varthabharthi

ರಾಷ್ಟ್ರೀಯ

‘ಟೆಕ್ಸ್ಟ್’ರೂಪದಲ್ಲಿ ಮತದಾರರ ಪಟ್ಟಿ ಕೋರಿದ್ದ ಕಮಲ್‌ನಾಥ್, ಪೈಲಟ್ ಅರ್ಜಿ ವಜಾ

ವಾರ್ತಾ ಭಾರತಿ : 12 Oct, 2018

ಹೊಸದಿಲ್ಲಿ, ಅ.12: ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಮತದಾರರ ಕರಡು ಪಟ್ಟಿಯನ್ನು ‘ಟೆಕ್ಸ್ಟ್’ ರೂಪದಲ್ಲಿ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್ ಮುಖಂಡರಾದ ಕಮಲನಾಥ್ ಹಾಗೂ ಸಚಿನ್ ಪೈಲಟ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಮತದಾರರ ಪಟ್ಟಿಯನ್ನು ಪಿಡಿಎಫ್ ಶೈಲಿಯಲ್ಲಿ ಪ್ರಕಟಿಸದೆ ‘ಟೆಕ್ಸ್ಟ್’ ರೂಪದಲ್ಲಿ ಪ್ರಕಟಿಸಬೇಕು. ಅಲ್ಲದೆ ಮತದಾರರ ಪಟ್ಟಿ ಕುರಿತು ಸಲ್ಲಿಸಲಾಗಿರುವ ಎಲ್ಲಾ ದೂರು, ಸಲಹೆಗಳ ಬಗ್ಗೆ ತ್ವರಿತವಾಗಿ ನಿರ್ಧಾರ ಕೈಗೊಂಡು ಬಳಿಕ ಪ್ರಕಟಿಸಲು ಆಯೋಗಕ್ಕೆ ಸೂಚಿಸುವಂತೆ ಕಮಲನಾಥ್ ಅರ್ಜಿಯಲ್ಲಿ ಕೋರಿದ್ದರು. ಅಲ್ಲದೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಶೇ.10ರಷ್ಟು ಮತದಾನ ಕೇಂದ್ರಗಳಲ್ಲಿ ಇವಿಎಂಗಳ ವಿವಿಪ್ಯಾಟ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು. ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು, ರಾಜಸ್ತಾನದಲ್ಲಿ 41 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ದೂರಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ರಾಜಸ್ತಾನದಲ್ಲಿ 71 ಲಕ್ಷ ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)