varthabharthi

ಕ್ರೀಡೆ

ಭಾರತಕ್ಕೆ ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಗುರಿ

ಇಂದಿನಿಂದ ಎರಡನೇ ಟೆಸ್ಟ್ ಪಂದ್ಯ

ವಾರ್ತಾ ಭಾರತಿ : 12 Oct, 2018

ಹೈದರಾಬಾದ್, ಅ.11: ವಿಶ್ವದ ನಂ.1 ತಂಡ ಭಾರತ ಹಾಗೂ 8ನೇ ರ್ಯಾಂಕಿನ ತಂಡ ವೆಸ್ಟ್‌ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರ ರಾಜೀವ್ ಗಾಂಧಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ಟೀಮ್ ಇಂಡಿಯಾ ಈಗಾಗಲೇ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೈದರಾಬಾದ್ ಅಂಗಣದಲ್ಲಿ ಅಜೇಯ ಗೆಲುವಿನ ದಾಖಲೆ ಮುಂದುವರಿಸುವತ್ತ ಚಿತ್ತವಿರಿಸಿದೆ. ಭಾರತ ಇಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 3 ಪಂದ್ಯ ಗಳಲ್ಲಿ ಭಾರೀ ಅಂತರದ ಜಯ ದಾಖಲಿಸಿದೆ.

ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಮೂರು ದಿನದೊಳಗೇ ಮುಕ್ತಾಯವಾಗಿತ್ತು. ವಿಂಡೀಸ್ 2ನೇ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 5 ದಿನಗಳ ಕಾಲ ಆಡಲಿದೆಯೇ ಎಂದು ಕಾದುನೋಡಬೇಕಾಗಿದೆ. ವೆಸ್ಟ್‌ಇಂಡೀಸ್ ಇತ್ತೀಚೆಗೆ ಭಾರತದ ವಿರುದ್ಧ ಆಡಿರುವ ಕಳೆದ 3 ಟೆಸ್ಟ್ ಪಂದ್ಯಗಳನ್ನು ಮೂರು ದಿನದೊಳಗೆ ಸೋತಿತ್ತು. ಇತ್ತೀಚೆಗಿನ ದಿನಗಳಲ್ಲಿ ಭಾರತ-ವಿಂಡೀಸ್ ನಡುವಿನ ಪಂದ್ಯಗಳು ಏಕಪಕ್ಷೀಯವಾಗಿ ಸಾಗುತ್ತಿವೆೆ.

 ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀಮಂತ ಇತಿಹಾಸ ಹೊಂದಿರುವ ವಿಂಡೀಸ್ ತಂಡ ಮೊದಲ ಟೆಸ್ಟ್‌ನಲ್ಲಿ ಖಾಯಂ ನಾಯಕನಿಲ್ಲದೆ ಸಂಪೂರ್ಣ ವಿಫಲವಾಗಿತ್ತು. ಎರಡನೇ ಟೆಸ್ಟ್‌ಗೆ ನಾಯಕ ಜೇಸನ್ ಹೋಲ್ಡರ್ ವಾಪಸಾಗುತ್ತಿದ್ದಾರೆ. ಅವರೀಗ ಮಂಡಿನೋವಿನಿಂದ ಚೇತರಿಸಿಕೊಂಡಿದ್ದಾರೆ. ಸ್ವದೇಶಕ್ಕೆ ವಾಪಸಾಗಿದ್ದ ವೇಗದ ಬೌಲರ್ ಕೆಮರ್ ರೋಚ್ ಆಡುವ ಬಳಗವನ್ನು ಸೇರಿಕೊಳ್ಳಲಿದ್ದಾರೆ.

<

 ಮಯಾಂಕ್‌ಗೆ ಅವಕಾಶ ಸಾಧ್ಯತೆ: ಮಯಾಂಕ್ ಅಗರ್ವಾಲ್‌ಗೆ ಚೊಚ್ಚಲ ಟೆಸ್ಟ್ ಕ್ಯಾಪ್ ನೀಡುವುದು ಹೇಗೆಂಬ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಚಿಂತಿಸುತ್ತಿದೆ. ಆಯ್ಕೆಗಾರರು ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್‌ರನ್ನು 2ನೇ ಟೆಸ್ಟ್‌ನಲ್ಲಿ ಆಡಿಸುವ ಯೋಚನೆಯಲ್ಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಮಾತ್ರ ರನ್ ಗಳಿಸಲು ವಿಫಲರಾಗಿದ್ದರು. ರಾಜ್‌ಕೋಟ್ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಶಾರನ್ನು ಕೈಬಿಡುವಂತಿಲ್ಲ. ಅತ್ತ, ರಾಹುಲ್‌ಗೆ ಮುಂಬರುವ ಆಸ್ಟ್ರೇಲಿಯ ಪ್ರವಾಸದ ದೃಷ್ಟಿಯಿಂದ ಇನ್ನಷ್ಟು ಅವಕಾಶ ನೀಡುವ ಅಗತ್ಯವಿದೆ.

ಭಾರತದ ಇಬ್ಬರು ಆಟಗಾರರಾದ ಚೇತೇಶ್ವರ ಪೂಜಾರ ಹಾಗೂ ಆರ್.ಅಶ್ವಿನ್ ಹೈದರಾಬಾದ್ ಕ್ರೀಡಾಂಗಣದಲ್ಲಿ ಆಡಲು ಉತ್ಸುಕರಾಗಿದ್ದಾರೆ. ಪೂಜಾರ ಇಲ್ಲಿ ಆಡಿರುವ 3 ಟೆಸ್ಟ್ ಪಂದ್ಯಗಳಲ್ಲಿ 500 ರನ್ ಗಳಿಸಿದ್ದಾರೆ. ಅಶ್ವಿನ್ 3 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 24 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

►ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಲೋಕೇಶ್ ರಾಹುಲ್, ಪ್ರಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದುಲ್ ಠಾಕೂರ್.

►ವೆಸ್ಟ್‌ಇಂಡೀಸ್(ಸಂಭಾವ್ಯ): ಕ್ರೆಗ್ ಬ್ರಾತ್‌ವೇಟ್, ಕಿರನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್,ಶಾಯ್ ಹೋಪ್, ಸುನೀಲ್ ಅಂಬ್ರಿಸ್, ರೊಸ್ಟನ್‌ಚೇಸ್, ಶೇನ್ ಡೊವ್ರಿಚ್, ಜೇಸನ್ ಹೋಲ್ಡರ್, ಕೆಮರ್ ರೋಚ್, ದೇವೇಂದ್ರ ಬಿಶೂ ಹಾಗೂ ಎಸ್.ಗ್ಯಾಬ್ರಿಯಲ್.

ಪಂದ್ಯದ ಸಮಯ: ಬೆಳಗ್ಗೆ 9:30 ಗಂಟೆಗೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)