ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಶುಭಾರಂಭ
ದಿಲ್ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು
ಮಸ್ಕತ್, ಅ.19: ಯುವ ಸ್ಟ್ರೈಕರ್ ದಿಲ್ಪ್ರೀತ್ ಸಿಂಗ್ ದಾಖಲಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡ ಆತಿಥೇಯ ಒಮನ್ ವಿರುದ್ಧ 11-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಭಾರತ ಗೋಲು ಬಾರಿಸಲು ವಿಫಲವಾಯಿತು. ಆ ಬಳಿಕ ಗೋಲುಗಳ ಸುರಿಮಳೆಗರೆಯಿತು. ಲಲಿತ್ ಉಪಾಧ್ಯಾಯ 17ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಎರಡನೇ ಕ್ವಾರ್ಟರ್ನಲ್ಲಿ ಇನ್ನೂ ಮೂರು ಗೋಲುಗಳು ಬಂದವು.
ಹರ್ಮನ್ಪ್ರೀತ್ ಸಿಂಗ್(22ನೇ ನಿಮಿಷ),ನೀಲಕಂಠ ಶರ್ಮಾ(23ನೇ ನಿಮಿಷ) ಹಾಗೂ ಮನ್ದೀಪ್ ಸಿಂಗ್(30ನೇ ನಿಮಿಷ)ತಲಾ ಒಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 4-0ಗೆ ವಿಸ್ತರಿಸಿದರು.
ದಿಲ್ಪ್ರೀತ್ ಮೂರು ಗೋಲುಗಳನ್ನು(41ನೇ, 55ನೇ ಹಾಗೂ 57ನೇ ನಿಮಿಷ)ದಾಖಲಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಗುಜರ್ಂತ್ ಸಿಂಗ್(37ನೇ ನಿಮಿಷ),ಆಕಾಶ್ದೀಪ್ ಸಿಂಗ್(27ನೇ ನಿಮಿಷ), ವರುಣ್ ಕುಮಾರ್(49ನೇ ನಿಮಿಷ) ಹಾಗೂ ಚಿಂಗ್ಲೆನ್ಸನಾ ಸಿಂಗ್(53ನೇ ನಿಮಿಷ)ತಲಾ ಒಂದು ಗೋಲು ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಕಾಣಿಕೆ ನೀಡಿದರು.