varthabharthi

ಕರಾವಳಿ

ಪೊಲೀಸ್ ಫೋನ್ ಇನ್ ಕಾರ್ಯಕ್ರಮ

ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕ್ರಮ: ಟಿ.ಆರ್.ಸುರೇಶ್

ವಾರ್ತಾ ಭಾರತಿ : 12 Oct, 2018

ಮಂಗಳೂರು, ಅ.12: ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಬಡ್ಡಿ ವ್ಯವಹಾರ ನಡೆಸುವವರ ಬಗ್ಗೆ ಜನರು ಭಯಪಡುವುದು ಬೇಡ. ನಿರ್ಭೀತಿಯಿಂದ ದೂರು ಸಲ್ಲಿಸಬಹುದು ಮತ್ತು ದೂರುದಾರ ರಿಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದರು.

ಶುಕ್ರವಾರ ತನ್ನ ಕಚೇರಿಯಲ್ಲಿ ನಡೆದ ಪೊಲೀಸ್ ೆನ್-ಇನ್ ಕಾರ್ಯಕ್ರಮಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಗುರುಪುರ ಕೈಕಂಬದ ವ್ಯಕ್ತಿಯೊಬ್ಬರು ಕರೆ ಮಾಡಿ ಬಡ್ಡಿಗೆ ಹಣ ನೀಡುವವರು ಅಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ. ಬಡ್ಡಿ ನೀಡಲು ನಿರಾಕರಿಸಿದರೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಮೀಟರ್ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿ ಈಗಾಗಲೇ ಸಾಕಷ್ಟು ದೂರುಗಳು ಬಂದಿದೆ. ಪ್ರಕರಣಗಳು ಕೂಡಾ ದಾಖಲಾಗಿವೆ. ನಿರ್ದಿಷ್ಟ ಪ್ರಕರಣಗಳಿದ್ದರೆ ಈಗಲೂ ದೂರು ಕೊಡಬಹುದು ಎಂದರು.

ಕಂಕನಾಡಿ ಸಹಿತ ವಿವಿಧೆಡೆ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಸರಿಯಾಗಿ ಇರಿಸುತ್ತಿಲ್ಲ. ಕೆಲವು ಕಡೆ ಬ್ಯಾರಿಕೇಡ್‌ಗಳು ಫುಟ್‌ಪಾತ್‌ನಲ್ಲಿ ಇರಿಸಿರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಈ ಬಗ್ಗೆ ಗಮನ ಹರಿಸುವಂತೆ ಸಂಚಾರ ಗಸ್ತು ದಳದ ಪೊಲೀಸರಿಗೆ ಸೂಚಿಸಿದರು.

ಸುರತ್ಕಲ್ ಪ್ರದೇಶದಲ್ಲಿ ಮಹಿಳೆಯರ ಕುತ್ತಿಗೆಯಿಂದ ಸರ ಕಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ ಎಂದು ಸುರತ್ಕಲ್‌ನ ನಾಗರಿಕರೊಬ್ಬರ ಪ್ರಶ್ನೆಗೆ ಆಯುಕ್ತರು ಉತ್ತರಿಸಿದರು.

ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ನಲ್ಲಿ ಮಾತ್ರವಲ್ಲ ಇಯರ್ ಫೋನ್‌ನಲ್ಲಿ ಮಾತನಾಡುವುದು ಕೂಡಾ ತಪ್ಪು. ಆದ್ದರಿಂದ ಇಯರ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವವರ ವಿರುದ್ಧವೂ ಕ್ರಮ ಜರಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

91ನೇ ಫೋನ್ ಇನ್ ಕಾರ್ಯಕ್ರಮ ಇದಾಗಿದ್ದು, 28 ಕರೆಗಳು ಬಂದವು. ಈ ಸಂದರ್ಭ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಕಬ್ಬಾಳ್ ರಾಜ್, ಎಸ್ಸೈ ಕಮಲಾ, ಎಎಸ್ಸೈಗಳಾದ ಸುಕುಮಾರ್ ಮತ್ತು ಯೂಸುಫ್, ಹೆಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)