varthabharthi

ಕರಾವಳಿ

ಪುತ್ತೂರು ದಸರಾ ನಾಡಹಬ್ಬ: 'ಯಕ್ಷಗಾನ-ನಾಟಕ' ವಿಷಯದ ಬಗ್ಗೆ ಉಪನ್ಯಾಸ

ವಾರ್ತಾ ಭಾರತಿ : 11 Oct, 2018

ಪುತ್ತೂರು, ಅ. 11: ಡಾ. ಶಿವರಾಮ ಕಾರಂತರ ಮಾತು, ವರ್ತನೆಗಳು ಮೇಲ್ನೋಟಕ್ಕೆ ಗಡಸು ಎಂದು ಕಂಡರೂ ಅವರದು ಮಗು ಮನಸ್ಸು. ನೇರ, ನಡೆ ನುಡಿ ಅವರ ವ್ಯಕ್ತಿತ್ವ. ರಂಗಭೂಮಿಯ ವಿನ್ಯಾಸದ ಸ್ಪಷ್ಟ ಅರಿವಿದ್ದ ಕಾರಂತರು ನಾಟಕ, ಯಕ್ಷಗಾನಗಳಲ್ಲಿ ಕಲಾಭಾವಗಳನ್ನು ಗುರುತಿಸುತ್ತಿದ್ದರು. ತಾಳಮದ್ದಳೆಗಳ ಉತ್ತಮ ಮತ್ತು ವಿಮರ್ಶಕ ಶ್ರೋತೃ ಆಗಿದ್ದರು. ದೇರಾಜೆ ಸೀತಾರಾಮಯ್ಯನವರಿಗೂ ಕಾರಂತರಿಗೂ ಉತ್ತಮ ಬಾಂಧವ್ಯವಿತ್ತು. ತಮ್ಮ ಪ್ರಯೋಗಗಳ ಹೊಸತನವನ್ನು ತಂದಿದ್ದಾರೆ ಎಂದು ಮೂರ್ತಿ ದೇರಾಜೆ ಹೇಳಿದರು. 

ಅವರು ಬುಧವಾರ ಸಂಜೆ ದಸರಾ ನಾಡಹಬ್ಬ ಸಮಿತಿಯ ವತಿಯಿಂದ ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯುತ್ತಿರುವ 66ನೇ ವರ್ಷದ ದಸರಾ ನಾಡಹಬ್ಬ-2018 ಕಾರ್ಯಕ್ರಮದಲ್ಲಿ `ಯಕ್ಷಗಾನ ಮತ್ತು ನಾಟಕ' ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆ ಮಾತನಾಡಿ ಡಾ. ಶಿವರಾಮ ಕಾರಂತರ ಹುಟ್ಟುಹಬ್ಬದ ದಿವಸದಂದು ಅವರ ಪ್ರೀತಿಯ ಕ್ಷೇತ್ರವಾದ ಯಕ್ಷಗಾನ, ನಾಟಕದತ್ತ ಚಿಂತನೆ, ಪ್ರದರ್ಶನಗಳ ಆಯೋಜನೆಯು ಆ ಚೇತನಕ್ಕೆ ಸಲ್ಲಿಸುವ ಗೌರವ. ಸುಮಾರು 60-70ರ ದಶಕದಲ್ಲಿ ಕಾರಂತರು ಯಕ್ಷಗಾನದ ಸಿನೆಮಾ ಮಾಡಲು ಉತ್ಸುಕರಾಗಿದ್ದರು. ಆಗಿನ ಧರ್ಮಸ್ಥಳ ಮೇಳದ ಕಲಾವಿದರನ್ನು ಆಯ್ದುಕೊಂಡಿದ್ದರು. ಯಾಕೋ ಏನೋ ಆ ಸಿನೆಮಾ ಚಿತ್ರೀಕರಣವು ಅರ್ಧದಲ್ಲೇ ಮೊಟಕುಗೊಂಡ ದಿನಮಾನಗಳಿಗೆ ಹಿರಿಯರು ಸಾಕ್ಷಿಯಾಗಿ ಸಿಗುತ್ತಾರೆ. ಆ ಸಿನಿಮಾ ಆಗುತ್ತಿದ್ದರೆ ಈಗ ಅದೊಂದು ದೊಡ್ಡ ಕಾಲದ ಸಾಕ್ಷಿಯಾಗಿ ನಮ್ಮೆದುರಿಗಿರುತ್ತಿತು ಎಂದು ಹೇಳಿದರು. 

ಮಣಿಲ ಮಹಾದೇವ ಶಾಸ್ತ್ರಿ ಸ್ವಾಗತಿಸಿದರು. ಕಾಡೂರು ಸೀತಾರಾಮ ಶಾಸ್ತ್ರಿ ವಂದಿಸಿದರು. ವಾಟೆಡ್ಕ ಕೃಷ್ಣ ಭಟ್ ನಿರೂಪಿಸಿದರು. ಸಮಿತಿಯ ಗೌರವ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅತಿಥಿಗಳನ್ನು ಗೌರವಿಸಿದರು. ಬಳಿಕ ಯಕ್ಷಕೂಟ ಪುತ್ತೂರು ಇವರಿಂದ `ಶ್ಯಮಂತಕಮಣಿ'  ಯಕ್ಷಗಾನ ಪ್ರದರ್ಶನ ನಡೆಯಿತು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)