varthabharthi

ಕರಾವಳಿ

ಕೋಡಿಹಳ್ಳಿ ಸ್ವಾಮೀಜಿ ಸರಕಾರದ ವಿರುದ್ಧ ಹೇಳಿಕೆ ನೀಡಿರುವುದು ಸರಿಯಲ್ಲ: ಅನಿತಾ ಕುಮಾರಸ್ವಾಮಿ

ವಾರ್ತಾ ಭಾರತಿ : 12 Oct, 2018

ಬೆಳ್ತಂಗಡಿ, ಅ.12: ಕೋಡಿಹಳ್ಳಿ ಸ್ವಾಮೀಜಿಯವರ ಮೇಲೆ ನಮಗೆ ಬಹಳ ಗೌರವ ಇದೆ. ಅವರು ಈ ರೀತಿಯಾಗಿ ಮಾತನಾಡಬಾರದು. ಸರಕಾರದ ವಿರುದ್ಧ ಹೇಳಿಕೆಗಳನ್ನ ನೀಡುವುದನ್ನು ನಿಲ್ಲಿಸಬೇಕು. ಎಲ್ಲಾ ದೇವರ ಇಚ್ಛೆ. ದೇವರು ಹೇಗೆ ಮಾಡುತ್ತಾನೋ ಆ ರೀತಿ ಆಗುತ್ತೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅನಿತಾ ಕುಮಾರಸ್ವಾಮಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭ ‘ಎರಡು ತಿಂಗಳಲ್ಲಿ ಸರಕಾರ ಉರುಳುತ್ತದೆ’ ಎಂಬ ಕೋಡಿಹಳ್ಳಿ ಸ್ವಾಮೀಜಿ ಎಂಬ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

ಸಚಿವ ಎನ್.ಮಹೇಶ ರಾಜೀನಾಮೆ ನೀಡಿದ್ದರಿಂದ ಜೆಡಿಎಸ್‌ಗೆ ಹೊಡೆತ ಬೀಳಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಮಹೇಶ್ ರಾಜೀನಾಮೆ ಕೊಟ್ಟಿದ್ದರೂ ಕುಮಾರಸ್ವಾಮಿಯವರಿಗೆ ಬೆಂಬಲವಿದೆ, ಗೌರವವಿದೆ ಎಂದು ಹೇಳಿದ್ದಾರೆ. ರಾಜೀನಾಮೆ ಅವರ ವೈಯುಕ್ತಿಕ ವಿಚಾರವಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

ಮನಗರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಿಲ್ಲುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಇಲ್ಲ, ಕಾದು ನೋಡಿ. ಯಾವ ರೀತಿ ಬಂಡಾಯನೂ ಇಲ್ಲ ಅಲ್ಲಿ. ಇಕ್ಬಾಲ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಸಮಸ್ಯೆ ಬಗೆಹರಿಸಲಿದ್ದಾರೆ. ಅವರ ಬೆಂಬಲವೂ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ದೇವಳದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಶತ ರುದ್ರಾಭಿಷೇಕ ಪೂಜೆ ಹಾಗೂ ಬಿ. ಫಾರಂಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚಿಸಿ, ಆಶೀರ್ವಾದ ಪಡೆದರು.

ಈ ಸಂದರ್ಭ ಹೇಮಾವತಿ ವಿ. ಹೆಗ್ಗಡೆ, ಹರ್ಷೇಂದ್ರಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಸುಳ್ಯ ಜೆಡಿಎಸ್ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಉಪಸ್ಥಿತರಿದ್ದರು. ಹೆಲಿಪ್ಯಾಡ್‌ನಲ್ಲಿ ಕ್ಷೇತ್ರದ ವತಿಯಿಂದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರುಶೆಟ್ಟಿ, ದೇವಳದ ಪಾರುಪತ್ಯಾಗಾರ ಲಕ್ಷ್ಮೀನಾರಾಯಣ ರಾವ್, ದೇವಳ ಕಚೇರಿಯ ಪ್ರಬಂಧಕ ಪಾರ್ಶ್ವನಾಥ, ಹರೀಶ ರಾವ್ ಕ್ಷೇತ್ರದ ಪದ್ಧತಿಯಂತೆ ಅನಿತಾ ಕುಮಾರಸ್ವಾಮಿಯನ್ನು ಸ್ವಾಗತಿಸಿದರು.

ಈ ಸಂದರ್ಭ ದ.ಕ. ಎಸ್ಪಿ ಡಾ.ರವೀಕಾಂತೇ ಗೌಡ, ಸಿಪಿಐ ಸಂದೇಶ್, ಧರ್ಮಸ್ಥಳ ಹಾಗೂ ಬೆಳ್ತಂಗಡಿ ಎಸ್ಸೈ ಅವಿನಾಶ್ ಮತ್ತು ರವಿ ಹಾಜರಿದ್ದರು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)