varthabharthi

ಕರಾವಳಿ

ಅಂಚೆಚೀಟಿಗಳು ಆಧುನಿಕ ಇತಿಹಾಸ ಅಧ್ಯಯನದ ಆಕರ: ಡಾ.ಜಗದೀಶ್ ಶೆಟ್ಟಿ

ವಾರ್ತಾ ಭಾರತಿ : 12 Oct, 2018

ಉಡುಪಿ, ಅ.12: ಅಂಚೆಚೀಟಿ ಆಧುನಿಕ ಇತಿಹಾಸ ಅಧ್ಯಯನಕ್ಕೆ ಬೇಕಾದ ಮುಖ್ಯ ಆಕರವಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಅಂಚೆ ವಿಭಾಗ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹೆರಿಟೇಜ್ ಕ್ಲಬ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಅಂಚೆ ಸಪ್ತಾಹದ ಪ್ರಯುಕ್ತ ವಿಶ್ವ ಅಂಚೆ ಚೀಟಿ ಸಂಗ್ರಹಣ ದಿನದ ಅಂಗವಾಗಿ ಶುಕ್ರವಾರ ಕಾಲೇಜಿನ ಮಿನಿ ಅಡಿಟೋರಿಯಂನಲ್ಲಿ ಆಯೋಜಿಸಲಾದ ಅಂಚೆ ಚೀಟಿ ವಿಸ್ಮಯ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಂಚೆಚೀಟಿಗಳು ನಮ್ಮ ಪರಂಪರೆಯ ರಕ್ಷಣೆ ಹಾಗೂ ಇತಿಹಾಸ ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ. ಅಂಚೆಚೀಟಿ ಸಂಗ್ರಹ ಹವ್ಯಾಸ ದಿಂದ ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಠಿಯಾಗಿ ಪ್ರಶ್ನಿಸುವ ಮನೋಭಾವ ಬೆಳೆಯುತ್ತದೆ. ಇದರಿಂದ ಜ್ಞಾನ ವೃದ್ಧಿಯಾಗಿ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಅಂಚೆ ಚೀಟಿ ಸಂಗ್ರಹ ಹವ್ಯಾಸವು ಜೀವನದಲ್ಲಿ ಅಭ್ಯಾಸ ಆದಾಗ ಹೆಚ್ಚು ಮಹತ್ವ ಪಡೆಯುತ್ತದೆ. ಇಂತಹ ಹವ್ಯಾಸದಿಂದ ಬಿಡುವಿನ ಸಮಯವನ್ನು ಸರಿ ಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಚೆ ಚೀಟಿ ಸಂಗ್ರಹ ಹವ್ಯಾಸ ದಿಂದ ಸಂಯಮ ಹಾಗೂ ಪಕ್ಷಿ, ಪರಿಸರದ ಬಗ್ಗೆ ಮಾಹಿತಿ, ಧಾರ್ಮಿಕ ಪರಂಪರೆುನ್ನು ಎತ್ತಿಹಿಡಿಯಬಹುದಾಗಿದೆ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯಾವರದ ಅಂಚೆ ಚೀಟಿ ಸಂಗ್ರಾಹಕ ನಾಗೇಂದ್ರ ನಾಯಕ್ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಿದ್ದರು. ನ್ಯಾಯವಾದಿ ಪ್ರದೀಪ್ ಕುಮಾರ್, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್.ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ್ ಭಟ್ ವಂದಿಸಿದರು. ಪೂರ್ಣಿಮಾ ಜಾರ್ದನ್ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲ ಸಂದೀಪ್ ಕುಮಾರ್ ಸಂಗ್ರಹದ ವಿಶೇಷ ಅಂಚೆ ಲಕೋಟೆ, ಅಂಚೆ ಚೀಟಿ, ಅಮ್ಮುಂಜೆ ನಾಗೇಂದ್ರ ನಾಯಕ್‌ರವರ ಯುಎಸ್‌ಎ, ಮಲೇಶಿಯಾ, ಚೀನಾ, ಹಂಗೇರಿ, ನೇಪಾಳ ಸೇರಿದಂತೆ 50 ರಾಷ್ಟ್ರಗಳ ಅಂಚೆ ಚೀಟಿ ಹಾಗೂ ಅಂಚೆ ಇಲಾಖೆ ಉದ್ಯೋಗಿಗಳಾದ ಅರ್ಚನಾ ಎಂ.ಪೈ ಸಂಪಾದಿಸಿದ ಅಂಚೆ ಚಿಕಣಿ ಹಾಳೆ ಹಾಗೂ ಪೂರ್ಣಿಮಾ ಜನಾರ್ದನ್ ಸಂಗ್ರಹಿಸಿದ ತುಳು ಶಿರ್ಷೀಕೆಯ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗಿತ್ತು. ಹಳೆಯ ಹಾಗೂ ಹೊಸ ನೋಟು ಹಾಗೂ 1000ರೂ. ಸೇರಿದಂತೆ ವಿವಿಧ ಮುಖಬೆಲೆಯ ನಾಣ್ಯಗಳು ಗಮನ ಸೆಳೆದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)