಪೊಲೀಸರಲ್ಲಿ ತನುಶ್ರೀ ಇತ್ತೀಚೆಗೆ ದಾಖಲಿಸಿದ್ದ ಲೈಂಗಿಕ ಕಿರುಕುಳ ದೂರಿಗೆ ಪುರಾವೆಯಾಗಿ 40 ಪುಟಗಳ ದಾಖಲೆಯನ್ನು ಬುಧವಾರ ತನುಶ್ರೀ ವಕೀಲರು ಮುಂಬೈ ಪೊಲೀಸರು ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದಾರೆ.

‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಚಿತ್ರೀಕರಣ ಸ್ಥಳದಿಂದ ವಾಪಸ್ ಬರುತ್ತಿದ್ದಾಗ ತನುಶ್ರೀ ಕಾರಿನ ಮೇಲೆ ದಾಳಿ ನಡೆದ ಘಟನೆಯ ನಂತರ ಆಕೆಯ ತಂದೆ ತಪನ್ ಕುಮಾರ್ ದತ್ತಾ 2008ರಲ್ಲಿ ದೂರು ದಾಖಲಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)