varthabharthi

ಬೆಂಗಳೂರು

ರಫೆಲ್ ಯುದ್ಧ ವಿಮಾನ ತಯಾರಿಕೆ

ಎಚ್‌ಎಎಲ್ ದೇಶದ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬು: ಅನಂತ ಪದ್ಮನಾಭ

ವಾರ್ತಾ ಭಾರತಿ : 12 Oct, 2018

ಬೆಂಗಳೂರು, ಅ.12: 1940ರ ಡಿಸೆಂಬರ್ 23ರಂದು ಆರಂಭವಾದ ಎಚ್‌ಎಎಲ್ ಸಂಸ್ಥೆ ಈವರೆಗೂ ಲಾಭದಾಯಕವಾಗಿ ನಡೆಯುತ್ತಾ ಬಂದಿದೆ. ದೇಶದ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿರುವ ಎಚ್‌ಎಎಲ್ ಎಲ್ಲ ಯುದ್ಧ ವಿಮಾನಗಳನ್ನು ನಿರ್ಮಾಣ ಮಾಡಿದೆ ಎಂದು ಎಚ್‌ಎಎಲ್ ನೌಕರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಎಲ್ ಸಂಸ್ಥೆಯನ್ನು ಎಷ್ಟು ಲಕ್ಷ ಕೋಟಿ ರೂ.ಗಳನ್ನು ಒದಗಿಸಿದರೂ ಮತ್ತೆ ಕಟ್ಟಲು ಸಾಧ್ಯವಿಲ್ಲ. ವಿಶ್ವದಲ್ಲೆ ನಾವು ಹೆಲಿಕಾಪ್ಟರ್ ನಿರ್ಮಾಣದಲ್ಲಿ ಆರು ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದೇವೆ. ಇಂತಹ ಸಂಸ್ಥೆಯ ಬಗ್ಗೆ ರಕ್ಷಣಾ ಸಚಿವೆಗೆ ಯಾವುದೆ ಮಾಹಿತಿಯಿಲ್ಲ ಎಂದು ಟೀಕಿಸಿದರು.

ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಕ್ಷಣಾ ಸಚಿವರು ಈವರೆಗೆ ಒಮ್ಮೆಯೂ ಎಚ್‌ಎಎಲ್ ಸಂಸ್ಥೆಗೆ ಭೇಟಿ ನೀಡಿಲ್ಲ. ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಿಲ್ಲ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿರುವ ಎಚ್‌ಎಎಲ್ ಬಗ್ಗೆ ಅವಮಾನಕರವಾಗಿ ಅವರು ಮಾತನಾಡಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಅನಂತಪದ್ಮನಾಭ ಬೇಸರ ವ್ಯಕ್ತಪಡಿಸಿದರು.

ರಫೆಲ್ ಯುದ್ಧ ವಿಮಾನವನ್ನು ನಿರ್ಮಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇದೆ. ಇಸ್ರೋ ಉಡಾಯಿಸುವ ಉಪಗ್ರಹಗಳಿಗೆ ಅಗತ್ಯವಿರುವ ಉಪಕರಣಗಳನ್ನು ನಾವೇ ಸಿದ್ಧಪಡಿಸಿ ಒದಗಿಸುತ್ತೇವೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಬೆಂಗಳೂರು ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳ ಬೆಳವಣಿಗೆ ಸೇರಿದಂತೆ ಇನ್ನಿತರ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆಯೂರಲು ಎಚ್‌ಎಎಲ್ ಕಾರಣ ಎಂದು ಅವರು ಹೇಳಿದರು.

ಸರಕಾರದ ಜೊತೆ ಚರ್ಚೆ ಮಾಡಲು ಸಿದ್ಧವಿದ್ದೆವು. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದುದ್ದರಿಂದ, ವಿರೋಧ ಪಕ್ಷದ ಪ್ರಮುಖ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜೊತೆ ಈ ಬಗ್ಗೆ ಸಂವಾದ ನಡೆಸಲು ಮನವಿ ಮಾಡಿದೆವು. ಅವರು ನಮ್ಮ ಆಹ್ವಾನವನ್ನು ಒಪ್ಪಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅನಂತಪದ್ಮನಾಭ ತಿಳಿಸಿದರು.

ರಫೆಲ್ ಯುದ್ಧ ವಿಮಾನದ ಗುತ್ತಿಗೆ ಎಚ್‌ಎಎಲ್‌ಗೆ ನೀಡಿದರೆ ಸುಮಾರು 3 ಸಾವಿರ ಯುವಕರಿಗೆ ಉದ್ಯೋಗ ಅವಕಾಶ ಸಿಗುತ್ತದೆ. ದೇಶದ ಯಾವುದೇ ಸಂಸ್ಥೆಗೂ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್‌ಗೆ ಇರುವಷ್ಟು ಅನುಭವವಿಲ್ಲ. ಆದುದರಿಂದ, ಕೇಂದ್ರ ಸರಕಾರ ಯಾವುದೇ ಅನುಭವವಿಲ್ಲದ ಅನಿಲ್ ಅಂಬಾನಿ ಸಂಸ್ಥೆಯ ಬದಲು ಎಚ್‌ಎಎಲ್‌ಗೆ ಈ ಗುತ್ತಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ತುಮಕೂರಿನಲ್ಲಿ ಆರಂಭಿಸಿದ ಎಚ್‌ಎಎಲ್ ಸಂಸ್ಥೆಗೆ 5 ಸಾವಿರ ಕೋಟಿ ರೂ.ಗಳನ್ನು ಒದಗಿಸುವುದಾಗಿ ಪ್ರಧಾನಿ ನರೇಂದ್ರಮೋದಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಒಂದು ಪೈಸೆಯೂ ನೀಡಿಲ್ಲ. ಎಚ್‌ಎಎಲ್ ಸಂಸ್ಥೆ ಠೇವಣಿ ಇಟ್ಟಿರುವ 18 ಸಾವಿರ ಕೋಟಿ ರೂ.ಪೈಕಿ, 5 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಪಡೆದುಕೊಂಡಿದೆ. ಅಲ್ಲದೆ, ಎಚ್‌ಎಎಲ್‌ನ ಶೇರುಗಳನ್ನು ಮಾರಾಟ ಮಾಡುತ್ತಿದೆ ಎಂದು ಅನಂತಪದ್ಮನಾಭ ದೂರಿದರು.

ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಶನಿವಾರ ಬೆಂಗಳೂರಿನ ಕಬ್ಬನ್‌ಪಾರ್ಕ್ ಬಳಿ ಎಚ್‌ಎಎಲ್ ಸಿಬ್ಬಂದಿ ಜೊತೆ ಮುಕ್ತ ಸಂವಾದ ನಡೆಸಲಿದ್ದಾರೆ. ಇದರಲ್ಲಿ ಎಚ್‌ಎಎಲ್‌ನ ಹಾಲಿ ಹಾಗೂ ನಿವೃತ್ತ ಸಿಬ್ಬಂದಿ, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಎಚ್‌ಎಎಲ್ ವಸತಿ ಸಂಘದ ಮಾಜಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)