varthabharthi

ರಾಷ್ಟ್ರೀಯ

2002 ಗುಜರಾತ್ ದಂಗೆ: ಇನ್ನು ನ್ಯಾಯಾಲಯಗಳು ನಿರ್ಧರಿಸಬೇಕು; ತೀಸ್ತಾ ಸೆಟಲ್ವಾಡ್

ವಾರ್ತಾ ಭಾರತಿ : 11 Oct, 2018

ಹೊಸದಿಲ್ಲಿ,ಅ.11: 2002ರ ಗುಜರಾತ್ ದಂಗೆಗಳ ಕುರಿತು ಲೆ.ಜ. ಝಮೀರುದ್ದೀನ್ ಶಾ ನೀಡಿರುವ ಹೇಳಿಕೆಗಳು ನಾವು ಇಷ್ಟು ಸಮಯದವರೆಗೆ ವಾದಿಸಿಕೊಂಡು ಬಂದಿರುವ ಮಾತುಗಳ ಜೊತೆ ಹೋಲಿಕೆಯಾಗುತ್ತವೆ ಎಂದು ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ತಿಳಿಸಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ ಝಕಿಯಾ ಜಾಫ್ರಿ ಪ್ರಕರಣದಲ್ಲಿ 2006ರಿಂದ ನಾವು ಏನನ್ನು ಹೇಳುತ್ತಾ ಬಂದಿದ್ದೇವೆಯೋ ಆ ಮಾತುಗಳಿಗೆ ನಿವೃತ್ತ ಲೆ.ಜನರಲ್ ಝಮೀರುದ್ದೀನ್ ಶಾ ಅವರ ಹೇಳಿಕೆಯು ಹೋಲಿಕೆಯಾಗುತ್ತದೆ ಎಂದು ಹಕ್ಕುಗಳ ಹೋರಾಗಾರ್ತಿಯೂ ಆಗಿರುವ ಸೆಟಲ್ವಾಡ್ ತಿಳಿಸಿದ್ದಾರೆ.

ಸದ್ಯ ಸಿಪ್ರಸ್‌ನ ರಾಯಬಾರಿಯಾಗಿರುವ ಆರ್.ಕೆ.ರಾಘವನ್ ನೇತೃತ್ವದ ಸಿಟ್ ತನಿಖೆಯು ಒಂದು ದುರಂತವಾಗಿದ್ದು ಸಮಕಾಲಿನ, ದೃಢ ದಾಖಲಿಸಲಾದ ಸಾಕ್ಷಿಯನ್ನು ಅದು ಅಲ್ಲಗಳೆಯುತ್ತದೆ ಎಂದು ಸೆಟಲ್ವಾಡ್ ದೂರಿದ್ದಾರೆ.

2009ರಲ್ಲಿ ಝಕಿಯಾ ಎಹ್ಸಾನ್ ಜಾಫ್ರಿ ಮತ್ತು ನನ್ನ ಹೇಳಿಕೆಯನ್ನು ದಾಖಲಿಸಿದರೂ ಅವರು ಝಮೀರುದ್ದೀನ್ ಶಾ ಅವರ ಹೇಳಿಕೆಯನ್ನು ದಾಖಲಿಸಲಿಲ್ಲ. ಯಾಕೆ? ಇದೀಗ ಈ ವಿಷಯವನ್ನು ನಿರ್ಧರಿಸುವ ಹೊಣೆ ಭಾರತದ ನ್ಯಾಯಾಲಯಗಳ ಮೇಲಿದೆ ಎಂದು ಸೆಟಲ್ವಾಡ್ ತಿಳಿಸಿದ್ದಾರೆ. ಗುಜರಾತ್ ದಂಗೆಗಳ ಸಮಯದಲ್ಲಿ ಗುಲ್ಬರ್ಗ ಹೌಸಿಂಗ್ ಸೊಸೈಟಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕಾಂಗ್ರೆಸ್ ಶಾಸಕ ಎಹಸಾನ್ ಜಾಫ್ರಿಯನ್ನು ಹತ್ಯೆ ಮಾಡಿದ್ದರು. ಘಟನೆಯ ಕುರಿತು ಎಹಸಾನ್ ಅವರ ಪತ್ನಿ ಝಕಿಯಾ ಜಾಫ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ನೀಡಿದ ಹೇಳಿಕೆಯಲ್ಲಿ ಝಕಿಯಾ ಜಾಫ್ರಿ, ಸೇನೆಯ ನಿಯೋಜನೆಯಲ್ಲಿ ಸರಕಾರ ಅನಗತ್ಯ ವಿಳಂಬ ಮಾಡಿತ್ತು ಎಂದು ಆರೋಪಿಸಿದ್ದರು. ಆದರೆ ಪ್ರಕರಣದಲ್ಲಿ ಮೋದಿ ಹೆಸರನ್ನು ತೆಗದು ಹಾಕಿದ ಸಿಟ್ ತನ್ನ ವರದಿಯಲ್ಲಿ ಸರಕಾರ ಸೇನೆ ನಿಯೋಜನೆಯಲ್ಲಿ ಯಾವುದೇ ರೀತಿಯ ವಿಳಂಬವನ್ನು ಮಾಡಿರಲಿಲ್ಲ ಎಂದು ತಿಳಿಸಿತ್ತು. ಈ ವರದಿಯ ಪ್ರಮಾಣೀಕರಣಕ್ಕಾಗಿ ಅದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಅಶೋಕ್ ನಾರಾಯಣ್ ಹೇಳಿಕೆಯನ್ನು ಆಧಾರವಾಗಿರಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)