varthabharthi

ಕರ್ನಾಟಕ

ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ

ವಾರ್ತಾ ಭಾರತಿ : 11 Oct, 2018

ಬೆಂಗಳೂರು, ಅ.11: ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಜೊತೆ ಬಿಎಸ್ಪಿ ನಡೆಸುತ್ತಿರುವ ಮೈತ್ರಿ ಮಾತುಕತೆ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿಯೂ ಕಾಂಗ್ರೆಸ್ ಪಾಲುದಾರವಾಗಿರುವ ಸಮ್ಮಿಶ್ರ ಸರಕಾರದಿಂದ ಬಿಎಸ್ಪಿ ಹೊರ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ರಾಜ್ಯ ಬಿಎಸ್ಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ ಜೊತೆ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮಹೇಶ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯವನ್ನು ಪ್ರಕಟಿಸಿದರು.

ಬಿಎಸ್ಪಿಯಿಂದ ಮೊಟ್ಟಮೊದಲ ಬಾರಿಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಚುನಾಯಿತನಾಗಿದ್ದೇನೆ. ಚುನಾವಣೆಗೆ ಮುನ್ನ ಜೆಡಿಎಸ್-ಬಿಎಸ್ಪಿ ಮೈತ್ರಿಯಾಗಿತ್ತು. ನಾವು 20 ಕಡೆ ಸ್ಪರ್ಧೆ ಮಾಡಿದ್ದೇವು. ಜೆಡಿಎಸ್ ಉಳಿದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಮೈತ್ರಿಯ ಪರಿಣಾಮವಾಗಿ ನಾನು ಕೊಳ್ಳೇಗಾಲದಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಚುನಾವಣೆ ನಂತರ ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾಯಿತು. ನನ್ನನ್ನು ಸಂಪುಟ ದರ್ಜೆ ಸಚಿವನನ್ನಾಗಿ ಮಾಡಿ, ಸರಕಾರದ ಭಾಗವನ್ನಾಗಿಸಲಾಯಿತು. ನನಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ನೀಡಿದರು. ಕಳೆದ ನಾಲ್ಕೂವರೆ ತಿಂಗಳಿನಿಂದ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲದ ಸದಸ್ಯರು, ಶಾಸಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅದಕ್ಕಾಗಿ ನಾನು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಹೇಶ್ ತಿಳಿಸಿದರು.

ಈ ಅವಧಿಯಲ್ಲಿ ನಾನು ನನ್ನ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ನಾನು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ. ಬಿಎಸ್ಪಿ ವರಿಷ್ಠೆ ಮಾಯಾವತಿಯವರು ನನ್ನನ್ನು ಅಶೋಕ್ ಸಿದ್ಧಾರ್ಥ ಅವರೊಂದಿಗೆ ರಾಜ್ಯ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಿದರು. ಆದರೆ, ಉಸ್ತುವಾರಿಯಾಗಿ ನಾನು ಎಷ್ಟು ಪ್ರಮಾಣದಲ್ಲಿ ಪಕ್ಷದ ಕೆಲಸ ಮಾಡಬೇಕಿತ್ತೋ ಅಷ್ಟು ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ನಾಲ್ಕೂವರೆ ತಿಂಗಳಿನಿಂದ ರಾಜ್ಯದಲ್ಲಿ ಪಕ್ಷದ ಚಟುವಟಿಕೆಗಳು ಸ್ಥಗಿತ ಗೊಂಡಿರುವುದು ನನ್ನ ಗಮನಕ್ಕೆ ಬಂತು. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸದೃಢವಾಗಿ ಕಟ್ಟಬೇಕು. ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು. ನನ್ನ ಕ್ಷೇತ್ರದ ಜನತೆಯ ಜೊತೆ ಹೆಚ್ಚಿನ ಸಮಯ ಕಳೆಯಬೇಕಿದೆ ಎಂದು ಮಹೇಶ್ ತಿಳಿಸಿದರು.

ವಿವಿಧ ಇಲಾಖೆಗಳಲ್ಲಿ ಇರುವ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತಲುಪಿಸಲು ಸಮಯ ಕೊಡಬೇಕಿದೆ. ನಾನು ಮುಖ್ಯಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇನ್ನು ಮುಂದೆ ನಾನು ಪಕ್ಷದ ಹಾಗೂ ಕ್ಷೇತ್ರದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಅಷ್ಟೇ. ನನ್ನ ಬೆಂಬಲ ಕುಮಾರಸ್ವಾಮಿಯವರಿಗೆ ಸದಾಕಾಲ ಇರುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ಮುಂಬರುವ ಉಪ ಚುನಾವಣೆಯಲ್ಲಿ ರಾಮನಗರ, ಮಂಡ್ಯ, ಶಿವಮೊಗ್ಗ, ಬಳ್ಳಾರಿ ಯಾವುದೇ ಕ್ಷೇತ್ರ ಇರಲಿ, ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡುವ ಕ್ಷೇತ್ರಗಳಲ್ಲಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದು ಮಹೇಶ್ ಹೇಳಿದರು.

ಮೈತ್ರಿ ಸರಕಾರಕ್ಕೆ ನನ್ನ ಬೆಂಬಲ ಇರುತ್ತದೆ. ಇನ್ನು ಮುಂದೆ ನಾನು ಸರಕಾರದ ಭಾಗವಾಗಿರುವುದಿಲ್ಲ. ಆದರೆ, ಸರಕಾರದ ಬೆಂಬಲಿಗನಾಗಿ ಮುಂದುವರೆಯುತ್ತೇನೆ. ಮುಖ್ಯಮಂತ್ರಿ ನನ್ನ ರಾಜೀನಾಮೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ. ಬಿಎಸ್ಪಿ ವರಿಷ್ಠೆ ಮಾಯಾವತಿಯವರಿಗೂ ಈ ವಿಷಯವನ್ನು ತಿಳಿಸುತ್ತೇನೆ ಎಂದು ಅವರು ತಿಳಿಸಿದರು.

ಶಿಕ್ಷಣ ಇಲಾಖೆಯು ಅತ್ಯಂತ ಸೂಕ್ಷವಾದ ಇಲಾಖೆ. ನಾನು ಸಾಕಷ್ಟು ಸುಧಾರಣೆ ತರಲು ಪ್ರಯತ್ನಿಸಿದ್ದೇನೆ. ಮುಂದೆ ಈ ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳುವವರಿಗೆ ಅದು ಅರ್ಥವಾಗುತ್ತದೆ. ದಾವಣಗೆರೆ, ಧಾರವಾಡ, ಗದಗ, ಉತ್ತರಕನ್ನಡ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡಿದ್ದೇನೆ ಎಂದು ಅವರು ಹೇಳಿದರು.

2019ರ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿಯನ್ನು ಮುಂದುವರೆಸಿ ಕೊಂಡು ಹೋಗಬೇಕೆ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಬೇಕೆ ಎಂಬುದರ ಕುರಿತು ಪಕ್ಷದ ವರಿಷ್ಠೆ ಮಾಯಾವತಿ ಕೈಗೊಳ್ಳುವ ನಿರ್ಧಾರದಂತೆ ಮುಂದುವರೆಯುತ್ತೇವೆ ಎಂದು ಮಹೇಶ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)