varthabharthi

ಬೆಂಗಳೂರು

'ಐಕ್ಯಾ’ಗೆ ಬಿಬಿಎಂಪಿಯಿಂದ ಅನುಮತಿ: ಡಾ.ಜಿ.ಪರಮೇಶ್ವರ್

ವಾರ್ತಾ ಭಾರತಿ : 11 Oct, 2018

ಬೆಂಗಳೂರು, ಅ. 11: ಪ್ರತಿಷ್ಠಿತ ಕಂಪೆನಿಯಾದ ‘ಐಕ್ಯಾ’ ಬೆಂಗಳೂರಿನಲ್ಲಿ ಕೇಂದ್ರ ತೆರೆಯುತ್ತಿರುವುದು ಶ್ಲಾಘನೀಯ ಕೆಲಸವಾಗಿದ್ದು, ಕೇಂದ್ರ ಸ್ಥಾಪಿಸಲು ಬಿಬಿಎಂಪಿಯಿಂದ ಅನುಮತಿ ಕೊಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಗುರುವಾರ ಇಲ್ಲಿನ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ‘ಐಕ್ಯಾ ಶಾಪ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಈ ಹಿಂದೆ ಮೆಟ್ರೋ ಶಾಪ್ ತೆರೆಯುವ ಸಂದರ್ಭದಲ್ಲೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇಂದು ಬಹುತೇಕರು ಏನೇ ಖರೀದಿಗೂ ಅಲ್ಲಿಗೆ ತೆರಳುತ್ತಾರೆ ಎಂದು ಹೇಳಿದರು.

ಐಕ್ಯಾ ಕೂಡ ಹೊಸದಾಗಿ ಬೆಂಗಳೂರಿನಲ್ಲಿ ಶಾಪ್ ತೆರೆಯುತ್ತಿದ್ದು, ಏಳು ಸಾವಿರ ಬಗೆಬಗೆಯ ವಸ್ತುಗಳು ಇಲ್ಲಿ ಲಭ್ಯವಿರಲಿದೆ ಎಂದ ಅವರು, ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿಯೇ 5ಲಕ್ಷ ಚದರ ಕಿ.ಮೀ.ನಲ್ಲಿ ಶಾಪ್ ನಿರ್ಮಿಸಲಾಗುತ್ತಿದ್ದು, 2020ಕ್ಕೆ ಕಾಮಗಾರಿ ಪೂರ್ಣಗೊಂಡು ಖರೀದಿಗೆ ಮುಕ್ತವಾಗಲಿದೆ. ಈ ಶಾಪ್‌ಗೆ ಬಿಬಿಎಂಪಿಯಿಂದ ಅನುಮತಿ ಸಿಗಬೇಕಿದೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)