ಹಾಂಗ್ಕಾಂಗ್ನಲ್ಲಿ ತೆರೆದುಕೊಳ್ಳಲಿದೆ ವಿಶ್ವದ ಅತ್ಯಂತ ಉದ್ದದ ಸಾಗರಸೇತುವೆ
ವಿಶ್ವದಲ್ಲಿಯೇ ಸಮುದ್ರದ ಮೇಲಿನ ಅತ್ಯಂತ ಉದ್ದವಾದ ಸೇತುವೆ ಎಂಬ ಹೆಗ್ಗಳಿಕೆಯೊಂದಿಗೆ ಚೀನಾದಲ್ಲಿ ನಿರ್ಮಾಣಗೊಂಡಿರುವ ಹಾಂಗ್ಕಾಂಗ್-ಝುಹೈ-ಮಕಾವೊ ಸೇತುವೆಯು ಅ.24ರಂದು ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ.
55 ಕಿ.ಮೀ.ಉದ್ದದ ಈ ಸೇತುವೆಯು ಪರ್ಲ್ ನದಿಯು ದಕ್ಷಿಣ ಚೀನಾ ಸಮುದ್ರವನ್ನು ಸೇರುವ ಪರ್ಲ್ ರಿವರ್ ಎಸ್ಚುಯರಿಯ ಲಿಂಗ್ಡಿಂಗ್ಯಾಂಗ್ನ ಜಲಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
ಹಾಂಗ್ಕಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಈ ಸೇತುವೆಯು ಲಂಟಾವು ದ್ವೀಪದಲ್ಲಿ ಹೆಚ್ಚುವರಿ ವಾಹನ ಸಂಚಾರವನ್ನುಂಟು ಮಾಡುತ್ತದೆ ಮತ್ತು ದಟ್ಟಣೆಗೆ ಕಾರಣವಾಗುತ್ತದೆ ಎಂದು ಹಾಂಗ್ಕಾಂಗ್ನ ಸಂಸದರು ಹಿಂದೆ ಎಚ್ಚರಿಕೆ ನೀಡಿದ್ದರಾದರೂ ಬಹು ಶತಕೋಟಿ ಡಾ.ವೆಚ್ಚದ ಸೇತುವೆಯ ನಿರ್ಮಾಣ ಡಿಸೆಂಬರ್,2009ರಲ್ಲಿ ಆರಂಭಗೊಂಡು ಒಂಭತ್ತು ವರ್ಷಗಳಲ್ಲಿ ಪೂರ್ಣಗೊಂಡಿದೆ.
ನೂತನ ಸೇತುವೆಯಿಂದಾಗಿ ಹಾಂಗ್ಕಾಂಗ್ ಮತ್ತು ಝುಹೈ ನಡುವಿನ ಪ್ರಯಾಣದ ಅವಧಿ ಈಗಿನ ಮೂರು ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ತಗ್ಗಲಿದೆ. ಪರ್ಲ್ ನದಿಯ ಮುಖಜ ಪ್ರದೇಶದಲ್ಲಿನ ನಗರಗಳ ಪರಸ್ಪರ ಸಂಪರ್ಕವನ್ನೂ ಸುಲಭಗೊಳಿಸಲಿದೆ.
ಸೇತುವೆಯು ಉದ್ಘಾಟನಗೊಂಡ ಬಳಿಕ ಅದರ ಮೂಲಕ ಪ್ರತಿದಿನ ಸಂಚರಿಸುವ ಖಾಸಗಿ ಕಾರುಗಳ ಸಂಖ್ಯೆಯನ್ನು 5,000ಕ್ಕೆ ಸೀಮಿತಗೊಳಿಸಲಾಗಿದೆ. 2030ರ ವೇಳೆಗೆ ಈ ಸೇತುವೆಯಲ್ಲಿ ಪ್ರತಿದಿನ 29,100 ವಾಹನಗಳು ಸಂಂಚರಿಸುತ್ತವೆ ಎಂದು ಅಂದಾಜಿಸಲಾಗಿದೆ.