varthabharthi

ರಾಷ್ಟ್ರೀಯ

ನಾಲ್ಕು ತಿಂಗಳುಗಳಿಂದ ನಿರಶನ ನಡೆಸುತ್ತಿದ್ದ ಪರಿಸರವಾದಿ

ಸ್ವಚ್ಛ ಗಂಗಾ ಹೋರಾಟಗಾರ ಜಿ.ಡಿ. ಅಗರ್‌ವಾಲ್ ನಿಧನ

ವಾರ್ತಾ ಭಾರತಿ : 11 Oct, 2018

ಹೊಸದಿಲ್ಲಿ,ಅ.11: ಗಂಗಾ ನದಿಯ ಶುದ್ಧೀಕರಣಕ್ಕಾಗಿ ಸರಕಾರವನ್ನು ಆಗ್ರಹಿಸಲು ಜೂನ್ 22ರಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿದ್ದ ಪರಿಸರವಾದಿ ಕಾರ್ಯಕರ್ತ ಜಿ.ಡಿ.ಅಗರ್‌ವಾಲ ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

 ಜಿ.ಡಿ. ಅಗರ್‌ವಾಲ್ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಗಂಗಾನಧಿಯ ಸಂರಕ್ಷಣೆಗಾಗಿ ಹಾಗೂ ಉತ್ತರಖಂಡದ ಗಂಗೋತ್ರಿಯಿಂದ ಉತ್ತರಕಾಶಿಯವರೆಗೆ ಅದರ ಅಬಾಧಿತ ಹರಿವಿಗಾಗಿ ಕಾನೂನೊಂದನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಅವರು ಕಳೆದ 109 ದಿನಗಳಿಂದ ಹರಿದ್ವಾರದಲ್ಲಿ ನಿರಶನ ನಡೆಸುತ್ತಿದ್ದರು.

 ಪೊಲೀಸರು ಬುಧವಾರ ಅಗರ್‌ವಾಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಹರಿದ್ವಾರದಿಂದ ರಿಶಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಶುದ್ಧ ಗಂಗಾ ಚಳವಳಿಯ ಹೋರಾಟಗಾರರಾದ ಅಗರ್‌ವಾಲ್ ತನ್ನ ನಿರಶನದ ವೇಳೆ ಜೇನುಮಿಶ್ರಿತ ನೀರನ್ನು ಮಾತ್ರವೇ ಸೇವಿಸುತ್ತಿದ್ದರು. ಆದರೆ ತನ್ನ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನೀರು ಸೇವನೆಯನ್ನು ಕೂಡಾ ಕೈಬಿಟ್ಟಿದ್ದರು.

 ಕಾನ್ಪುರದ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದ ಜಿ.ಡಿ.ಅಗರ್‌ವಾಲ್, ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಯ ಸದಸ್ಯ-ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಗರ್‌ವಾಲ್ ಹಿಂದೆಯೂ, ನದಿಗಳ ರಕ್ಷಣೆಗಾಗಿ ನಿರಶನ ನಡೆಸುತ್ತಿದ್ದರು. ಬಾಗೀರಥಿ ನದಿಗೆ ಅಣೆಕಟ್ಟು ನಿರ್ಮಾಣ ವಿರೋಧಿಸಿಯೂ ಅವರು 2009ರಲ್ಲಿ ಅನಿರ್ದಿಷಾ್ಟವಧಿ ನಿರಶನ ನಡೆಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)