varthabharthi

ನಿಮ್ಮ ಅಂಕಣ

ಕೇಂದ್ರ ಸರಕಾರದ ಮಸೂದೆ ಒಂದೇ ದಾರಿ

ವಾರ್ತಾ ಭಾರತಿ : 12 Oct, 2018
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕೆಲವು ವರ್ಷಗಳ ಹಿಂದೆ ಭಾಷಾ ಮಾಧ್ಯಮದ ವಿಚಾರದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ಆನಂತರ ಕೇಂದ್ರದಲ್ಲಿ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡುವ ಅಥವಾ ಮಾತೃ ಭಾಷಾ ಶಿಕ್ಷಣ ಉಳಿಸುವ ನಿಟ್ಟಿನಲ್ಲಿ ಮಸೂದೆ ಮಂಡನೆಯಾಗಬೇಕೆಂಬ ಒತ್ತಡ, ರಾಜ್ಯದ ಮಾಜಿ ಮುಖ್ಯಮಂತ್ರಿಯಿಂದಲೇ ಆಯಿತಾದರೂ ಅದು ಇನ್ನೂ ಕಾರ್ಯಗತವಾಗಿಲ್ಲ. ಕೇಂದ್ರ ಸರಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಮೀಸಲಾತಿ ನೀಡುವ ಡಾ. ಸರೋಜಿನಿ ಮಹಿಷಿಯವರ ವರದಿ ಮೂರು ದಶಕಗಳ ಹಿಂದೆ ಬಂದಿರುತ್ತದೆ. ಇತ್ತೀಚೆಗೆ ಇದನ್ನು ಪರಿಷ್ಕರಣೆ ಮಾಡಿ ಅನುಷ್ಠಾನದ ಮಾತುಗಳನ್ನಾಡುತ್ತಿದ್ದಾರೆ.

ದೇಶದ ಕಾನೂನನ್ನು ಗಮನಿಸಿದಾಗ ಪರಿಷ್ಕೃತ ವರದಿಯ ಶಿಫಾರಸುಗಳು ರಾಜ್ಯ ಸರಕಾರದಿಂದಲೂ ಅನುಷ್ಠಾನ ಸಾಧ್ಯವಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಎಲ್ಲೆಡೆ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ನೀಡಬೇಕಾದರೆ ಹಾಗೂ ‘ಎ’ ಮತ್ತು ‘ಬಿ’ ದರ್ಜೆಯ ಹುದ್ದೆಗಳಲ್ಲಿ ಪರಿಣತಿ ಮತ್ತು ಅರ್ಹತೆಯ ಆಧಾರದ ಮೇಲೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದರೆ, ಕೇಂದ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ಎನ್ನುವ ಮಸೂದೆ ಮಂಡನೆಯಾಗಿ ಲೋಕಸಭೆ ಮತ್ತು ರಾಜ್ಯಸಭೆಗಳ ಅನುಮೋದನೆಗೊಂಡು ಕಾನೂನಾಗಿ ಪರಿವರ್ತನೆಯಾದರೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲವಾದರೆ ಇವೆಲ್ಲವೂ ವ್ಯರ್ಥ ಪ್ರಯತ್ನವಾಗುತ್ತದೆ. ನಮ್ಮ ರಾಜ್ಯದಲ್ಲಿ ಜನರ ಬದುಕಿಗೆ ಸಂಬಂಧವಿಲ್ಲದ ಅನೇಕ ವಿಚಾರಗಳಿಗೆ ನಮ್ಮ ಸುದ್ದಿ ಮಾಧ್ಯಮಗಳೂ ಸೇರಿ ಅನೇಕರು ಅಭಿಯಾನ ನಡೆಸುತ್ತಾರೆ. ನಿಜಕ್ಕೂ ಅಭಿಯಾನ ಮತ್ತು ಅತೀ ದೊಡ್ಡ ಪ್ರಮಾಣದ ಸಂಘಟಿತ ಹೋರಾಟ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಉಳಿಸಲು, ಉದ್ಯೋಗದಲ್ಲಿ ಕನ್ನಡಿಗ ಪಾಲು ಪಡೆಯಲು ಮಸೂದೆ ಮಂಡನೆಯಾಗಿ ಒತ್ತಾಯ ನಡೆಯಬೇಕು. ಇಂತಹ ಮಸೂದೆ ಮಂಡನೆಯಾಗಿ ಕಾನೂನಾದರೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳು ಉಳಿಯುತ್ತವೆ. ಎಲ್ಲಾ ರಾಜ್ಯಗಳಲ್ಲೂ ಸ್ಥಳೀಯರಿಗೆ, ಕೇಂದ್ರ ಸರಕಾರದ ಹುದ್ದೆಗಳಲ್ಲಿ ಸಿಂಹ ಪಾಲು ದೊರೆಯುತ್ತದೆ. ಕನ್ನಡ ಪರ ಸಂಘಟನೆಗಳು ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಇದಕ್ಕಾಗಿ ಒಂದು ದೊಡ್ಡ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ನಡೆಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)