varthabharthi

ನಿಮ್ಮ ಅಂಕಣ

ಖಾಸಗಿ ಕೃಷಿ ಶಿಕ್ಷಣ ಮತ್ತು ಸ್ವಾಮಿನಾಥನ್ ವರದಿ

ವಾರ್ತಾ ಭಾರತಿ : 12 Oct, 2018
ಡಾ. ರಮೇಶ ವಿ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ

ಖಾಸಗೀಕರಣದ ಭೂತವು ಹೀಗೆ ಮುಂದುವರಿದಲ್ಲಿ, ದೇಶದಲ್ಲಿ ಅಧಿಕ ಕಾಲೇಜುಗಳನ್ನು ಹೊಂದಿರುವ ಬೆಂಗಳೂರಿನಲ್ಲಿಯೆ ನಾಲ್ಕು ಗೋಡೆಗಳ ಮಧ್ಯೆ ಹಲವು ಖಾಸಗಿ ಕೃಷಿ ಕಾಲೇಜುಗಳು ತಲೆ ಎತ್ತಲಿವೆ. ಪರಿಣಾಮ ಕೃಷಿ ಸಂಬಂಧಿತ ಕಾರ್ಪೊರೇಟ್ ಕಂಪೆನಿಗಳು ತಮ್ಮ ಕಂಪೆನಿಯ ನಕಲಿ ಬೀಜ, ಗೊಬ್ಬರ, ರಾಸಾಯನಿಕಗಳ ಉತ್ಪನ್ನಗಳು ಹಿತ್ತಲ ಬಾಗಿಲಿನಿಂದ ಮಾರುಕಟ್ಟೆ ಪ್ರವೇಶಿಸುತ್ತವೆ. ಅಲ್ಲದೆ ಇದಕ್ಕೆ ಮೊದಲ ಬಲಿ ರೈತನೇ ಆಗಿರುತ್ತಾನೆ. ಕೃಷಿಯ ಗಂಧ ಗೊತ್ತಿಲ್ಲದ ಖಾಸಗಿ ವಿದ್ಯಾರ್ಥಿಗಳು ಕೃಷಿ ರಂಗಕ್ಕೆ ಮುಳ್ಳಾಗಲಿದ್ದಾರೆ.


ದೇಶವು ಕೃಷಿ ರಂಗದ ಹಲವು ತೊಂದರೆಗಳಿಗೆ ಸದಾ ಸ್ವಾಮಿನಾಥನ್ ವರದಿಗಳ ಆಧಾರದ ಮೇಲೆ ನಿರ್ಧಾರವನ್ನು ಕೈಗೊಳ್ಳುತ್ತದೆ. ಕರ್ನಾಟಕ ರೈತ ಸಂಘದ ಹೋರಾಟಗಳಿಂದ ಹಿಡಿದು ಮೊನ್ನೆ ಗಾಂಧಿ ಜಯಂತಿಯ ದಿನ ದಿಲ್ಲಿಯ ಹೊರಭಾಗದಲ್ಲಿ ಲಾಠಿ ಚಾರ್ಜ್‌ಗೆ ಒಳಗಾದ ರೈತರ ಬಾಯಲ್ಲಿಯು ಸಹ ಬಂದದ್ದು ಅದು ಒಂದೇ ಕೂಗು, ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು. ಏಕೆಂದರೆ ಸ್ವಾಮಿನಾಥನ್ ಭಾರತ ದೇಶದ ಹಸಿರು ಕ್ರಾಂತಿಯ ಪಿತಾಮಹ.

ಭಾರತ ದೇಶದಲ್ಲಿನ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯನ್ನು ದಿಲ್ಲಿಯಲ್ಲಿರುವ ಭಾರತೀಯ ಅನುಸಂಧಾನ ಪರಿಷತ್ತು ನಿಯಂತ್ರಿಸುತ್ತದೆ. ಈ ಪರಿಷತ್ತು ದೇಶದಲ್ಲಿನ ಸರಕಾರಿ ಮತ್ತು ಖಾಸಗಿ ಕೃಷಿ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಲು 1997ರಲ್ಲಿ ಸ್ವಾಮಿನಾಥನ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಸಮಿತಿಯು ದೇಶದಲ್ಲಿ ಕೃಷಿ ಶಿಕ್ಷಣವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಿತು. ವರದಿಯ ಪ್ರಕಾರ ‘‘ದೇಶದಲ್ಲಿ ಖಾಸಗಿ ಕೃಷಿ ಕಾಲೇಜುಗಳು ಕಳಪೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ, ಇಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ, ನಿರ್ದಿಷ್ಟ ಕೃಷಿ ಭೂಮಿ ಕೊರತೆ, ಶಿಕ್ಷಕರ ಕೊರತೆ ಮತ್ತು ಭಾರತೀಯ ಅನುಸಂಧಾನ ಪರಿಷತ್ತು ಕೃಷಿ ಶಿಕ್ಷಣಕ್ಕೆ ನಿಗದಿಪಡಿಸಿರುವ ಮಾನದಂಡಗಳನ್ನು ಸಹ ಪಾಲಿಸುತ್ತಿಲ್ಲ’’ ಎಂದಿತು. ‘‘ಈ ಎಲ್ಲಾ ಕಾರಣಗಳಿಂದ ಕೃಷಿ ಜ್ಞಾನವಿಲ್ಲದ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಿಂದ ಹೊರಹೊಮ್ಮುತ್ತಿದ್ದಾರೆ’’ ಎಂದು ತಿಳಿಸಿತು. ಮುಂದುವರಿದು 1997ರ ವರದಿಯಲ್ಲಿಯೇ ‘‘ಇನ್ನು ಮುಂದೆ ದೇಶದಲ್ಲಿ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಬಾರದು, ತುಂಬಾ ಕೆಳ ಮಟ್ಟದ ಶಿಕ್ಷಣವನ್ನು ನೀಡುವ ಖಾಸಗಿ ಕಾಲೇಜುಗಳನ್ನು ಮುಚ್ಚಬೇಕು, ಉಳಿದ ಕಾಲೇಜುಗಳನ್ನು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು’’ ಎಂದು ತಿಳಿಸಿದರು.

ಆದರೆ 2009ರಲ್ಲಿ ಕರ್ನಾಟಕ ಸರಕಾರವು ಅಂದಿನ ಮಂತ್ರಿಗಳಾದ ಎಂ.ಪಿ.ಪ್ರಕಾಶ್‌ರ ನೇತೃತ್ವದ ಕ್ಯಾಬಿನೆಟ್ ಉಪ ಸಮಿತಿಯನ್ನು ರಚಿಸಿ ಖಾಸಗಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು ಏಕೆಂಬುದು ಇಂದಿಗೂ ಪ್ರಶ್ನೆ.? ಈ ನಿರ್ಧಾರವು ಇಂದು ರಾಜ್ಯಾದ್ಯಂತ ಸರಕಾರಿ ಕೃಷಿ ವಿದ್ಯಾರ್ಥಿಗಳು ಹೋರಾಟವನ್ನು ಹಮ್ಮಿಕೊಳ್ಳಲು ಕಾರಣವಾಯಿತು. ಸರಕಾರಗಳು ಕಾಯ್ದೆ ರೂಪಿಸುವಾಗ ಪ್ರಜ್ಞಾಹೀನವಾಗಿ ರೂಪಿಸುತ್ತವೆಯೆ?

ಕೃಷಿ ಶಿಕ್ಷಣದಲ್ಲಿ ಖಾಸಗಿಕರಣವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಮಹಾರಾಷ್ಟ್ರ ಸರಕಾರ ಐ.ಸಿ.ಎ.ಆರ್.ನಿಂದ 2016ರಲ್ಲಿ ಮಾನ್ಯತೆ ಪಡೆಯಲಿಲ್ಲ ಮತ್ತು ದೇಶದಲ್ಲೇ ಕಳಪೆ ಶಿಕ್ಷಣ ನೀಡುತ್ತಿದೆ. ಆಂಧ್ರಪ್ರದೇಶದ ಸರಕಾರಿ ವಿದ್ಯಾರ್ಥಿಗಳು ಕೃಷಿ ಇಲಾಖೆಯಲ್ಲಿನ ಹುದ್ದೆಗಳನ್ನು ತರ್ಕಬದ್ಧವಾಗಿ ಕಲಿಯದ ಖಾಸಗಿ ವಿದ್ಯಾರ್ಥಿಗಳಿಗೆ ನೀಡಬಾರದೆಂದು ‘ಜಿ.ಒ.64’ನ್ನು ಹಾಗೆ ಮುಂದುವರಿಸಲು ಹೋರಾಟವನ್ನು ಹಮ್ಮಿಕೊಂಡರು. ಇದನ್ನು ಪರಿಗಣಿಸಿದ ಅಲ್ಲಿನ ಉಚ್ಚ ನ್ಯಾಯಾಲಯ ಖಾಸಗಿ ಕೃಷಿ ಪದವೀಧರರನ್ನು ಕೃಷಿ ಇಲಾಖೆಯ ಹುದ್ದೆಗಳಿಗೆ ಪರಿಗಣಿಸಬಾರದೆಂದು ತೀರ್ಪು ನೀಡಿತು.

2018ರಲ್ಲಿ ಕರ್ನಾಟಕದಲ್ಲಿ ಖಾಸಗಿ ಕೃಷಿ ಕಾಲೇಜುಗಳನ್ನು ಮುಚ್ಚಲು, ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲು ಒಂದು ತಿಂಗಳ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಆದ ಕಾರಣ ಒಂದು ಖಾಸಗಿ ಕಾಲೇಜಿಗೆ ತಿದ್ದುಪಡಿಯ ಮೂಲಕ ಕೃಷಿ ಪದವಿಯನ್ನು ನಿರ್ಬಂಧಿಸಿ ಸರಕಾರವು ಕ್ರಮ ಕೈಗೊಂಡಿತು. ಇದು ತಾತ್ಕಾಲಿಕ ಉತ್ತರವಷ್ಟೆ.

ಪ್ರಸ್ತುತ ಪ್ರತಿಭಟನೆಯು ಗುಜರಾತ್ ಮತ್ತು ಹರ್ಯಾಣದಲ್ಲೂ ಹಬ್ಬಿ, ಖಾಸಗಿ ಕೃಷಿ ಕಾಲೇಜುಗಳನ್ನು ಮುಚ್ಚುವಂತೆ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಪರಿಣಾಮವಾಗಿ ಇತ್ತೀಚೆಗೆ ಗುಜರಾತ್ ಉಚ್ಚ ನ್ಯಾಯಾಲಯದಿಂದ ಬಂದಂತಹ ತೀರ್ಪು ಸಹ ಸರಕಾರಿ ವಿದ್ಯಾರ್ಥಿಗಳ ಪರವಾಗಿದೆ. ಇವೆಲ್ಲವು ದೇಶದಲ್ಲಿನ ಸರಕಾರಿ ವಿದ್ಯಾರ್ಥಿಗಳಿಗೆ ಸಂದ ತಾತ್ಕಾಲಿಕ ನ್ಯಾಯವಷ್ಟೆ. ಹಣ, ಅಧಿಕಾರ ಮತ್ತು ರಾಜಕೀಯದ ಎದುರು ರೈತರ ಮಕ್ಕಳು ಪೈಪೋಟಿ ನಡೆಸಲು ಸಾಧ್ಯವೇ? ಸರಕಾರ ಮತ್ತು ಜನ ಪ್ರತಿನಿಧಿಗಳು ಸ್ವಾಮಿನಾಥನ್ ವರದಿಯನ್ನು ಮರೆತಿರುವುದು, ಅರ್ಥ ಮಾಡಿಕೊಳ್ಳದೆ ಇರುವುದು ದುರಂತವೇ ಸರಿ.

ಭಾರತೀಯ ಅನುಸಂಧಾನ ಪರಿಷತ್ತಿನ ಮಾನದಂಡಗಳನ್ನು ಪಾಲಿಸಲು ಖಾಸಗಿಯವರಿಗೆ ಕಷ್ಟ ಸಾಧ್ಯ. ಏಕೆಂದರೆ ಮೊದಲು ಬೇಕಾಗಿರುವುದು ನೂರಾರು ಎಕರೆ ಭೂಮಿ. ಉದಾಹರಣೆಗೆ ಕನಿಷ್ಠ ಭೂಮಿ ಹೊಂದದೆ ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿರುವ ಖಾಸಗಿ ಕೃಷಿ ಕಾಲೇಜೊಂದು ಉನ್ನತ ಶಿಕ್ಷಣ ಇಲಾಖೆಯಿಂದ ಸರಕಾರವು 2018ರಲ್ಲಿ ಕಳುಹಿಸಿದ ಡಾ.ಶೀಲವಂತರ್ ಸಮಿತಿಗೆ ಯಾವ ದಾಖಲೆಗಳನ್ನೂ ನೀಡಿಲ್ಲ ಮತ್ತು ಯಾವ ಅಧಿಕಾರಿಯು ಇರಲಿಲ್ಲ.
ಕಾರ್ಲ್ ಮಾರ್ಕ್ಸ್, ಏಂಗಲ್ಸ್ ಮತ್ತು ಅಂಬೇಡ್ಕರ್‌ರವರು ವಿರೋಧಿಸಿದ ಖಾಸಗಿ ಶಿಕ್ಷಣ, ವರ್ಗಭೇದ ನೀತಿ ಕೃಷಿ ರಂಗದ ಸರಕಾರಿ ಪ್ರಾಥಮಿಕ ಶಿಕ್ಷಣಕ್ಕೆ ಪೆಟ್ಟು ನೀಡಲಿದೆ. ಇದು ನೇರವಾಗಿ ಗ್ರಾಮಾಂತರ ಮತ್ತು ರೈತರ ಮಕ್ಕಳ ಕೃಷಿ ಶಿಕ್ಷಣಕ್ಕೆ ಮುಳ್ಳಾಗಲಿದೆ.

ಖಾಸಗಿ ಭೂತವು ಹೀಗೆ ಮುಂದುವರಿದಲ್ಲಿ, ದೇಶದಲ್ಲಿ ಅಧಿಕ ಕಾಲೇಜುಗಳನ್ನು ಹೊಂದಿರುವ ಬೆಂಗಳೂರಿನಲ್ಲಿಯೆ ನಾಲ್ಕು ಗೋಡೆಗಳ ಮಧ್ಯೆ ಹಲವು ಖಾಸಗಿ ಕೃಷಿ ಕಾಲೇಜುಗಳು ತಲೆ ಎತ್ತಲಿವೆ. ಪರಿಣಾಮ ಕೃಷಿ ಸಂಬಂಧಿತ ಕಾರ್ಪೊರೇಟ್ ಕಂಪೆನಿಗಳು ತಮ್ಮ ಕಂಪೆನಿಯ ನಕಲಿ ಬೀಜ, ಗೊಬ್ಬರ, ರಾಸಾಯನಿಕಗಳ ಉತ್ಪನ್ನಗಳು ಹಿತ್ತಲ ಬಾಗಿಲಿನಿಂದ ಮಾರುಕಟ್ಟೆ ಪ್ರವೇಶಿಸುತ್ತವೆ. ಅಲ್ಲದೆ ಇದಕ್ಕೆ ಮೊದಲ ಬಲಿ ರೈತನೇ ಆಗಿರುತ್ತಾನೆ. ಕೃಷಿಯ ಗಂಧ ಗೊತ್ತಿಲ್ಲದ ಖಾಸಗಿ ವಿದ್ಯಾರ್ಥಿಗಳು ಕೃಷಿ ರಂಗಕ್ಕೆ ಮುಳ್ಳಾಗಲಿದ್ದಾರೆ. ಪರಿಸ್ಥಿತಿ ಕೈ ಮೀರಿ ಖಾಸಗಿ ಕೃಷಿ ಕಾಲೇಜು ಅನಿವಾರ್ಯವಾಗುತ್ತವೆ, ಸರಕಾರಿ ಕೃಷಿ ಕಾಲೇಜುಗಳು ಇಂದಿನ ಸರಕಾರಿ ಶಾಲೆಗಳ ದುಸ್ಥಿತಿಯನ್ನು ಅನುಭವಿಸಲಿವೆ. ಕೆಲವು ದಿನಗಳ ಹಿಂದೆ ಕೃಷಿ ರಂಗಕ್ಕೆ ಸಂಬಂಧಿಸಿದ ಹಾಗೆ ಮಾರ್ಗದರ್ಶನಗಳನ್ನು ಪಡೆಯಲು ಎಂ. ಎಸ್. ಸ್ವಾಮಿನಾಥನ್ ರವರನ್ನು ಕರೆಸಿದ ಮುಖ್ಯಮಂತ್ರಿ, ಕೃಷಿಗೆ ಮತ್ತು ಕೃಷಿ ಶಿಕ್ಷಣದಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲು ಏಕೆ ಹಿಂಜರಿಯುತ್ತಿದ್ದಾರೆ?

ಆದ್ದರಿಂದ ರಾಜ್ಯ ಸರಕಾರವು ಸ್ವಾಮಿನಾಥನ್‌ರ ವರದಿಯನ್ನು ಜಾರಿಗೊಳಿಸಿ ಖಾಸಗಿ ಕೃಷಿ ಶಿಕ್ಷಣಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೃಷಿ ಶಿಕ್ಷಣ ಭ್ರಷ್ಟಾಚಾರಕ್ಕೆ ತವರು ಮನೆ ಆಗಲಿದೆ.
ದೇೀಶವು ಕೃಷಿ ರಂಗದಲ್ಲಿ ಹಸಿರು, ಹಳದಿ, ನೀಲಿ, ಕೆಂಪು ಮತ್ತು ಕ್ಷೀರ ಮುಂತಾದ ಕ್ರಾಂತಿಗಳನ್ನು ಮೂಡಿಸಿ ಆಹಾರ ಸ್ವಾವಲಂಬನೆಯನ್ನು ಪಡೆದಿರುವುದು ಕೇವಲ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಿಂದ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯೂ ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)