ಸೆಲ್ಫಿ ವಿವಾದ: ಕ್ಷಮೆ ಯಾಚಿಸಿದ ಫಡ್ನವೀಸ್ ಪತ್ನಿ
ಮುಂಬೈ,ಅ.22: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಐಷಾರಾಮಿ ಪ್ರವಾಸಿ ಹಡಗಿನ ಅಂಚಿನಲ್ಲಿ ಕುಳಿತುಕೊಂಡು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡ ವೀಡಿಯೊ ವೈರಲ್ ಆಗಿದ್ದು,ಈ ಬಗ್ಗೆ ಕ್ಷಮೆ ಯಾಚಿಸಲು ತಾನು ಸಿದ್ಧವಿರುವುದಾಗಿ ಅವರು ಸೋಮವಾರ ಇಲ್ಲಿ ಹೇಳಿದರು.
ಆದರೆ ತಾನು ಸೆಲ್ಫಿಗಾಗಿ ಕುಳಿತುಕೊಂಡಿದ್ದ ಮೆಟ್ಟಿಲಿನ ಕೆಳಗೆ ಇನ್ನೂ ಎರಡು ಮೆಟ್ಟಿಲುಗಳಿದ್ದು,ಆ ಸ್ಥಳವು ಸುರಕ್ಷಿತವಾಗಿತ್ತು ಎಂದು ಅವರು ಪ್ರತಿಪಾದಿಸಿದರು. ವೀಡಿಯೋ ವೈರಲ್ ಆದ ಬಳಿಕ ಅಪಾಯಕಾರಿ ರೀತಿಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದಕ್ಕಾಗಿ ಟ್ವಿಟರ್ನಲ್ಲಿ ಅಮೃತಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅ.20ರಂದು ಐಷಾರಾಮಿ ಪ್ರವಾಸಿ ಹಡಗು ಆಂಗ್ರಿಯಾದ ಉದ್ಘಾಟನೆ ಸಂದರ್ಭ ಈ ಘಟನೆ ನಡೆದಿತ್ತು.
ತಾನು ತಪ್ಪು ಮಾಡಿದ್ದೇನೆ ಎಂದು ಯಾರಿಗಾದರೂ ಅನ್ನಿಸಿದ್ದಲ್ಲಿ ಅದಕ್ಕಾಗಿ ಕ್ಷಮೆ ಯಾಚಿಸುವುದಾಗಿ ತಿಳಿಸಿದ ಅಮೃತಾ,ಸೆಲ್ಫಿಗಳನ್ನು ತೆಗೆದುಕೊಳ್ಳಲು ಅಪಾಯಗಳನ್ನು ಎದುರು ಹಾಕಿಕೊಳ್ಳದಂತೆ ಯುವಕರಿಗೆ ಕಿವಿಮಾತು ಹೇಳಲು ಬಯಸುತ್ತೇನೆ ಎಂದರು.