ಭಾರತದ ಬಾಕ್ಸಿಂಗ್ ಸವಾಲು ಅಂತ್ಯ
ಬ್ಯುನಸ್ಐರಿಸ್, ಅ.16: ಇಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಜ್ಯೋತಿ ಗುಲಿಯ(51ಕೆಜಿ) ಕ್ವಾರ್ಟರ್ ಫೈನಲ್ನಲ್ಲಿ ಸೋಲುವುದರೊಂದಿಗೆ ಭಾರತದ ಬಾಕ್ಸಿಂಗ್ ಸವಾಲು ಕೊನೆಗೊಂಡಿದೆ.
ಸೋಮವಾರ ರಾತ್ರಿ ನಡೆದ ಮಹಿಳೆಯರ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಜ್ಯೋತಿ ಇಟಲಿಯ ಮಾರ್ಟಿನಾ ಲಾ ಪಿಯಾನಾ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ. ಜ್ಯೋತಿ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಏಕೈಕ ಬಾಕ್ಸರ್ ಆಗಿದ್ದರು.
17ರ ಹರೆಯದ ಹರ್ಯಾಣ ಬಾಕ್ಸರ್ ಜ್ಯೋತಿ ಕಳೆದ ತಿಂಗಳು ಪೊಲೆಂಡ್ನಲ್ಲಿ ಚಿನ್ನದ ಪದಕ ಜಯಿಸಿರುವ ಕಾರಣ ಒಲಿಂಪಿಕ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ ಮೂಡಿಸಿದ್ದರು. ಆದರೆ, ಅವರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ಭಾರತ 2010ರಲ್ಲಿ ನಡೆದ ಮೊದಲ ಆವೃತ್ತಿಯ ಯೂತ್ ಒಲಿಂಪಿಕ್ ಗೇಮ್ಸ್ನಲ್ಲಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿ 2 ಪದಕ ಗೆದ್ದುಕೊಂಡಿತ್ತು.
ಶಿವ ಥಾಪ ಹಾಗೂ ವಿಕಾಸ್ ಕ್ರಿಶನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು. ಇದು ಯೂತ್ ಒಲಿಂಪಿಕ್ಸ್ನಲ್ಲಿ ಭಾರತದ ಶ್ರೇಷ್ಠ ಪ್ರದರ್ಶನವಾಗಿ ಉಳಿದಿದೆ. ಶಿವ ಥಾಪ 54 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರೆ, ವಿಕಾಸ್ 60 ಕೆಜಿ ತೂಕ ವಿಭಾಗದಲ್ಲಿ ಕಂಚು ಗೆದ್ದುಕೊಂಡಿದ್ದರು.
2014ರ ಆವೃತ್ತಿಯ ಗೇಮ್ಸ್ನಲ್ಲಿ ಗೌರವ್ ಸೋಳಂಕಿ ನಾಲ್ಕನೇ ಸ್ಥಾನ ಪಡೆದಿದ್ದರು. ಸೋಳಂಕಿ(52ಕೆಜಿ)ಈ ವರ್ಷ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.