varthabharthi


ನೇಸರ ನೋಡು

ಸರೋದ್ ಮಾಂತ್ರಿಕ ರಾಜೀವ ತಾರಾನಾಥ್

ವಾರ್ತಾ ಭಾರತಿ : 14 Oct, 2018
ಜಿ.ಎನ್. ರಂಗನಾಥ ರಾವ್

ವೀಣೆ, ಪಿಟೀಲುಗಳ ನಂತರ, ಅನ್ಯ ಎನ್ನಬಹುದಾದ ಸಿತಾರ್‌ಗೆ ಮಾರುಹೋದ ಕನ್ನಡಿಗರು ಕೈಬೆರಳೆಣಿಕೆಯಷ್ಟು ಮಂದಿ ಇದ್ದಾರು. ಸರೋದ್‌ಗೆ ಮಾರುಹೋದವರೂ ಅಜ್ಞಾತವಾಗಿ ಕೆಲವರಿರಬಹುದಾದರೂ ಮೋಡಿಮಾಡುವ ಈ ವಾದ್ಯಕ್ಕೆ ಮಾರುಹೋಗಿ, ಅದನ್ನು ಕರಗತ ಮಾಡಿಕೊಂಡು ಅಂತರ್‌ರಾಷ್ಟೀಯ ಮಟ್ಟದಲ್ಲಿ ಖ್ಯಾತರಾದ ರಾಜೀವ ತಾರಾನಾಥರು ಏಕಮೇವರು! ಸರೋದ್ ವಾದನದಲ್ಲಿ ಕರ್ನಾಟಕದ ಏಕಮೇವಾದ್ವಿತೀಯ ಕಲಾವಿದರಾದ ರಾಜೀವ ತಾರಾನಾಥರಿಗೆ ಈ ಶರನ್ನವರಾತ್ರಿಯಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸುವ ಸಂಭ್ರಮ ನಾಡಿನ ಜನತೆಯದು.

ವಾದ್ಯ ಸಂಗೀತದಲ್ಲಿ ಕರ್ನಾಟಕ ರಾಜ್ಯ ವಿಶೇಷವಾಗಿ ವೀಣೆ ಮತ್ತು ಪಿಟೀಲಿಗೆ ವಿಶ್ವವಿಖ್ಯಾತವಾದದ್ದು. ವೀಣೆಯಲ್ಲಂತೂ ವೀಣೆಯ ಬೆಡಗಿದು ಮೈಸೂರು ಎನ್ನುವಷ್ಟು ಶೃಂಗಸದೃಶವಾದ ಖ್ಯಾತಿ. ವೀಣೆ ಶೇಷಣ್ಣ, ವೆಂಕಟಗಿರಿಯಪ್ಪನವರಿಂದ ಹಿಡಿದು ದೊರೆಸ್ವಾಮಿ ಅಯ್ಯಂಗಾರರವರೆಗೆ ಮೈಸೂರು ವೀಣೆಯ ಖ್ಯಾತಿಯನ್ನು ಸಾಗರದಾಚೆಗೂ ಪಸರಿಸಿದವರ ಪಟ್ಟಿ ದೊಡ್ಡದೇ ಇದೆ. ಪಿಟೀಲಿನಲ್ಲಿ ಚೌಡಯ್ಯನವರದು ಇಷ್ಟೇ ಘನವಾದ ಕೊಡುಗೆ. ಇದೇ ರೀತಿ ಸರೋದ್ ವಾದನದಲ್ಲಿ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದವರು ರಾಜೀವ್ ತಾರಾನಾಥರು. ಕರ್ನಾಟಕ ಸರೋದ್ ತೌರುಮನೆಯಲ್ಲ. ವೀಣೆ, ಪಿಟೀಲುಗಳ ನಂತರ, ಅನ್ಯ ಎನ್ನಬಹುದಾದ ಸಿತಾರ್‌ಗೆ ಮಾರುಹೋದ ಕನ್ನಡಿಗರು ಕೈಬೆರಳೆಣಿಕೆಯಷ್ಟು ಮಂದಿ ಇದ್ದಾರು. ಸರೋದ್‌ಗೆ ಮಾರುಹೋದವರೂ ಅಜ್ಞಾತವಾಗಿ ಕೆಲವರಿರಬಹುದಾದರೂ ಮೋಡಿಮಾಡುವ ಈ ವಾದ್ಯಕ್ಕೆ ಮಾರುಹೋಗಿ, ಅದನ್ನು ಕರಗತ ಮಾಡಿಕೊಂಡು ಅಂತರ್‌ರಾಷ್ಟೀಯ ಮಟ್ಟದಲ್ಲಿ ಖ್ಯಾತರಾದ ರಾಜೀವ ತಾರಾನಾಥರು ಏಕಮೇವರು! ಸರೋದ್ ವಾದನದಲ್ಲಿ ಕರ್ನಾಟಕದ ಏಕಮೇವಾದ್ವಿತೀಯ ಕಲಾವಿದರಾದ ರಾಜೀವ ತಾರಾನಾಥರಿಗೆ ಈ ಶರನ್ನವರಾತ್ರಿಯಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸುವ ಸಂಭ್ರಮ ನಾಡಿನ ಜನತೆಯದು. ಕನ್ನಡ ಸಾಹಿತ್ಯ ಮತ್ತು ಸಂಗೀತ ಪ್ರಪಂಚದಲ್ಲಿ ಪ್ರಭಾವಶಾಲಿಯಾದ ರಾಜೀವ ತಾರಾನಾಥರು ಮಂಗಳೂರು ಮೂಲದವರಾದರೂ ಜನಿಸಿದ್ದು ಬೆಂಗಳೂರಿನಲ್ಲಿ 1932ರ ಅಕ್ಟೋಬರ್ 17ರಂದು. ತಂದೆ ಕರ್ನಾಟಕದ ಸಾಂಸ್ಕೃತಿಕ ಪ್ರಪಂಚದಲ್ಲಿ ಒಂದು ದೊಡ್ಡ ಹೆಸರಾದ ಪಂಡಿತ ತಾರಾನಾಥರು.ತಂದೆ ರಂಗರಾಯರಿಂದ ಸಂಸ್ಕೃತ ಮತ್ತು ಸಂಗೀತ ಕಲಿತ ತಾರಾನಾಥರು ಆಯುರ್ವೇದ ವೈದ್ಯಕೀಯ ಓದಿ ಪಂಡಿತ ತಾರಾನಾಥರಾದರು. ದೇಶವೆಲ್ಲ ಸುತ್ತಿ ಜ್ಞಾನ ಸಂಪಾದಿಸಿದ ಪಂಡಿತ ತಾರಾನಾಥರು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ‘ವರ್ಗಶಿಕ್ಷೆ’ ಅನುಭವಿಸಬೇಕಾಗಿ ಬಂದಾಗ ರಾಜೀನಾಮೆ ನೀಡಿ ‘ಹಮ್ ದರ್ದ್ ಹೈಸ್ಕೂಲ್’ ಆರಂಭಿಸಿ ರಾಜ್ಯದಿಂದ ಗಡಿಪಾರಾದರು. ಆದರೆ ತಾರಾನಾಥರು ಇದಾವುದಕ್ಕೂ ಜಗ್ಗದೆಕುಗ್ಗದೆ ತುಂಗಾ ಭದ್ರಾ ತೀರದಲ್ಲಿ ‘ಪ್ರೇಮಾಯತನ’ ಎಂಬ ಆಶ್ರಮ ಸ್ಥಾಪಿಸಿ, ಆಯುರ್ವೇದ, ಯೋಗ, ಸಾಹಿತ್ಯ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮೊದಲಾದ ವಿಷಯಗಳಲ್ಲಿ ಶಿಕ್ಷಣದ ವ್ಯವಸ್ಥೆಮಾಡಿದರು. ‘ಪ್ರೇಮ’ ಎಂಬ ನಿಯತಕಾಲಿಕವನ್ನು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಿದರು. ಶಿಕ್ಷಣ ಮತ್ತು ಸಮಾಜ ಸುಧಾರಣೆಯಲ್ಲಿ ತೀವ್ರಕಾಳಜಿ ಹೊಂದಿದ್ದ ಪಂಡಿತ ತಾರಾನಾಥರ ಸುಪುತ್ರರು ರಾಜೀವ ತಾರಾನಾಥರು.

ಶಾಲೆಯ ಪುಸ್ತಕದ ಓದಿನೊಂದಿಗೇ ಸಂಗೀತವನ್ನೂ ಕಲಿತವರು ರಾಜೀವ ತಾರಾನಾಥರು. ತಂದೆಯೇ ಗುರು. ಸಂಗೀತದಲ್ಲಿ ಸ್ವರಶುದ್ಧಿಗೆ ಪ್ರಾಮುಖ್ಯ ನೀಡುತ್ತಿದ್ದ ತಂದೆಯವರಿಂದಲೇ ಸಂಗೀತದಲ್ಲಿ ಕ್ರಮಬದ್ಧ ಶಿಕ್ಷಣ. ಏಳನೆಯ ವಯಸ್ಸಿನಿಂದಲೇ ಸಂಗೀತದಲ್ಲಿ ತಾಲೀಮು. ಶುರುವಿನಲ್ಲಿ ಓನಾಮ ಕಲಿಸಿದ ತಂದೆಯೇ, ಮುಂದೆ ಸವಾಯಿ ಗಂಧರ್ವರ ಶಿಷ್ಯರಾದ ಕಿರಾಣಘರಾಣ ಖ್ಯಾತಿಯ ವೆಂಕಟರಾವ್ ರಾಮದುರ್ಗಕರ್ ಮತ್ತು ಗ್ವಾಲಿಯರ್ ಘರಾಣ ಖ್ಯಾತಿಯ ಶಂಕರ ರಾವ್ ಜೋಶಿಯವರಿಂದ ಪಾಠ ಹೇಳಿಸಿದರು. ರಾಜೀವ್ ಒಂಬತ್ತನೆಯ ವಯಸ್ಸಿಗೇ ಸಂಗೀತ ಕಚೇರಿ ನಡೆಸಿ ಅದ್ಭುತವಾದ ಬಾಲ ಪ್ರತಿಭೆ ಎನ್ನುವ ಪ್ರಶಂಸೆಗೆ ಪಾತ್ರರಾದರು. ಇಪ್ಪತ್ತರ ಪ್ರಾಯದಲ್ಲೇ ಆಕಾಶವಾಣಿ ಗಾಯಕರಾಗಿ ಪ್ರಸಿದ್ಧರಾದರು. ಸಂಗೀತದ ಜೊತೆಯಲ್ಲೇ ಶಾಲಾಕಾಲೇಜು ಶಿಕ್ಷಣವನ್ನೂ ನಡೆಸಿದ ರಾಜೀವ ತಾರಾನಾಥರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರರಾಗಿ ಅಧ್ಯಾಪನದ ವೃತ್ತಿಯನ್ನಾರಂಭಿಸಿದರು. ಸಾಹಿತ್ಯ ಬೋಧನೆ ಮತ್ತು ಸಂಗೀತ ಇವೆರಡರಲ್ಲಿ ಸಂಗೀತದ ಸೆಳೆತವೇ ಹೆಚ್ಚಾದಾಗ ಪ್ರೊಫೆಸರ್ ಕೆಲಸಕ್ಕೆ ವಿದಾಯ ಹೇಳಿ ಸರೋದ್ ಗುರುವನ್ನು ಅರಸಿಕೊಂಡು ಕೋಲ್ಕತಾಗೆ ಹೋದರು. ಸರೋದ್ ಮಾಂತ್ರಿಕ ಅಲಿ ಅಕ್ಬರ್ ಖಾನ್ ಅವರಲ್ಲಿ ಶಿಷ್ಯತ್ವ ಪಡೆದುಕೊಂಡರು. 2009ರಲ್ಲಿ ಅಲಿ ಅಕ್ಬರ್ ಖಾನ್ ನಿಧನ ಹೊಂದುವವರೆಗೆ ರಾಜೀವರು ಅವರ ಶಿಷ್ಯರಾಗಿದ್ದರು.

 ವಾದ್ಯಗಳಲ್ಲಿ ರಾಜಾ ಎಂದರೆ ಸಿತಾರ್ ಎಂದು ನಂಬಿದ್ದ ರಾಜೀವರು 1949ರಷ್ಟು ಹಿಂದೆಯೇ ರವಿಶಂಕರ್ ಅವರ ಸಿತಾರ್ ಮೋಡಿಗೆ ವಶವಾಗಿದ್ದರು. ‘‘ಸರೋದ್ ವಾದ್ಯವೆಂದರೆ ಅಸಹ್ಯ. ಅದೇನು ವಾದ್ಯ ಆ ಮರದ ತುಂಡು, ಅದಕ್ಕೆ ಚರ್ಮದ ಹೊದ್ದಿಕೆ, ಮೀಟುವುದು ನರಗಳನ್ನು ಇದೊಂದು ವಾದ್ಯವೆ?’’-ರಾಜೀವ್ ಶುರುವಿನಲ್ಲಿ ಇಂಥ ಧೋರಣೆ ಹೊಂದಿದ್ದರೆಂದು ಖ್ಯಾತ ಸಂಗೀತಜ್ಞ ಬಿ.ವಿ.ಕೆ ಶಾಸ್ತ್ರಿಯವರು ಬರೆಯುತ್ತಾರೆ. ಹಾಗಿದ್ದಲ್ಲಿ ರಾಜೀವ ತಾರಾನಾಥರು ಸರೋದ್‌ನಿಂದ ಆಕರ್ಷಿತರಾದದ್ದು ಹೇಗೆ? ರಾಜೀವರ ‘ಸಿತಾರ್ ಪ್ರಿಯತೆ ಮತ್ತು ಸರೋದ್ ವಿರೋಧಿ’ನಂಬಿಕೆಯನ್ನೇ ಅಲುಗಾಡಿಸುವಂಥ ಒಂದು ಸಂದರ್ಭ ಒದಗಿ ಬಂತು. ಒಮ್ಮೆ ಬೆಂಗಳೂರಿನಲ್ಲಿ ರವಿಶಂಕರ್ ಮತ್ತು ಅಲಿ ಅಕ್ಬರ್ ಖಾನ್‌ರವರು ‘ಸಿತಾರ್-ಸರೋದ್’ ಜುಗಲ್‌ಬಂದಿ ಕಚೇರಿ ನಡೆಸಿದರು. ರಾಜೀವರಿಗೆ ಪರಿಚಯವಿದ್ದ ಯುರೋಪಿಯನ್ ಮಹಿಳೆಯೊಬ್ಬರಿಗೆ ಈ ಕಚೇರಿಗೆ ಹೋಗುವ ಆಸೆಯಾಗಿ, ಆಕೆಯನ್ನು ರವಿಶಂಕರ್-ಅಲಿ ಅಕ್ಬರ್ ಜುಗಲ್‌ಬಂದಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ರಾಜೀವರಿಗೆ ಒದಗಿ ಬಂತು. ಮುಂದಿನದನ್ನು ರಾಜೀವ ತಾರಾನಾಥರು ಬಿ.ವಿ.ಕೆ.ಶಾಸ್ತ್ರಿಯವರಿಗೆ ನೀಡಿದ ಸಂದರ್ಶನದಲ್ಲಿ ಹೀಗೆ ತಿಳಿಸಿದ್ದಾರೆ:

  ‘‘ ...ಆಕೆಗೆ ಭಾರತೀಯ ಸಂಗೀತವನ್ನು ಕೇಳಬೇಕೆಂಬ ಆಸೆ. ಈ ಕಚೇರಿಗೆ ಬರುವುದಾಗಿ ತಿಳಿಸಿದರು. ಆದರೆ ನನಗೆ ಕರೆದುಕೊಂಡು ಹೋಗಲು ಹೀನಾಯ. ರವಿಶಂಕರ್‌ರವರ ತನಿ ಸಿತಾರ್ ಕೇಳಿ ಎಂದು ಮುಂಚೆಯೇ ತಿಳಿಸಿ ಕರೆದುಕೊಂಡುಹೋದದ್ದಾಯಿತು. ಕಾರ್ಯಕ್ರಮದಲ್ಲಿ ಮೊದಲನೆಯ ರಾಗವೇ ‘ಪೂರ್ಯಾ ಕಲ್ಯಾಣ್’. ಸರೋದ್‌ನಲ್ಲಿ ಅದರ ಮೊದಲ ಸಂಚಾರಗಳು ಮೂಡಿಬರುತ್ತಿದ್ದಂತಯೇ ನನಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಅಲಿ ಅಕ್ಬರ್ ಖಾನರು ಆ ರಾಗವನ್ನು ಸರದಿಯಲ್ಲಿ ಎತ್ತುವುದನ್ನೇ ಕಾಯಲಾರಂಭಿಸಿದೆ. ಆ ರಾಗವು ಮುಗಿಯುವ ವೇಳೆಗೆ ನನ್ನ ಮನಸ್ಸೇ ಅಲ್ಲೋಲಕಲ್ಲೋಲವಾಯಿತು.ನನಗೆ ಎಲ್ಲವೂ ಮರೆತಂತಾಯಿತು.ಅಂದು ವಿಪರೀತ ಮಳೆ. ನೆನೆದುಕೊಂಡು ಮನೆಸೇರಿದ್ದು ಲೆಕ್ಕವಿಲ್ಲ.ಮನಸ್ಸಿನಲ್ಲಿ ಸರೋದ್‌ನದೇ ಗಂಭೀರ ನಾದ. ಆ ವಾದ್ಯದ ವಿಷಯದಲ್ಲಿ ನಾನೇಕೆ ಹೀಗೆ ಭಾವಿಸಿದ್ದೆ ಎಂಬ ಸಂಶಯ. ಈ ವಾದ್ಯವನ್ನು ಕಲಿಯಲೇ ಬೇಕು. ಕಲಿತರೆ ಅಲಿ ಅಕ್ಬರ್ ಖಾನ್‌ರ ಹತ್ತಿರವೇ ಕಲಿಯಬೇಕು ಎಂಬ ಉತ್ಕಟ ಆಕಾಂಕ್ಷೆ ಮೂಡಿತು’’

 ಹೀಗೆ ಚಿಗುರಿದಾಕಾಂಕ್ಷೆ ಹೆಮ್ಮರವಾಗಿ ಬೆಳೆಯಿತು. ಅಲಿ ಅಕ್ಬರ್ ಖಾನ್‌ರ ಬಳಿ ಶಿಷ್ಯತ್ವ ಪಡೆಯುವುದು ಹೇಗೆ? ಮುಂಬೈಯಲ್ಲಿ ಅಕ್ಬರ್ ಖಾನ್‌ರಿಗೆ ಪರಿಚಯವಿದ್ದ ಜ್ಯೋತಿಷಿಯೊಬ್ಬರನ್ನು ಹಿಡಿದರು. ಈ ಜ್ಯೋತಿಷಿ ರಾಜೀವರನ್ನು ಖಾನ್‌ಗೆ ಪರಿಚಯಿಸಿದರು. ರಾಜೀವರ ಪೂರ್ವೋತ್ತರಗಳನ್ನೆಲ್ಲ ಕೇಳಿ ತಿಳಿದ ಖಾನ್‌ರು ವಿದ್ಯೆಗೆ ಸಂಬಂಧಿಸಿದ ಕಷ್ಟನಿಷ್ಠುರಗಳನ್ನೂ ವಿದ್ಯಾರ್ಥಿಗೆ ತಿಳಿಸಿದರು. ಮುಖ್ಯವಾಗಿ ಈ ವಿದ್ಯೆ ಶುರುವಾಗಬೇಕಾಗಿದ್ದುದು ಎಳೆಯ ವಯಸ್ಸಿನಲ್ಲಿ, ಕೈಬೆರಳು ಮುಂತಾದುವನ್ನು ಸಾಧನೆಯಿಂದ ಬಗ್ಗಿಸಬಹುದಾದ ವಯಸ್ಸಿನಲ್ಲಿ. ಆದರೆ ರಾಜೀವರಿಗೆ ಆಗ ವಯಸ್ಸು 23. ಸರೋದ್ ಬಹಳ ಕಷ್ಟಸಾಧನೆಯಿಂದಲೂ ಕರಗತಮಾಡಿಕೊಳ್ಳಲು ಸಾಧ್ಯವಾಗದಂತಹ ವಾದ್ಯ. ಇದಕ್ಕೆಲ್ಲ ತಯಾರಿದ್ದರು ರಾಜೀವರು. ಶಿಕ್ಷಣ ಪ್ರಾರಂಭವಾಯಿತು. ಖಾನರೇ ಒಂದು ಚಿಕ್ಕ ಸರೋದ್ ವಾದ್ಯವನ್ನು ಶಿಷ್ಯನಿಗೆ ಕೊಟ್ಟರು. ಎಂಟುಹತ್ತು ದಿನಗಳ ನಂತರ ಬೆಂಗಳೂರಿಗೆ ಹಿಂದಿರುಗಿದರು ಸೆಂಟ್ರಲ್ ಕಾಲೇಜಿನ ಹುದ್ದೆಗೆ ರಾಜೀನಾಮೆ ಕೊಡಲು. ಖಾನ್ ಸಾಹೇಬರ ಹತ್ತಿರ ವಿದ್ಯೆ ಕಲಿಯಲು ಬಂದು ಹೋದವರು ಮರಳಿ ಬರುತ್ತಿದ್ದುದು ಕಡಿಮೆ. ರಾಜೀವರು ಕಾಲೇಜಿನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸರೋದ್ ಮೋಹದಿಂದ ಮರಳಿ ಬಂದಾಗ ಗುರುಗಳಿಗೇ ಅಚ್ಚರಿ ಕಾದಿತ್ತು.

 ಸರೋದ್ ಕಲಿಯುತ್ತಿದ್ದಾಗ ಜೀವೋಪಾಯಕ್ಕಾಗಿ ರಾಜೀವರು ‘ಆರ್ಯನ್ ಪಾತ್’ಪತ್ರಿಕೆ ಮತ್ತು ಭಾರತೀಯ ವಿದ್ಯಾಭವನ ಶಾಲೆಯಲ್ಲಿ ಉದ್ಯೋಗ ಹಿಡಿದರು. ಅಲಿ ಅಕ್ಬರ್ ಖಾನ್‌ರು ಕೋಲ್ಕತಾದಲ್ಲಿ ನೆಲೆಸಿದಾಗ ಪಾಠ ಕ್ರಮದಲ್ಲಿ ವ್ಯತ್ಯಾಸವಿಲ್ಲ, ಆದರೆ ಉದರ ಪೋಷಣೆಗೆ ತೊಂದರೆ. ಹಣಕ್ಕೆ ತಾಪತ್ರಯವಾದಾಗ ಖಾನ್ ಸಾಹೇಬರ ಗುರುಕುಲದಲ್ಲಿದ್ದುಕೊಂಡೇ ಕಚೇರಿ ನಡೆಸಿ ಗುರುಗಳಿಗೆ ಸಿಕ್ಕಿಬಿದ್ದದ್ದೂ ಉಂಟು. ಗುರುಗಳ ಅನುಮತಿ ಇಲ್ಲದೆ ಕಚೇರಿ ನಡೆಸಬಾರದು ಎನ್ನುವ ಗುರುಕುಲದ ಶಿಸ್ತಿನ ದಿನಗಳ ಕಾಲವದು. ಹೀಗಿರುವಾಗ ರಾಜೀವರು ದುರ್ಗಾಪೂಜೆಯ ಉತ್ಸವ ಮಂಟಪದಲ್ಲಿ ಸರೋದ್ ನುಡಿಸಲು ಒಪ್ಪಿಕೊಂಡರು. ಕಚೇರಿಗೆ ಪ್ರತಿಫಲ ಒಂದು ಊಟ ಮತ್ತು 20 ರೂಪಾಯಿ. ಲೌಡ್ ಸ್ಪೀಕರ್ ಮಹಿಮೆಯಿಂದ ರಾಜೀವರ ಸರೋದ್ ವಾದನ ಖಾನ್ ಸಾಹೇಬರ ಕಿವಿಮುಟ್ಟಿತು. ಮುಂದೇನಾಯಿತೆಂಬುದನ್ನು ರಾಜೀವರ ಮಾತುಗಳಲ್ಲೇ ಕೇಳಬೇಕು:

‘‘ಎಂದಿನಂತೆ ಪಾಠಕ್ಕೆ ಹೋದೆ. ಗುರುಗಳು ನಿಂತಿದ್ದರು.ಮುಖದಲ್ಲಿ ಸಹಜವಾದ ಮುಗುಳ್ನಗೆಯಿಲ್ಲ. ದುರುಗುಟ್ಟಿಕೊಂಡು ನೋಡುತ್ತಾ‘ದೊಡ್ಡ ಉಸ್ತಾದನಾಗಿ ಬಿಟ್ಟಿಯೋ’ ಎಂದರು. ನನಗೆ ನಡುಕ ಹುಟ್ಟಿತು. ಕಾಲಿಗೆ ಬಿದ್ದೆ. ತಪ್ಪಾಯಿತು ಎಂದು ನನ್ನ ಕಷ್ಟದ ಕಥೆಯನ್ನೆಲ್ಲ ಹೇಳಿದೆ. ಅವರು ಅದನ್ನು ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಲಿಲ್ಲ. ತಗೋ ಸರೋದನ್ನ ಎಂದು ಗದರಿಸಿದರು. ವಾದ್ಯವನ್ನು ನಾನು ತಂದ ನಂತರ ‘ಹೂಂ, ಮೊನ್ನೆ ನೀನು ಮಾಡಿದ ಕಚೇರಿಯನ್ನೆಲ್ಲ ಪುನ:ನುಡಿಸು’ ಎಂದು ಎದುರಿಗೆ ಕುಳಿತರು. ನಾನೂ ಅಧೈರ್ಯದಿಂದಲೇ ನುಡಿಸಿಕೊಂಡು ಹೋದೆ.ಕೊನೆಯವರೆಗೂ ಅಲ್ಲಾಡದೆ ಕೂತು ಕೇಳಿದರು. ಒಂದು ನಿಮಿಷ ಸುಮ್ಮನಿದ್ದು ‘ಸರಿ’ಎಂದರು. ಆನಂತರ ಸಿಗರೇಟ್ ಹಚ್ಚಿ ‘ನಾನು ಏನು ಮಾಡಬೇಕೆಂದಿದ್ದೆ ಗೊತ್ತೇ’ಎಂದು ಕೇಳಿದರು. ನಾನು ಮಾತಾಡಲಿಲ್ಲ. ‘ನಿನ್ನನು ನನ್ನ ಬಳಿಯಿಂದ ಓಡಿಸಿಬಿಡಬೇಕೆಂದಿದ್ದೆ. ಆದರೆ ಕೇಳಿ ನೋಡಿ ಆನಂತರ ಮಾಡೋಣವೆಂದು ನಿರ್ಧರಿಸಿದೆ. ನೀನು ನುಡಿಸಿದುದು ಸರಿಯಿಲ್ಲದಿದ್ದರೆ ಈಗಲೇ ನಿನ್ನನ್ನು ಮನೆಬಿಟ್ಟು ಓಡಿಸಿಯೇ ಬಿಡುತ್ತಿದ್ದೆ’ಎಂದು ಹೇಳಿ ‘ಹೀಗೇಕೆ ಮಾಡಿದೆ. ನನಗೆ ಹೇಳಬಾರದಿತ್ತೆ ಇನ್ನು ಮುಂದೆ ಹಾಗೆ ಮಾಡಬೇಡ’ಎಂದರು ಗುರುಗಳು.’’ -ಅಂದು ರಾಜೀವ ತಾರಾನಾಥರು ನಿರೂಪಿಸಿದ್ದು ಕೀರವಾಣಿ ರಾಗ. ಅದು ಅವರಿಗಿನ್ನೂ ಪಾಠವೇ ಆಗಿರಲಿಲ್ಲವಂತೆ!

ರಾಜೀವ ತಾರಾನಾಥರದು ತೀವ್ರ ಸಂವೇದನಾಶೀಲ ಮನಸ್ಸು. ಸಾಹಿತ್ಯವಿರಲಿ, ಸಂಗೀತ ಅಥವಾ ಇನ್ನಾವುದೇ ಕಲೆ ಇರಲಿ, ಆಧುನಿಕವಿರಲಿ-ಅರ್ವಾಚೀನವಿರಲಿ ಅವರ ಬುದ್ಧಿ-ಸೃಜನಶೀಲ ಪ್ರತಿಭೆ ಪಾತಾಳಗರಡಿಯಂತೆ ಆಳಕ್ಕಿಳಿದು ಸತ್ಯವನ್ನು-ಸೌಂದರ್ಯವನ್ನು ಬಗೆದುನೋಡುವ ನಿಷ್ಠೆಯದು. ಕನ್ನಡದಲ್ಲಿ ನವ್ಯ ಸಾಹಿತ್ಯ ಚಳವಳಿ ಪ್ರಖರವಾಗಿದ್ದ ದಿನಗಳಲ್ಲಿ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮೊದಲಾದವರೊಂದಿಗೆ ನವ್ಯಾನುಸಂಧಾನ ನಡೆಸಿದವರು. ಕನ್ನಡದಲ್ಲಿ ನವ್ಯ ವಿಮರ್ಶೆಯನ್ನು ಪ್ರಭಾವಿಸಿದವರು. ಅಧ್ಯಾಪಕ ವೃತ್ತಿ ತೊರೆದ ನಂತರ ಸಂಗೀತವನ್ನು ಕಲಿಯುತ್ತಲೇ ಅದರ ಸಂಶೋಧನೆಯಲ್ಲೂ ತೊಡಗಿಕೊಂಡರು. ‘ಫೋರ್ಡ್ ಫೌಂಡೇಷನ್’ನ ಫೆಲೋಶಿಪ್ ಪಡೆದು ಮಿಹಿರ್ ಅಲ್ಲಾಉದ್ದಿನ್ ಘರಾಣ ಕುರಿತು ಸಂಶೋಧನೆ ನಡೆಸಿದರು. 1993-2005ರ ಅವಧಿಯಲ್ಲಿ ‘ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್’ ಸಂಸ್ಥೆಯ ವರ್ಲ್ಡ್ ಮ್ಯೂಸಿಕ್ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿದರು. 1980ರ ದಶಕದಲ್ಲಿ ಆಡೆನ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಿಸುತ್ತಿದ್ದ ರಾಜೀವ ತಾರಾನಾಥರ ಬಗ್ಗೆ ಆಡೆನ್ ದೂರದರ್ಶನ ‘ಆರ್ಟಿಸ್ಟ್ ಫ್ರಂ ಇಂಡಿಯಾ’ ಸಾಕ್ಷ್ಯ ಚಿತ್ರ ತಯಾರಿಸಿದೆ. ಭಾರತ ಹಾಗೂ ವಿದೇಶಗಳಲ್ಲಿ ಕಚೇರಿ ನೀಡುವ ರಾಜೀವ ತಾರಾನಾಥರು ಅಸ್ಟ್ರೇಲಿಯಾ, ಯುರೋಪ್, ಅಮೆರಿಕ, ಕೆನಡಾ, ಯಮನ್ ಮೊದಲಾದ ದೇಶಗಳಲ್ಲಿ ಕಚೇರಿ ನೀಡಿ ಪ್ರಖ್ಯಾತರಾದವರು. ಆಸ್ಟ್ರೇಲಿಯಾದ ‘ಸಿಡ್ನಿ ಅಪೇರಾ ಹೌಸ್’ನಲ್ಲಿ ಕಚೇರಿ ನೀಡಿದ ಪ್ರಥಮ ಭಾರತೀಯ ಎನ್ನುವ ಕೀರ್ತಿ ಅವರದು. ರಾಜೀವ ತಾರಾನಾಥರು ಹಲವಾರು ಅಂತರ್‌ರಾಷ್ಟ್ರೀಯ ಖ್ಯಾತಿಯ ಚಲಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಸಂಸ್ಕಾರ’, ‘ಕಾಂಚನ ಸಿತಾ’, ‘ಎಕಡವು’ ಅವುಗಳಲ್ಲಿ ಮುಖ್ಯವಾದುವು. ಕೀರ್ತಿಶನಿ ತೊಲಗು ಎಂದರೂ ಪ್ರಶಸ್ತಿ ಪುರಸ್ಕಾರಗಳ ರೂಪದಲ್ಲಿ ಅದು ಅವರನ್ನು ಅರಸಿ ಬಂದಿರುವುದುಂಟು. ಹಂಪಿ ವಿಶ್ವವಿದ್ಯಾನಿಲಯದ ‘ನಾಡೋಜ’, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತರತ್ನ ಚೌಡಯ್ಯ ಸ್ಮಾರಕ ಪ್ರಶಸ್ತಿ ಹೀಗೆ ಹಲವಾರು.ಈಗ ಕರ್ನಾಟಕ ಸರಕಾರ ನೀಡುವ, 2018ರ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ. ವೀಣೆಯ ಬೆಡಗಿನ ಮೈಸೂರಿನಲ್ಲಿ ಈ ಸರೋದ್ ಮಾಂತ್ರಿಕನಿಗೆ ಪ್ರಶಸ್ತಿ ಪ್ರದಾನ ಈ ಸಲದ ಮೈಸೂರು ದಸರಾದ ಚೊಕ್ಕ ಮುದ್ರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)