varthabharthi


ಅನುಗಾಲ

ಕಾರ್ನಾಡರ ‘ರಾಕ್ಷಸ-ತಂಗಡಿ’

ವಾರ್ತಾ ಭಾರತಿ : 18 Oct, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಾರ್ನಾಡರು ಈ ನಾಟಕವನ್ನು ವಚನಯುಗ-ಮತ್ತು ಟಿಪ್ಪೂವಿನ ಕಾಲದ ನಡುವೆ, ಅಂದರೆ ಕರ್ನಾಟಕದ ಚಾರಿತ್ರಿಕ ಟ್ರಯಾಲಜಿಯ ಭಾಗವೆಂಬಂತೆ ಕಂಡಿದ್ದಾರೆ. ಈ ಸೂತ್ರದಡಿ ಅವರ ಈ ಹಿಂದಿನ ಎರಡೂ ನಾಟಕಗಳ (ತಲೆದಂಡ ಮತ್ತು ಟಿಪ್ಪುಸುಲ್ತಾನ್ ಕಂಡ ಕನಸು) ಆಶಯಗಳನ್ನು ಗಮನಿಸಿದರೆ ಅದರ ಭಾಗವಾಗಿ ಅಥವಾ ಮುಂದುವರಿಕೆಯಾಗಿ ಈ ಕೃತಿಯನ್ನು ಬರೆದಿದ್ದಾರೆಂದು ಅನ್ನಿಸುವುದಿಲ್ಲ ಮತ್ತು ಇಷ್ಟೊಂದು ಆಪ್ತವಾಗಿ ಚರಿತ್ರೆಯ ಸತ್ಯವನ್ನು ಅವರು ಈ ಹಿಂದಿನ ಎರಡೂ ನಾಟಕಗಳಲ್ಲಿ ಹಿಡಿದಿಟ್ಟಿರಲಿಲ್ಲವೆಂದು ಕಾಣಿಸುತ್ತದೆ.


ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತವಷ್ಟೇ ಅಲ್ಲ, ಭಾರತವೆಂಬ ಭೂಭಾಗದಲ್ಲೇ ಅತ್ಯಂತ ಶ್ರೇಷ್ಠ ಮತ್ತು ಸಂಪದ್ಭರಿತ ಅರಸೊತ್ತಿಗೆಯೆಂದು ಪ್ರತಿಷ್ಠಿತವಾದದ್ದು. ಕನ್ನಡ-ತೆಲುಗು ನೆಲದಲ್ಲಿ ಮತ್ತು ಕೊಂಚ ತಮಿಳು ಭಾಗವನ್ನೂ ಆವರಿಸಿ 14ನೇ ಶತಮಾನದ ಪೂರ್ವಾರ್ಧದಿಂದ 16ನೇ ಶತಮಾನದ ಉತ್ತರಾರ್ಧದ ವರೆಗೂ ಇತರರ ಕಣ್ಣು ಕೋರೈಸುವಂತೆ ಮಾತ್ರವಲ್ಲ ಕಣ್ಣುರಿಸುವಂತೆಯೂ ಮಾಡಿದ ವಂಶಪರಂಪರೆ. ದಂತಕಥೆಗಳನ್ನೂ ಹುಟ್ಟುಹಾಕಿ ದೇಶವಿದೇಶಗಳಲ್ಲೂ ಭಾರತದಲ್ಲಿನ ಈ ಆಧಿಪತ್ಯ ಅನೇಕ ಕಾರಣಗಳಿಗಾಗಿ ‘ನಭೂತೋ ನ ಭವಿಷ್ಯತಿ’ ಎಂಬಂತಿತ್ತು. ಹಾಗೆ ನೋಡಿದರೆ ಚಿತ್ರದುರ್ಗದ ಇತಿಹಾಸದಂತೆ ಬಹಳಷ್ಟು ರಕ್ತ-ಸಿಕ್ತ ಇತಿಹಾಸ ವಿಜಯನಗರಕ್ಕಿಲ್ಲ. ಬದಲು, ಅದು ಲಕ್ಷ್ಮೀ-ಸರಸ್ವತಿಯರನ್ನು ಹೊಂದಿಸಿಕೊಂಡು ಶಕ್ತವಾದ ಪರಂಪರೆ. ಸಾಹಿತ್ಯ, ಧಾರ್ಮಿಕತೆ, ವೈಭವಯುತವಾಗಿ ಬೆಳೆಯುವುದಕ್ಕೆ ವಿಜಯನಗರದ ಆಡಳಿತ ಬಹುಪಾಲು ಕಾರಣವಾಗಿತ್ತು. ವಿಜಯನಗರದ ಕೊನೆ ಫ್ರೆಂಚ್ ದೊರೆ ನೆಪೋಲಿಯನ್ ಬೋನಪಾರ್ಟೆಯ ಅಂತ್ಯದಂತೆ ದುರಂತಮಯ; ಆದರೆ ತೇಜೋಮಯ.

ಎರಡು ಶತಮಾನಗಳಿಗೂ ಮಿಕ್ಕಿ ವೈಭವದಿಂದ ಆಳಲ್ಪಟ್ಟ ವಿಜಯನಗರ ಸಾಮ್ರಾಜ್ಯ ಸಂಪೂರ್ಣವಾಗಿ ಅಳಿದ ದುರಂತ ಚರಿತ್ರೆ ಭಾರತದ ಯಾವುದೇ ಚರಿತ್ರೆಗಿಂತ ಭಿನ್ನ. ಸಂಗಮ ವಂಶ (1336-1485), ವರೆಗೆ ಸಾಳುವ ವಂಶ (1485-1505) ಮತ್ತು ತುಳುವ ವಂಶ (1505-1572) ಹೀಗೆ ವಿವಿಧ ವಂಶಸ್ಥರಿಂದ ಆಳಲ್ಪಟ್ಟರೂ ಕೊನೆಯ ಒಂದು ದಶಕದ ಆಳ್ವಿಕೆಯ ಸಮಾರ್ಧವು ರಾಮರಾಯನದ್ದೇ ಆಗಿದೆ. ಅರವೀಡು ವಂಶದ, ವಿಜಯನಗರದ ಸೇನಾಪತಿಯಾಗಿದ್ದ ರಾಮರಾಯನು ತುಳುವ ಅರಸ ಕೃಷ್ಣದೇವರಾಯನ ಅಳಿಯನಾಗಿ ‘ಅಳಿಯ ರಾಮರಾಯ’ನೆಂದೇ ಪ್ರಸಿದ್ಧನಾದವನು. ಕೃಷ್ಣದೇವರಾಯನ ಅನಂತರ ಸಿಂಹಾಸನವೇರದೆಯೂ ಆಡಳಿತದ ಚುಕ್ಕಾಣಿಯನ್ನು ಹಿಡಿದವನು. ನಿಕಟ ಉತ್ತರದ ಬಹಮನಿ, ಅಹಮದ್‌ನಗರ ಮತ್ತು ಬಿಜಾಪುರದ ಆದಿಲ್ ಶಾಹಿ ಸಂಸ್ಥಾನಗಳೊಡನೆ ಆಗಾಗ ಯುದ್ಧ ನಡೆದರೂ ವಿಜಯಸಂಪನ್ನನಾದವನು. ಆದರೆ ಕೊನೆಗೆ ತನ್ನ ಅತೀವ ಆತ್ಮವಿಶ್ವಾಸದಿಂದಲೇ ಎನ್ನಬಹುದಾದ ಕಾರಣದಿಂದಾಗಿ ‘ತಾಳಿಕೋಟೆಯ ಕದನ’ ಎಂದೂ ಪ್ರಸಿದ್ಧವಾದ ರಕ್ಕಸ ತಂಗಡಿಯ ಯುದ್ಧದಲ್ಲಿ ದುರಂತ ಅಂತ್ಯ ಕಂಡವನು. ಅಳಿಯ ರಾಮರಾಯನ ಅಂತ್ಯವನ್ನು ಐತಿಹ್ಯಕ್ಕೆ ಬಹು ಸಮೀಪವಾಗಿ ಗಿರೀಶ್ ಕಾರ್ನಾಡರು ‘ರಾಕ್ಷಸ-ತಂಗಡಿ’ ಎಂದು ನಾಟಕಗೊಳಿಸಿದ್ದಾರೆ.

ಕಾರ್ನಾಡರು ಇತಿಹಾಸ ಮತ್ತು ಪುರಾಣಗಳಿಂದ ತಮ್ಮ ನಾಟಕಗಳ ವಸ್ತುವನ್ನು ಆಯ್ಕೆ ಮಾಡುತ್ತಾರೆ. ಅವರ ನಾಟಕಗಳ ಪರಿಚಯವಿರುವವರಿಗೆ ಇದು ಅರ್ಥವಾಗುತ್ತದೆ. ಈಗಾಗಲೇ ಬಂದ ಅವರ ನಾಟಕಗಳನ್ನು ಅನುಕ್ರಮವಾಗಿ ಗಮನಿಸಿದರೆ ಯಯಾತಿ (1960), ತುಘಲಕ್ (1964), ಹಯವದನ (1971), ಹಿಟ್ಟಿನ ಹುಂಜ (ಬಲಿ) (1980), ತಲೆದಂಡ (1991), ಅಗ್ನಿ ಮತ್ತು ಮಳೆ (1994), ಟಿಪ್ಪುಸುಲ್ತಾನ ಕಂಡ ಕನಸು (2000), ಇವು ಪುರಾಣ ಇಲ್ಲವೇ ಇತಿಹಾಸವನ್ನು ಅವಲಂಬಿಸಿದ ನಾಟಕಗಳು. ಈ ಮಾದರಿಗೆ ಅಪವಾದವೆಂದರೆ ಜಾನಪದ ಕಥೆಯನ್ನಾಧರಿಸಿದ ನಾಗಮಂಡಲ (1989). ಇವಲ್ಲದೆ ಆಧುನಿಕ ಬದುಕನ್ನು ಶೋಧಿಸುವ ಅವರ ಇತರ ನಾಟಕಗಳು ಬಿಂಬ, ಒಡಕಲು ಬಿಂಬ (2006), ಅಂಜುಮಲ್ಲಿಗೆ (1977) ಮುಂತಾದವು, ವಿಶೇಷವೆಂದರೆ ಅವರು ಕೆಲವು ಮರಾಠಿ ನಾಟಕಗಳನ್ನು ಅನುವಾದಿಸಿದ್ದಾರೆ.

ಒಳ್ಳೆಯ ಕೃತಿಕಾರನಿಗೆ ಇರಬೇಕಾದ ಲಕ್ಷಣಗಳಲ್ಲಿ ಇದೂ ಒಂದು: ಒಳ್ಳೆಯದು ಎಲ್ಲೇ ಇರಲಿ ಅದನ್ನು ತನ್ನ ಭಾಷೆಗೆ, ಸಮಾಜಕ್ಕೆ ಉಣಬಡಿಸುವ ಆಸಕ್ತಿ. ಕಾರ್ನಾಡರು ಎರಡು ಕಥೆಗಳನ್ನೂ ಬರೆದಿದ್ದಾರೆ: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಪತನದ ಆನಂತರದ ಭಾರತವನ್ನು ಕಾಣುವ ‘ಅಳಿದ ಮೇಲೆ’; ಕಳೆದ ದಶಕದಿಂದ ಈ ದೇಶ ಅನುಭವಿಸುತ್ತಿರುವ ಮತೀಯ ದ್ವಂದ್ವಗಳ ವ್ಯಂಗ್ಯವನ್ನು ಕಾಣಿಸುವ ‘ಮುಸಲಮಾನ ಬಂದ, ಮುಸಲಮಾನ ಬಂದ!’ ಕಾರ್ನಾಡರು ಆರಂಭದಲ್ಲಿ ನಾಟಕದ ಚೌಕಟ್ಟನ್ನು ವಿವರಿಸಿದ್ದಾರೆ ಮತ್ತು ತಾನು ‘ರಾಕ್ಷಸ-ತಂಗಡಿ’ ಎಂಬ ಶೀರ್ಷಿಕೆಯನ್ನಿಟ್ಟದ್ದೇಕೆಂದು ಕೃತಿಯ ಆರಂಭದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ರಕ್ಕಸ-ತಂಗಡಿ ಎಂಬ ಪದಗಳೇ ಚರಿತ್ರೆಯಲ್ಲಿ ಹೆಚ್ಚಾಗಿ ಉಲ್ಲೇಖವಾಗಿದೆ. ‘ರಕ್ಕಸಗಿ-ತಂಗಡಗಿ’ ಎಂದೂ ಬಳಸಿದ್ದನ್ನು ಚರಿತ್ರೆಯ ಪುಟಗಳು ಕಾಣಿಸುತ್ತವೆ. (ಕೃತಿಯ ಮೊದಲ ಪುಟಗಳಲ್ಲಿ ಪ್ರಕಟಿಸಿದ ಒಂದು ನಕ್ಷೆಯಲ್ಲೂ ಬ್ಲರ್ಬ್‌ನಲ್ಲೂ ಇದೇ ಪದವನ್ನು ಬಳಸಲಾಗಿದೆ. ‘ರಾಕ್ಷಸ’ ಎಂಬುದು ಸಾಂಪ್ರದಾಯಿಕ ಸಾಂಸ್ಕೃತಿಕ ಪದ. ‘ತಂಗಡಿ’ ದಖನೀ (ಉರ್ದು) ಪದವಾದರೂ ಕನ್ನಡ ನೆಲದಲ್ಲಿ ನೆಲೆ ಕಂಡ ದೇಸಿ. ನಾಟಕದಲ್ಲೇ ತಿರುಮಲ ಒಂದು ಸಂದರ್ಭದಲ್ಲಿ ‘‘ಈ ಹೊತ್ತು ರಕ್ಕಸತಂಗಡಿಯಲ್ಲಿ ಮಹಾಭಯಂಕರ ರಕ್ತಪಾತ-ಪ್ರಳಯದ ಹಾಗಿತ್ತು.’’ ಎಂದು, ಇನ್ನೊಂದು ಸಂದರ್ಭದಲ್ಲಿ ‘‘ಎಲ್ಲೋ ರಕ್ಕಸ-ತಂಗಡಿ ಹತ್ತಿರ ಅಂತೆ.’’ ಎನ್ನುತ್ತಾನೆ. ಈ ಹಿನ್ನೆಲೆಯನ್ನು ಗಮನಿಸಿದರೆ ಎಷ್ಟೇ ಸಮರ್ಥನೆಯನ್ನು ನೀಡಿದರೂ ರಕ್ಕಸ-ತಂಗಡಿ ಎಂಬ ಹೆಸರೇ ಕೃತಿಯ ಚಾರಿತ್ರಿಕ ನೆಲೆಯನ್ನು ಹೆಚ್ಚು ಶೋಧಿಸುತ್ತಿತ್ತೆಂದು ಮತ್ತು ಸಾಹಿತ್ಯಕವಾಗಿಯೂ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತೆಂದು ಅನ್ನಿಸುವುದರೊಂದಿಗೆ ನಾಟಕದ ಹೊರಗೂ ಒಳಗೂ ಈ ಪದದ ಅಗತ್ಯವನ್ನು ಕಾರ್ನಾಡರೇ ಹೇಳಿದ್ದರಿಂದ ಈ ಚರ್ಚೆ ಅವಶ್ಯವೆಂದು ಅನ್ನಿಸುತ್ತದೆ.

ಅಳಿಯ ರಾಮರಾಯನು ಸಿಂಹಾಸನವನ್ನೇರುವ ಅರ್ಹತೆಯನ್ನು ಹೊಂದಿಯೂ ಏರದವನು. ಆದರೆ ಅಧಿಕಾರದ ಎಲ್ಲ ಸೂತ್ರಗಳನ್ನೂ ಘನಸ್ತಿಕೆಯಿಂದಲೇ ಪೋಣಿಸಿದವನು. ಅವನ ನಿಯಂತ್ರಣದಿಂದಾಗಿ ಸಿಂಹಾಸನಾಧೀಶನಾದ ಸದಾಶಿವರಾಯ ಅಸಹಾಯಕತೆಯಿಂದ ವರ್ತಿಸಬೇಕಾಗುತ್ತದೆ. ರಾಮರಾಯ ತನ್ನ ಮೂಲವನ್ನು, ಹಿನ್ನೆಲೆಯನ್ನು ಕಲ್ಯಾಣದ ಚಾಲುಕ್ಯರಿಂದ ಆವಾಹಿಸಿಕೊಳ್ಳುತ್ತಾನೆ. ಇದೊಂದು ರೀತಿಯಲ್ಲಿ ತನ್ನ ಅಧಿಕಾರಕ್ಕೆ ಕಾನೂನಿನ ಮತ್ತು ನ್ಯಾಯದ ಮೊಹರನ್ನು ಒತ್ತುವ ರೀತಿಯೂ ಹೌದು. ಆದರೆ ತನ್ನ ಹೊಣೆಯನ್ನು ರಾಮರಾಯ ದಕ್ಷತೆಯಿಂದ ಮತ್ತು ಚಾಣಾಕ್ಷತನದಿಂದ ನಿರ್ವಹಿಸುತ್ತಾನೆ. ಈ ಬೆಳವಣಿಗೆಯ ಹೊರತಾಗಿಯೂ ಕೆಲವು ನಿಷ್ಠುರ ನಡೆನುಡಿಗಳೇ ಅವನಿಗೆ ಮುಳುವಾಗುತ್ತವೆ.

ಕಾರ್ನಾಡರು ಈ ನಾಟಕವನ್ನು ವಚನಯುಗ- ಮತ್ತು ಟಿಪ್ಪೂವಿನ ಕಾಲದ ನಡುವೆ, ಅಂದರೆ ಕರ್ನಾಟಕದ ಚಾರಿತ್ರಿಕ ಟ್ರಯಾಲಜಿಯ ಭಾಗವೆಂಬಂತೆ ಕಂಡಿದ್ದಾರೆ. ಈ ಸೂತ್ರದಡಿ ಅವರ ಈ ಹಿಂದಿನ ಎರಡೂ ನಾಟಕಗಳ (ತಲೆದಂಡ ಮತ್ತು ಟಿಪ್ಪುಸುಲ್ತಾನ ಕಂಡ ಕನಸು) ಆಶಯಗಳನ್ನು ಗಮನಿಸಿದರೆ ಅದರ ಭಾಗವಾಗಿ ಅಥವಾ ಮುಂದುವರಿಕೆಯಾಗಿ ಈ ಕೃತಿಯನ್ನು ಬರೆದಿದ್ದಾರೆಂದು ಅನ್ನಿಸುವುದಿಲ್ಲ ಮತ್ತು ಇಷ್ಟೊಂದು ಆಪ್ತವಾಗಿ ಚರಿತ್ರೆಯ ಸತ್ಯವನ್ನು ಅವರು ಈ ಹಿಂದಿನ ಎರಡೂ ನಾಟಕಗಳಲ್ಲಿ ಹಿಡಿದಿಟ್ಟಿರಲಿಲ್ಲವೆಂದು ಕಾಣಿಸುತ್ತದೆ. ವಿಜಯನಗರದ ಯುಗ ರಕ್ತಸಿಕ್ತವಲ್ಲ. ಕಲೆ, ಸಂಸ್ಕೃತಿ, ಧರ್ಮ, ಇವುಗಳೊಂದಿಗೆ ಪರಮತ ಸಹಿಷ್ಣುತೆ, ಸರ್ವಧರ್ಮ ಸಮನ್ವಯತೆಯನ್ನು ಆಳುವವರೇ ಎತ್ತಿಹಿಡಿದ ಕಾಲ ಅದು. ವಿಜಯನಗರದ ಮತ್ತು ಬಹಮನಿ/ಬಿಜಾಪುರದ ಚರಿತ್ರೆಯನ್ನು ಓದಿದವರಿಗೆ ಆಗ ವಿಜಯನಗರದಲ್ಲಿ ಸಾಹಿತ್ಯ ಮತ್ತು ವಿಶೇಷವಾಗಿ ಭಕ್ತಿಪಂಥದ ದಾಸಸಾಹಿತ್ಯ ಹಾಗೂ ಬಹಮನಿ/ಬಿಜಾಪುರ ಸಂಸ್ಥಾನಗಳಲ್ಲಿ ಸೂಫಿಪಂಥ ಹೆಚ್ಚು ಜನಪ್ರಿಯವಾಗಿತ್ತೆಂಬುದು ಕಂಡುಬರುತ್ತದೆ. ಚರಿತ್ರೆಯನ್ನು ಮತ್ತು ಈ ನಾಟಕದ ಅಂಶಗಳನ್ನು ಗಮನಿಸಿದರೆ ಅದು ರಾಮರಾಯನಂತಹ ಮತ್ತು ಅದಿಲಶಹನಂತಹ ಕಲಾವಿದರನ್ನೂ ಕಾರ್ನಾಡರ ಕೈಯಲ್ಲಿ ಅನಾವರಣಗೊಳಿಸಿದೆ.

ಆದಿಲಶಹ ರಾಮರಾಯನೊಂದಿಗೆ ಸಂಭಾಷಿಸುವಾಗ ರಾಮರಾಯನ ಮಗನ ಸಾವಿನ ಕುರಿತು ‘‘.. ನಮ್ಮ ಸೂಫಿ ಗುರುಗಳು ಹೇಳಿ ಕಳಿಸಿದ್ದಾರೆ. ಮೃತ್ಯು ಎಂದರೆ ಮನುಷ್ಯನ ಜೀವ ಪರಮಾತ್ಮನ ಪ್ರಭೆಯಲ್ಲಿ ಲೀನವಾಗುವ ಪ್ರಕ್ರಿಯೆ. ಪ್ರಕೃತಿ ಪುರುಷರು ಒಂದಾದಂತೆ. ತಮ್ಮ ಮಗ ಆ ದೈವತ್ವದಲ್ಲಿ ಬೆರೆತುಹೋಗಿದ್ದಾನೆ.’’ ಮುಂದೆ ‘‘ತಾವು ಅಪ್ರತಿಮ ವೀಣಾವಾದಕರು. ತಮ್ಮ ಸಂಗೀತದ ಖ್ಯಾತಿ ದಖನದಲ್ಲೆಲ್ಲಾ ಹರಡಿದೆ. ನಾನು ತಿರುಗಿ ಬಿಜಾಪುರಕ್ಕೆ ಹೋಗುವ ಮೊದಲು ಒಂದು ನಿಮಿಷ’’ ಎಂದದ್ದಕ್ಕೆ ಪ್ರತಿಯಾಗಿ ರಾಮರಾಯ ‘‘ವೀಣೆ ಬಾರಿಸುವಾಗ ನನಗಾಗುವಷ್ಟು ಆನಂದ ಇನ್ನು ಎಲ್ಲೂ ಆಗುವುದಿಲ್ಲ. ಆ ಮೇಲೆ ಯಾಕೆ, ಈಗಲೇ ಹೋಗೋಣ ಸಂಗೀತ ಶಾಲೆಗೆ’’ ಎನ್ನುತ್ತಾನೆ. ಈ ಕಲಾಸಕ್ತಿ ಅವನ ಕ್ರೌರ್ಯಕ್ಕೆ, ಖಳತ್ವಕ್ಕೆ, ಎದುರಾಳಿಯನ್ನು ಅವಮಾನಿಸುವುದಕ್ಕೆ, ಅಡ್ಡಿ ಬರುವುದಿಲ್ಲ. ಇತಿಹಾಸದುದ್ದಕ್ಕೂ ಯಾವ ಆಡಳಿತವೂ ತಮಗಾಗದವರನ್ನು ಅರ್ಹತಾನುಸಾರ ರಿಯಾಯಿತಿ, ವಿನಾಯಿತಿ, ಕ್ಷಮೆ, ಅನುಕಂಪ ಮುಂತಾದ ಮಾನವೀಯ ಮೌಲ್ಯಗಳ ಮೂಲಕವಾಗಿ ಪರಿಗಣಿಸಿದ್ದು ಕಂಡುಬರುವುದಿಲ್ಲ. ಇಂತಹ ಸೂಚಕಗಳು ರಾಜಕಾರಣದ ಭಾಗವೇನೋ ಎಂಬಂತೆ ರಾಮರಾಯನ ನಡತೆ ಗೋಚರಿಸುತ್ತದೆ. ಹೀಗೆ ಮಾತನಾಡುವಾಗಲೂ ಅವನು ಆದಿಲಶಹನನ್ನು ದೊರೆ ಸದಾಶಿವರಾಯನೊಂದಿಗೆ ಭೇಟಿಯಾಗು ವುದನ್ನು ಕುಂಟುನೆಪದೊಂದಿಗೆ ತಪ್ಪಿಸುತ್ತಾನೆ.

ಚರಿತ್ರೆಯು ವಿಜಯನಗರದ ಅರಸುಗಳು ಕಲಹ-ಕೋಲಾಹಲದ ನಡುವೆಯೂ ಅನ್ಯರಾಜರುಗಳನ್ನು ಗೌರವಿಸುತ್ತಿದ್ದರೆಂಬುದನ್ನು ಈಗಾಗಲೇ ಪ್ರಸ್ತಾವಿಸಿದ ರಾಮರಾಯ-ಆದಿಲಶಹರ ಭೇಟಿ ತೋರಿಸಿಕೊಟ್ಟಿದೆ. ಇದು ಸಹಜವೇ ಇದ್ದಿರಬಹುದು. ಏಕೆಂದರೆ ಇತಿಹಾಸದ ದಾಖಲೆಯಂತೆ ವಿಜಯ ನಗರದ ಸೇನೆಯಲ್ಲಿ ಹತ್ತುಸಾವಿರಕ್ಕೂ ಮಿಕ್ಕಿ ಮುಸ್ಲಿಂ ಯೋಧರಿದ್ದರು. ಆದ್ದರಿಂದ ವಿಜಯನಗರದ ವಿಜಯವು ಹಿಂದೂಗಳ ವಿಜಯವಾಗಿರದೆ ಒಂದು ಸಂಸ್ಥಾನದ ವಿಜಯವಾಗಿದ್ದಿತು. ಇದೇ ಮಾನದಂಡವು ಬಹಮನಿ/ಬಿಜಾಪುರ ಆಡಳಿತಕ್ಕೂ ಅನ್ವಯಿಸುತ್ತಿತ್ತು. ವಿಜಯನಗರದ ಸೇನೆಯ ಮುಸಲ್ಮಾನ ಮುಖ್ಯಸ್ಥರಿಂದಾಗಿ ವಿಜಯನಗರ ಸೋಲಬೇಕಾಯಿತು ಎಂಬ ದಂತಕಥೆಗಳಿಗೆ ಚರಿತ್ರೆಯಲ್ಲಿ ಸಮರ್ಥನೆಯಿಲ್ಲ. (ಈ ಅಂಶವನ್ನು ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರು ಗುರುತಿಸಿದ್ದಾರೆ: From a new perspective; The Hindu, Friday Review, 21.09.2018).

ಆದರೆ ಅಹಮದ್‌ ನಗರದ ಸುಲ್ತಾನ ನಿಝಾಮಶಹನ ವಿಹ್ವಲ ವಿನಂತಿಯ ಹೊರತಾಗಿಯೂ ಅವನ ಸೇನಾನಿ ಜಹಂಗೀರಖಾನ್‌ನ ಶಿರಚ್ಛೇದನದ ಪ್ರಸಂಗ ಈ ದೃಷ್ಟಿಯಿಂದ ಮುಖ್ಯವಾಗುತ್ತದೆ. ರಾಜಕಾರಣದಲ್ಲಿ ವೈಯಕ್ತಿಕ ಪ್ರತಿಷ್ಠೆಯು ರಾಯಭಾರಿಗಳ, ನೌಕರರ ಕುರಿತು, ಘೋಷಿತ ಪರಧರ್ಮ ಸಹಿಷ್ಣುತೆ, ಸಮನ್ವಯತೆ, ಅಥವಾ ಇತರ ಯಾವ ಮಾನವೀಯತೆಗಿಂತಲೂ ದೊಡ್ಡ ದೆಂಬುದು ರಾಜಪ್ರಭುತ್ವದ ಒಂದು ಲಕ್ಷಣವೆಂಬಂತೆ ರಾಮರಾಯನು ತನ್ನ ವ್ಯಂಗ್ಯನಡೆಯಿಂದ ತೋರಿಸಿಕೊಡುತ್ತಾನೆ. ಪ್ರಾಕೃತಿಕ ನ್ಯಾಯದಂತೆ ರಾಮರಾಯನ ಶಿರಚ್ಛೇದನಕ್ಕೂ ನಿಝಾಮಶಹನೇ ಕಾರಣನಾಗುತ್ತಾನೆ. ಇದು ಚರಿತ್ರೆಯು ಸಾಗಬೇಕಾದ ಹಾದಿಯ ಅನಿವಾರ್ಯತೆಯೂ ಇರಬಹುದು. ಅಹಮದ್ ನಗರದ ಬೇಗಂ ಆರಂಭದಲ್ಲಿ ನೀಡಿದ ಸಲಹೆಯನ್ನು ಮಾನ್ಯ ಮಾಡದ ನಿಝಾಮಶಹನು ಆನಂತರ ಅವಳ ಬೇಡಿಕೆಯನ್ನು ಪೂರೈಸುವುದಕ್ಕಲ್ಲದಿದ್ದರೂ ರಾಜಕೀಯ ತುರ್ತಿಗಾಗಿ ತನ್ನ ಮಗಳನ್ನು ಆದಿಲಶಹನಿಗೆ ಮದುವೆಮಾಡಿಕೊಡುತ್ತಾನೆ. ಆದಿಲಶಹನು ತನ್ನ ಮಗನಂತೆ ಎಂದು ರಾಮರಾಯನು ಭಾವಿಸಿದರೂ ಅವನು ನಿಝಾಮಶಹನ ಅಳಿಯನಾಗುವ ಪಲ್ಲಟದೊಂದಿಗೆ ರಾಮರಾಯನ ಭವಿಷ್ಯವೂ ವಿಜಯನಗರದ ಇತಿಹಾಸವೂ ಪಲ್ಲಟವಾಗುತ್ತದೆ.

ಅಹಮದ್‌ನಗರದ ಬೇಗಮ್ ‘‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರುತ್ತದೆ.’’ ಎನ್ನುತ್ತಾಳೆ. ಇದಕ್ಕೆ ಪರ್ಯಾಯವಾಗಿ ನಿಝಾಮಶಹನು ‘‘ಎಲ್ಲರೂ ಗೊತ್ತಿದ್ದ ಮಾತನ್ನೇ ಪಿಸುಪಿಸು ಅಂತ ಕೆಳದನಿಯಲ್ಲಿ ಮಾತಾಡಿ ಅದನ್ನೇ ತಮಗೆ ಗೊತ್ತಿರೋ ಒಂದು ಮಹಾ ಗುಟ್ಟು ಅಂತ ಮೆರೀತಿರತಾರೆ.’’ ಎನ್ನುತ್ತಾನೆ. ಒಟ್ಟು ನಾಟಕದಲ್ಲಿ ಇಂತಹ ಭ್ರಾಂತಿ ಮತ್ತು ಗುಟ್ಟುಗಳು ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ. ಎಲ್ಲ ಕಾಲದಲ್ಲೂ ಫ್ಯೂಡಲ್ ಮನಸ್ಥಿತಿ ಒಂದೇ ರೀತಿಯಲ್ಲಿತ್ತು ಎಂಬುದು ನಾಟಕದ (ಪೂರ್ವರಂಗದ) ಆರಂಭದಲ್ಲಿ ಮತ್ತು ಕೊನೆಯಲ್ಲಿ ಗೋಚರವಾಗುತ್ತದೆ. ಸೈನಿಕರು ವಿಜಯನಗರವನ್ನು ಸೂರೆಗೊಳ್ಳುವಾಗ ಗುಹಾವಾಸಿಗಳು ತಮ್ಮ ಕಾಡುನೈಪುಣ್ಯವನ್ನು ಪ್ರದರ್ಶಿಸಿ ಅವರನ್ನು ಕೊಂದು ಅವರ ಲೂಟಿಯನ್ನು ಒಯ್ಯುತ್ತಾರೆ. ಕೊನೆಯಲ್ಲಿ ಸೋತಾಗಲೂ ಸೈನಿಕರಂತೆ, ಗುಹಾವಾಸಿಗಳಂತೆ, ವಿಜಯನಗರದ ಅರಸುಗಳು ಅರಮನೆಯ ಸಂಪತ್ತನ್ನೆಲ್ಲ ಎತ್ತಿಕೊಂಡು ಹೋಗುವುದೂ ಇದನ್ನೇ ಸೂಚಿಸುತ್ತದೆ.

ಇಷ್ಟಾಗಿಯೂ ವಚನಯುಗದಲ್ಲಿ ಸಂಭ್ರಮಿಸಿದ ವೀರಶೈವ ಸಮಾಜವೂ ಪ್ರದೇಶವೂ ಇಬ್ಭಾಗವಾಗಿ ಒಂದೆಡೆ ವಿಜಯನಗರದ ಪಾಲಿಗೂ ಇನ್ನೊಂದೆಡೆ ಬಹಮನಿ/ಬಿಜಾಪುರ ದೊರೆಗಳ ಪಾಲಿಗೂ ಹೋಗಿ ತನ್ನ ಸ್ವಂತಿಕೆಯನ್ನು, ಅಸ್ಮಿತೆಯನ್ನು ಕಳೆದುಕೊಂಡ ಬಗೆಗೆ ಇಲ್ಲಿ ಹೆಚ್ಚು ಮಹತ್ವ ಸಿಕ್ಕಿಲ್ಲ. ಹಾಗೆಯೇ ತಲೆದಂಡದಲ್ಲಿ ನಡೆಯುವ ಯುಗದುರಂತವು ಇಲ್ಲಿ ಅದೇ ಗಾತ್ರ-ಪಾತ್ರದಲ್ಲಿ ಪ್ರಕಟವಾಗುವುದಿಲ್ಲ. (ಈ ಸಂಶಯದ ಕುರಿತು ಹೆಚ್ಚಿನ ಅಧ್ಯಯನವು ಬೇಕೆಂಬ ಅರಿವು ನನಗಿದೆ.) ಬರಲಿರುವ ಸಾವಿನ ಅರಿವಿಲ್ಲದೆ ಜೀವಿತದ ಕೊನೆಯ ಕ್ಷಣಗಳಲ್ಲಿ ತನ್ನ ಈ ವರೆಗಿನ ಘನತೆ ತನ್ನನ್ನು ಕಾಪಾಡುತ್ತದೆಂಬ ವಿಶ್ವಾಸ ರಾಮರಾಯನಿಗೆ. ಕೆಮ್ಮುವ ರಾಮರಾಯನಿಗೆ ನಿಝಾಮಶಹ ನೀರು ತರಿಸಿಕೊಡುತ್ತಾನೆ. ವಿಜಯನಗರದ ಅಳಿಯ ರಾಮರಾಯನ ಸಾವನ್ನು ಅಹಮದ್‌ ನಗರದ ಅಳಿಯ ಆದಿಲಶಹ ತಪ್ಪಿಸಲು ಅಶಕ್ತನಾಗುವುದು ತೀರ ವ್ಯಂಗ್ಯ ಗಂಭೀರವಾಗಿ ಮೂಡಿದೆ. ಹೀಗೆ ಈ ಕೃತಿಯು ಹಲವು ಆಯಾಮಗಳಲ್ಲಿ ‘ಚಾರಿತ್ರಿಕ’ ಯಶಸ್ಸನ್ನು ಪಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)