varthabharthi


ಅನುಗಾಲ

ಸಾಯಂಸ್ಮರಣೀಯರು

ವಾರ್ತಾ ಭಾರತಿ : 25 Oct, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಯಾರನ್ನಾದರೂ ಹೆಸರಿಸಿ; ಅವರು ನಮ್ಮವರು ಎಂದು ಘೋಷಿಸುವ ಒಂದು ಜಾತಿ, ವರ್ಗ ನಮ್ಮಲ್ಲಿ ಸದಾ ಇದ್ದೇ ಇದೆ. ಹೀಗೆ ಹೇಳುವಾಗ ಈ ಮಂದಿಗೆ ತಾನು ಒಂದು ದೇಶದ ಪ್ರಜೆಯೆನ್ನಿಸದೆ ಒಂದು ನಿಗದಿತ ಜಾತಿ, ಮತ, ಧರ್ಮದವನು ಎಂಬ ಸೀಮಿತ ಮತ್ತು ಸಂಕುಚಿತ ದೃಷ್ಟಿಕೋನವಿರುತ್ತದೆ. ಈ ನಿಯಮಿತ ಯೋಚನೆಯಿಂದ ಹೊರಬರದೆ ಯಾವ ಸಮಾಜವೂ ದೇಶವೂ ಉದ್ಧಾರವಾಗದು. ಪ್ರಾತಃಸ್ಮರಣೀಯರ ಬಗ್ಗೆ ಸಾಕಷ್ಟು ತಿಳಿದಿದ್ದೇವೆ. ಆದ್ದರಿಂದಲೇ ನಮ್ಮ ಬಹುಪಾಲು ಜನರಿಗೆ ಹೇಗೆ ಬದುಕಬಾರದೆಂದು ತಿಳಿದಿದೆ. ನಿಸ್ವಾರ್ಥವಾಗಿ, ಪ್ರಾಮಾಣಿಕರಾಗಿ, ದುಡಿದು ಸತ್ತವರು ಸಮಾಜಕ್ಕೆ ನಗಣ್ಯರಾದ ಉದಾಹರಣೆಯಿದೆ. ಸಾಮಾನ್ಯರನ್ನು ಬಿಡಿ, ಗಾಂಧಿಯಂತಹ ಗಾಂಧಿಯೇ ಇಂದು ಹೊಸ ಭಾರತದಲ್ಲಿ ಮರೆಯಬಹುದಾದ ಮಾತ್ರವಲ್ಲ ಮರೆಯಲೇಬೇಕಾದ ವ್ಯಕ್ತಿಯಾಗುತ್ತಿದ್ದಾರೆ. ಗಾಂಧಿ ತನ್ನನ್ನು ಜನರು ನೆನಪಿಡಲಿ ಎಂಬ ಆಸೆಯಿಂದ, ಆಶಯದಿಂದ ಬದುಕಿರಲಾರರು. ಆದರೆ ಇನ್ನು ಮುಂದೆ ಗಾಂಧಿಯಂತೆ ಬದುಕುವವರು ಕರ್ಪೂರದಂತೆ ಹೇಳಹೆಸರಿಲ್ಲದಂತೆ ಅಂತರ್ಧಾನರಾದರೆ ಅಚ್ಚರಿಯಿಲ್ಲ.

ದೇಶಕ್ಕಾಗಿ ದುಡಿದ ಮಹಾಮಹಿಮರನ್ನೆಲ್ಲ ಮರಣೋತ್ತರವಾಗಿ ಗೌರವ ಸದಸ್ಯತ್ವವನ್ನು ನೀಡಿ ತಮ್ಮತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳುವುದಕ್ಕೆ ನಮ್ಮ ರಾಜಕೀಯ ಪಕ್ಷಗಳು ಸ್ಪರ್ಧೆಗಿಳಿದಂತಿದೆ. ಬದುಕಿನ ಕೊನೆಯ ಕ್ಷಣಗಳಲ್ಲಿ ನಾಸ್ತಿಕನೂ ಜಾತ್ಯತೀತನೂ ಆಗಿದ್ದ ಭಗತ್‌ಸಿಂಗ್ ಎಲ್ಲರವನೂ ಆಗಬೇಕಾಗಿತ್ತು. ಆದರೆ ಅವರನ್ನು ‘ಇವನಾರವ?’ ಎನ್ನದೆ ‘ಇವ ನಮ್ಮವ’ ಎಂಬ ಬಸವಣ್ಣನ ಕಾಲದ ನೀತಿ ಬರಬರುತ್ತ ಉದ್ದೇಶ ಬದಲಾಗಿ ಎಲ್ಲ ವಚನಕಾರರನ್ನು ಆಯಾಯ ಜಾತಿಗೆ ಮತ್ತೆ ಮರಳಿಸಿದ ಸಂಘಟನೆಗಳಿಗೆ ಬರವಿಲ್ಲ. ಸ್ವಾಮಿ ವಿವೇಕಾನಂದರು ದರಿದ್ರ ನಾರಾಯಣನ ಪರಮಸೇವಕರಾಗಿ ಚಿತ್ರಿತರಾಗುವುದರ ಬದಲಾಗಿ ಹಿಂದೂ ಕೇಸರಿಯೆಂಬ ಅಭಿದಾನದೊಂದಿಗೆ ದಾದಾನಂತೆ, ಧಾರ್ಮಿಕ ಪೈಲ್ವಾನರಂತೆ ವಿವರಿಸಲ್ಪಡುವುದೂ ಇದೆ. ದೇಶ ಮಾತ್ರವಲ್ಲ, ವಿಶ್ವಕ್ಕೇ ಸಲ್ಲಬೇಕಾದ ಅಂಬೇಡ್ಕರ್ ಕೂಡಾ ಒಂದು ಸಮುದಾಯದ ನಾಯಕರಂತೆ ಪ್ರತಿಬಿಂಬಿತರಾಗುತ್ತಿರುವುದು ಶೋಚನೀಯ. ವಿಶ್ವಮಾನವತೆಯನ್ನು ಸಾರಿದ ಎಲ್ಲರ ಅಭಿಮಾನದ ಕುವೆಂಪು ‘ಕೆ.ವಿ. ಪುಟ್ಟಪ್ಪ’ಅಥವಾ ‘ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ’ಆಗಿ ಮಾತ್ರ ಉಳಿಯದೆ ಒಕ್ಕಲಿಗರ ಪ್ರತಿನಿಧಿ ಎಂದೂ ಹೇಳಿದ ಒಕ್ಕಲಿಗರಿದ್ದಾರೆ. ನಮ್ಮ ಸಂಸದರೊಬ್ಬರು ಸಿಂಹಹುಲಿಗಳಂತೆ ಮೆರೆದವರು ಕೊನೆಗೆ ಚುನಾವಣೆಯಲ್ಲಿ ವಿಜೇತರಾಗಬೇಕಾದರೆ ಹಳೇಗಂಡನ ಪಾದವೇ ಗತಿ ಎಂಬಂತೆ ತನ್ನ ಜಾತಿಯ ಹೆಸರನ್ನು ಸೇರಿಸಿಕೊಂಡರು; ಆಯ್ಕೆಯಾದರು. ಇನ್ನು ಸ್ವಾತಂತ್ರ್ಯ ಹೋರಾಟದ ನೂರಾರು ತೊರೆಗಳಾಗಿ ಬಂದು ಭಗತ್‌ಸಿಂಗ್‌ರಂತೆ ನೇಣುಗಂಬವನ್ನೇರಿದವರು ನಮ್ಮಲ್ಲಿ ಜಾತಿ, ಮತ, ಧರ್ಮಗಳ ಕೆಟ್ಟ ಸಂಕೇತಗಳಾಗಿ ನಿರೂಪಿತರಾಗುತ್ತಿದ್ದಾರೆ. ಆಕಾಶದೀಪಗಳು ಮತಬುಟ್ಟಿಗಳಾಗುತ್ತಿದ್ದಾರೆ.

ಯಾರನ್ನಾದರೂ ಹೆಸರಿಸಿ; ಅವರು ನಮ್ಮವರು ಎಂದು ಘೋಷಿಸುವ ಒಂದು ಜಾತಿ, ವರ್ಗ ನಮ್ಮಲ್ಲಿ ಸದಾ ಇದ್ದೇ ಇದೆ. ಹೀಗೆ ಹೇಳುವಾಗ ಈ ಮಂದಿಗೆ ತಾನು ಒಂದು ದೇಶದ ಪ್ರಜೆಯೆನ್ನಿಸದೆ ಒಂದು ನಿಗದಿತ ಜಾತಿ, ಮತ, ಧರ್ಮದವನು ಎಂಬ ಸೀಮಿತ ಮತ್ತು ಸಂಕುಚಿತ ದೃಷ್ಟಿಕೋನವಿರುತ್ತದೆ. ಈ ನಿಯಮಿತ ಯೋಚನೆಯಿಂದ ಹೊರಬರದೆ ಯಾವ ಸಮಾಜವೂ ದೇಶವೂ ಉದ್ಧಾರವಾಗದು. ಧಾರ್ಮಿಕ, ಮತೀಯ ತಲೆದಂಡಕ್ಕೆ ಸಾಕ್ರೆಟಿಸನಂತಹ ತತ್ವಜ್ಞಾನಿ, ಯೇಸುವಿನಂತಹ ಧರ್ಮದರ್ಶಕ, ದಾರಾಷಿಕೊವಿನಂತಹ ರಾಜರ್ಷಿ, ಕೊನೆಗೆ ಬುದ್ಧ-ಮಹಾವೀರರೂ ಹೊರತಲ್ಲ. ಕೆಲವರು ಹಿಂಸೆಗೆ ತುತ್ತಾದರೆ ಇನ್ನು ಕೆಲವರು ಅಹಿಂಸೆಯ ಹೆಸರಲ್ಲೂ ಅಳಿದುಹೋದರು. ಬೇಕಾದಾಗ ಬೇವಿನಸೊಪ್ಪಿನಂತೆ ಬಳಕೆಯಾಗುವವರು ಆಗಾಗ ನೆನಪಿನಲ್ಲಿರುತ್ತಾರೆ. ಅವರನ್ನು ‘ಹಾಸ್ಯುಂಡು ಬೀಸಿ ಒಗೆದಂಗ’ ಉಪಯೋಗಿಸಲಾಗುತ್ತದೆ. ಅಕ್ಟೋಬರ್ 2, ಜನವರಿ 30 ಬಂತೆಂದರೆ ಸಾಕು, ಎಲ್ಲೆಡೆ ಗಾಂಧಿ ಚಿತಾಭಸ್ಮ, ಶ್ರದ್ಧಾಂಜಲಿ. ಉಳಿದವರಿಗೂ ಇದೇ ಹಣೆಬರೆಹ.

ಇಡೀ ವರ್ಷ ಕುಡಿದು, ಕುಣಿದು ಕುಪ್ಪಳಿಸುವವರೂ ಗಾಂಧಿಯನ್ನು ನೆನಪಿಸುತ್ತಾರೆ. ಧರ್ಮದ ಉದಾಹರಣೆಯನ್ನೇ ನೀಡುವುದಾದರೆ ಈಗ ತಪ್ಪು ಕಾರಣಕ್ಕಾಗಿ ಅದ್ದೂರಿಯ ಪ್ರಚಾರದಲ್ಲಿರುವ ಶಬರಿಮಲೆಯ ಅಯ್ಯಪ್ಪನ ಸಂದರ್ಶನಕ್ಕೆ ಹೋಗುವ ಬಹಳಷ್ಟು ಮಂದಿ 48 ದಿನಗಳ ಕಠಿಣ ವ್ರತಾಚರಣೆಯನ್ನು ಮಾಡುವುದು, ಈ ಸಮಯದಲ್ಲಿ ಮದ್ಯಪಾನ, ಮಾಂಸಾಹಾರ, ಧೂಮಪಾನಗಳನ್ನು (ಸ್ತ್ರೀಸಂಗವೂ ವರ್ಜ್ಯವೆಂದು ಕೆಲವರು ಹೇಳುತ್ತಾರೆ!) ತ್ಯಜಿಸಿ ಋಷಿಮುನಿಗಳಂತೆ ಗಡ್ಡ ಬೆಳೆಸಿ ನಾರುಡೆಯಂತಹ ಕಪ್ಪು ಬಟ್ಟೆ ಧರಿಸಿ ಬರಿಗಾಲಿನಲ್ಲಿ ನಡೆದು ತಣ್ಣೀರಿನಲ್ಲಿ ಮಿಂದು ಸ್ವಹಿಂಸೆಯನ್ನು ಅನುಭವಿಸಿ ಬದುಕುತ್ತಾರೆ. ಮೆಚ್ಚತಕ್ಕದ್ದೇ. ಆದರೆ ಶಬರಿಮಲೆಯಿಂದ ಬರುವಾಗಲೇ ತಾವು ಇಷ್ಟು ಕಷ್ಟಪಟ್ಟು ಬಿಟ್ಟಿದ್ದ ಚಟಗಳಿಗೆ ಮರಳಿ ಚರಣದಾಸರಾಗುವುದೂ ಇದೆ. ನಾನೊಮ್ಮೆ ಹೀಗೆ ಯಾವ ವ್ರತವೂ ಇಲ್ಲದೆ ಬರಬಹುದೇ? ಎಂದು ಗೆಳೆಯರೊಬ್ಬರಲ್ಲಿ ವಿಚಾರಿಸಿದೆ. ಸಾಧ್ಯವಿಲ್ಲವೆಂದರು. ವ್ರತಾಚರಣೆ ಮಾಡಿ ಬನ್ನಿ ಎಂದರು. ನನಗೆ ನೀವು ಬಿಡುವ ಯಾವ ಹವ್ಯಾಸವೂ ಇಲ್ಲವಲ್ಲ ಎಂದು ಕೇಳಿದೆ. ‘‘ಆದರೂ...’’ ಎಂದು ಹೇಳಿದರಾದರೂ ಅವರಲ್ಲಿ ಸಮರ್ಪಕ ಉತ್ತರ ಸಿಗಲಿಲ್ಲ. ನಾನೂ ಈ ಕಠಿಣ ಯಾತ್ರೆಯ ಯೋಚನೆ ಕೈಬಿಟ್ಟೆ.

ಅವರು ಹೇಳುವುದೂ ಸರಿ. ಏಕೆಂದರೆ ಮದ್ಯಪಾನ ಮಾಡಬಾರದೆನ್ನುವ ದಾರ್ಶನಿಕರ ನಡುವೆ ಅವರ ಆಶೀರ್ವಾದಕ್ಕೆ ಕಾಯುವ ಅಬಕಾರಿ ಸಚಿವರಿರುತ್ತಾರೆ. ನಮ್ಮ ಯಾವೊಬ್ಬ ಆಧುನಿಕ ಋಷಿಮುನಿಗಳಾಗಲೀ ಮದ್ಯಪಾನವನ್ನು ನಿಷೇಧಿಸಬೇಕೆಂದು ಅಪ್ಪಣೆಕೊಡಿಸುವುದಿಲ್ಲ. ಅದನ್ನು ಸೋಮರಸವೆಂಬ ದೈವೀಪಾನೀಯಕ್ಕೆ ಹೋಲಿಸುತ್ತಾರೋ ಏನೋ ಗೊತ್ತಿಲ್ಲ. ಆದರೆ ಮದ್ಯಪಾನವೂ ಇದೆ; ಅದರ ಕುರಿತ ಜಿಜ್ಞಾಸೆಯೂ ಇದೆ. ಇದೇ ರೀತಿಯ ಇನ್ನೊಂದು ಉದಾಹರಣೆಯೆಂದರೆ ತಂಬಾಕು. ವಿಶ್ವಸಂಸ್ಥೆಯು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ಎಲ್ಲ ದೇಶಗಳೊಂದಿಗೆ ತಂಬಾಕು ನಿಷೇಧದ ಕ್ರಮ ಕೈಗೊಳ್ಳಲು ತಾಕೀತು ಮಾಡಿದೆ. ಹಿಂದಿನ ಯುಪಿಎ ಸರಕಾರ ಈ ಬಗ್ಗೆ ಕ್ರಮಕೈಗೊಂಡಿತ್ತೆಂದೂ ಆದರೆ ತಂಬಾಕು ಬೆಳೆಗಾರರ ಹಿತವನ್ನು ಕಾಪಾಡುವುದಕ್ಕ್ಕಾಗಿ ಈಗಿನ ಎನ್‌ಡಿಎ ಸರಕಾರವು ಅದನ್ನು ಕೈಬಿಟ್ಟಿದೆಯೆಂದೂ ಆಳುವ ಪಕ್ಷದ ಸಂಸದರೊಬ್ಬರು ಹೆಮ್ಮ್ಮೆಯಿಂದ ಹೇಳಿದರು. ಈಗ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಬಹುದಾದರೂ ತಂಬಾಕು ಬೆಳೆಗಾರರಂತೂ ತುಂಬಾ ಸಂತೋಷದಿಂದಿದ್ದಾರೆ. ಇವರೊಂದಿಗೆ ವೈದ್ಯರೂ ಔಷಧಿ ತಯಾರಿಕಾ ಸಂಸ್ಥೆಗಳೂ ಅವರನ್ನು ನಿಯಂತ್ರಿಸುವ ಅಧಿಕಾರಿಗಳೂ ಸಂತೋಷವಾಗಿರುತ್ತಾರೆಂದು ಬೇರೆ ಹೇಳಬೇಕಾಗಿಲ್ಲ. ಕೊನೆಗೂ ಮುಖ್ಯವಾದದ್ದು ಬಹುಜನ ಹಿತಾಯ! ಬಹುಜನ ಸುಖಾಯ!

ಇದೇ ಸ್ಥಿತಿ-ಪರಿಸ್ಥಿತಿ ಅಡಿಕೆ ಬೆಳೆಗಾರರದ್ದೂ ಹೌದು. ಬೀಡಾದಿಂದ ಮೊದಲ್ಗೊಂಡು ಗುಟ್ಕಾದ ವರೆಗೆ ಭಿನ್ನರುಚಿಯನ್ನು ನೀಡುವ ಅಡಿಕೆಯ ಮೇಲೆ ಅನೇಕರ ಬದುಕು ಅವಲಂಬಿಸಿದೆ. ಇದನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತದೆಯಾದರೂ ಅದು ಅಪಾರ ಪ್ರಮಾಣದ ಹಣಕಾಸಿನ ಮೂಲ. ಅದಿಲ್ಲದೆ ಸಂಪಾದಿಸುವುದೆಂತು? ಆದ್ದರಿಂದ ಹುಟ್ಟಿನಲ್ಲಷ್ಟೇ ನಿಯಂತ್ರಣ ಸಾಧ್ಯವೆಂಬ ಅಭಿಮತವನ್ನು ತೊರೆದು, ಮನುಷ್ಯನನ್ನು ಸಾವಿನ ಕಡೆಗೆ ಬೇಗ ತಲುಪಿಸುವ ಎಲ್ಲ ಯೋಜನೆಗಳನ್ನು ಕುಟುಂಬ ಯೋಜನೆಯೆಂದು ತಿಳಿಯಬೇಕು. ಕಾಫಿ-ಟೀಯನ್ನೂ ಸೇರಿಸಿ ಎಲ್ಲ ತರಹದ ಇಂತಹ ಲೌಕಿಕ ಸುಖಗಳು ಕೊನೆಗೂ ಮೋಕ್ಷಗಾಮಿಯೆಂದೇ ತಿಳಿಯುವುದು ನಿಜವಾದ ಧರ್ಮ.

ಧರ್ಮವು ಮನುಷ್ಯನಿಗೆ ಸೌಜನ್ಯವನ್ನು, ವಿನಯವನ್ನು, ತಾಳ್ಮೆಯನ್ನು ಕಲಿಸಬೇಕು, ಬೆಳೆಸಬೇಕು. ಆದರೆ ಯಾವ ಧರ್ಮವನ್ನೇ (ಮತ ಎಂಬ ಅರ್ಥದಲ್ಲಿ) ಗಣನೆಗೆ ತೆಗೆದುಕೊಂಡರೂ ಅದರ ಪ್ರಮುಖರು ತಾಳ್ಮೆಯನ್ನು ಗಂಗೆಯಲ್ಲಿ ಬಿಟ್ಟುಬಂದವರಂತಿರುತ್ತಾರೆ. ತಮ್ಮ ಶ್ರೇಷ್ಠತೆಯ ಬಗ್ಗೆ ಹೆಮ್ಮೆಯಷ್ಟೇ ಅಲ್ಲ, ಅಸಾಧ್ಯ ದುರಹಂಕಾರವೂ ಅವರಲ್ಲಿರುತ್ತದೆ. ನಡೆದಾಡುವ ದೇವಮಾನವರಂತೆ ಇತರರಿಗೆ ಒಳಿತನ್ನು ಹೇಳುತ್ತ (ಹಾರೈಸುತ್ತಾರೋ ಇಲ್ಲವೊ ಗೊತ್ತಿಲ್ಲ) ಲೌಕಿಕದಲ್ಲಿ ಯಾರೂ ಪಡೆಯದಷ್ಟು, ಮತ್ತು ಅತಿಯೆನ್ನುವಷ್ಟು ಸುಖಭೋಗವನ್ನು ಆನಂದದಿಂದಲೇ ಅನುಭವಿಸುತ್ತ ಸ್ವರ್ಗದ ಹಾದಿಯನ್ನು ತೋರಿಸುತ್ತಾರೆ. ತಮ್ಮ ಹಾದಿಯನ್ನು ಹಿಡಿದರೆ ಮಾತ್ರ ಸ್ವರ್ಗಕ್ಕೆ ಸೋಪಾನ ಲಭ್ಯವೆನ್ನುತ್ತ ಇತರ ಎಲ್ಲ ಹಾದಿಗಳೂ ನರಕಕ್ಕೆ ಹೋಗುತ್ತವೆಯೆನ್ನುತ್ತಾರೆ. ಸ್ವರ್ಗದ ಬಾಗಿಲಿನ ಕೀಲಿಕೈ ತಮ್ಮಲ್ಲಿ ಮಾತ್ರವಿದೆಯೆನ್ನುತ್ತಾರೆ. ಹೀಗೆ ಬದುಕಿರುವಾಗಲೇ ಸ್ವರ್ಗ ಸಮಾನ ಸುಖದ ಸನ್ನಿಯನ್ನು ಭಕ್ತರು ಪಡೆಯದಿದ್ದರೂ ಈ ಯಜಮಾನರಂತೂ ಪಡೆಯುವುದು ನಿಶ್ಚಯ. ಇಂತಹ ಕೆಲವಾದರೂ ದೇವಮಾನವರು ಈಗ ಸೆರೆಮನೆಯನ್ನು ಕಂಡು ಅಲ್ಲೇ ರುದ್ರಾಕ್ಷಿ ಮಣಿಯನ್ನು (ಅಥವಾ ಆಯಾಯ ಧರ್ಮಕ್ಕೆ ಸಂಬಂಧಿಸಿದ ಗಣಿತಸೂತ್ರಗಳನ್ನು) ಪೋಣಿಸುತ್ತ ಬಿಡುಗಡೆಯ ದಿನವನ್ನು ಎದುರುನೋಡುತ್ತಿದ್ದಾರೆ. ಅಂತಹವರಿಗೆ ಸ್ವರ್ಗದ ಬಾಗಿಲು ತೆರೆಯಬೇಕಾದ ಜೈಲರ್ ಇನ್ನೂ ಬಂದಿಲ್ಲ.

ಮುಖ್ಯವಾಗಿ ಇಷ್ಟು ಗಂಭೀರವಾದ ಯೋಚನೆಗಳನ್ನು ಮಾಡುವುದರ ಹಿಂದೆ ಯಾವ ಲಾಭವಿದೆಯೆಂದು ಅನೇಕರು ಹೇಳುವುದುಂಟು. ಆಧುನಿಕತೆಯ ಮಾಯಮಂಟಪದಲ್ಲಿ ಯಾವುದು ಅರಮನೆ, ಯಾವುದು ಅರಗಿನ ಮನೆ ಎಂಬುದೇ ಗೊತ್ತಾಗುವುದಿಲ್ಲವಾದ್ದರಿಂದ ಅವರವರಷ್ಟಕ್ಕೆ ಬದುಕುವವರೇ ಪುಣ್ಯಾತ್ಮರು ಮತ್ತು ಸರ್ವತಂತ್ರ ಸ್ವತಂತ್ರರು ಎಂಬ ಅಭಿಪ್ರಾಯ ಬಹಳಷ್ಟು ಜನರಲ್ಲಿದೆ. ಊರಿಗೆ ರಸ್ತೆ ನಿರ್ಮಿಸಬೇಕಾದರೆ ಯಾರಾದರೂ ದುಡಿಯಲಿ, ರಸ್ತೆ ನಿರ್ಮಾಣವಾದ ಅನಂತರ ನಡೆಯುವುದಷ್ಟೇ ತಮ್ಮ ಕರ್ತವ್ಯವೆಂಬಂತಿರುವ ಜನರೂ ಇದ್ದಾರೆ. ರಾತ್ರಿ ರಸ್ತೆಯಲ್ಲಿ ಯಾವನಾದರೊಬ್ಬ ಬೆಳಕು ಹಿಡಿದು ನಡೆದರೆ ಅದೇ ಬೆಳಕಿನಲ್ಲಿ ನಡೆಯುವ ಅನೇಕರು ತಮ್ಮ ತಮ್ಮ ಬೆಳಕನ್ನು ನಂದಿಸಿಕೊಳ್ಳುತ್ತಾರೆ. ಬದುಕಿನಲ್ಲಿ ಉಳಿತಾಯವೆಂದರೆ ಇದೇ.

ಇಂತಹ ನಡೆನುಡಿಗಳನ್ನು ನಂಬಿ ಬದುಕುವ ಸಂದರ್ಭದಲ್ಲಿ ಪ್ರಾತಃಸ್ಮರಣೀಯರನ್ನು ಮರೆಯುವುದು ಒಳ್ಳೆಯದು. ಬದಲಾಗಿ ಸಾಯಂಸ್ಮರಣೀಯರನ್ನು ನಾವೇ ಸೃಷ್ಟಿಸಿಕೊಳ್ಳಬಹುದು. ಹಿಂದೊಮ್ಮೆ ಯಾರೋ ಒಂದು ವಾಸ್ತವ ನಗೆಚಟಾಕಿಯನ್ನು ಪ್ರಕಟಿಸಿದ್ದರು: ಯಾರೋ ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಗೆ ಫೋನ್ ಮಾಡಿ ‘‘ಇಂದು ಸಂಜೆ ಆ ಕೃತಿಯ ಬಗ್ಗೆ ಚರ್ಚಿಸೋಣವೇ?’’ ಎಂದರಂತೆ. ಅದಕ್ಕವರು ‘‘ಇಲ್ಲಿಗೇ ತರಿಸೋಣವೇ ಅಥವಾ ಅಲ್ಲಿಗೆ ಹೋಗೋಣವೇ?’’ ಎಂದು ಉತ್ತರಿಸಿದರಂತೆ. ಅಷ್ಟರ ಮಟ್ಟಿಗೆ ಚರ್ಚೆ ಪೂರ್ಣವಾಗಿತ್ತು. ನಾನೂ ನನ್ನ ಸ್ನೇಹಿತನೂ ಹೀಗೆ ಒಬ್ಬರ ಮನೆಗೆ ಅವರ ಕೃತಿಗಳ ಬಗ್ಗೆ ಮಾತನಾಡೋಣವೆಂದು ಹೋದೆವು. ಅವರು ನಮ್ಮನ್ನು ಸ್ವಾಗತಿಸಿದವರೇ ಐದೇ ನಿಮಿಷದಲ್ಲಿ ಅವರ ಬೀರುವಿನಿಂದ ಬೀರೋ ವಿಸ್ಕಿಯೋ (ನನಗೆ ನವ್ಯ ಕಥೆ-ಕವನಗಳಲ್ಲಿ ಓದಿ-ಕೇಳಿ ಅವುಗಳ ಹೆಸರು ಗೊತ್ತೇ ಹೊರತು ಅವುಗಳ ನಡುವಣ ವ್ಯತ್ಯಾಸ ಗೊತ್ತಾಗುವುದಿಲ್ಲ!) ತೆಗೆದು ನಾನು ನೋಡುತ್ತಿದ್ದಂತೆಯೇ ನನ್ನ ಸ್ನೇಹಿತನೊಂದಿಗೆ ಅದರಲ್ಲಿ ಮುಳುಗಿದರು. ಅವರ ಚರ್ಚೆ ಎಷ್ಟು ಪೆಗ್ ನಡೆಯಿತೋ ಗೊತ್ತಿಲ್ಲ. ಆದರೆ ತುಂಬಾ ಬಿಸಿಬಿಸಿ ಚರ್ಚೆ ನಡೆಯಿತು. ನಾನು ಬೀಚಿನಲ್ಲಿ ಕುಳಿತು ಸಮುದ್ರವನ್ನು ವೀಕ್ಷಿಸುವವರಂತೆ ಗಾಢ ಮೌನದಲ್ಲಿ ಕುಳಿತೆ.

ಮನುಷ್ಯನಿಗೆ ಸುಖದ ಅಮಲು ಹೇಗಿರುತ್ತದೆಯೋ ಹಾಗೆಯೇ ಇತರ ಅಮಲುಗಳೂ ಇರುತ್ತವೆ; ಇರಬೇಕು. ಯಾವುದೇ ಖಯಾಲಿಯೂ ಇಲ್ಲದೆಯೂ ಅಮಲಿರಬೇಕು. ನಿರ್ಮಲವಾದ್ದಕ್ಕೆ ಅಮಲವೆಂದೂ ಹೆಸರಿದೆ. ಆದ್ದರಿಂದ ಎಲ್ಲ ದುಶ್ಚಟಗಳೂ ಒಂದರ್ಥದಲ್ಲಿ ಅಮಲಗಳೇ; ನಮ್ಮ ನದಿಗಳನ್ನು ತೀರ್ಥಗಳೆಂದು ‘‘ಪರಿಗಣಿಸಿ ಗಂಗೇಚ ಯಮುನೇಚ ಗೋದಾವರೀ ಸರಸ್ವತಿ ನರ್ಮದೇ ಸಿಂಧು ಕಾವೇರಿ’’ ಎಂದು ಹೇಳಿದವರಿಗೆ ಇವೆಲ್ಲ ತೀರ್ಥೋಕ್ತ ಅಮಲಿನಿಗಳೇ. ಇವರೆಲ್ಲ ಸಂಜೆಯನ್ನು ಕಾಯುತ್ತಾರೆ. ದಿನ ಹೇಗೆ ಮತ್ತು ಯಾವಾಗ ಆರಂಭಿಸಬೇಕೆಂದು ನಿರ್ಧರಿಸಿದವರು ಯಾರು? ಅವರವರ ಆಸಕ್ತಿಗನುಸಾರವಾಗಿ ಇವೆಲ್ಲ ನಡೆಯಬೇಕು; ವಾಲಬೇಕು; ಕುಂಟಬೇಕು. ಆದ್ದರಿಂದ ‘ನವೋನವೋ ಭವತು’ ಎಂದವರಿಗೆ ಉದಯಿಸುವ ಸೂರ್ಯ ದಿನಕರನಾಗಿ ಕಂಡರೆ ಸಂಜೆವಾಣಿಗಳಿಗೆ, ಸಂಜೆವಾಸಿಗಳಿಗೆ ಚಂದ್ರನೇ ದಿನಕರನಾಗುತ್ತಾನೆ. ಅದಕ್ಕೇ ಚಕೋರಿಯನ್ನೂ ಚಂದ್ರಮಂಚಕ್ಕೆ ಕವಿ ಆಹ್ವಾನಿಸಿದರು. ಉಮರನ ಒಸಗೆ ನಾಲಗೆಗೆ, ಹೆಂಡ ಮುಟ್ಟಿದ ಕೈಗೆ ದಕ್ಕಿದರೆ ಅದೇ ಸ್ವರ್ಗಸುಖ. ಆಕಾಶದಲ್ಲಿರುವುದು ಸೂರ್ಯನೋ ಚಂದ್ರನೋ ಎಂದು ಚರ್ಚಿಸುವವರಿಗೆ ಹಗಲು ಹೊತ್ತು ಉತ್ತರಿಸುವುದು ಸುಲಭ; ಆದರೆ ಸಂಜೆಯಾದರೆ ಕಷ್ಟ. ಅಂತಹ ಸಂದರ್ಭದಲ್ಲಿ ‘‘ನಮ್ಮೂರಿನಲ್ಲಾದರೆ ಹೇಳಬಹುದು; ಇಲ್ಲಿ ನನಗೆ ಗೊತ್ತಾಗುವುದಿಲ್ಲ’’ ಎಂದು ಉತ್ತರಿಸಿ ಜಾರಿಕೊಳ್ಳುವುದೇ ಒಳ್ಳೆಯದು.

ಎಲ್ಲೋ ಶುರುವಾಗಿ ಎಲ್ಲಿಗೋ ಬಂದಾಯಿತು. ಬರೆಹದ ಅಮಲೂ ಹೀಗೆಯೇ. ಅದಕ್ಕೇ ನನಗೆ ಈ ಸಾಯಂಸ್ಮರಣೀಯರೇ ಮುಂದೆ ಚರಿತ್ರಾರ್ಹರಾಗುತ್ತಾರೆಂಬ ಸಂಶಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)