ಸುಳ್ಳುಗಾರ ಯಡಿಯೂರಪ್ಪರಿಗೆ ಕಾದಿದೆ ದೊಡ್ಡ ಶಾಕ್ : ಸಿದ್ದರಾಮಯ್ಯ
ಬಾಗಲಕೋಟೆ, ಅ.16: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಓರ್ವ ಸುಳ್ಳುಗಾರ, ಅವರಿಗೆ ದೊಡ್ಡ ಶಾಕ್ ಕಾದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಯಡಿಯೂರಪ್ಪ ಅವರು ಕಾಂಗ್ರೆಸ್ಗೆ ಶಾಕ್ ಕಾದಿದೆ ಎಂದು ಹೇಳಿಕೆ ನೀಡಿರುವ ಕುರಿತು ಮಂಗಳವಾರ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ. ಅಂದಿನಿಂದಲೂ ಸರಕಾರ ಬೀಳುತ್ತೆ ಬೀಳುತ್ತೆ ಎಂದು ಗೊಣಗುತ್ತಿದ್ದಾರೆ, ಆದರೆ ಸರಕಾರ ಬಿತ್ತೇ? ಎಂದು ಪ್ರಶ್ನಿಸಿದರು.
ಭಿನ್ನಾಭಿಪ್ರಾಯ ಇಲ್ಲ: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲವನ್ನೂ ವಿಚಾರ ಮಾಡಿಯೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಲಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಕೆಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅದೇ ರೀತಿ. ಕೆಲವು ಕಡೆ ಜೆಡಿಎಸ್ ಪಕ್ಷ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿಲ್ಲ. ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದರು.