varthabharthi

ಬೆಂಗಳೂರು

ಅ.14-20ರ ವರೆಗೆ ರಾಷ್ಟ್ರೀಯ ಸಹಕಾರ ಸಪ್ತಾಹ: ಸಚಿವ ಬಂಡೆಪ್ಪ ಕಾಶೆಂಪೂರ್

ವಾರ್ತಾ ಭಾರತಿ : 12 Oct, 2018

ಬೆಂಗಳೂರು, ಅ. 12: ಸಹಕಾರ ಚಳವಳಿಯ ಯಶಸ್ವಿಗೆ ಅಗತ್ಯ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ್ದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಗೌರವಾರ್ಥ ಅ.14ರಿಂದ 20ರ ವರೆಗೆ ‘ಸಹಕಾರ ಸಪ್ತಾಹ’ ಆಚರಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ 65ನೆ ಸಹಕಾರ ಸಪ್ತಾಹ ಪೂರ್ವಭಾವಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವವಣಿಗೆ’ ಎಂದು ಧ್ಯೇಯ ಘೋಷಣೆಯಡಿ ಸಪ್ತಾಹ ಆಚರಣೆ ಮಾಡಲಾಗುತ್ತಿದೆ ಎಂದರು.

ಅ.14ರಂದು ಬೀದರ್‌ನಲ್ಲಿ ಸಹಕಾರ ಸಪ್ತಾಹವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಅ.15ಕ್ಕೆ ಶಿರಸಿ, ಅ.16ಕ್ಕೆ ಬೆಂಗಳೂರು, ಅ.17ಕ್ಕೆ ತುಮಕೂರು, ಅ.18ಕ್ಕೆ ಹಾವೇರಿ, ಅ.19ಕ್ಕೆ ರಾಯಚೂರು ಹಾಗೂ ಅ.20ರಂದು ಶಿವಮೊಗ್ಗ ಅಥವಾ ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ ಎಂದರು.

ಇದೇ ವೇಳೆ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದ ಅವರು, ರಾಜ್ಯದಲ್ಲಿ 27ಸಾವಿರ ಸಹಕಾರ ಸಂಘಗಳ ಪೈಕಿ 18 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳು, 5300 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿವೆ ಎಂದರು.

ಏಳು ದಿನ ನಡೆಯಲಿರುವ ಸಪ್ತಾಹದಲ್ಲಿ ಜನರ ಸಹಭಾಗಿತ್ವ ಮುಖ್ಯ. ಹೀಗಾಗಿ ಎಲ್ಲ ಸಹಕಾರಿ ಸಂಘಗಳಿಗೆ ಸಪ್ತಾಹದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಜತೆಗೆ ಆಯಾ ಭಾಗದ ಕಾರ್ಯಕ್ರಮಗಳಲ್ಲಿ ಆಯಾ ಭಾಗದ ಸಚಿವರು ಹಾಗೂ ಶಾಸಕರು ಭಾಗವಹಿಸುವ ಮೂಲಕ ಸಪ್ತಾಹ ಯಶಸ್ವಿಗೊಳಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರೈತರು ಸಹಕಾರಿ ಸಂಘಗಳ ಮೂಲಕ ಪಡೆದಿದ್ದ 9,448 ಕೋಟಿ ರೂ.ಗಳಷ್ಟು ಸಾಲಮನ್ನಾ ಮಾಡಿದ್ದು, ಇದರಿಂದ ರಾಜ್ಯದ 22 ಲಕ್ಷಕ್ಕೂ ಅಧಿಕ ಮಂದಿ ರೈತರಿಗೆ ಪ್ರಯೋಜನ ಆಗಿದ್ದು, ಸಹಕಾರ ಕ್ಷೇತ್ರದಿಂದ ಇನ್ನೂ ಹೆಚ್ಚಿನ ಜನರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ’

-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)