varthabharthi

ಬೆಂಗಳೂರು

ಅತ್ಯಂತ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ರಾಜ್ಯ: ಕರ್ನಾಟಕಕ್ಕೆ ಸತತ 3ನೇ ವರ್ಷ ಅಗ್ರಸ್ಥಾನ

ವಾರ್ತಾ ಭಾರತಿ : 12 Oct, 2018

ಬೆಂಗಳೂರು, ಅ.12: ಭಾರತದ ರಾಜ್ಯಗಳ ಪೈಕಿ ಅತ್ಯಂತ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಸತತ ಮೂರನೇ ವರ್ಷದಲ್ಲಿ ಪಾತ್ರವಾಗಿದೆ. ಭಾರತ ಸರಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ಈ ನಿಟ್ಟಿನಲ್ಲಿ ನಂಬರ್ ವನ್ ಸ್ಥಾನ ಪಡೆದಿದೆ.

ಈ ವರ್ಷದ ಆಗಸ್ಟ್ ತನಕ ಕರ್ನಾಟಕವು ರೂ.79,866 ಕೋಟಿ ಹೂಡಿಕೆ ಸಾಧ್ಯತೆಯ ಅವಕಾಶಗಳನ್ನು ಅಥವಾ ಇಂಡಸ್ಟ್ರಿಯಲ್ ಎಂಟ್ರಪ್ರನಲ್ ಮೆಮೊರಾಂಡಂ (ಐಇಎಂ)ಗಳನ್ನು ಪಡೆದಿದ್ದು, ಎರಡನೇ ಸ್ಥಾನದಲ್ಲಿರುವ ಗುಜರಾತ್ ರಾಜ್ಯಕ್ಕೆ ಹೋಲಿಸಿದಾಗ ಇದು ಶೇ.60ರಷ್ಟು ಹೆಚ್ಚಾಗಿದೆ.

ಗುಜರಾತ್ ಇದೇ ಅವಧಿಯಲ್ಲಿ ರೂ 51,586 ಕೋಟಿ ಮೌಲ್ಯದ ಐಇಎಂಗಳನ್ನು ಪಡೆದಿದೆ.
ದೇಶದಲ್ಲಿಯೇ ಹೂಡಿಕೆಗಳಿಗೆ ಅತ್ಯುತ್ತಮ ತಾಣವೆಂಬ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಹಾಗೂ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸರಕಾರ ಪ್ರಯತ್ನ ಮುಂದುವರಿಸಲಿದೆ ಎಂದು ರಾಜ್ಯದ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

‘‘ಪ್ರತಿಯೊಂದು ಐಇಎಂಗಳು ಕಾರ್ಯರೂಪಕ್ಕೆ ಬರುವಂತೆ ಪ್ರಕ್ರಿಯೆಗಳು ಮುಂದುವರಿದಿವೆ. ಪ್ರತಿ 15 ದಿನಗಳಿಗೊಮ್ಮೆ ಈ ಯೋಜನೆಗಳ ಪರಿಶೀಲನೆ ನಡೆಸಲಾಗುತ್ತಿದೆ’’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ.

ಅತ್ಯಂತ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ರಾಜ್ಯಗಳ ಪೈಕಿ 2013ರಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದ್ದರೆ, 2014 ಹಾಗೂ 2015ರಲ್ಲಿ ಅದು ಕ್ರಮವಾಗಿ 4ನೇ ಮತ್ತು 5ನೇ ಸ್ಥಾನದಲಿತ್ತು. 2016 ಹಾಗೂ 2017ರಲ್ಲಿ ಅದು ಪ್ರಥಮ ಸ್ಥಾನ ಪಡೆದು ಈ ವರ್ಷವೂ ತನ್ನ ಟಾಪ್ ಸ್ಥಾನವನ್ನು ಕಾಯ್ದುಕೊಂಡಿದೆ.

2018ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಪ್ರಮುಖವಾಗಿ ಬಿಂಬಿಸಿದ್ದರು. ಭಾರತದಲ್ಲಿ ನಡೆಸಲಾಗುವ ಒಟ್ಟು ಹೂಡಿಕೆಗಳ ಪೈಕಿ ಶೇ.44.43ರಷ್ಟು ಹೂಡಿಕೆಗಳು ಕರ್ನಾಟಕದಲ್ಲಾಗುತ್ತಿವೆ ಎಂದು ಹಿಂದಿನ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ನವೆಂಬರ್ 2017ರಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)