‘ಮೀ ಟೂ’: ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದ ನಟ ರಾಹುಲ್ ರಾಜ್
ಮುಂಬೈ, ಅ. 20: ಬಾಲಿವುಡ್ ಜನಪ್ರಿಯ ಚಿತ್ರಕತೆ ರಚನೆಕಾರ ಮುಸ್ತಾಕ್ ಶೇಖ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟ ರಾಹುಲ್ ರಾಜ್ ಸಿಂಗ್ ಆರೋಪಿಸಿದ್ದಾರೆ. ಅವರು ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಸಿನೆಮಾದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎಂದು ರಾಹುಲ್ ರಾಜ್ ಹೇಳಿದ್ದಾರೆ. ‘‘ಬಾಲಿವುಡ್ನಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿರುವ ಶೇಖ್ ಕೆಲವು ಯೋಜನೆ ಕುರಿತು ಚರ್ಚೆ ನಡೆಸಲು ತಡ ರಾತ್ರಿ ಭೇಟಿಯಾಗುವಂತೆ ತನಗೆ ಸೂಚಿಸಿದ್ದರು.
ಎರಡು ಹಾಗೂ ಮೂರನೇ ಸಭೆಯ ಬಳಿಕ ಅವರು ನನ್ನನ್ನು ಬೆಳಗ್ಗೆ 3, 4 ಗಂಟೆಗೆ ಕರೆಯಲು ಆರಂಭಿಸಿದರು. ಒಂದು ದಿನ ಅವರು 11.30ಕ್ಕೆ ಬಾಂದ್ರಾದಲ್ಲಿರು ಕಾಫಿ ಶಾಪ್ಗೆ ಬರುವಂತೆ ಹೇಳಿದರು. ಅಲ್ಲಿಂದ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಅವರ ಮನೆಯಲ್ಲಿ ಒಂದು ಬೆಡ್ ರೂಮ್ ಮಾತ್ರ ಇತ್ತು. ಚಿತ್ರದ ಪೋಸ್ಟರ್ಗಳನ್ನು ಗೋಡೆಗೆ ಅಂಟಿಸಲಾಗಿತ್ತು’’ ಎಂದು ಅವರು ಹೇಳಿದ್ದಾರೆ. ‘‘ನೀನು ಸಂತಸ ಪಡುವಂತೆ ಕೆಲವು ಕೆಲಸವನ್ನು ನಾನು ಮಾಡುತ್ತೇನೆ ಇದು ವಿಭಿನ್ನ. ಆದರೆ, ನೀನು ಸಂತಸ ಪಡುತ್ತಿ ಎಂದು ಶೇಖ್ ಹೇಳಿದ್ದರು. ಆಗ ನನಗೆ ಭಯವಾಯಿತು. ನನಗೆ ನಿಮ್ಮ ಕುಟಂಬದ ಬಗ್ಗೆ ಗೊತ್ತು ಎಂದು ಹೇಳಿದೆ. ನಾನು ನಿಮ್ಮ ಆದ್ಯತೆ ವಿರುದ್ಧ ಇಲ್ಲ. ಆದರೆ, ನಾನು ನಿಮ್ಮ ಗೆಳೆಯ. ಪ್ರತಿ ಗಳೆತನವೂ ಸೆಕ್ಸ್ಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದೆ. ಅದಕ್ಕೆ ಅವರು ಡೋಂಟ್ ವರಿ, ಮುಂದಿನ ಬಾರಿ ನೀನು ಸಿದ್ಧನಾಗುವೆ ಎಂದಿದ್ದರು’’ ಎಂದು ಸಿಂಗ್ ಹೇಳಿದ್ದಾರೆ.