varthabharthi

ಕರ್ನಾಟಕ

ಕೈಲಾಸ ಮಾನಸ ಸರೋವರ ಯಾತ್ರೆ ಅದ್ಭುತ ಅನುಭವ: ಎಸ್ಪಿ ಅಣ್ಣಾಮಲೈ

ವಾರ್ತಾ ಭಾರತಿ : 12 Oct, 2018

ಚಿಕ್ಕಮಗಳೂರು ಅ.12: ನಮ್ಮ ಆತ್ಮದ ಬಗ್ಗೆ ನಾವು ಅರಿಯಲು ಕೈಲಾಸ ಮಾನಸ ಸರೋವರ ಯಾತ್ರೆ ಅತ್ಯುತ್ತಮ ಅವಕಾಶವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅಭಿಪ್ರಾಯಿಸಿದರು.

ರೋಟರಿ ಕಾಫಿಲ್ಯಾಂಡ್ ನಗರದ ಎಂ.ಎಲ್.ವಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ 'ಕೈಲಾಸ ಮಾನಸ ಸರೋವರ ಯಾತ್ರೆ'-ಒಂದು ಅನುಭವ ಕಾರ್ಯಕ್ರಮದಲ್ಲಿ ಪವರ್ ಪಾಯಿಂಟ್‍ನೊಂದಿಗೆ ಅವರು ಸಂವಾದ ನಡೆಸಿದರು.

ಕೈಲಾಸ ಪರ್ವತ ಪಶ್ಚಿಮದಿಕ್ಕಿನಿಂದ ನೋಡಿದರೆ ಲಿಂಗದರ್ಶನ ಕಾಣಬಹುದು. ನೆತ್ತಿಯಲ್ಲಿ ನಾಗಸರ್ಪದಂತೆ ಗೋಚರಿಸುತ್ತದೆ ಎಂದು ಚಿತ್ರಸಮೇತ ವಿವರಿಸಿದ ಅವರು, ಕೈಲಾಸ ಪರಿಕ್ರಮಕ್ಕೆ 1.2 ಲಕ್ಷರೂ.ಶುಲ್ಕ ಪಾವತಿಸಬೇಕು. ಭಾರತೀಯರು ನತುಲ ಮೂಲಕ ವಾಹನದಲ್ಲಿ ತಲುಪಬಹುದು. ಇದಕ್ಕೆ ಸುಮಾರು 2.3 ಲಕ್ಷ ರೂ.ವೆಚ್ಚವಾಗುತ್ತಿದ್ದು, ಕಠ್ಮಂಡು ಮೂಲಕ ಹೆಲಿಕ್ಯಾಪ್ಟರ್ ನಲ್ಲಿ ಸಮೀಪ ತಲುಪಲು 1.7ಲಕ್ಷರೂ.ವೆಚ್ಚವಾಗುತ್ತದೆ ಎಂದರು.

ಯಾತ್ರೆಗೂ ಕರ್ನಾಟಕಕ್ಕೂ ಪುರಾತನ ಸಂಬಂಧವಿದೆ. ಕೈಲಾಸಯಾತ್ರಿಗಳು ಭಾರತದ ಇಂದಿನ ಉತ್ತರಾಖಂಡ ಅಂಚಿನಿಂದ ಸಾಗಬೇಕಾದಾಗ ಅತ್ಯಂತ ಅಪಾಯಕಾರಿ ಸ್ಥಳವೊಂದಿದೆ. ಬಹಳಷ್ಟು ಜನರು ಇಲ್ಲಿ ಸಾವನ್ನಪ್ಪುತ್ತಿದ್ದರು. ಮೈಸೂರು ಮಹಾರಾಜರು 1937ರಲ್ಲಿ 7,000ಅಡಿ ಎತ್ತರದ ಈ ಪ್ರದೇಶದಲ್ಲಿ 237 ಚಿನ್ನದನಾಣ್ಯಗಳನ್ನು ವೆಚ್ಚಮಾಡಿ ಸುಮಾರು 300ಮಟ್ಟಿಲುಗಳನ್ನು ನಿರ್ಮಿಸಿದ್ದಾರೆಂದು ವಿವರಿಸಿದರು.

ಚೀನಾ ದೇಶ 1967ರಲ್ಲಿ ಟಿಬೆಟ್ ಆಕ್ರಮಿಸಿಕೊಂಡ ನಂತರ ಇಲ್ಲಿ ಬಹಳಷ್ಟು ನಿಯಂತ್ರಣಗಳನ್ನು ಹೇರಿದೆ. ಸ್ಯಾಟ್‍ಲೈಟ್ ಕಣ್ಗಾವಲು ಇಟ್ಟಿದೆ. ವರ್ಷಕ್ಕೆ 2,000 ಭಾರತೀಯರಿಗೆ ಮತ್ತು ನೇಪಾಳದ ಕಠ್ಮಂಡು ಮೂಲಕ 7,000 ಯಾತ್ರಾರ್ಥಿಗಳಿಗೆ ಮಾತ್ರ ವೀಸಾ ನೀಡುತ್ತಿದೆ. ಕೈಲಾಸ ಪರ್ವತದ ಸುತ್ತ 48 ಕಿ.ಮೀ.ಕಾಲ್ನಡಿಗೆಯಲ್ಲಿ ಪರಿಕ್ರಮ ಮಾಡುವ ಪದ್ಧತಿ ಹಿಂದೂಗಳಲ್ಲಿದೆ. ಇದಕ್ಕೆ ಮೂರುದಿನ ಬೇಕಾಗುತ್ತದೆ. ಆದರೆ ಟಿಬೆಟ್ ಮತ್ತು ಚೀನಾದವರು ಕೈಲಾಸಪರ್ವತದ ಜೊತೆಗೆ ಮಾನಸ ಸರೋವರವನ್ನೂ ಉರುಳಿಕೊಂಡು ಪರಿಕ್ರಮ ಮಾಡುತ್ತಾರೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ವಿವೇಕ್ ಸ್ವಾಗತಿಸಿ, ಕಾರ್ಯದರ್ಶಿ ಗುರುಮೂರ್ತಿ ವಂದಿಸಿದರು. ನಿರ್ದೇಶಕ ಸೂರಜ್ ಅಥಿತಿಗಳನ್ನು ಪರಿಚಯಿಸಿ, ನಮಿತಾ ಪ್ರಾರ್ಥಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)